ಬೆಂಗಳೂರು: ಕಳೆದ ಆಗಸ್ಟ್ ತಿಂಗಳಿನಲ್ಲಿ ನಡೆದಿದ್ದ ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಎನ್ಐಎ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದು, ಈ ಗಲಭೆಯ ಹಿಂದೆ ಕೋಮು ಅಸಮಾನತೆಯನ್ನು ಸೃಷ್ಟಿಸುವ ಪಿತೂರಿ ಇತ್ತು. ಇಂತಹ ಒಂದು ಒಳತಂತ್ರವನ್ನು ಎಸ್ಡಿಪಿಐ ಮಾಡಿಕೊಂಡಿತ್ತು ಎಂದು ಕೋರ್ಟ್ಗೆ ಸಲ್ಲಿಸಲಾದ ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
ಫೇಸ್ಬುಕ್ ಕಾಮೆಂಟ್ ಒಂದರಿಂದ ಹತ್ತಿಕೊಂಡಿದ್ದ ಈ ಗಲಭೆಯ ಬೆಂಕಿ ಕಾಂಗ್ರೆಸ್ ಶಾಸಕ ಅಖಂಡ ಶೀನಿವಾಸ ಮೂರ್ತಿ ಅವರ ಮನೆ ಮತ್ತು ಎರಡು ಪೊಲೀಸ್ ಠಾಣೆಗಳಿಗೆ ಬೆಂಕಿ ಹಚ್ಚುವಲ್ಲಿಯ ವರೆಗೆ ಹೊತ್ತುರಿದಿತ್ತು. ಈ ಸಂಬಂಧ ವ್ಯಕ್ತಿಯೊಬ್ಬರು ಹೈಕೋರ್ಟ್ಗೆ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ಕೈಗೆತ್ತಿಕೊಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 247 ಜನರನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಕೋಮು ಸೌಹಾರ್ದತೆ ಕದಡಿಸುವ ನಿಟ್ಟಿನಲ್ಲಿ ಈ ಗಲಭೆ ನಡೆದಿದೆ ಎಂದು ಎನ್ಐಎ ಚಾರ್ಜ್ಶೀಟ್ನಲ್ಲಿ ತಿಳಿಸಿದೆ.
ಈ ಘಟನೆಯ ಮುಖ್ಯ ಆರೋಪಿ ಫೈರೋಜ್ ಪಾಷಾ ಎಸ್ಡಿಪಿಐ ಗೆ ಸೇರಿಕೊಂಡ ನಂತರದಲ್ಲಿ ಮೊಹಮ್ಮದ್ ಷರೀಫ್, ಮುಜಾಮಿಲ್ ಪಾಷಾ ಸೇರಿದಂತೆ ಇನ್ನಿತರ ಎಸ್ಡಿಪಿಐ ಕಾರ್ಯಕರ್ತರು ಈ ಘಟನೆಗೆ ಪಿತೂರಿ ನಡೆಸಿದ್ದಾರೆ ಎಂದು ಎನ್ಐಎ ತನ್ನ ಚಾರ್ಜ್ಶೀಟ್ನಲ್ಲಿ ಹೇಳಿದೆ. ಅದರಂತೆ ಹಿಂದೂ ಧರ್ಮೀಯರಿಗೆ ಅವಹೇಳನ ಮಾಡುವಂತಹ ಪೋಸ್ಟ್ಗಳನ್ನು ಮಾಡಿದ್ದಾರೆ. ಆಗಸ್ಟ್ 11, 2020 ಯಂದು ಶ್ರೀಕೃಷ್ಣ ಜನ್ಮಾಷ್ಟಮಿಯಾಗಿದ್ದು, ಅಂದು ಹಿಂದೂಗಳ ಭಾವನೆ ಕೆರಳಿಸುವ ನಿಟ್ಟಿನಲ್ಲಿ ಪಿತೂರಿ ಮಾಡಿದ್ದಾರೆ. ಫೇಸ್ಬುಕ್ನಲ್ಲಿ ಆರೋಪಿ ನವೀನ್ ಅವರನ್ನು ಟ್ಯಾಗ್ ಮಾಡಿ ಹಿಂದೂ ದೇವರುಗಳನ್ನು ಅವಹೇಳನ ಮಾಡುವ ವಿಡಿಯೋವನ್ನು ಫಿರೋಜ್ ಪಾಷಾ ಹಂಚಿಕೊಂಡಿದ್ದಾನೆ. ಇದಕ್ಕೆ ನವೀನ್ ಪ್ರತಿಕ್ರಿಯಿಸಿದ್ದರು ಎಂದು ಎನ್ಐಎ ತಿಳಿಸಿದೆ.
ಇದಾದ ಬಳಿಕ ನವೇನ್ ವಿರುದ್ಧ ಎಸ್ಡಿಪಿಐ ಮುಖಂಡರು ದೂರು ನೀಡುವಂತೆ ಮಾಡಲಾಗಿದೆ. ಈ ಹಿಂಸಾಚಾರವನ್ನು ನವೀನ್ ತಲೆಗೆ ಕಟ್ಟುವ ನಿಟ್ಟಿನಲ್ಲಿ ಅವರು ಮಾಡಿದ್ದ ಕಾಮೆಂಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಚಾರ ಮಾಡಲಾಯಿತು. ಅದಾದ ಬಳಿಕ ಅಂದು ರಾತ್ರಿ ಆರೋಪಿ ಫೈರೋಜ್ ಪಾಷಾ ಮತ್ತು ಎಸ್ಡಿಪಿಐ ಬೆಂಬಲಿಗರು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ಮತ್ತು ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಪೊಲೀಸು ಠಾಣೆಗಳನ್ನು ಸುಟ್ಟಿದ್ದಾರೆ. ಈ ಹಿಂಸಾಚಾರದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಅಪಾರ ಪ್ರಮಾಣದಲ್ಲಿ ಹಾಣಿ ಸಂಭವಿಸಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದ ಇನ್ನೊಂದು ಆಯಾಮವನ್ನು ಬಿಚ್ಚಿಟ್ಟಿರುವ ಪೊಲೀಸ್ ಇಲಾಖೆ, ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಸಂಪತ್ ರಾಜ್ ಅವರು ತಮ್ಮದೇ ಪಕ್ಷದ ಅಖಂಡ ಶ್ರೀನಿವಾಸಮೂರ್ತಿ ಅವರನ್ನು ರಾಜಕೀಯವಾಗಿ ಮುಗಿಸುವ ಉದ್ದೇಶದಿಂದ ಈ ಸಂಚಿಗೆ ಕೈ ಜೋಡಿಸಿದ್ದಾರೆ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.