ಚಿಕ್ಕಬಳ್ಳಾಪುರದ ಕಲ್ಲುಕೋರೆಯೊಂದರಲ್ಲಿ ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಕಾರ್ಮಿಕರು ಮೃತಪಟ್ಟ ಘಟನೆ ನಾಡನ್ನೆ ಶೋಕ ಸಾಗರಕ್ಕೆ ದೂಡಿದೆ. ದುಡಿಮೆಯ ಮೂಲಕ ಜೀವನವನ್ನು ಸಾಗಿಸುವ ಇಂತಹ ಶ್ರಮಿಕರಲ್ಲಿ ರಾಸಾಯನಿಕಗಳ ಜವಾಬ್ದಾರಿಯುತ ಬಳಕೆ, ಸಾಗಾಟ ಮತ್ತು ವಿಸರ್ಜನೆಯ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮಾರ್ಗದರ್ಶನ ಅತ್ಯಗತ್ಯವೆನಿಸುತ್ತಿದೆ. ಕೆಲ ವಾರಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಇಂತಹುದೇ ಘಟನೆಯಲ್ಲಿ ಜಿಲೆಟನ್ ಕಡ್ಡಿ ಸ್ಫೋಟಗೊಂಡ ಪರಿಣಾಮ ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅಸುನೀಗಿದ್ದರು.
ಜಿಲೆಟಿನ್ ಕಡ್ಡಿ ಎಂಬ ರಾಸಾಯನಿಕವು ಜಲ್ಲಿಕಲ್ಲು ಕೋರೆಗಳಲ್ಲಿ ಕಲ್ಲುಬಂಡೆಯನ್ನು ಒಡೆಯಲು ಬಳಸುವ ಸ್ಫೋಟಕ ಸಾಮಗ್ರಿಯಾಗಿದೆ. ರಾಜ್ಯದಲ್ಲಿ ಕಾರ್ಯವೆಸಗುವ ನೂರಾರು ಬೃಹತ್ ಕೋರೆಗಳಲ್ಲಿ ಇದೇ ರಾಸಾಯನಿಕ ಬಳಸಿ, ಬಂಡೆಗಳನ್ನು ಸಿಡಿಸಲಾಗುತ್ತದೆ. ಬಂಡೆಯನ್ನು ಒಡೆದ ಬಳಿಕ ವಿವಿಧ ಗಾತ್ರಗಳಲ್ಲಿ ಜಲ್ಲಿಕಲ್ಲುಗಳನ್ನು ಬೇರ್ಪಡಿಸಿ ಮಾರಾಟ ಮಾಡಲಾಗುತ್ತದೆ. ರಸ್ತೆ ನಿರ್ಮಾಣದಿಂದ ಹಿಡಿದು, ರೈಲ್ವೇ, ವಸತಿ ಸಮುಚ್ಚಯಗಳಲ್ಲಿ ಇಂತಹುದೇ ಜಲ್ಲಿ ಉಪಯೋಗಿಸಲ್ಪಡುತ್ತದೆ. ದಶಕದಿಂದ ಜಲ್ಲಿಕಲ್ಲಿನ ಬೇಡಿಕೆ ಹೆಚ್ಚಿದ ಪರಿಣಾಮ ಸಂಬಂಧಪಟ್ಟ ಇಲಾಖೆ ಮೂಲಕ ಪರವಾನಗಿ ಪಡೆದು ಜಲ್ಲಿಕಲ್ಲು ಕೋರೆಯನ್ನು ಆರಂಭಿಸುವರ ಸಂಖ್ಯೆಯೂ ಜಾಸ್ತಿಯಾಗಿದೆ. ಲಾಭದಾಯಕ ಉದ್ಯಮ ಎಂದು ಕರೆಸಲ್ಪಡುತ್ತಿರುವ ಕಲ್ಲುಕೋರೆಗಳಲ್ಲಿ ಕಾರ್ಮಿಕರು ಮತ್ತು ಮೇಲ್ವಿಚಾರಕರು ತಮ್ಮ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯ.
