ಇರಾಕ್ ದೇಶದ ಒಂದು ಸಣ್ಣ ಧಾರ್ಮಿಕ ಸಮುದಾಯ ಯಝಿದಿಗಳು. ಯಝಿದಿ ಅಂದರೆ ಸೃಷ್ಟಿಕರ್ತನ ಸೇವಕ ಎಂದು ಅರ್ಥ. ಇವರು ಏಕ ದೇವತಾರಾಧಕರು. ಮಾಲೆಕ್ ತೌಸ್ ಇವರು ಆರಾಧಿಸುವ ದೇವರು. ಮಾಲೆಕ್ ತೌಸ್ ಅಂದರೆ ನವಿಲಿನ ಮೇಲೇರಿ ಬರುವ ದೇವತೆ ಎಂದು ಅರ್ಥ. ಭಾರತದಲ್ಲಿ ಹಿಂದುಗಳಿಂದ ಆರಾಧಿಸಲ್ಪಡುವ ಸುಬ್ರಹ್ಮಣ್ಯ/ಮುರುಗನನ್ನು ಹೋಲುವ ದೇವರು ಮಾಲೆಕ್ ತೌಸ್. ಮೆಸೋಪೊಟೇಮಿಯಾದ ಧಾರ್ಮಿಕ ಚಿಂತನೆಗಳಿಂದ ಒಡಮೂಡಿದ ಧರ್ಮ ಇದು. ಸೂಫಿಸಂ ಹಾಗೂ ಝೊರಾಸ್ಟ್ರಿಸಂ( ಪಾರಸಿಗಳ ಧರ್ಮ)ಗಳಿಂದ ಪ್ರಭಾವಿತವಾಗಿರುವ ಧರ್ಮ ಯಝಿದಿಸಂ. ಜಾಗತಿಕ ಇತಿಹಾಸದಲ್ಲಿ ಯಝಿದಿಗಳಷ್ಟು ದೌರ್ಜನ್ಯ ಹಾಗೂ ನರಮೇಧಗಳನ್ನು ಎದುರಿಸಿದ ಜನಾಂಗಗಳೇ ಇರಲಿಕ್ಕಿಲ್ಲ. ಇತಿಹಾಸದಲ್ಲಿ ಯಝಿದಿಗಳು 72 ಬಾರಿ ನರಮೇಧಗಳನ್ನು ಎದುರಿಸಿಯೂ ಉಳಿದುಕೊಂಡಿದ್ದಾರೆ. 10 ನೇ ಶತಮಾನದಲ್ಲಿ ಕುರ್ದಿಗಳು ಹಕ್ಕಾರೀ ಬೆಟ್ಟಗಳಲ್ಲಿದ್ದ ಯಝಿದಿಗಳನ್ನು ಆಕ್ರಮಿಸಿ ಬಹಳಷ್ಟು ಜನರನ್ನು ಇಸ್ಲಾಂಗೆ ಮತಾಂತರಿಸಿದರು. 18 ನೇ ಶತಮಾನದಲ್ಲಿ ಕುರ್ದಿಶ್ ನಾಯಕರಾದ ಬೇದಿರ್ ಖಾನ್ ಬೇಗ್ ಹಾಗೂ ಮೊಹಮ್ಮದ್ ಪಾಷಾರಿಂದ ಸುಮಾರು 70,000 ಯಝಿದಿಗಳು ಕೊಲ್ಲಲ್ಪಟ್ಟರು. 17 ನೇ ಶತಮಾನದಿಂದ ಟರ್ಕಿಯ ಒಟ್ಟೋಮನ್ ರಾಜರ ಆಕ್ರಮಣದಿಂದ ಬಹಳಷ್ಟು ಯಝಿದಿಗಳು ನಾಶವಾಗಿ ಹೋದರು ಇಲ್ಲವೇ ಇಸ್ಲಾಂಗೆ ಮತಾಂತರವಾದರು. ಒಟ್ಟೋಮನ್ ಸಾಮ್ರಾಟರು ಅರ್ಮೇನಿಯಾದಲ್ಲಿ ನಡೆಯಿಸಿದ ನರಮೇಧದಲ್ಲಿ ಸುಮಾರು 3 ಲಕ್ಷ ಯಝಿದಿಗಳು ಹತ್ಯೆಗೊಳಗಾದರು. ಈ ಅವಧಿಯಲ್ಲಿ ಬಹುತೇಕ ಯಝಿದಿಗಳು ನಾಶವಾಗಿ ಹೋದರು. ಈಗ ಜಗತ್ತಿನಾದ್ಯಂತ ಸುಮಾರು 10 ಲಕ್ಷ ಯಝಿದಿಗಳು ಉಳಿದುಕೊಂಡಿದ್ದಾರೆ ಎಂದು ಅಂಕಿಅಂಶ ಹೇಳುತ್ತದೆ. ಇವರಲ್ಲಿ ಸುಮಾರು 5 ಲಕ್ಷ ಮಂದಿ ಉತ್ತರ ಇರಾಕ್ ನ ಸಿಂಜಾರಾ ಹಾಗೂ ಮೌಸುಲ್ ನಲ್ಲಿ ಇದ್ದಾರೆ. ಸದ್ದಾಂ ಹುಸೇನ್ ನ ಆಡಳಿತ ಕಾಲದಲ್ಲೂ ಇವರ ಮೇಲೆ ಬಹಳ ಧಾರ್ಮಿಕ ದೌರ್ಜನ್ಯಗಳು ನಡೆದವು. ಮತಾಂತರವಾಗಲು ಒಪ್ಪದ ಕಾರಣ ಸದ್ದಾಂ ಆಡಳಿತವು ಇವರು ವಾಸಿಸುತ್ತಿದ್ದ ಹಳ್ಳಿಗಳನ್ನು ನಾಶ ಮಾಡಿ ಇವರನ್ನು ಬೇರೆಡೆಗೆ ಬಲವಂತವಾಗಿ ಸ್ಥಳಾಂತರಿಸಿತು.
