ಶಿವಮೊಗ್ಗ: ಇಲ್ಲಿನ ಸೋದರಿ ನಿವೇದಿತಾ ಪ್ರತಿಷ್ಠಾನದ ಹೆಣ್ಣುಮಕ್ಕಳು ಮನಮುಟ್ಟುವಂತಹ ಮಾದರಿ ಕಾರ್ಯವೊಂದನ್ನು ಮಾಡುವ ಮುಖೇನ ಸದ್ದು ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಅಲೆಮಾರಿ ಜನಾಂಗದವರೇ ಇರುವ ತಾಂಡಾವೊಂದಕ್ಕೆ ಪ್ರತಿ ವಾರಾಂತ್ಯ ಭೇಟಿಕೊಟ್ಟು ಸ್ವಚ್ಛಮನಸ್ಸು ಕಾರ್ಯಕ್ರಮದ ಮೂಲಕ ಅವರಲ್ಲಿ ಸ್ವಚ್ಛತೆಯ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತ ಕಥೆಯೊಂದನ್ನು ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ತಾಂಡಾದ ಮಕ್ಕಳನ್ನು ಕೂರಿಸಿಕೊಂಡು ಅವರಿಗೆ ಶ್ಲೋಕ, ಹಾಡುಗಳನ್ನು ಹೇಳಿಕೊಟ್ಟು, ಕಥೆಗಳನ್ನು ಹೇಳುತ್ತಾ ಅವರೊಳಗೆ ಸಂಸ್ಕಾರದ ಭಾವನೆಯನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ಆರಂಭದಲ್ಲಿ ತರಲೆ ಮಾಡಿಕೊಂಡು ಅತ್ತಿತ್ತ ಅಡ್ಡಾಡುತ್ತಿದ್ದ ಮಕ್ಕಳು ಬರಬರುತ್ತಾ ಇವರ ಮಾತುಗಳನ್ನು ಕೇಳಲು ತಾವೇ ಅಂಗಳವನ್ನು ಸ್ವಚ್ಛಗೊಳಿಸಿ, ಚಾಪೆ ಹಾಸಿ ಕುಳಿತುಕೊಳ್ಳಲಾರಂಭಿಸಿದರು. ಕ್ರಮೇಣ ಈ ಕಾರ್ಯಕರ್ತೆಯರು ಅಲ್ಲಿನ ಹೆಣ್ಣುಮಕ್ಕಳನ್ನು ಗಮನದಲ್ಲಿರಿಸಿಕೊಂಡು ಭಿನ್ನ ಭಿನ್ನ ಚಟುವಟಿಕೆಗಳನ್ನು ಆಯೋಜಿಸುವ ಪ್ರಯತ್ನವನ್ನು ಮಾಡಿದರು. ಆದರೂ ಏಕೋ ಸಮಾಧಾನವಿರಲಿಲ್ಲ. ಅವರುಗಳಿಗೆ ಆಸಕ್ತಿಯೇ ಇಲ್ಲವೆನಿಸುವ ಭಾವನೆ ಕಾಡುತ್ತಿತ್ತು. ಮುಂದೆ ಅಲ್ಲಿನ ಕೆಲವು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿ ವಿದ್ಯಾರ್ಥಿ ನಿಲಯಗಳಿಗೆ ಸೇರಿಸಿ ಅಧ್ಯಯನಕ್ಕೆ ಪೂರಕವಾಗಿ ಕೆಲಸಗಳನ್ನು ಮಾಡಿದಂತೆಲ್ಲ ಜನರಿಗೆ ಈ ತಂಡದ ಮೇಲೆ ವಿಶ್ವಾಸ ಹುಟ್ಟಿತು.
ಮೊನ್ನೆ ಅಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದ್ದಾಗ 60ಕ್ಕೂ ಹೆಚ್ಚು ಮಕ್ಕಳು, 50ಕ್ಕೂ ಹೆಚ್ಚು ತಾಯಂದಿರು ಭಾಗವಹಿಸಿ ಅಚ್ಚರಿ ಮೂಡಿಸಿದರು. ಆ ಪ್ರದೇಶದಲ್ಲಿರುವ ಜನರಿಗೆ ಈ ಹೆಣ್ಣುಮಕ್ಕಳ ಮೇಲೆ ಅಪಾರವಾದ ವಿಶ್ವಾಸ. ಬರಲಿರುವ ದಿನಗಳಲ್ಲಿ ಸಂಪೂರ್ಣ ತಾಂಡ ಸ್ವಚ್ಛಗೊಳಿಸಲು ಅವರು ಕೈಜೋಡಿಸುವ ಭರವಸೆ ಕೊಟ್ಟಿದ್ದಾರೆ. ಆ ಹೊತ್ತಿಗೆ ಜನರಿಂದ ಹಳೆಯ ಸೀರೆಗಳನ್ನು ಸಂಗ್ರಹಿಸಿ ಅವರ ಟೆಂಟುಗಳಿಗೆ ಕಾಯಕಲ್ಪ ಮಾಡಬೇಕೆಂಬ ಆಲೋಚನೆಯನ್ನೂ ಸೋದರಿ ನಿವೇದಿತಾ ಪ್ರತಿಷ್ಠಾನದ ಹೆಣ್ಣುಮಕ್ಕಳು ಇರಿಸಿಕೊಂಡಿದ್ಧಾರೆ. ಅಕ್ಕ ನಿವೇದಿತಾರ ಕನಸುಗಳು ಈ ಹೆಣ್ಣುಮಕ್ಕಳ ಮೂಲಕ ಸಾಕಾರಗೊಳ್ಳುತ್ತಿರುವುದನ್ನು ನೋಡುವಾಗಲೆಲ್ಲ ಹೆಮ್ಮೆ ಎನಿಸುತ್ತದೆ. ಅವರಿಗೆ ಶುಭ ಹಾರೈಸುವುದಷ್ಟೇ ನಮ್ಮ ಕೆಲಸ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಈ ನಾರೀಶಕ್ತಿಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.