ಇತ್ತೀಚಿನ ದಿನಗಳಲ್ಲಿ ಮೋದಿಜಿಯವರ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಸೂಯೆ ಅತಿಯಾಗಿ ಹಲವರು ಮಾನಸಿಕ ದೃಢತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ರೀತಿಯಲ್ಲಿ ಮಾನಸಿಕ ದೃಢತೆಯನ್ನು ಕಳೆದುಕೊಳ್ಳುತ್ತಿರುವ ನಾಯಕರಲ್ಲಿ ಮುಂಚೂಣಿಯಲ್ಲಿರುವ ವ್ಯಕ್ತಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲರು ಪ್ರಮುಖರು. ಯಾವುದೇ ವ್ಯಕ್ತಿಯ ವ್ಯಕ್ತಿತ್ವದ ಕುರಿತಾಗಿ ಹೇಳುವ ರೀತಿಯಲ್ಲಿ ಇವರ ವ್ಯಕ್ತಿತ್ವದ ವಿಶೇಷತೆ ಹೇಳುವುದಾದರೆ ಇವರು ಯು-ಟರ್ನ್ ಹೊಡೆಯುವುದರಲ್ಲಿ ನಿಷ್ಣಾತರು. ಇದನ್ನು ಸುಮ್ಮನೇ ಹೇಳುತ್ತಿಲ್ಲ. ಇವರ ರಾಜಕೀಯ ಇತಿಹಾಸ ನೋಡಬೇಕಾದರೆ ಹೆಚ್ಚೇನೂ ಹಿಂದಕ್ಕೆ ಹೋಗಬೇಕಾಗಿಲ್ಲ. ಭ್ರಷ್ಟಾಚಾರದ ವಿರುದ್ದದ ಆಂದೋಲನದ ಮುಖಾಂತರ ಪ್ರಸಿದ್ಧಿಗೆ ಬಂದ ಇವರು ಮೊದಲು ತಮ್ಮ ಗುರುಗಳಿಗೇ ಬೆನ್ನು ತೋರಿದರು, ನಂತರ ಯಾವ ಪಕ್ಷದ ನಾಯಕರ ಭ್ರಷ್ಟಾಚಾರವನ್ನು ಬಯಲಿಗೆಳೆದು ಜೈಲಿಗೆ ಅಟ್ಟುವುದಾಗಿ ಜನರಿಗೆ ಮಾತು ನೀಡಿ ಚುನಾವಣೆಯನ್ನು ಗೆದ್ದರೋ, ಅದೇ ಪಕ್ಷದ ಜೊತೆಗೆ ಕೈ ಜೋಡಿಸಿ ಅಧಿಕಾರ ಹಿಡಿದರು. ಮುಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ವಿರುದ್ದ ದೋಷಾರೋಪಣೆ ಮಾಡಿದರು, ಆದರೆ ಯಾವಾಗ ಗಡ್ಕರಿ ಅವರು ನ್ಯಾಯಾಲಯದ ಮೆಟ್ಟಿಲೇರಿದರೋ ಆಗ ಮತ್ತೆ ಯು ಟರ್ನ್ ಹೊಡೆದು ಕ್ಷಮೆ ಕೋರಿದರು. ಈ ರೀತಿಯಲ್ಲಿ ಒಂದು ಹೇಳಿಕೆಯನ್ನು ನೀಡಿ ಕೆಲವೇ ಸಮಯದಲ್ಲಿ ಯು ಟರ್ನ್ ಹೊಡೆದು ತಮ್ಮದೇ ಹೇಳಿಕೆಯ ವಿರುದ್ಧವಾಗಿ ನಡೆದುಕೊಳ್ಳುವುದು ಅವರ ರಾಜಕೀಯ ಜೀವನದ ಆರಂಭದಿಂದಲೋ ನಡೆದು ಬರುತ್ತಿದೆ.
