ಸಂಭ್ರಮಿಸುವುದು ಮನುಷ್ಯನ ಸಹಜ ಗುಣ. ದೈನಂದಿನ ಜೀವನದ ಏಕತಾನತೆಯಿಂದ ಬಿಡುಗಡೆ ಪಡೆಯಲು ಹಬ್ಬಗಳನ್ನು, ವಿಶೇಷ ದಿನಗಳನ್ನು ಆಚರಿಸುವುದು ಆಚರಣೆಯ ಒಂದು ಭಾಗವಾದರೆ, ವಿಶಿಷ್ಟ ವ್ಯಕ್ತಿಯ ಜನ್ಮ ದಿನವನ್ನು ಸಂಭ್ರಮಿಸಲು ಆಚರಣೆ ನಡೆಸುವುದು ಆಚರಣೆಯ ಇನ್ನೊಂದು ಭಾಗ. ನಮ್ಮ ಸಂಸ್ಕೃತಿಯಲ್ಲಿ ಬಹುತೇಕ ಎಲ್ಲ ಆಚರಣೆಗಳಿಗೂ ಇತಿಹಾಸ ಮತ್ತು ವೈಜ್ಞಾನಿಕ ಕಾರಣಗಳು ಕೂಡಾ ಲಭಿಸುತ್ತವೆ, ಮಾತ್ರವಲ್ಲದೆ ಪ್ರತಿಯೊಂದು ಆಚರಣೆಗಳು ಕೂಡಾ ತನ್ನದೇ ಆದ ಉತ್ತಮ ಉದ್ದೇಶವನ್ನು ಹೊಂದಿದೆ. ಆದರೆ ನಾವು ಆಧುನಿಕತೆಯ ಕಡೆಗಿನ ಓಟದಲ್ಲಿ ಅನೇಕ ಆಚರಣೆಗಳನ್ನು ಹಿಂದೆ ಬಿಟ್ಟು ಮುಂದಕ್ಕೆ ಸಾಗಿದ್ದೇವೆ, ಮಾತ್ರವಲ್ಲದೆ ಆಚರಣೆಗಳ ಉದ್ದೇಶವನ್ನು ವಿಮರ್ಶಿಸುವ ವಿವೇಚನೆಯನ್ನೂ ಕಳೆದುಕೊಂಡಿದ್ದೇವೆ. ಇದಕ್ಕೆ ನಮ್ಮ ಎದುರು ಅನೇಕ ಉದಾಹರಣೆಗಳು ಕೂಡಾ ಸಿಗುತ್ತವೆ.
ನಾವು ಪ್ರೇಮಿಗಳ ದಿನಾಚರಣೆಯನ್ನು ಆಚರಿಸುತ್ತೇವೆ. ಪ್ರೇಮಿಗಳ ದಿನಾಚರಣೆಯನ್ನು ಆಚರಿಸುವ ಬಹಳಷ್ಟು ಮಂದಿಗೆ, ಅದರ ಹಿಂದಿನ ಇತಿಹಾಸ ತಿಳಿದಿರುವುದಿಲ್ಲ. ಯಾಕಾಗಿ ಯಾರ ನೆನಪಿನಲ್ಲಿ ಆಚರಿಸುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರವೇ ತಿಳಿದಿರುವುದಿಲ್ಲ. ಪ್ರೇಮಿಗಳ ದಿನದ ಆಚರಣೆ ತಪ್ಪೋ ಸರಿಯೋ ಎಂಬುದರ ಬಗ್ಗೆ ನಾನಿಲ್ಲಿ ಮಾತನಾಡುತ್ತಿಲ್ಲ. ರಾಧೆ ಮತ್ತು ಕೃಷ್ಣರ ಅಪರೂಪದ ಪ್ರೀತಿಯ ಇತಿಹಾಸ ಇರುವ ನಾಡು ನಮ್ಮದು. ಪ್ರಭು ಶ್ರೀ ರಾಮ ಮತ್ತು ಸೀತೆಯರ ಅನುರೂಪದ ದಾಂಪತ್ಯ ಕಂಡ ದೇಶ ನಮ್ಮದು. ಪೃಥ್ವಿರಾಜ ಚೌಹಾಣ್ ಮತ್ತು ಸಂಯೋಗಿತಾ, ಕಚ ಮತ್ತು ದೇವಯಾನಿ ಹೀಗೆ ಅಪೂರ್ವ ಪ್ರೀತಿಗೆ ಅನೇಕ ಉದಾಹರಣೆಗಳಿರುವ ದೇಶದಲ್ಲಿ ವ್ಯಾಲಂಟೈನ್ ಡೇ ಎಷ್ಟು ಪ್ರಸ್ತುತ ಎಂದು ನಾವೇ ಆಲೋಚಿಸಬೇಕಲ್ಲವೇ? ಹಾಗೆಂದು ಎಲ್ಲಾ ದಿನಗಳೂ, ಎಲ್ಲ ಆಚರಣೆಗಳೂ ಅಪ್ರಸ್ತುತವಲ್ಲ. ಹಲವು ಮಹನೀಯರ ದಿನಗಳನ್ನು ನಾವು ವಿಶೇಷ ದಿನವಾಗಿ ಆಚರಿಸುತ್ತೇವೆ. ಉದಾಹರಣೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಜನ್ಮದಿನವಾದ ಅಕ್ಟೋಬರ್ 15 ನ್ನು ನಾವು “ವಿದ್ಯಾರ್ಥಿ ದಿನ”ವಾಗಿ ಆಚರಿಸುತ್ತೇವೆ, ಖಂಡಿತವಾಗಿಯೂ ವಿದ್ಯಾರ್ಥಿ ದಿನವಾಗಿ ಆಚರಿಸಲು ಅಬ್ದುಲ್ ಕಲಾಂರ ಜನ್ಮದಿನಕ್ಕೂ ಉತ್ತಮ ದಿನ ಬೇರಾವುದೂ ಇಲ್ಲ. ತನ್ನ ಬಡತನವನ್ನು ಚಿಂತಿಸುತ್ತಾ ಕೈ ಕಟ್ಟಿ ಕೂರದೆ ಸತತ ಕಠಿಣ ಪರಿಶ್ರಮದಿಂದ ಕ್ಷಿಪಣಿ ವಿಜ್ಞಾನಿಯಾಗುವವರೆಗಿನ ಅವರ ಹಾದಿ ಖಂಡಿತವಾಗಿಯೂ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ. ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರಪತಿಯಾದ ಬಳಿಕವೂ ಅವರ ಅಧ್ಯಯನ ಶೀಲತೆ ಕಿಂಚಿತ್ತೂ ಕಡಿಮೆಯಾಗಲಿಲ್ಲ. ಒಬ್ಬ ವಿದ್ಯಾರ್ಥಿಗೆ ಅವರ ಜೀವನಕ್ಕಿಂತ ಪ್ರೇರಣೆ ಮತ್ತೆಲ್ಲಿ ದೊರಕಲು ಸಾಧ್ಯ?