ಕಲ್ಲುಕೋರೆಯಲ್ಲಿ ಬಳಸಲ್ಪಡುವ ಜಿಲೆಟಿನ್ ಕಡ್ಡಿ ರಾಸಾಯನಿಕವು ಕಬ್ಬಿಣ ಮತ್ತು ಗಾಳಿಯೊಂದಿಗೆ ರಾಸಾಯನಿಕ ಪ್ರಕ್ರಿಯೆಗೆ ಬೇಗನೇ ಪ್ರತಿಕ್ರಯಿಸುವ ಪರಿಣಾಮ ಅಪಾಯ ತಂದೊಡ್ಡುತ್ತಿದೆ. ಇಂತಹ ಜಿಲೆಟಿನ್ ಕಡ್ಡಿಗಳ ಬಳಕೆ, ಅಳಿದುಳಿದ ರಾಸಾಯನಿಕ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯುವ ಮನಸ್ಥಿತಿಯಿಂದ ಆಪತ್ತು ಕಟ್ಟಿಟ್ಟಬುಟ್ಟಿ ಎಂಬಂತಾಗುತ್ತದೆ. ತಮಿಳುನಾಡು ಭಾಗದಿಂದ ಕರ್ನಾಟಕಕ್ಕೆ ತರಲಾಗುತ್ತಿರುವ ಜಿಲೆಟಿನ್ ಸ್ಫೋಟಕದ ಪರಿಣಾಮ ಈಗಾಗಲೇ ಹಲವು ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಯಾವುದೇ ರಾಸಾಯನಿಕದ ಸಮರ್ಪಕ ಬಳಕೆ, ಜವಾಬ್ದಾರಿಯುತ ಸಾಗಾಟ, ಉಪಯೋಗ, ವಿಲೇವಾರಿಯ ಬಗ್ಗೆ ಭೂವಿಜ್ಞಾನ ಇಲಾಖೆಯೂ ಸಮರ್ಪಕ ನಿರ್ದೇಶನಗಳನ್ನು ಹೊರತರಬೇಕಿದೆ. ಇತ್ತೀಚೆಗೆ ನಡೆದ ಎರಡೂ ಸ್ಫೋಟಗಳಿಗೆ ಮೂಲ ಕಾರಣವಾದ ಅಂಶಗಳತ್ತ ಗಮನಹರಿಸಿ ಮುಂದೆ ಇಂತಹ ಅನಾಹುತಗಳು ನಡೆಯದಂತೆ ಅಗತ್ಯ ಕಾನೂನು ಕ್ರಮಕೈಗೊಳ್ಳುವ ಗುರುತರ ಜವಾಬ್ದಾರಿಯೂ ಆಡಳಿತಯಂತ್ರಕ್ಕಿದೆ.
ಅಪರಾಧಿಗಳನ್ನು ಗುರುತಿಸಿ ತಕ್ಕ ಶಿಕ್ಷೆ ನೀಡಿ ಮುಂದೆ ಇಂತಹ ಅಚಾತುರ್ಯಗಳು ಆಗದಂತೆ ತಡೆಯಬೇಕಿದೆ. ಸ್ಪೋಟಕ ಸಾಮಾಗ್ರಿಗಳ ದಾಸ್ತಾನು ಮಾಡುವ ಸ್ಥಳಗಳ ಬಗ್ಗೆಯೂ ಆಡಳಿತಯಂತ್ರಕ್ಕೆ ಸಮರ್ಪಕ ಮಾಹಿತಿ ಇರಬೇಕು. ಒಂದೊಮ್ಮೆ ಬಳಸಲ್ಪಟ್ಟ ನಂತರ ಉಳಿಯುವ ರಾಸಾಯನಿಕ ಅಂಶಗಳು ಅಪಾಯವನ್ನು ತಂದೊಡ್ಡುವ ಸಂದರ್ಭಗಳು ಇಲ್ಲದಿಲ್ಲ. ಹಾಗಾಗಿ ಎಲ್ಲ ಹಂತಗಳಲ್ಲಿ ಮೇಲಾಧಿಕಾರಿಗಳು, ಕೋರೆ ಮಾಲಿಕರ ಜವಾಬ್ದಾರಿಯುತ ವರ್ತನೆ ಅತ್ಯಗತ್ಯವಾಗಿದೆ.
