ಭಾರತದ ಸ್ವಾತಂತ್ರ್ಯ ಯಜ್ಞದಲ್ಲಿ ಅನೇಕ ಅಮೂಲ್ಯ ರತ್ನಗಳು ಹವಿಸ್ಸಾಗಿ ಅರ್ಪಿತವಾದವು. ಭಾರತದ ಇತಿಹಾಸದಲ್ಲಿ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳನ್ನು ನಡೆಸಿದ ಹೋರಾಟಗಾರರು ಹೆಚ್ಚಿನ ಪ್ರಸಿದ್ದಿಯನ್ನು ಪಡೆದರೆ, ಅನೇಕ ಕ್ರಾಂತಿಕಾರಿ ಹೋರಾಟಗಾರರು ತೆರೆಯ ಮರೆಯಲ್ಲೇ ಉಳಿದು ಹೋದರು. ಅಂತಹಾ ಕ್ರಾಂತಿಕಾರಿ ವೀರರಲ್ಲಿ ಒಬ್ಬರು ವಾಸುದೇವ ಬಲವಂತ ಫಡಕೆ. ಭಾರತದ ಸಶಸ್ತ್ರ ಹೋರಾಟದ ಪಿತಾಮಹರೆಂದೇ ಭಾರತೀಯರ ಹೃದಯದಲ್ಲಿ ನೆಲೆಸಿರುವ ವಾಸುದೇವ ಫಡಕೆಯವರು ಬಂಧೀಖಾನೆಯ ಬಾಗಿಲು ಮುರಿದು ಪರಾರಿಯಾಗಿ ಸಾರ್ವಜನಿಕರಲ್ಲಿ ಬಾಲಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್ ಮುಂತಾದವರಿಗಿಂತಲೂ ಮೊದಲೇ ಸ್ವಾತಂತ್ರದ ಕಿಚ್ಚು ಹಚ್ಚಿದ ಮಾಹಾನ್ ವೀರ. ಇವರನ್ನು ಭಾರತದ ಸಶಸ್ತ್ರ ಹೋರಾಟದ ಮೊದಲ ವೀರರಲ್ಲಿ ಒಬ್ಬರು ಎನ್ನಲಾಗುತ್ತದೆ. 1883 ರ ಫೆಬ್ರವರಿ 17 ರಂದು ಹುತಾತ್ಮರಾದಾಗ ಇವರ ವಯಸ್ಸು ಕೇವಲ 38. ಬಂಕಿಮ ಚಂದ್ರ ಚಟರ್ಜಿಯವರ ಆನಂದಮಠ ಕಾದಂಬರಿಯು ಇವರಲ್ಲಿದ್ದ ಹೋರಾಟದ ಮನೋಭಾವನೆಗೆ ಒಂದು ದಿಶೆಯನ್ನೂ ಗುರಿಯನ್ನೂ ನೀಡಿತ್ತು. ಇವರು ವೀರ ಸಾವರ್ಕರರ ಗುರುಗಳೂ ಕೂಡಾ ಹೌದು.
ಭಾರತೀಯ ಸಶಸ್ತ್ರ ಹೋರಾಟದ ಪಿತಾಮಹ ವಾಸುದೇವ್ ಬಲವಂತ ಫಡಕೆ ಅವರ ಬಗ್ಗೆ ನಾವು ತಿಳಿದಿರಬೇಕಾದ ಅಂಶಗಳು
🔹ವಾಸುದೇವ ಬಲವಂತ ಫಡಕೆ ಅವರು ಮಹಾರಾಷ್ಟ್ರದ ಪನ್ವೇಲ್ ತಾಲೂಕಿನ ಶಿರ್ಧೋನ್ ಎಂಬ ಹಳ್ಳಿಯಲ್ಲಿ 1485 ನವೆಂಬರ್ 4 ರಂದು ಜನಿಸಿದರು.
🔹ಬಾಲ್ಯದಲ್ಲಿ ಕುದುರೆ ಸವಾರಿ, ಕುಸ್ತಿಯಂತಹ ದೈಹಿಕ ಪರಿಶ್ರಮದ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದ ವಾಸುದೇವರು ಶಾಲಾ ಶಿಕ್ಷಣವನ್ನು ಬಹು ಬೇಗ ಮೊಕಟುಗೊಳಿಸಿದ್ದರು. ಆದರೂ ಮುಂದೆ ಪುಣೆ ನಗರವನ್ನು ಸೇರಿ ಸೈನ್ಯದ ಲೆಕ್ಕದ ವಿಭಾಗದಲ್ಲಿ ಗುಮಾಸ್ತರಾಗಿ 15 ವರ್ಷಗಳ ಕಾಲ ನೌಕರಿಯನ್ನು ಮಾಡಿದರು.