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು “ಸುಶಾಸನ” ದಿನವನ್ನಾಗಿ ಆಚರಿಸಲಾಗುತ್ತದೆ. ಏಕೆಂದರೆ ಅವರ ಆಡಳಿತ ಮತ್ತು ಅವರ ಸಂಪೂರ್ಣ ವ್ಯಕ್ತಿತ್ವವು ಕಳಂಕ ರಹಿತವಾಗಿತ್ತು. ಅವರ ರಾಜಕೀಯ ವಿರೋಧಿಗಳೂ ಅವರ ವ್ಯಕ್ತಿತ್ವದಲ್ಲಿ ತಪ್ಪು ಹುಡುಕುವುದು ಸಾಧ್ಯವಾಗಿರಲಿಲ್ಲ. ಅದಕ್ಕೆಂದೇ ಅವರನ್ನು “ಅಜಾತ ಶತ್ರು” ಎಂದು ಕರೆಯಲಾಗುತ್ತದೆ. ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಯಾಕೆಂದರೆ ಅವರು ಒಬ್ಬ ಅಪೂರ್ವ ತೇಜಸ್ಸಿನ ಯುವ ಸನ್ಯಾಸಿಯಾಗಿದ್ದರು ಮಾತ್ರವಲ್ಲದೆ ಅವರು ತಮ್ಮ ಜೀವನದುದ್ದಕ್ಕೂ ಯುವಕ ಯುವತಿಯರನ್ನು ಬಡಿದೆಬ್ಬಿಸುವ ಕಾರ್ಯವನ್ನು ಮಾಡಿದ್ದರು. “ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ” ಎನ್ನುವ ಅವರ ಮಾತು ಇಂದಿಗೂ ಅನೇಕ ಯುವಕರನ್ನು ಬಡಿದೆಬ್ಬಿಸುತ್ತಿದೆ. ಆದರೆ ಪ್ರತಿಯೊಂದು ಆಚರಣೆಯನ್ನು ನಾವು ಸರಿಯಾದ ದಿನವೇ ಆಚರಿಸುತ್ತಿದ್ದೇವೆಯೇ??
ಇಂದು ಡಿಸೆಂಬರ್ 26 ಸಿಖ್ ಬಂಧುಗಳಿಗೆ ಮಾತ್ರವಲ್ಲ ಸಮಸ್ತ ಭಾರತೀಯರಿಗೆ ನೆನಪಿನಲ್ಲಿ ಇರಬೇಕಾದ ದಿನ. ಸಿಖ್ ಪಂಥದ ಕೊನೆಯ ಮತ್ತು ಹತ್ತನೇ ಧರ್ಮಗುರುವಾದ ಗುರು ಗೋಬಿಂದ್ ಸಿಂಗ್ರ ನಾಲ್ವರು ಮಕ್ಕಳಲ್ಲಿ ಕೊನೆಯ ಇಬ್ಬರು ಮಕ್ಕಳು ಧರ್ಮ ಸಂರಕ್ಷಣೆಗಾಗಿ ಹೆಮ್ಮೆಯಿಂದ ಹುತಾತ್ಮರಾದ ದಿನವಿದು. ಗುರು ಗೋಬಿಂದ್ ಸಿಂಗ್ ಮತಾಂಧ ಮೊಘಲರ ವಿರುದ್ಧ 13 ಯುದ್ದಗಳನ್ನು ನಡೆಸಿದರು. ಅವರ 13 ಮತ್ತು 17 ವರ್ಷ ವಯಸ್ಸಿನ ಹಿರಿಯ ಮಕ್ಕಳಿಬ್ಬರು ಮೊಘಲರ ವಿರುದ್ದದ 1704 ರ ಡಿಸೆಂಬರ್ನಲ್ಲಿ ನಡೆದ ಚಾಮ್ಕೌರ್ ಕದನದಲ್ಲಿ ಹುತಾತ್ಮರಾದರು ಮತ್ತು ಅವರ ಕಿರಿಯ ಪುತ್ರರಾದ 