ಪುಸ್ತಕ ಪರಿಚಯ : ಆವಿಷ್ಕಾರದ ಹರಿಕಾರ – ಬುದ್ಧಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ
ಎಲಿಜರ್ ಬೆನ್ ಯಹುದಾ ಹೀಬ್ರೂ ಭಾಷೆಯನ್ನು ಇಸ್ರೇಲಿಗರ ಜನಭಾಷೆಯನ್ನಾಗಿ ಮಾಡಿದ ಕತೆಯನ್ನು ಡಾ. ಎಚ್ ಆರ್ ವಿಶ್ವಾಸ ‘ಮತ್ತೆ ಹೊತ್ತಿತು ಹೀಬ್ರೂ ಹಣತೆ’ ಪುಸ್ತಕದಲ್ಲಿ ಅತ್ಯದ್ಭುತವಾಗಿ, ಸವಿಸ್ತಾರವಾಗಿ ವಿವರಿಸಿದ್ದಾರೆ. ದೇವ ಭಾಷೆ ಎಂದು ಮೂದಲಿಸಲ್ಪಟ್ಟ ಹೀಬ್ರೂವನ್ನು ಜನಸಾಮಾನ್ಯರು ಬಳಸುವಂತಾಗಿ ಇಂದು ಆ ದೇಶದ ರಾಷ್ಟ್ರಭಾಷೆಯಾಗಿ ಪರಿವರ್ತಿತವಾಗಬೇಕೆಂದರೆ ಬೆನ್ ಯಹುದಾ ಸಾಧನೆಯನ್ನು, ಪರಿಶ್ರಮವನ್ನು ಆ ಪುಸ್ತಕದಿಂದ ಓದಿ ತಿಳಿದುಕೊಳ್ಳಬೇಕು. ಈ ಪುಸ್ತಕ ಓದಿಯಾದ ಮೇಲೆ, ಹತ್ತಾರು ವರ್ಷಗಳಿಂದ ತಂತ್ರಜ್ಞಾನದ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನನಗೆ, ಇಸ್ರೇಲಿಗರ ಕಾರ್ಯಪದ್ಧತಿ ತಿಳಿದಿತ್ತೇ ಆದರೂ, ಅವರೇಕೆ ತಮ್ಮ ಕೆಲಸಗಳಲ್ಲಿ ಅಷ್ಟು ಅಗ್ರೆಸಿವ್ ಅನ್ನುವುದು ಮಾತ್ರ ಅರ್ಥವಾಗುತ್ತಿರಲಿಲ್ಲ.
ಇಸ್ರೇಲ್ಗೆ ಮಧ್ಯಾಹ್ನವಾದಾಗ ನಮಗೆ ಸಂಜೆಯಾಗಿರುತ್ತದೆ. ಅಂತಹ ಒಂದು ಸಂಜೆ ನಾವು ಮಾಡುತ್ತಿರುವ ಕೆಲಸದ ಅವಲೋಕನ ನಡೆಸಿ, ಅವಗಳಿಗೆ ಒಂದಷ್ಟು ಬದಲಾವಣೆಗಳು ಅಗತ್ಯವೆನಿಸಿ, ಚರ್ಚೆಗಳ ನಂತರ ಹೊಸ ಯೋಜನೆಯ ನಿರ್ಧಾರವಾದ ಮೇಲೆ, ನಾಳೆಯ ದಿನ ಯಾವುದರ ಬಗ್ಗೆ ಕೆಲಸ ಮಾಡಬೇಕು ಎಂದು ಎರಡೂ ದೇಶದವರು ಕೂತು ಒಪ್ಪಿಯಾದಮೇಲೆ, ನಾವು ಮನೆಗೆ ತೆರಳಿರುತ್ತಿದ್ದೆವು. ಇಸ್ರೇಲಿಗರೋ ಆ ನಿರ್ಧಾರದ ಬಗ್ಗೆ ಇನ್ನಷ್ಟು ಯೋಚಿಸಿ ಮಾರನೆಯ ದಿನಕ್ಕೆ ಸಂಪೂರ್ಣ ಹೊಸತಾದ ವ್ಯವಸ್ಥೆಯನ್ನು ಸಿದ್ಧಪಡಿಸಿರುತ್ತಿದ್ದರು. ಈ ಘಟನೆ ಒಮ್ಮೆಯೋ ಎರಡು ಬಾರಿಯೋ ನಡೆದದ್ದಲ್ಲ. ಸದಾ ಯೋಚಿಸುಸುತ್ತಲೇ, ಹೊಸತೊಂದನ್ನು ಆವಿಷ್ಕಾರ ಮಾಡುವ ಯೋಜನೆಯಲ್ಲಿಯೇ ನಿರತ ಇಸ್ರೇಲಿಗರ ಈ ಗುಣ ಕಂಪನಿಯೊಂದಕ್ಕೆ ಉತ್ತಮವಾದ ಫಲ ನೀಡುತ್ತದಾದರೂ ಅವರ ಜೊತೆ ಕೆಲಸ ಮಾಡುವವರ ಗತಿ ಏನು ಎಂಬುದನ್ನು ಯಾರೂ ಯೋಚಿಸುವುದಿಲ್ಲ ಎಂಬ ಬಗ್ಗೆ ನಾವೆಲ್ಲರೂ ಬೇಸರಿಸಿಕೊಳ್ಳುತ್ತಿದ್ದೆವು.
ತಂತ್ರಜ್ಞಾನದ ವಿಷಯದಲ್ಲಿ ಅಮೆರಿಕಾದ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಇದ್ದುಕೊಂಡು ಮಾರ್ಗದರ್ಶನ ಮಾಡುವ ಎಷ್ಟೋ ಇಸ್ರೇಲಿಗರನ್ನು ನಾನು ಸ್ವತಃ ಕಂಡಿದ್ದೇನೆ. ಇಸ್ರೇಲಿಯೊಬ್ಬ ಯಾವುದಾದರೂ ವಿಷಯದ ಬಗ್ಗೆ ಹೇಳಿದರೆ ಅದನ್ನು ಸವಾಲು ಮಾಡುವ ಗೋಜಿಗೂ ಹೋಗದೆ ಅವರ ನಿರ್ಧಾರಗಳನ್ನು ಒಪ್ಪುವವರನ್ನು ನೋಡಿದ್ದೇನೆ. ಇದು ಇಸ್ರೇಲಿಗರ ಯೋಚನಾ ಪದ್ಧತಿಯನ್ನು, ಅವರ ನಿರ್ಧಾರ ತಪ್ಪಾಗಲು ಸಾಧ್ಯವೇ ಇಲ್ಲ ಎಂಬ ನಂಬಿಕೆಯನ್ನು ಸೂಚಿಸುತ್ತದೆ.
ಹಿಂದೊಮ್ಮೆ ಹಿರಿಯ ಪತ್ರಕರ್ತರು, ವಿಶ್ವವಾಣಿಯ ಪ್ರಧಾನ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ ಮಾತನಾಡುತ್ತಿದ್ದಾಗ, ಅವರ ಇಸ್ರೇಲ್ ಪ್ರವಾಸ, ಪ್ರವಾಸದ ಜೊತೆಗೆ ಓದುಗರಿಗೆ ಅವರು ಕಟ್ಟಿಕೊಟ್ಟ ಇಸ್ರೇಲ್ ತಂತ್ರಜ್ಞಾನದ ಲೇಖನಗಳನ್ನು ಚರ್ಚಿಸುವಾಗ ಅವಿ ಯೋರಿಶ್ (Avi Jorisch) ಬರೆದಿರುವ Thou Shalt Innovate ಪುಸ್ತಕದ ಬಗ್ಗೆಯೂ ಪ್ರಸ್ತಾಪಿಸಿದ್ದರು. ಅಲ್ಲದೆ, ಆ ಪುಸ್ತಕದ ಅನುವಾದದ ಕೆಲಸವನ್ನು ಮಾಡುತ್ತಿರುವುದಾಗಿ ವಿಶ್ವೇಶ್ವರ ಭಟ್ಟರು ಹೇಳಿದ್ದರು. ಪುಸ್ತಕವೀಗ ಲಭ್ಯವಿದೆ. ವಿಶ್ವೇಶ್ವರ ಭಟ್ಟರು ಅನುವಾದಿಸುವ ಪುಸ್ತಕ “ಆವಿಷ್ಕಾರದ ಹರಿಕಾರ” ವನ್ನು ವಿಶ್ವವಾಣಿ ಪುಸ್ತಕ ಪ್ರಕಟಿಸಿದೆ.