ಕೇಜ್ರಿವಾಲರ ಯು ಟರ್ನ್ ರಾಜಕೀಯದ ಹೊಸ ಅಧ್ಯಾಯವೇ ಕೇಂದ್ರ ಸರಕಾರ ರೈತರ ಹಿತಕ್ಕಾಗಿ ಜಾರಿಗೆ ತಂದ ಕೃಷಿ ಮಸೂದೆ. 2016 ರ ಸೆಪ್ಟೆಂಬರ್ನಲ್ಲಿ ಆಮ್ ಆದ್ಮಿ ಪಕ್ಷದ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ “ಕೃಷಿ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಯಿಂದ ಕೃಷಿ ಕ್ಷೇತ್ರ ಪ್ರಗತಿಯನ್ನು ಹೊಂದಲಿದೆ. ಮಾರುಕಟ್ಟೆ ಮತ್ತು ಸಂಸ್ಕರಣಾ ಕೇಂದ್ರಗಳಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಯನ್ನು ಪ್ರತಿಯೊಂದು ಜಿಲ್ಲೆಗಳಲ್ಲೂ ಜಾರಿಗೆ ತರುತ್ತೇವೆ” ಎಂದು ಘೋಷಿಸಲಾಗಿತ್ತು. ಇದಕ್ಕೆ “ಆಪ್ ಕಿಸಾನ್ ಮೇನಿಫೆಸ್ಟೋ” ಎಂಬ ಶೀರ್ಷಿಕೆ ಕೂಡಾ ನೀಡಲಾಗಿತ್ತು.
ಅಕ್ಟೋಬರ್ 26, 2016 ರಂದು ಪಂಜಾಬ್ ಚುನಾವಣೆಗಾಗಿ ಆಮ್ ಆದ್ಮಿ ಪಕ್ಷವು ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯಲ್ಲೂ ಎಪಿಎಂಸಿ ಆ್ಯಕ್ಟ್ ಉಲ್ಲೇಖವಿತ್ತು ಹಾಗೂ ರೈತರಿಗೆ ಪರ ರಾಜ್ಯಗಳಲ್ಲಿ ವ್ಯಾಪಾರ ನಡೆಸಲು ಅನುಕೂಲತೆ ಕಲ್ಪಿಸುವ ಬಗ್ಗೆ ಭರವಸೆ ನೀಡಲಾಗಿತ್ತು.
ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ” ಕೃಷಿ ಮಾಸೂದೆ”ಯನ್ನು ಜಾರಿಗೆ ತಂದಾಗ ಯು ಟರ್ನ್ ಹೊಡೆದು ಅತ್ಯಂತ ಉಗ್ರವಾಗಿ ವಿರೋಧಿಸುತ್ತಿದ್ದಾರೆ. ಎಲ್ಲಕ್ಕೂ ಹೆಚ್ಚಿನ ಕುತೂಹಲಕಾರಿ ಅಂಶ ಮತ್ತೊಂದಿದೆ. ಪಂಜಾಬ್ನ ರೈತರ ಪ್ರತಿಭಟನೆಗೆ ಪೊಲೀಸರ ಮೂಲಕ ತನ್ನ ರಾಜ್ಯದಲ್ಲಿ ಅನುಮತಿ ನಿರಾಕರಿಸಿದ ಇದೇ ದೆಹಲಿಯ ಮುಖ್ಯಮಂತ್ರಿ ‘ಯು ಟರ್ನ್’ ಹೊಡೆದು ರೈತರಿಗೆ ಬೆಂಬಲಿ ಸೂಚಿಸಿ ಒಂದು ದಿನ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳುತ್ತಾರೆ..!!! ಇಂತಹ ನಾಟಕಗಳಿಂದ ತೃಪ್ತರಾಗದೆ ಪ್ರಜಾಪ್ರಭುತ್ವದ ದೇಗುಲದಲ್ಲಿ “ಕೃಷಿ ಮಸೂದೆಯ” ಪ್ರತಿಯನ್ನು ಹರಿದು ಹಾಕುತ್ತಾರೆ!! ಅದಕ್ಕೇ ಹಿರಿಯರು ವಿದ್ಯೆಗೂ ಸಂಸ್ಕಾರಕ್ಕೂ ವ್ಯತ್ಯಾಸವಿದೆ ಎಂದು ಹೇಳುತ್ತಿದ್ದರು. ಅತೀ ಹೆಚ್ಚು ವಿದ್ಯಾಭ್ಯಾಸ ಹೊಂದಿರುವ ಮುಖ್ಯಮಂತ್ರಿ ಎಂಬ ಹೆಮ್ಮೆಯನ್ನು ಹೊಂದಿದ್ದ ವ್ಯಕ್ತಿ ನಡೆದುಕೊಳ್ಳಬಹುದಾದ ರೀತಿಯಲ್ಲಿ ಅವರ ನಡತೆ ಇತ್ತೇ? ಯು ಟರ್ನ್ ಹೊಡೆಯುವುದು ಅವರ ರಾಜಕೀಯ ಜೀವನದ ಅವಿಭಾಜ್ಯ ಅಂಗವೇ ಆಗಿರಬಹುದು ಆದರೆ ಅನಾಗರೀಕರ ನಡತೆ ಬೇಕಿರಲಿಲ್ಲವಲ್ಲ??
