ಮಂಗಳೂರು : ಬೇಸಿಗೆಯ ಶಾಖ ಮಂಗಳೂರನ್ನು ಸುಡುತ್ತಿದೆ. ಜನಪ್ರತಿನಿಧಿಗಳು ಟೆನ್ಷನ್ ಮಾಡಿಕೊಳ್ಳುತ್ತಿರುವುದು ಎರಡೇ ಕಾರಣಕ್ಕೆ. ಒಂದು ನೀರು ಮತ್ತೊಂದು ಸಾಂಕ್ರಾಮಿಕ ರೋಗಗಳ ಬಗ್ಗೆ. ಅದಕ್ಕಾಗಿ ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಕ್ಷಿಣ ಕನ್ನಡ ಉಸ್ತುವಾರಿ ಸಚಿವರು ಮತ್ತು ರಾಜ್ಯ ಆರೋಗ್ಯ ಸಚಿವರು ಸಭೆಗಳನ್ನು ಮಾಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿ ಇಲ್ಲವಾದಲ್ಲಿ ಅಧಿಕಾರಿಗಳೇ ಹೊಣೆ ಎಂದು ಸಚಿವ ರೈ ತಾಕೀತು ಕೂಡ ಮಾಡಿದ್ದಾರೆ.
ದ.ಕ. ಜಿಲ್ಲೆಯಲ್ಲಿ ಬೇಸಗೆ ಸಮಯದಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 40 ಲಕ್ಷ ರೂ.ಗಳನ್ನು ಒದಗಿಸಲಾಗಿದ್ದು, ಕ್ರಿಯಾ ಯೋಜನೆ ತಯಾರಿಸಲು ಸೂಚಿಸಲಾಗಿದೆ. ಅದರಂತೆ ಅಗತ್ಯ ಹಾಗೂ ತುರ್ತು ಕಾಮಗಾರಿಗಳನ್ನು ನಡೆಸುವ ಮೂಲಕ ಜನಸಾಮಾನ್ಯರಿಂದ ಯಾವುದೇ ರೀತಿಯಲ್ಲ್ಲಿ ದೂರು ಬಾರದಂತೆ ಎಚ್ಚರಿಕೆ ವಹಿಸಬೇಕು. ಸಮಸ್ಯೆ ಎದುರಾದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಜಿಲ್ಲೆಯ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ತಾಕೀತು ಮಾಡಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಕುರಿತಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತಂತೆ ಅಧಿಕಾರಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಎಚ್ಚರಿಕೆ ನೀಡುವ ಮೂಲಕ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿರುವುದು ಒಳ್ಳೆಯ ಬೆಳವಣಿಗೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹಣಕ್ಕಾಗಿ ಕಾಯುವುದು ಬೇಡ. ಆದ್ಯತೆಯ ನೆಲೆಯಲ್ಲಿ ಕಾಮಗಾರಿಯನ್ನು ನಡೆಸಿ ಜನಸಾಮಾನ್ಯರಿಗೆ ತಕ್ಷಣ ಸ್ಪಂದಿಸಬೇಕು. ಪ್ರತಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ವಿಶೇಷ ಅಧಿಕಾರಿಯನ್ನು ನಿಯೋಜಿಸಬೇಕು. ಟಾಸ್ಕ್ ಫೋರ್ಸ್ ಸಮಿತಿ ಮೂಲಕ ಬೋರ್ವೆಲ್, ಟ್ಯಾಂಕರ್ಮೂಲಕ ನೀರು ಪೂರೈಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಆಯಾ ತಾಲೂಕಿನ ತಹಶೀಲ್ದಾರರು ಮುಖ್ಯ ಅಧಿಕಾರಿಗಳು ಹಾಗೂ ಟಾಸ್ಕ್ಪೋರ್ಸ್ನ ವಾರಕ್ಕೊಮ್ಮೆ ಸಭೆ ಕರೆದು ಸಮಸ್ಯೆ ಬಗ್ಗೆ ಮೇಲ್ವಿಚಾರಣೆ ವಹಿಸಬೇಕು ಎಂದು ಸಚಿವ ರೈ ತಾಕೀತು ಮಾಡಿದ್ದಾರೆ.
ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿ ಅಗತ್ಯ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕ ನೆಲೆಯಲ್ಲಿ ಒದಗಿಸಿಕೊಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯಡಿ 1.20 ಕೋಟಿರೂ. ಹಾಗೂ ಗ್ರಾಮೀಣ ಪ್ರದೇಶಾಭಿವೃದ್ಧಿ ಯೋಜನೆಯಡಿ 2.80 ಕೋಟಿ ರೂ. ಕುಡಿಯುವ ನೀರಿನ ಕಾಮಗಾರಿಗಳಿಗೆ ಅನುದಾನ ಮೀಸಲಿರಿಸಲಾಗಿದ್ದು, ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ಜಿ.ಪಂ. ಅಧಿಕಾರಿ ತಾಕತ್ರಾವ್ ಸಭೆಯಲ್ಲಿ ತಿಳಿಸಿದರು. ಮಂಗಳೂರು ನಗರ ಪ್ರದೇಶದಲ್ಲಿ ನೀರು ಪೂರೈಕೆ ಪ್ರಮಾಣದಲ್ಲಿ ಕಡಿಮೆ ಆಗಿದೆ ಆದರೆ ಈವರೆಗೆ ಸಮಸ್ಯೆ ಆಗಿಲ್ಲ. ಕಳೆದ ವರ್ಷ ಕೋಟೆಕಾರು, ಬೆಳ್ಮ, ಹರೇಕಳ ಮೊದಲಾದ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉದ್ಬವಿಸಿತ್ತು. ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಬರಲಿರುವ ದಿನಗಳಲ್ಲಿ ಇದು ಎಷ್ಟರಮಟ್ಟಿಗೆ ಅನ್ವಯ ಆಗುತ್ತೇ ಎಂದು ಹೇಳಲು ಸಾಧ್ಯವಿಲ್ಲ. ಬಂಟ್ವಾಳದಲ್ಲಿ 44 ಕೊಳವೆ ಬಾವಿಗಳಿಗೆ ಬೇಡಿಕೆ ಇದ. 8 ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಪಜೀರು, ಬಾಳೆಪುಣಿ, ಕೈರಂಗಳದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಪುತ್ತೂರು ವಿಧಾನಸಭಾ ವ್ಯಾಪ್ತಿಯ 40 ಲಕ್ಷ ರೂ.ಗಳ ಅನುದಾನಡಿ 44 ಕಾಮಗಾರಿಗಳಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ. ಕಡಬದಲ್ಲಿ ಸಮಸ್ಯೆ ಆಗಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದಾರೆ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ನೀರಿನ ಬೇಡಿಕೆ ಹೆಚ್ಚಾಗಿದೆ. ಸಮಸ್ಯೆ ಎದುರಾದಲ್ಲಿ ಅಲ್ಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಉಪ ಆಯುಕ್ತ ಕಾಂತರಾಜು ಮಾಹಿತಿ ನೀಡಿದ್ದಾರೆ.
ತುಂಬೆ ಅಣೆಕಟ್ಟಿನ ಸಮಸ್ಯೆಯಿಂದಾಗಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಬೇಡಿಕೆ ಹೆಚ್ಚಾಗಿದೆ. ಈ ನಡುವೆ ಕೆಲವೊಂದು ಗ್ರಾ.ಪಂ.ಗಳಿಗೂ ನೀರನ್ನು ಪೂರೈಸಲಾಗುತ್ತಿದ್ದು, ಇದರಿಂದ ಮಂಗಳೂರಿನ ನಾಗರಿಕರು ನೀರಿನ ಕೊರತೆ ಎದುರಿಸಲಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಖಾದರ್, ಅವರು ಕೂಡಾ ಜಿಲ್ಲೆಯ ಜನರೇ ಆಗಿದ್ದಾರೆ. ಒಮ್ಮೆಲೇ ಅವರಿಗೆ ನೀರು ಪೂರೈಕೆ ಸ್ಥಗಿತಗೊಳಿಸಲು ಸಾಧ್ಯವಾಗದು. ತುಂಬೆ ವ್ಯಾಪ್ತಿಗೊಳಪಡು ಕುದ್ರು, ಅಡ್ಯಾರು, ಅರ್ಕುಳ ಪಂಚಾಯತ್ಗೆ ಮನಪಾ ವ್ಯಾಪ್ತಿಯಿಂದ ಮೀಟರ್ ಅಳವಡಿಸಿ ನೀರು ನೀಡಿ, ಶುಲ್ಕ ಸಂಗ್ರಹಿಸಿ ಎಂದು ಖಾದರ್ ಸೂಚಿಸಿದ್ದಾರೆ. ಜೆ.