ಇಸ್ರೇಲ್ ಎಂದ ಕೂಡಲೇ ಪ್ಯಾಲೇಸ್ಟಿನ್, ಅರಬ್ ದೇಶಗಳ ಜೊತೆಯ ಯುದ್ಧ, ವಿಶ್ವದ ಹಿರಿಯಣ್ಣರು ಇವರನ್ನು ದೂರ ಇಟ್ಟಿರುವ ಬಗೆ – ಹೀಗೆ ಮಾಧ್ಯಮಗಳು ಹಲವು ಕಥೆಗಳನ್ನು ನಮಗೆ ಕಟ್ಟಿಕೊಡುತ್ತವೆ. ನಾಜಿಗಳು ಯಹೂದಿಗಳ ನರಮೇಧ ನಡೆಸಿದ ವಿಷಯವಾಗಲಿ, ಕಾಲಕಾಲಕ್ಕೆ ಇಸ್ರೇಲಿಗರಿಂದ ಬಂದಿರುವ ಆವಿಷ್ಕಾರದ ಬಗ್ಗೆಯಾಗಲಿ ಮಾತನಾಡುವವರು ಕಡಿಮೆ. ನಾಜಿಗಳನ್ನು ನೀಚರು ಎನ್ನುವ ಮಾತು ಕೇಳಿಬರುತ್ತವೆಯಾದರೂ, ಇಸ್ರೇಲಿಗರನ್ನು ಅವರು ಕೀಳಾಗಿ ಕಂಡರು ಎಂಬುದನ್ನು ಯಾರೂ ಒತ್ತಿ ಹೇಳುವುದಿಲ್ಲ. ಅಸಲಿಗೆ ಭಾರತ ಬಿಟ್ಟು ಬಹುತೇಕ ಎಲ್ಲಾ ರಾಷ್ಟ್ರಗಳು ಇವರನ್ನು ಕೀಳಾಗಿ ಕಂಡಿದೆ ಎಂಬ ಬಗ್ಗೆ ಯಾರೂ ಪ್ರಸ್ತಾಪಿಸುವುದಿಲ್ಲ. ಆದರೆ ಸುಯೋಗವೆಂದರೆ ಇಸ್ರೇಲ್ ಭಾರತವನ್ನು ತನ್ನ ಮಿತ್ರ ರಾಷ್ಟ್ರವೆಂದೇ ಕರೆದಿದೆ. ಸಹಾಯಹಸ್ತವನ್ನು ಒದಗಿಸಿದೆ. ಇನ್ನು ಇಸ್ರೇಲ್ ಬಗ್ಗೆ ಹೇಳಲೇ ಬೇಕೆಂದರೆ ಮಾಧ್ಯಮಗಳು ಅವರ ಭದ್ರತಾ, ಬೇಹುಗಾರಿಕಾ ಸಂಸ್ಥೆಯಾದ ಮೊಸಾದ್ ಅನ್ನು ಪ್ರಸ್ತಾಪಿಸಿ, ಅದೊಂದು “ಕ್ರೂರಿ” ಸಂಸ್ಥೆ ಎಂದೂ, ತಮ್ಮ ಶತ್ರುವನ್ನು ನಿಗ್ರಹಿಸಲು ಅಮಾಯಕರಿಗೂ ತೊಂದರೆ ನೀಡಲು ಹೇಸದವರು ಎಂದಷ್ಟೇ ಹೇಳಿಬಿಡುತ್ತಾರೆ. ಅಂತೆಯೇ ಚಿತ್ರನಟ ಅಮಿರ್ ಖಾನ್ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಾಹು ಜೊತೆ ಸಂತೋಷದ ಕೂಟಕ್ಕೆ ಹೋಗದಿರುವ ವಿಷಯ ಸುದ್ದಿಯಾಗುವುದಿಲ್ಲ. ಆದರೆ ಆತ ಟರ್ಕಿಯ ಎರ್ಡೋಗಾನ್ ನನ್ನೋ, ಅವನ ಹೆಂಡತಿಯನ್ನೋ ಭೇಟಿ ಮಾಡುವುದು ಆತನ ವೈಯಕ್ತಿಕ ವಿಚಾರ ಎಂದು ಹೇಳುವಷ್ಟರ ಮಟ್ಟಿಗೆ ಮಾಧ್ಯಮ ಇಸ್ರೇಲ್ ವಿಷಯವನ್ನು ಜನರಿಂದ ದೂರವಿಡುವ ಪ್ರಯತ್ನ ಮಾಡುತ್ತದೆ.
ಇಸ್ರೇಲಿಗರು ನಡೆಸಿರುವ ಆವಿಷ್ಕಾರಗಳ ಬಗ್ಗೆ ಆಗೊಂದು ಈಗೊಂದು ಸುದ್ದಿ ಪ್ರಕಟವಾಗುತ್ತದೆಯಾದರೂ ಇಸ್ರೇಲಿಗರ ಆವಿಷ್ಕಾರದ ಬಗ್ಗೆ ಮುಕ್ತವಾಗಿ ಹೇಳುವ ಕೆಲಸಕ್ಕೆ ಸಾಮಾನ್ಯವಾಗಿ ಮಾಧ್ಯಮಗಳು ಹೋಗುವುದಿಲ್ಲ.