ಒಂದರ ಬೆನ್ನಿಗೆ ಮತ್ತೊಂದು ಅಘಾತ
ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ದುರಂತ ಪ್ರಕರಣದ ನೋವು ಮಾಸುವ ಮುನ್ನವೇ ಮತ್ತೊಂದು ಜಿಲೆಟಿನ್ ಸ್ಫೋಟವು ಚಿಕ್ಕಬಳ್ಳಾಪುರದ ಮಂಡಿಕಲ್ ಹೋಬಳಿ ಹಿರೇನಾಗವೇಲಿಯಲ್ಲಿ ನಡೆದಿದ್ದು ಪ್ರಕರಣವನ್ನು ಸರಕಾರವು ಗಂಭೀರವಾಗಿ ಪರಿಗಣಿಸುವಂತೆ ಮಾಡಿದೆ. ಏಕಾಏಕಿ ನಡೆದ ಜಿಲೆಟಿನ್ ಕಡ್ಡಿ ಸ್ಫೋಟದಿಂದ ಮೃತದೇಹಗಳು ಛಿದ್ರಗೊಂಡಿದ್ದು ಸುಮಾರು 1,000 ಅಡಿ ದೂರಕ್ಕೆ ಮೃತದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿದ್ದವು.
ಕಳೆದ ಕೆಲ ವಾರಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಪ್ರಕರಣದಲ್ಲೂ ಇಂತಹುದೇ ಲೋಪ ಸಂಭವಿಸಿದ್ದು, ಕ್ವಾರಿಗೆ ತರಲಾಗಿದ್ದ ಜಿಲೆಟಿನ್ ಕಡ್ಡಿಗಳನ್ನು ಘನವಾಹನದಲ್ಲೇ ಇರಿಸಲಾದ ಕಾರಣ ರಾಸಾಯನಿಕ ಪ್ರತಿಕ್ರಿಯೆ ನಡೆದು ಸ್ಫೋಟಕ್ಕೆ ಕಾರಣವಾಗಿದೆ ಎನ್ನಲಾಗಿದೆ. ರಾಸಾಯನಿಕ ಸರಕುಗಳ ಸಾಗಾಟ, ಮಾರಾಟ,ಬಳಕೆ,ವಿಲೇವಾರಿ ಹೀಗೆ ಎಲ್ಲ ಘಟ್ಟಗಳಲ್ಲೂ ಅತಿ ಹೆಚ್ಚಿನ ಜಾಗ್ರತೆ ಅತ್ಯಗತ್ಯ. ಜನನಿಬಿಡ ಪ್ರದೇಶಗಳಲ್ಲಿ, ಜನ ವಸತಿಕೇಂದ್ರಗಳಲ್ಲಿ ಇಂತಹ ರಾಸಾಯನಿಕ ಸ್ಪೋಟಗೊಂಡಿದ್ದರೆ?! ಆದ್ದರಿಂದ ಇಂತಹ ವಿಚಾರಗಳ ಬಗ್ಗೆ ಇಲಾಖೆಗಳು ಕಾರ್ಮಿಕರಿಗೆ ಸಹಿತ ಮೇಲ್ವಿಚಾರಕರಿಗೆ ಸರಿಯಾದ ನಿರ್ದೇಶನಗಳನ್ನು ನೀಡಿ, ಜಾಗೃತಿಯನ್ನು ಮೂಡಿಸಬೇಕಿದೆ. ಮುಂದಿನ ದಿನಗಳಲ್ಲಿ ನಿರ್ಲಕ್ಷ್ಯದಿಂದಾಗುವ ಸಾಂಭಾವ್ಯ ಅಪಾಯಗಳನ್ನು ತಪ್ಪಿಸಬೇಕಿದೆ.
✍️ ವಿವೇಕಾದಿತ್ಯ ಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.