🔹 ಬ್ರಿಟಿಷ್ ಸರಕಾರದ ಸಮಯದಲ್ಲಿ ಅವರ ಕ್ರೂರ ಆಡಳಿತದಿಂದ ರೈತರು ಅನುಭವಿಸುತ್ತಿದ್ದ ಕಷ್ಟಗಳನ್ನು ನೋಡಿದ ವಾಸುದೇವರು ನಲುಗಿ ಹೋಗಿದ್ದರು. ಈ ತೊಂದರೆಗೆ ಸ್ವರಾಜ್ಯವೇ ಏಕೈಕ ಪರಿಹಾರ ಎಂಬುದು ಅವರ ನಂಬಿಕೆಯಾಗಿತ್ತು.
🔹 ಕ್ರಾಂತಿವೀರ ಲಾಹುಜಿ ವಸ್ತಾದ್ ಸಾಳ್ವೆ ಎಂಬ ಸಾಮಾಜಿಕ ಕಾರ್ಯಕರ್ತ ವಾಸುದೇವರ ಮಾರ್ಗದರ್ಶಕರಾಗಿದ್ದರು. ದಲಿತರಾಗಿದ್ದ ಸಾಳ್ವೆ ವಾಸುದೇವರಿಗೆ, ದಲಿತರನ್ನು ಸಾಮಾಜಿಕ ಮುಖ್ಯವಾಹಿನಿಗೆ ಕರೆತರಬೇಕಾದ ಮಹತ್ವವನ್ನು ತಿಳಿಯಪಡಿಸಿದರು.
🔹ಈ ಸಮಯದಲ್ಲಿ ವಾಸುದೇವರು ಬ್ರಿಟೀಷ್ ರಾಜಕಾರಣದಿಂದಾಗಿ ಭಾರತದ ಆರ್ಥಿಕತೆಯ ಮೇಲಾಗುತ್ತಿರುವ ದುಷ್ಪರಿಣಾಮದ ಕುರಿತಾಗಿ ಮಹದೇವ್ ಗೋವಿಂದ ರಾನಡೆಯವರು ನೀಡುತ್ತಿದ್ದ ಉಪನ್ಯಾಸಗಳಿಗೆ ಹೋಗಲು ಪ್ರಾರಂಭಿಸಿದರು.
🔹 ಮುಂದೆ ಅವರು ಯುವ ಭಾರತೀಯರಿಗೆ ಶಿಕ್ಷಣವನ್ನು ನೀಡುತ್ತಿದ್ದ “ ಐಕ್ಯ ವರ್ಧಿನಿ ಸಭಾ ” ಎಂಬ ಸಂಸ್ಥೆಯನ್ನು ಸೇರಿಕೊಂಡರು. ಈ ಸಂದರ್ಭದಲ್ಲಿ ಬ್ರಿಟೀಷ್ ಸರಕಾರ ಅನಾರೋಗ್ಯ ಪೀಡಿತರಾಗಿ ಸಾವಿನಂಚಿನಲ್ಲಿದ್ದ ತಾಯಿಯನ್ನು ನೋಡಲು ಹೋಗಬಯಸಿದ್ದ ಗುಮಾಸ್ತ ವಾಸುದೇವರಿಗೆ ರಜೆಯನ್ನು ನಿರಾಕರಿಸಿತು ಮತ್ತು ವಾಸುದೇವರಿಗೆ ತಮ್ಮ ತಾಯಿಯನ್ನು ಕೊನೆಯ ಬಾರಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಇದು ಅವರ ಜೀವನದಲ್ಲಿ ಮಹತ್ವವಾದ ತಿರುವಿಗೆ ಕಾರಣವಾಯಿತು.
🔹 ರಾಜಕೀಯ ಸಿದ್ದಾಂತದ ಕಾರಣಕ್ಕಾಗಿ ದೇಶದಾದ್ಯಂತ ಯಾತ್ರೆಗೈದ ಮೊದಲ ವ್ಯಕ್ತಿ ವಾಸುದೇವ ಬಲವಂತ ಫಡಕೆ.
🔹1875 ರಲ್ಲಿ ಕೋಲಿ, ಭೀಲ್ಸ್ ಮತ್ತು ಧಾಂಗರ್ ಸಮುದಾಯದ ಜನರನ್ನು ಸೇರಿಸಿಕೊಂಡು ವಾಸುದೇವರು ಮಹಾರಾಷ್ಟ್ರದಲ್ಲಿ ರಾಮೋಶಿ ಎಂಬ ಹೋರಾಟಗಾರರ ಸಂಸ್ಥೆಯನ್ನು ಸ್ಥಾಪಿಸಿದರು.