ಇಂತಹ ಸಂದರ್ಭದಲ್ಲಿ ಅವಿ ಯೋರಿಶ್ ಅವರ ಮೂಲ ಪುಸ್ತಕ ಹಾಗೂ ಅದನ್ನು ಚಂದವಾಗಿ ಅನುವಾದಿಸಿರುವ ವಿಶ್ವೇಶ್ವರ ಭಟ್ಟರ ಕೆಲಸ ಶ್ಲಾಘನೀಯ. ವಿಶ್ವದ 40 ಕ್ಕೂ ಹೆಚ್ಚು ಭಾಷೆಗಳಿಗೆ Thou Shalt Innovate ಅನುವಾದಗೊಂಡಿದೆ. ಆವಿಷ್ಕಾರದ ಚಿಂತನೆಯನ್ನು ಮಕ್ಕಳಲ್ಲಿ ಬೆಳೆಸುವ ಉದ್ದೇಶದಿಂದ ಈ ಪುಸ್ತಕಗಳನ್ನು ರಾಜ್ಯದ ಮಕ್ಕಳಿಗೆ ನೀಡುವ, ತನ್ಮೂಲಕ ದೇಶಕ್ಕೆ ಹೊಸತನದ ಆವಿಷ್ಕಾರಗಳು ಬರುವಂತಾಗಲಿ ಎಂದು ಪುಸ್ತಕದ ಲೋಕಾರ್ಪಣೆಯ ವೇಳೆ ವಿಶ್ವವಾಣಿಯ ಪ್ರಧಾನ ಸಂಪಾದಕರು, ಪುಸ್ತಕದ ಅನುವಾದಕರಾದ ಶ್ರೀ ವಿಶ್ವೇಶ್ವರ ಭಟ್ ಕೇಳಿಕೊಂಡಿದ್ದಾರೆ. ಮಕ್ಕಳಿಗೆ ಆವಿಷ್ಕಾರದ ಮಜ ಹತ್ತಿತೆಂದರೆ ದೇಶಕ್ಕೆ ಆಗುವ ಲಾಭವನ್ನು ಊಹಿಸಲೂ ಸಾಧ್ಯವಿಲ್ಲ. ಈ ಕಾರಣದಿಂದಾಗಿಯೇ ಏನೋ ವಿಶ್ವದಲ್ಲಿರುವ ಸ್ಟಾರ್ಟ್ ಅಪ್ಗಳ ಸಂಖ್ಯೆಗೆ ಸಮನಾಗಿ ಇಸ್ರೇಲಿನ ಸ್ಟಾರ್ಟ್ ಅಪ್ಗಳು ನಿರ್ಮಾಣಗೊಂಡಿವೆ.
ಹದಿನೆಂಟು ಅಧ್ಯಾಯಗಳಲ್ಲಿ ವಿವಿಧ ಆವಿಷ್ಕಾರಗಳನ್ನು ನಡೆಸಿ ದೇಶವನ್ನು ಮುನ್ನಡೆಸುವುದರ ಜೊತೆಗೆ ಆವಿಷ್ಕಾರಾದ ಹಾದಿಯಲ್ಲಿ ವಿಶ್ವಕ್ಕೇ ಮಾದರಿಯಾಗಿ, ದಾರಿ ದೀಪವೂ ಆಗಿರುವ ನಾನಾ ಆವಿಷ್ಕಾರಗಳನ್ನು ಮಾಡಿರುವ 15 ಸಾಧಕರನ್ನು ಲೇಖಕರು ಪುಸ್ತಕದಲ್ಲಿ ಪರಿಚಯಿಸಿದ್ದಾರೆ. ಈ ಪುಸ್ತಕ ಕೇವಲ ಸಾಧಕರ ಪರಿಚಯದ ದಾಖಲೆಯಾಗದೆ, ಸಾಧನೆಯ ಹಾದಿ ಸುಗಮವಾಗಿರಲಿಲ್ಲವೆಂದೂ, ಅದೆಷ್ಟು ಕಷ್ಟಪಟ್ಟು ಗುರಿಯನ್ನು ಮುಟ್ಟಿದ್ದಾರೆ ಎಂಬುದನ್ನು ಲೇಖಕರು ಪುಸ್ತಕದಲ್ಲಿ ವಿವರಿಸಿದ್ದಾರೆ. 