9 ವರ್ಷ ವಯಸ್ಸಿನ ಬಾಬಾ ಜೋರಾವರ್ ಸಿಂಹ ಮತ್ತು 6 ವರ್ಷ ವಯಸ್ಸಿನ ಬಾಬಾ ಫತೇ ಸಿಂಹ ಅವರನ್ನು ಸಿರ್ಹಿಂದ್ ಪ್ರಾಂತದ ಮುಸಲ್ಮಾನ ನವಾಬ ವಜೀರ್ ಖಾನ್ ವಶಪಡಿಸಿಕೊಂಡನು. ಮೊಘಲ ಸೈನಿಕರಿಂದ ಬಂಧಿಸಲ್ಪಟ್ಟು ವಜೀರ್ ಖಾನ್ನ ಆಸ್ಥಾನಕ್ಕ್ಕೆ ಕರೆದೊಯ್ದ ಸಂದರ್ಭದಲ್ಲಿ ಈ ಮಕ್ಕಳು ಮೊಘಲರ ಮಧ್ಯದಲ್ಲಿ ನಿಂತು ಧೈರ್ಯದಿಂದ “ವಾಹೀ ಗುರು ದೇ ಖಾಲ್ಸಾ, ವಾಹೀ ಗುರು ದೇ ಫತೇ” ಎಂದು ಜೋರಾಗಿ ಕೂಗುತ್ತಾರೆ. ಪುಟ್ಟ ಮಕ್ಕಳ ಮೇಲೆ ಸಣ್ಣದಾಗಿ ಕರುಣೆ ತೋರಿ ಇಸ್ಲಾಮ್ಗೆ ಮತಾಂತರವಾಗಿ ಪ್ರಾಣವನ್ನು ರಕ್ಷಿಸಿಕೊಂಡು, ನಿಮ್ಮ ಕುಟುಂಬವನ್ನು ಸೇರಿಕೊಳ್ಳಿ ಎಂದು ಹೇಳಿದ ನವಾಬನ ಮಾತನ್ನು ಖಡಾ ಖಂಡಿತವಾಗಿ ಮಕ್ಕಳು ನಿರಾಕರಿಸುತ್ತಾರೆ. ಅದರ ಬಳಿಕವೂ ನಾನು ನಿಮಗೆ ಜೀವದಾನ ನೀಡಿದರೆ ಏನು ಮಾಡುತ್ತೀರಿ ಎಂಬ ಪ್ರಶೆಗೆ ಅಷ್ಟೇ ಧೈರ್ಯವಾಗಿ “ನಾವು ಸೈನ್ಯವನ್ನು ಬಲಿಷ್ಠಗೊಳಿಸಿ ನಿಮ್ಮ ಮೇಲೆ ಆಕ್ರಮಣ ನಡೆಸುತ್ತೇವೆ, ಸೋತರೆ ಮತ್ತೊಮ್ಮೆ ಮಗದೊಮ್ಮೆ ಯುದ್ಧ ಹೂಡುತ್ತೇವೆ” ಎಂದು ಉತ್ತರಿಸುತ್ತಾರೆ. ಈ ಬಾರಿ ತನ್ನ ತಾಳ್ಮೆಯನ್ನು ಕಳೆದುಕೊಂಡ ನವಾಬ ಮಕ್ಕಳನ್ನು ಜೀವಂತವಾಗಿ ಗೋಡೆಯೊಳಗೆ ಸಮಾಧಿ ಮಾಡುವಂತೆ ಆಜ್ಞಾಪಿಸುತ್ತಾನೆ. ಮಕ್ಕಳು ನಿರ್ಭೀತರಾಗಿ ಸಾವನ್ನು ಎದುರುಗೊಳ್ಳಲು ಸಜ್ಜಾಗುತ್ತಾರೆ. ಮಕ್ಕಳ ಭುಜದ ಎತ್ತರಕ್ಕೆ ಗೋಡೆಯನ್ನು ನಿರ್ಮಿಸಿದ ಬಳಿಕ ಮತ್ತೊಂದು ಬಾರಿ ಅವರಿಗೆ ಮತಾಂತರಗೊಂಡು ಜೀವ ರಕ್ಷಿಸಿಕೊಳ್ಳುವ ಅವಕಾಶವನ್ನೂ ಮುಸಲ್ಮಾನ ಧರ್ಮಗುರು ನೀಡಿದಾಗ ಮಕ್ಕಳು ಅದನ್ನೂ ನಿರಾಕರಿಸಿ ತಮ್ಮ ಧರ್ಮದ ಶ್ಲೋಕಗಳನ್ನು ಪಠಿಸುತ್ತಾ ಗುರುವನ್ನು ಸ್ಮರಿಸುತ್ತಾ ನಿರ್ಭೀತಿಯಿಂದ ಪ್ರಾಣತ್ಯಾಗ ಮಾಡುತ್ತಾರೆ.