🔹 1879 ರ ಫೆಬ್ರವರಿ 20 ರಂದು ರಾತ್ರಿ ವಾಸುದೇವರು ತಮ್ಮ ತಂಡದವರಾದ ವಿಷ್ಣು ಗದ್ರೆ, ಗೋಪಾಲ್ ಸಾಥೆ, ಗಣೇಶ್ ದಿಯೋಧರ್ ಮತ್ತು ಗೋಪಾಲ್ ಹರಿ ಕರ್ವೆ ಅವರೊಂದಿಗೆ ಸೇರಿ ಪುಣೆಯಿಂದ 8 ಮೈಲಿ ದೂರದ ಲೋನಿಯಲ್ಲಿ 300 ಜನ ಯೋಧರೊಂದಿಗೆ ಯುದ್ಧ ನಡೆಸಿದರು, ಬಹುಷಃ ಇದು ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರರ ತಂಡವಾಗಿತ್ತು.
🔹 ಸಂಸ್ಥೆಗಾಗಿ ಮತ್ತು ಬಡತನದಿಂದ ನರಳುತ್ತಿದ್ದ ರೈತರಿಗೆ ಸಹಾಯಹಸ್ತವನ್ನು ಚಾಚುವ ಉದ್ದೇಶದಿಂದ ಧನ ಸಂಗ್ರಹಣೆಗಾಗಿ ವಾಸುದೇವ ಫಡಕೆ ಮತ್ತವರ ತಂಡವು ಶ್ರೀಮಂತ ಬ್ರಿಟಿಷ್ ವ್ಯಾಪಾರಿಗಳನ್ನು ದೋಚುತ್ತಿದ್ದರು.
🔹 ಬ್ರಿಟಿಷ್ ಸರಕಾರದ ಶೋಷಕ ಆರ್ಥಿಕ ನೀತಿಗಳನ್ನು ಖಂಡಿಸಿ ಘೋಷಣೆಯನ್ನು ಹೊರಡಿಸಿದ ವಾಸುದೇವರು, 1879 ರ ಮೇ ತಿಂಗಳಲ್ಲಿ ಇದರ ಕುರಿತಾಗಿ ಎಚ್ಚರಿಕೆಯನ್ನೂ ನೀಡಿದರು. ಘೋಷಣೆಯ ಪ್ರತಿಗಳನ್ನು ರಾಜ್ಯಪಾಲರು, ತೆರಿಗೆ ಸಂಗ್ರಾಹಕರು ಮತ್ತು ಇತರ ಸರ್ಕಾರಿ ಅಧಿಕಾರಿಗಳಿಗೆ ಪೋಸ್ಟ್ ಮಾಡಲಾಯಿತು. ಈ ಪ್ರಕ್ರಿಯೆಯು ದೇಶದಾದ್ಯಂತ ಒಂದು ಹೊಸ ಸಂಚಲನದ ಸೃಷ್ಟಿಗೆ ಕಾರಣವಾಯಿತು.
🔹 ಪುಣೆಯಲ್ಲಿದ್ದ ಬ್ರಿಟೀಷ್ ಸೈನಿಕರ ಮೇಲೆ ಅನಿರೀಕ್ಷಿತ ಆಕ್ರಮಣವನ್ನು ನಡೆಸುವ ಮೂಲಕ, ಅವರನ್ನು ಬಂಧಿಗಳನ್ನಾಗಿಸಿ ಸಂಪೂರ್ಣ ಪುಣೆ ನಗರವನ್ನು ಕೆಲ ದಿನಗಳ ಕಾಲ ತನ್ನ ಸುರ್ಪದಿಗೆ ತೆಗೆದುಕೊಂಡ ಬಳಿಕ ವಾಸುದೇವರ ಜನಪ್ರಿಯತೆ ಅಧಿಕವಾಯಿತು.
🔹 ಮೂವರು ಕ್ರಾಂತಿಕಾರಿಗಳೂ ಸಮಾಜ ಸುಧಾರಕರೂ ಆದ ವಾಸುದೇವರು, ಲಕ್ಷ್ಮಣ ನರಹಾರ್ ಇಂದಾಪುರ್ಕರ್ ಮತ್ತು ವಾಮನ್ ಪ್ರಭಾಕರ್ ಭಾವೆ 1860 ರಲ್ಲಿ ಪೂನಾ ಸ್ಥಳೀಯ ಸಂಸ್ಥೆಯನ್ನು ರಚಿಸಿದರು. ನಂತರ ಇದನ್ನು ಮಹಾರಾಷ್ಟ್ರ ಶಿಕ್ಷಣ ಸಂಸ್ಥೆ ಎಂದು ಕರೆಯಲಾಯಿತು. ಇಂದು ಈ ಸಂಸ್ಥೆಯು ಮಹಾರಾಷ್ಟ್ರದಾದ್ಯಂತ 77 ವಿದ್ಯಾಸಂಸ್ಥೆಗಳನ್ನು ಹೊಂದಿದೆ.