1948 ರಲ್ಲಿ ದೇಶವನ್ನು ಕಟ್ಟುವ ಕೆಲಸ ಆರಂಭವಾದಾಗ, ದೇಶದ ರಾಷ್ಟ್ರೀಯ ನಾಯಕರು ತಂತ್ರಜ್ಞಾನ ಹಾಗೂ ಆವಿಷ್ಕಾರಗಳಿಗೆ ನೀಡುತ್ತಿದ್ದ ಒತ್ತು, ಪ್ರೋತ್ಸಾಹ ನಂತರದ ದಿನಗಳಲ್ಲಿ ದೇಶಕ್ಕೆ ನೀಡಿದ ಲಾಭಾಂಶ ಸಹಜವಾಗಿಯೇ ಈ ಪುಸ್ತಕ ಓದುವುದರಿಂದ ತಿಳಿಯುತ್ತದೆ. ನೆನಪಿರಲಿ ನಾಜಿಗಳ ಕಾನ್ಸೆಂಟ್ರೇಶನ್ ಕ್ಯಾಂಪ್ಗಳಲ್ಲಿ ಅಸುನೀಗಿದ ಇಸ್ರೇಲಿಗರ ಸಂತಾನವೋ ಅಥವಾ, ಅಂತಹ ಕ್ಯಾಂಪ್ಗಳಿಂದ ಓಡಿಬಂದು ವಿಶ್ವದೆಲ್ಲೆಡೆ ಹರಡಿಕೊಂಡಿದ್ದವರು, ಅವರ ಮಕ್ಕಳು ೧೯೪೮ರಲ್ಲಿ ದೇಶ ರಚನೆಯಾದಾಗ ಇಸ್ರೇಲಿನ ಪ್ರಜೆಗಳಾದರು. ಇವರನ್ನು ಸೇರಿಸಿಕೊಂಡು, ರಾಷ್ಟ್ರ ಕಟ್ಟುವ ಜೊತೆಗೆ, ತಮ್ಮ ದೇಶದ ಅಕ್ಕಪಕ್ಕದಲ್ಲಿದ್ದ ಶತ್ರು ರಾಷ್ಟ್ರಗಳನ್ನು, ಭಯೋತ್ಪಾದನೆಯನ್ನು ಮಟ್ಟಹಾಕುವ ಕೆಲಸವೇ ಇಸ್ರೇಲ್ಗೆ ತನ್ನ ಮರುಸ್ಥಾಪನೆಯಾದ ದಿನದಿಂದ ಇದ್ದ ಸವಾಲುಗಳು.
ತಮ್ಮ ಸುತ್ತ ಇರುವ ಶತ್ರು ರಾಷ್ಟ್ರಗಳನ್ನು ಎದುರಿಸಲು, ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಲು, ತಮಗಿರುವ ಅತ್ಯಲ್ಪ ಶುದ್ಧ ನೀರಿನ ಮೂಲ, ಫಲವತ್ತಾಗಿರದ ಭೂಮಿಯಿಂದಾಗಿ ಇಸ್ರೇಲಿಗಳು ಆವಿಷ್ಕಾರದ ಮೊರೆ ಹೋದರು ಎಂದರೆ ಅವರ ಆವಿಷ್ಕಾರದ ಶ್ರಮಕ್ಕೆ ನಾವು ಮಾಡುವ ಅವಮಾನವಾಗುತ್ತದೆ. ವಿಶ್ವದ ಕೆಲ ರಾಷ್ಟ್ರಗಳಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯ. ಆದರೆ ಇಸ್ರೇಲ್ ಸಾಧಿಸಿದಷ್ಟು ಬೇರೆ ದೇಶಗಳು ಸಾಧಿಸಿಲ್ಲವೇಕೆ? ಆದ್ದರಿಂದಲೇ, ಆಧ್ಯಾತ್ಮಿಕ ಆತ್ಮವುಳ್ಳ ದೇಶ, ಸ್ಥಳೀಯ ಸವಾಲುಗಳಲ್ಲೇ ಇದೆ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ, ಒಳಿತಿಗಾಗಿ ತಂತ್ರಜ್ಞಾನ, ಸಣ್ಣ ದೇಶ ದೊಡ್ಡ ಗುರಿ ಎಂಬ ನಾಲ್ಕು ಭಾಗಗಳಲ್ಲಿ ಪುಸ್ತಕದ 18 ಅಧ್ಯಾಯಗಳನ್ನು ಬರೆಯಲಾಗಿದೆ.