ಆರ್. ಲೋಬೋ ಅವರು ಖಾದರ್ ಮಾತನ್ನು ಒಪ್ಪಿಕೊಂಡರಲ್ಲದೆ, ಅಧಿಕಾರಿಗಳು ನೀರಿನ ಸೋರಿಕೆ ಆಗುವುದನ್ನು ತಡೆಹಿಡಿದು ಅನಧಿಕೃತ ಸಂಪರ್ಕಗಳಿಗೆ ಕಡಿವಾಣ ಹಾಕಿ ದಂಡ ಹಾಕಿದರೆ ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗುವುದನ್ನು ತಡೆಹಿಡಿಯಲು ಸಾಧ್ಯ ಎಂದು ಹೇಳಿದರೂ ಈಗಾಗಲೇ ಭ್ರಷ್ಟಾಚಾರ ತಾಂಡವವಾಡುತ್ತಿರುವ ಮೀಟರ್ ರೀಡಿಂಗ್ ಗುತ್ತಿಗೆಯಲ್ಲಿ ಅನಧಿಕೃತ ಸಂಪರ್ಕಗಳನ್ನು ಎಷ್ಟರಮಟ್ಟಿಗೆ ಕಡಿತಗೊಳಿಸಲು ಸಾಧ್ಯ ಎನ್ನುವುದು ಪ್ರಶ್ನೆ.
ಪಂಚಾಯತ್ ಚುನಾವಣೆ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿನ ತುರ್ತು ಕಾಮಗಾರಿಗಳ ಕುರಿತಂತೆ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಪಕ್ಷಾತೀತವಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಮುಂದೆ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾದೀತು ಎಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಅಧಿಕಾರಿಗಳು ಸಂಬಂಧಪಟ್ಟ ಗ್ರಾಮ ಹಾಗೂ ತಾಲೂಕುಗಳಿಗೆ ಸಂಬಂಧಿಸಿ ಕೊಳವೆ ಬಾವಿ ಕೊರೆಯುವ ರಿಗ್ಗಳು ಮತ್ತು ಟ್ಯಾಂಕರ್ಗಳ ಮಾಲಕರ ಪಟ್ಟಿ ಹಾಗೂ ಅವರ ದೂ.ಸಂಖ್ಯೆಯನ್ನು ಹೊಂದಿರಬೇಕು. ಅಂತರ್ಜಲ ಮಟ್ಟ ಕುಸಿಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಂತರ್ಜಲ ಮರುಪೂರಣ ಕ್ರಮಗಳನ್ನು ಮಹಾನಗರ ಪಾಲಿಕೆಗಳಲ್ಲಿ ನಡೆಸುವುದು ಕಡ್ಡಾಯವಾಗಿದ್ದು, ಅದನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು. ಎಪ್ರಿಲ್ ೧೪ರಿಂದ ಮಲೇರಿಯಾ ಅಭಿಯಾನ ನಡೆಸಲು ದ.ಕ.ಜಿಲ್ಲಾಡಳಿತ ತೀರ್ಮಾನಿಸಿದೆ.
ಎಚ್1 ಎನ್1 ಸಮಸ್ಯೆಯ ನಡುವೆಯೇ ಇದೀಗ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್, ಕಾಲರಾ ಹಾಗೂ ಚಿಕನ್ಗುನ್ಯಾದಂತಹ ರೋಗಗಳ ಸಮಸ್ಯೆ ಎದುರಾಗಲಿದೆ. ಒಳಚರಂಡಿಗಳನ್ನು ಸ್ವಚ್ಛಗೊಳಿಸುವುದು, ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವ ಜತೆ, ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಸ್ಥಲಗಳಲ್ಲಿ ಕಾರ್ಮಿಕರ ಪಟ್ಟಿ ಮಾಡಿಕೊಂಡು ಸುರಕ್ಷಾ ಕ್ರಮಗಳನ್ನು ವಹಿಸಿಕೊಳ್ಳಲು ಗುತ್ತಿಗೆದಾರರಿಗೆ ಸೂಚಿಸಬೇಕು. ಮಾತ್ರವಲ್ಲದೆ ಮಲೇರಿಯಾವನ್ನು ನಿಯಂತ್ರಣದ ಹಿನ್ನೆಲೆಯಲ್ಲಿ ಎಪ್ರಿಲ್ 14ರಿಂದ ಅಭಿಯಾನವನ್ನು ಕೈಗೊಳ್ಳಬೇಕಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.