ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರವಾಗಿ ರಾಜ್ಯ ಸರ್ಕಾರ ಧೋರಣೆಯನ್ನು ಖಂಡಿಸಿ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಹೋರಾಟವನ್ನು ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳದ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ದಿನೇಶ್ ಗುಂಡೂರಾವ್ ಅವರು ನೀಡಿರುವ ಹೇಳಿಕೆಗಳು ಎಲ್ಲರಿಗೂ ತಿಳಿದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ವಿಚಾರವಾಗಿ ರಾಜ್ಯ ಸರ್ಕಾರದ ನಡವಳಿಕೆ ಬಗ್ಗೆ ನಮಗೂ ಅನುಮಾನಗಳು ಕಾಡುತ್ತಿವೆ ಎಂದು ಹೇಳಿದರು. ರಾಜ್ಯ ಸರ್ಕಾರದ ಈ ಧೋರಣೆಯನ್ನು ಖಂಡಿಸಿ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಪ್ರತಿಭಟನೆಯನ್ನು ನಾಳೆಯಿಂದ ಮುಂದಿನ ವಾರದವರೆಗೂ ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಮಾಡಲಿದ್ದೇವೆ ಎಂದು ಪ್ರಕಟಿಸಿದರು.
ಕಳೆದ ಒಂದು ತಿಂಗಳಿಂದ ಧರ್ಮಸ್ಥಳ ವಿಚಾರದಲ್ಲಿ ಯಾವ ಯಾವ ಬೆಳವಣಿಗೆ ಆಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜ್ಯ ಸರ್ಕಾರ ಧರ್ಮಸ್ಥಳ ವಿಚಾರದಲ್ಲಿ ತನಿಖೆ ನಡೆಸಬೇಕೆಂದು ಎಸ್ಐಟಿ ರಚಿಸಿದಾಗ ಅದನ್ನು ಸ್ವಾಗತ ಮಾಡಿದ್ದೆವು; ಈ ವಿಚಾರದಲ್ಲಿ ಸಮಗ್ರವಾಗಿ, ಪಾರದರ್ಶಕವಾಗಿ ತನಿಖೆಯಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ನಾವು ಸಂಪೂರ್ಣವಾಗಿ ಬೆಂಬಲ ನೀಡಿದ್ದೆವು. ಇದು ಬಿಜೆಪಿಯ ಸ್ಪಷ್ಟ ನಿಲುವಾಗಿದೆ ಎಂದು ತಿಳಿಸಿದರು.
ತನಿಖೆ ವಿಚಾರದಲ್ಲಿ ಇಂದು ಕೂಡ ನಾವು ಹಿಂದೆ ಸರಿದಿಲ್ಲ. ಆದರೆ ತನಿಖೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಶ್ರೀ ಕ್ಷೇತ್ರದ ಬಗ್ಗೆ ಅಪಪ್ರಚಾರಗಳು ನಡೆದುಕೊಂಡು ಬಂದಿವೆ. ಇಂಥ ಅಪಪ್ರಚಾರವನ್ನು ನಿಲ್ಲಿಸುವ, ತಡೆಯುವ ಮತ್ತು ಕಟ್ಟಿಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಬೇರೆ ಬೇರೆ ಸಂದರ್ಭದಲ್ಲಿ 24 ಗಂಟೆ ಒಳಗಾಗಿ ಎಫ್ಐಆರ್ ದಾಖಲಿಸುತ್ತಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನೆಪದಲ್ಲಿ ದಕ್ಷಿಣ ಕನ್ನಡದಲ್ಲಿ 81 ವರ್ಷದ ಬಿಜೆಪಿ ಹಿರಿಯ ಕಾರ್ಯಕರ್ತ ಪೂವಪ್ಪ ಅವರ ಮನೆಗೆ ರಾತ್ರಿ 1 ಗಂಟೆಗೆ ಪೊಲೀಸ್ ಅಧಿಕಾರಿಗಳು ಹೋಗಿ ಪೋಟೋ ತೆಗೆಯುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಕಾರ್ಯಕರ್ತರು ಪೋಸ್ಟ್ ಮಾಡಿದರೆ ತಡಮಾಡದೇ ಅವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ಹಾಕಿ ಎಫ್ಐಆರ್ ದಾಖಲಿಸಿ ಬಂಧಿಸಿರುವುದನ್ನು ಕಳೆದ ಎರಡೂವರೆ ವರ್ಷಗಳಲ್ಲಿ ನೋಡಿದ್ದೇವೆ. ಆದರೆ ಧರ್ಮಸ್ಥಳದ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸರ್ಕಾರ ಏಕೆ ಕ್ರಮ ತೆಗದುಕೊಂಡಿರುವುದಿಲ್ಲ ಎಂದು ವಿಜಯೇಂದ್ರ ಅವರು ಪ್ರಶ್ನಿಸಿದರು.
ಧರ್ಮಸ್ಥಳ ವಿಚಾರ ಬಂದಾಗ ಕೋಟ್ಯಾಂತರ ಭಕ್ತರ ಭಾವನೆಗೆ ಧಕ್ಕೆ ತರುತ್ತಿರುವ ಈ ಅಪಪ್ರಚಾರಗಳನ್ನು ರಾಜ್ಯ ಸರ್ಕಾರ ತಡೆಯುವ ಕೆಲಸವನ್ನು ಮಾಡಲಿಲ್ಲ ಎಂದು ಆಕ್ಷೇಪಿಸಿದರು. ಇದು ವ್ಯವಸ್ಥಿತವಾಗಿರುವ ಷಡ್ಯಂತ್ರ. ಈ ಅಪಪ್ರಚಾರವನ್ನು ತಡೆಯುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಇರಲಿಲ್ಲವೇ? ಅಥವಾ ರಾಜ್ಯ ಸರ್ಕಾರವೇ ಈ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿದಿಯೇ ಎಂದು ಅವರು ಪ್ರಶ್ನಿಸಿದರು.
ಈ ಎಲ್ಲ ಗುಮಾನಿಗಳು ಇಂದು ರಾಜ್ಯಾದ್ಯಂತ ಮತ್ತು ರಾಜ್ಯದ ಅಸಂಖ್ಯಾತ ಭಕ್ತರಲ್ಲಿ ಚರ್ಚೆ ಆಗುತ್ತಿದೆ. ಇದೆಲ್ಲದರ ನಡುವೆಯೂ ಇಂದು ಯಾವ ದುಷ್ಟಶಕ್ತಿಗಳು ಈ ಷಡ್ಯಂತ್ರದ ಹಿಂದೆ ಕೆಲಸ ಮಾಡುತ್ತಿವೆ?; ಯಾವ ಯಾವ ಸಂಘಟನೆಗಳು ಇದಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ? ಇದನ್ನು ತಡೆಯುವ ಕೆಲಸ ರಾಜ್ಯ ಸರ್ಕಾರ ಮಾಡದೆ ಇರುವುದು ದುರದೃಷ್ಟಕರ ಎಂದು ಆಕ್ಷೇಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.