ಇಸ್ರೇಲ್ ಆಧ್ಯಾತ್ಮಿಕ ಆತ್ಮವನ್ನು ಹೊಂದಿರುವ ದೇಶ ಎಂದು ಬರೆಯುವ ಲೇಖಕರು, ಅಲೀನು ಎಂಬ ಪ್ರಾರ್ಥನೆಯ ಮೂಲಕ “ನೀವು ಜಗತ್ತನ್ನು ದುರಸ್ತಿ ಮಾಡಬೇಕು” ಎಂಬ ಟಿಕ್ಕುನ್ ಓಲಂ ಸಂದೇಶ, ಯಹೂದಿಗಳಿಗೆ “ನೀವು ಈ ಜಗತ್ತಿಗೆ ಬೆಳಕಾಗಬೇಕು ಎಂಬ ಸಂದೇಶ”, “ನಮ್ಮ ಅನುಕೂಲಕ್ಕೆ ಯಾವುದನ್ನು ಪ್ರಯತ್ನಿಸಿದರೂ ಅಂತ್ಯದಲ್ಲಿ ಮಾನವಕುಲಕ್ಕೆ ಒಳ್ಳೆಯದಾಗಬೇಕು” ಎಂಬ ಉದಾರ ಚಿಂತನೆ, ಯಹೂದಿ ಸಂಸ್ಕೃತಿಯಲ್ಲಿ ಪ್ರಶ್ನಿಸದೇ ಯಾವುದನ್ನೂ ಒಪ್ಪುವಂತಿಲ್ಲ, ಯಾರಿಗೂ ಸವಾಲು ಎಸೆಯುವುದು ಉದ್ಧಟತನವಲ್ಲ, ಎಂಬ ಚಿಂತನೆಗಳೇ ಈ ಸಾಧನೆಗೆ ಕಾರಣವಿರಬಹುದು ಎಂದು ಲೇಖಕರು ವರ್ಣಿಸುತ್ತಾರೆ. ಪ್ರತಿ ಅಧ್ಯಾಯದಲ್ಲಿಯೂ ಅವರ ಧರ್ಮ ಗ್ರಂಥದ, ಬೈಬಲ್ನ ಉಕ್ತಿಗಳನ್ನು ಹೇರಳವಾಗಿ ಬಳಸಿದ್ದಾರೆ.
ಅರಬ್ಬರನ್ನು, ಪ್ಯಾಲೇಸ್ಟಿನ್ ಅನ್ನು ಸಮರ್ಥಿಸುವ ವಿಶ್ವದ ಅನೇಕ ರಾಷ್ಟ್ರಗಳಿಂದ ರಾಜತಾಂತ್ರಿಕವಾಗಿ ಇಸ್ರೇಲ್ ಅನ್ನು ದೂರ ಉಳಿಸಲಾಗಿತ್ತು. ತಮ್ಮ ಅಭಿಮತವನ್ನು ಲೆಕ್ಕೆಸದೇ ಇದ್ದರೂ, ಇಸ್ರೇಲ್ ಎದೆಗುಂದದೆ, ಆಫ್ರಿಕಾದ ದೇಶಗಳಿಗೆ ಸಹಾಯಹಸ್ತ ನೀಡಲು ಮುಂದಾಯಿತು. ಯಾವುದೇ ಬಡ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ವಿಪತ್ತಿನ ಸಮಯ ಎದುರಾದಾಗ ಇಸ್ರೇಲ್ ಸಹಾಯಮಾಡಲು ಧಾವಿಸಿತು. ಅಂತಹ ದೇಶಗಳಿಗೆ ತಮ್ಮ ದೇಶಕ್ಕೆ ಬಂದು ವ್ಯಾಸಂಗ ಮಾಡಲು, ತರಬೇತಿ ಪಡೆಯಲು ಮಾಶಾವ್ ವ್ಯವಸ್ಥೆಯನ್ನು ಇಸ್ರೇಲ್ ಮಾಡಿದ್ದರ ಬಗ್ಗೆ, ಲೇಖಕರು ಬರೆಯುತ್ತಾರೆ.