🔹 ಮುಂದೆ ಬ್ರಿಟೀಷರು ಮಹಾರಾಷ್ಟ್ರದ ಮೇಲೆ ತಮ್ಮ ಹಿಡಿತವನ್ನು ಬಿಗಿಗೊಳಿಸಿದಾಗ ವಾಸುದೇವರು ಮಹಾರಾಷ್ಟ್ರದಿಂದ ಪಲಾಯನಗೈದು ಆಂದ್ರಪ್ರದೇಶದ ಕಾರ್ನೋಲ್ ಜಿಲ್ಲೆಯ ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದಲ್ಲಿ ವಾಸವಿದ್ದರು.
🔹 ವಾಸುದೇವರ ಕುರಿತಾಗಿ ಸುಳಿವು ನೀಡಿದರೆ ಬಹುಮಾನವನ್ನು ನೀಡಲಾಗುವುದು ಎಂಬ ಬ್ರಿಟೀಷರ ಘೋಷಣೆಯ ಲಾಲಸೆಗೆ ಬಲಿಯಾದ ಭಾರತೀಯನೊಬ್ಬ ವಾಸುದೇವರ ಇರುವಿಕೆಯ ಸುಳಿವನ್ನು ಬ್ರಿಟೀಷರಿಗೆ ನೀಡುವ ಮೂಲಕ ದ್ರೋಹವೆಸಗುತ್ತಾನೆ.
🔹 1979 ರಲ್ಲಿ ವಾಸುದೇವರನ್ನು ಕಾಲ್ದಗಿ ಜಿಲ್ಲೆಯಲ್ಲಿ ಸೆರೆಹಿಡಿದು ಯೆಮನ್ನ ಅಡೆನ್ನಲ್ಲಿರುವ ಜೈಲಿಗೆ ಸಾಗಹಾಕಲಾಯಿತು. ಏಕೆಂದರೆ ಅವರ ಬಂಧನಕ್ಕೆ ಎದುರಾಗಿ ಭಾರತೀಯರ ಪ್ರತಿಕ್ರಿಯೆಯ ಬಗ್ಗೆ ಬ್ರಿಟೀಷ್ ಆಡಳಿತವು ಭಯವನ್ನು ಹೊಂದಿತ್ತು.
🔹 ಯಾವ ಬಂಧಗಳಿಗೂ ವಾಸುದೇವರೆಂಬ ವೀರನನ್ನು ಬಹು ಸಮಯ ಹಿಡಿದಿಡಲು ಸಾಧ್ಯವಿರಲಿಲ್ಲ, ಏಕೆಂದರೆ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಅವರ ಉತ್ಕಟತೆ ಮತ್ತು ಶೌರ್ಯವು ಅವರಲ್ಲಿ ಅಪರಿಮಿತವಾಗಿತ್ತು. 1883 ರ ಫೆಬ್ರವರಿ 13 ರಂದು ವಾಸುದೇವರು ಜೈಲಿನ ಬಾಗಿಲಿನ ಸರಳುಗಳನ್ನು ಕಿತ್ತು ಬಂಧೀಖಾನೆಯಿಂದ ತಪ್ಪಿಸಿಕೊಂಡರು.
🔹 ಆದರೆ ಬ್ರಿಟೀಷರು ಫೆಬ್ರವರಿ 17 ರಂದು ಪುನಃ ಬಂಧಿಸಲ್ಪಟ್ಟ ವಾಸುದೇವರು ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು.
🔹 ವಾಸುದೇವ ಬಲವಂತ ಫಡಕೆ ಅವರು ಫೆಬ್ರವರಿ 17 ರಂದು ತಮ್ಮ 38 ನೇ ವಯಸ್ಸಿನಲ್ಲಿ ಹುತಾತ್ಮರಾದರು.
ಸ್ವದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿರಿಸಿ, ಸ್ವಾತಂತ್ರ್ಯಕ್ಕೋಸ್ಕರವೇ ಕೊನೆಯುಸಿರೆಳೆದ ವೀರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ದೇಶದ ಪ್ರಥಮ ಸಶಸ್ತ್ರ ಕ್ರಾಂತಿಕಾರಿ ಹೋರಾಟಗಾರ ವಾಸುದೇವ ಬಲವಂತ ಫಡಕೆ ಅವರ ಬಲಿದಾನ ದಿನದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.