ಶೌರ್ಯ, ಸಾಹಸ, ಬದ್ಧತೆ, ಆತ್ಮಸ್ಥೈರ್ಯಗಳಿಗೆ ಈ ಮಕ್ಕಳಿಗಿಂತ ಉತ್ತಮ ಉದಾಹರಣೆಗಳು ದೊರಕಬಹುದೇ? ಬಿದ್ದು ಗಾಯವಾದರೆ ಭಯಪಡುವ, ಅಳುವ ವಯಸ್ಸಿನಲ್ಲಿ ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಧೈರ್ಯದಿಂದ ಮರಣವನ್ನು ಆಹ್ವಾನಿಸುತ್ತಾರೆ. ತಮ್ಮ ಧರ್ಮದ ಮೇಲಿನ ಶ್ರದ್ಧೆ, ಅಚಲವಾದ ನಂಬಿಕೆ ಮತ್ತು ನಿಷ್ಠೆಗಳು ಅತ್ಯಂತ ಸ್ಫೂರ್ತಿದಾಯಕ ಮಾತ್ರವಲ್ಲ ಮುಂದಿನ ಸಾವಿರ ವರ್ಷಗಳಿಗೂ ಅನುಕರಣೀಯ.
ಹೀಗಿದ್ದಾಗ ನಾವೇಕೆ ಅವರ ಬಲಿದಾನ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಬಾರದು? ಮಕ್ಕಳ ದಿನಾಚರಣೆಯನ್ನು ಆಚರಿಸುವಾಗ ಸರ್ವ ರೀತಿಯಲ್ಲೂ ಮಕ್ಕಳಿಗೆ ಪ್ರೇರಣೆಯಾಗುವ ಜೀವನವನ್ನು ನಡೆಸಿ ಹುತಾತ್ಮರಾದ ಮಕ್ಕಳ ಬಲಿದಾನ ದಿನದಂದೇ ನಾವು ಮಕ್ಕಳ ದಿನಾಚರಣೆಯನ್ನು ಆಚರಿಸುವ ಮೂಲಕ ಪ್ರೇರಣಾದಾಯಕ ಇತಿಹಾಸವನ್ನು ಜೀವಂತವಾಗಿ ಇರಿಸಬಹುದಲ್ಲವೇ? ಪರಕೀಯರ ಆಡಳಿತದ ವಿರುದ್ಧ ಹೋರಾಟ ನಡೆಸಿದ ಇತಿಹಾಸವನ್ನು ಹೆಮ್ಮೆಯಿಂದ ನಾವೂ ನೆನಪಿಸಿಕೊಂಡು ಅದೇ ಹೆಮ್ಮೆಯನ್ನು ಮುಂದಿನ ಜನಾಂಗದ ಮನದಲ್ಲೂ ಮೂಡಿಸಬೇಕಾದ ಕರ್ತವ್ಯ ನಮ್ಮ ಮೇಲಿದೆಯಲ್ಲವೇ? ದಿನಾಚರಣೆಯ ಇತಿಹಾಸ, ಹಿನ್ನಲೆ ಮತ್ತು ಪ್ರಸ್ತುತಿಯನ್ನು ಗಮನದಲ್ಲಿರಿಸಿ ಆಚರಣೆಯನ್ನು ನಡೆಸಿದರೆ ದಿನಾಚರಣೆಯ ಮಹತ್ವವೂ ಹೆಚ್ಚುತ್ತದೆ ಅಲ್ಲವೇ??
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.