ಹತ್ಜಲಾ ಅಂಬುಸೈಕಲ್ ವ್ಯವಸ್ಥೆ, ಡಾ. ಗೋಫರ್ ಅಪಘಾತಕ್ಕೀಡಾದಮೇಲೆ, ತನ್ನಂಥ ಪ್ಯಾರಾಪ್ಲೇಜಿಕ್ ಗಳಿಗೆ ಎಕ್ಸೋಸ್ಕೆಲಿಟನ್ ತಯಾರಿಸಿದ ಬಗೆ, ಬೆನ್ನುಹುರಿಯ ಚಿಕಿತ್ಸೆಗಾಗಿ ರೋಬೋಟಿಕ್ಸ್ ಬಳಸಿ ಶಸ್ತ್ರಚಿಕಿತ್ಸೆ ನಡೆಸುವ ಆವಿಷ್ಕಾರದ ಬಗ್ಗೆ, ಯುದ್ಧದ ಸಮಯದಲ್ಲಾಗಲಿ, ಅಪಘಾತದ ಸಮಯದಲ್ಲಿ ರಕ್ತಸ್ರಾವವನ್ನು ನಿಲ್ಲಿಸಲು ಎಮರ್ಜೆನ್ಸಿ ಬ್ಯಾಂಡೇಜ್ ತಯಾರಿಸುವಿಕೆ ಸೇರಿದಂತೆ ವೈದ್ಯಕೀಯ ಆವಿಷ್ಕಾರಗಳ ಬಗ್ಗೆ ವಿವಿಧ ಅಧ್ಯಾಯಗಳಲ್ಲಿ ಬರೆಯಲಾಗಿದೆ.
ಹನಿ ನೀರಾವರಿ
ಮುಂದಿನ ದಿನಗಳಲ್ಲಿ ವಿಶ್ವದ ಬಹುದೊಡ್ಡ ಸಮಸ್ಯೆಯಾದ ನೀರಿನ ಬಳಕೆಯನ್ನು ತಡೆಯಲು ಹನಿ ನೀರಾವರಿ ಎಂಬ ಅದ್ಭುತ ಕಲ್ಪನೆಯನ್ನು ನೀಡಿದ್ದು ಇಸ್ರೇಲಿನವರೇ. ಅತಿ ಕಡಿಮೆ ನೀರಿನಿಂದ ಬಂಗಾರದ ಬೆಳೆ ಬೆಳೆಯುವ, ಪ್ರಕೃತಿಯಲ್ಲಿನ ಮಂಜಿನಿಂದ ನೀರನ್ನು ಶೇಖರಿಸಿ ಇಟ್ಟುಕೊಳ್ಳುವ ವ್ಯವಸ್ಥೆ, ದವಸ ಧಾನ್ಯಗಳು ಕೆಡದಂತೆ, ಕೀಟಗಳು ತಿಂದು ರೈತರಿಗೆ ನಷ್ಟವಾಗದಂತೆ ತಡೆಯಲು ಗ್ರೇನ್ ಕಕೂನ್ ತಯಾರಿಸಿದ್ದರ ಬಗ್ಗೆ, ಸೌರ ಶಕ್ತಿಯಿಂದ ನೀರನ್ನು ಕಾಯಿಸುವ ಯಂತ್ರದ ತಯಾರಿ ಹೀಗೆ ಮಾನವನಿಗೆ ಸರ್ವಕಾಲಕ್ಕೂ ಉಪಯುಕ್ತವಾಗುವ ಆವಿಷ್ಕಾರಗಳು ಅವನ ಶ್ರಮವನ್ನು ಕಡಿಮೆಮಾಡುತ್ತದೆ, ಜೊತೆಗೆ ಈ ಆವಿಷ್ಕಾರಗಳಿಂದ ವಿಶ್ವಕ್ಕೆ ಹಾನಿಯುಂಟಾಗಿರುವ ಉದಾಹರಣೆಗಳಿಲ್ಲ ಎಂಬುದನ್ನು ಅರಿಯಬಹುದು.
ವಿಶ್ವದ ಕೆಲವೇ ದೇಶಗಳಲ್ಲಿ ಗಾಂಜಾ ಎಲೆಗಳಿಂದ ಔಷಧವನ್ನು ತೆಗೆದು ಮೆದುಳು ಸಂಬಂಧಿತ ಖಾಯಿಲೆಗಳನ್ನು ಗುಣಪಡಿಸುವ ಮಾರ್ಗಗಳು ಲಭ್ಯವಾಗಿರುವುದು ಇಸ್ರೇಲಿಗರ ಬಳುವಳಿ. ಜೆಗೋಮೊ ಎಂಬ 2000 ವರ್ಷಕ್ಕೂ ಹಳೆಯದಾದ ಪವಿತ್ರ ಖರ್ಜೂರ ತಳಿ ನಷಿಸಿ ಹೋಗಿತ್ತು. ರೊಮ್ ಉತ್ಖನನದಿಂದ ಆ ಬೀಜಗಳನ್ನು ತಂದಿರಿಸಿ ಅವು ಮೊಳಕೆ ಒಡೆಯುವಂತೆ ಮಾಡಿದ ಸಾಧನೆ ಕಡಿಮೆ ಮಟ್ಟದೇ? ಈಗ ಮೊಳಕೆಯೊಡೆದು ಮರವಾಗಿರುವ ಈ ಖರ್ಜೂರ ಗಂಡು ಹೂಗಳನ್ನು ಬಿಡುವಂಥದ್ದು. ಮುಂದೊಂದು ದಿನ ಹೆಣ್ಣು ಹೂವು ಬಿಡುವ ಗಿಡಗಳು ಬೆಳೆದರೆ, ಅಲ್ಲಿಗೆ ಏಸು ಸೇವಿಸುತ್ತಿದ್ದ ಖರ್ಜೂರ ಮಾರುಕಟ್ಟೆಗೆ ಬರುತ್ತದೆ.