ಇವೆಲ್ಲದರ ಮಧ್ಯ ಪ್ರಧಾನಿ “ಈ ಮಾಸೂದೆಯನ್ನು ರೈತರ ಹಿತಕ್ಕಾಗಿ ಜಾರಿಗೆ ತರಲಾಗಿದೆ, ಇದರ ಶ್ರೇಯಸ್ಸಿನ ಅಪೇಕ್ಷೆ ನಮಗಿಲ್ಲ. ನೀವೇ ಇದರ ಶ್ರೇಯವನ್ನು ತೆಗೆದುಕೊಳ್ಳಿ, ಆದರೆ ಅನ್ನದಾತರ ಹಾದಿ ತಪ್ಪಿಸಬೇಡಿ ” ಎಂದೂ ಹೇಳಿದ್ದಾರೆ. ನುಡಿದಂತೆ ನಡೆಯುವವನೇ ನಿಜವಾದ ನಾಯಕ. ಪ್ರಧಾನಿ ಮೋದಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಎಲ್ಲಾ ಭಾರವಸೆಗಳನ್ನು ಈಡೇರಿಸಿದ್ದಾರೆ, ರಾಮ ಮಂದಿರ ನಿರ್ಮಾಣ, ತ್ರಿವಳಿ ತಲಾಖ್, ವಿಧಿ 370ರ ರದ್ಧತಿ ಹೀಗೇ ಬಹಳಷ್ಟು… ಆದರೆ ಕೇಜ್ರಿವಾಲರು ತಮ್ಮದೇ ಪಕ್ಷದ ಪ್ರಣಾಳಿಕೆಯಲ್ಲಿದ್ದ ಭಾರವಸೆ ಈಡೇರುವ ಸಮಯದಲ್ಲಿ ಅದನ್ನು ವಿರೋಧಿಸುತ್ತಿದ್ದಾರೆ. ಅಸೂಯೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸ್ವತಃ ತನ್ನ ಮಾತಿನ ಮೇಲೆಯೇ ತಾನೇ ಗೌರವವನ್ನು ಹೊಂದಿಲ್ಲದ ವ್ಯಕ್ತಿಯನ್ನು ಇತರರು ಹೇಗೆ ತಾನೇ ಗೌರವಿಸಬಲ್ಲರು? ತನ್ನ ರಾಜಕೀಯ ಬೆಳವಣಿಗೆಯನ್ನು ಬದಿಗೊತ್ತಿ ಜನರ ಕ್ಷೇಮದ ಬಗ್ಗೆ ಚಿಂತಿಸುವ ವ್ಯಕ್ತಿಯೇ ನಿಜವಾದ ಜನಪ್ರತಿನಿಧಿ ಹಾಗೂ ಜನ ನಾಯಕ. ಒಂದೆರಡು ಬಾರಿ ಯು ಟರ್ನ್ ಹೊಡೆದರೆ ಜನರು ಅದನ್ನು ಕ್ಷಮಿಸಿ ಮರೆತು ಬಿಡಬಹುದೇನೋ, ಆದರೆ ಯು ಟರ್ನ್ ಹೊಡೆಯುವುದೇ ಜೀವನವಾದರೆ ಜನರು ಗುರುತಿಸದಿರಲು ಸಾಧ್ಯವೇ?? ಸದೃಢ, ಮತ್ತು ಗೌರವವಾನ್ವಿತ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿ ಮಾತ್ರವೇ ನಾಯಕನಾಗಿ ಬೆಳೆಯಬಲ್ಲ. ಹುಲಿಯ ಚರ್ಮವನ್ನು ಹೊದ್ದ ಮಾತ್ರಕ್ಕೆ ನರಿಯು ಹುಲಿಯಾಗಬಹುದೇ???
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.