ಐರನ್ ಡೋಮ್
ಶತ್ರು ರಾಷ್ಟ್ರಗಳು ಇಸ್ರೇಲ್ ಮೇಲೆ ದಾಳಿ ನಡೆಸಿ ರಾಕೆಟ್, ಮಿಸೈಲ್ ಉಡಾಯಿಸಿ ಅಮಾಯಕ ಇಸ್ರೇಲರಿಗರನ್ನು ಭಯದ ವಾತಾವರಣದಲ್ಲಿರಿಸಿದ್ದ ದಿನಗಳು ಈಗ ಇಸ್ರೇಲ್ ನಲ್ಲಿಲ್ಲ. ಹಾಗೆಂದು ರಾಕೆಟ್, ಮಿಸೈಲ್ ದಾಳಿ ನಿಂತಿಲ್ಲ. ಸಮಸ್ಯೆಯ ಪರಿಹಾರಕ್ಕಾಗಿ ಇಸ್ರೇಲಿಗರು ತಯಾರಿಸಿದ್ದು ಐರನ್ ಡೋಮ್. ದೇಶದ ವಿವಿಧ ಭಾಗಗಳಲ್ಲಿ ಮಿಸೈಲ್ ಹಾರಿಸಿರುವುದನ್ನು ಕಂಡುಹಿಡಿದು ಅದನ್ನು ಸುಟ್ಟು ಹಾಕುವ ಪ್ರತಿ ಮಿಸೈಲ್ ದಾಳಿಯನ್ನು ಐರನ್ ಡೋಮ್ ಮಾಡುತ್ತದೆ. ಸಾವಿರಾರು ವೈರಿ ರಾಕೆಟ್ಟುಗಳನ್ನು ಹೊಡೆದುರುಳಿಸಿರುವ ಖ್ಯಾತಿ ಐರನ್ ಡೋಮ್ ಗೆ ಇದೆ. ಇಂತಹ ಆವಿಷ್ಕಾರ ಕಂಡರೆ ಯಾರಿಗೆ ತಾನೆ ಇಸ್ರೇಲ್ ಬಗ್ಗೆ ಪ್ರೀತಿ, ಆದರಗಳು ಮೂಡುವುದಿಲ್ಲ.
ಲೇಖಕರು ಪುಸ್ತಕದ ಅನುಬಂಧದಲ್ಲಿ ಜಗತ್ತಿಗೆ ಇಸ್ರೇಲ್ ನೀಡಿರುವ 50 ಕ್ಕೂ ಹೆಚ್ಚು ಅದ್ಭುತ ಕೊಡುಗೆಗಳನ್ನು ಒದಗಿಸಿದ್ದಾರೆ. ಇವು ಲೇಖಕರು ಪಟ್ಟಿಮಾಡಿರುವ ಕೊಡುಗೆಗಳು. ಅವನ್ನು ಮೀರಿದ ಅವೆಷ್ಟೋ ಕೊಡುಗೆಗಳನ್ನು ಜನರು ನಿತ್ಯ ಜೀವನದಲ್ಲಿ ಬಳಸುತ್ತಾರೆ. ಇನ್ನಾದರೂ ಇಸ್ರೇಲ್ ಎಂದರೆ ಮುಸಲ್ಮಾನ ವಿರೋಧಿ, ಮಾನವತಾ ವಿರೋಧಿ ಎಂಬ ಮಾತುಗಳಿಗೆ ತಿಲಾಂಜಲಿ ಇಡಬೇಕಾದ, ಜನರ ಜೀವನವನ್ನು ಸುಗಮಗೊಳಿಸುವ ‘ಆವಿಷ್ಕಾರದ ಹರಿಕಾರ’ ಎಂದು ಗುರುತಿಸುವ ಸಮಯ ಬಂದೀತೇ, ಕಾದು ನೋಡಬೇಕಷ್ಟೇ.
✍️ ಪ್ರವೀಣ್ ಪಟವರ್ಧನ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.