ಆದರೆ 2014 ರಲ್ಲಿ ಯಝಿದಿ ಸಮುದಾಯದ ಮೇಲೆ ನಡೆದ ಹಿಂಸೆ, ಹತ್ಯಾಕಾಂಡ ಹಾಗೂ ಯಝಿದಿ ಮಹಿಳೆಯರ ಅಪಹರಣ, ಅತ್ಯಾಚಾರ ಪ್ರಕರಣಗಳು ಮಾತ್ರ ಇಡೀ ಮನುಕುಲವೇ ತಲೆತಗ್ಗಿಸಿಕೊಳ್ಳುವಂತಿದೆ. ಇದು ಯಝಿದಿಗಳ ಮೇಲೆ ನಡೆದ 73 ನೇ ಹತ್ಯಾಕಾಂಡ. ಉತ್ತರ ಇರಾಕಿನ ಸಿಂಜಾರಾದಲ್ಲಿ ಮಸೂದ್ ಬರ್ಝಾನಿಯ ಪೆಶ್ಮೆರ್ಗಾ ಸೇನೆಯು ಸೇನೆಯು ಆಗಸ್ಟ್ 2014 ರಲ್ಲಿ ಯಝಿದಿಗಳಿಗೆ ಕೊಡುತ್ತಿದ್ದ ರಕ್ಷಣೆಯನ್ನು ಧಾರ್ಮಿಕ ಕಾರಣಗಳಿಂದ ಹಿಂತೆಗೆದೊಡನೆ ಯಝಿದಿಗಳ ಕೆಟ್ಟ ದಿನಗಳು ಆರಂಭವಾದವು. ಉಗ್ರ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ ದ ಲೆವಂತ್ (ಐ ಎಸ್ ಐ ಎಲ್/ಐಎಸ್ ಐಎಸ್) ನವಿಲು ದೇವತೆಯ ಆರಾಧಕರಾದ ಯಝಿದಿಗಳನ್ನು ಸೈತಾನನ ಆರಾಧಕರೆಂದು ನಿರ್ಧರಿಸಿ ಅವರ ಮೇಲೆ ಆಕ್ರಮಣವನ್ನು ಮಾಡಲು ಆರಂಭಿಸಿತು. ಸಿಂಜಾರಾ ಜಿಲ್ಲೆಯನ್ನು ಮುಂದೊತ್ತಿ ಬಂದ ಐಎಸ್ಐಎಸ್ ಉಗ್ರರು ದಾರಿಯುದ್ದಕ್ಕೂ ಸಿಕ್ಕಿದ ಯಝಿದಿಗಳ ಹಳ್ಳಿಯನ್ನು ನಾಶ ಮಾಡುತ್ತಾ ಸಿಕ್ಕಿ ಸಿಕ್ಕಿದವರನ್ನು ಹತ್ಯೆ ಮಾಡುತ್ತಾ ಸಾಗಿತು. 04/08/2014 ರಂದು ಜಬಲ್ ಸಿಂಜಾರ್ ನಲ್ಲಿ 30 ಮಂದಿ, ಹರ್ದನ್ ಹಳ್ಳಿಯಲ್ಲಿ 60 ಮಂದಿ, ರಮದಿ ಜಬಾಲ್ ನಲ್ಲಿ 70 ಹೀಗೆ ಹೆಚ್ಚುಕಮ್ಮಿ 200 ಮಂದಿ ಯಝಿದಿ ಗಂಡಸರನ್ನು ಆ ದಿನ ಕೊಲ್ಲಲಾಯಿತು. ಆಗಸ್ಟ್ 6 ರಂದು 600 ಮಂದಿಯನ್ನು ಧೋಲಾ, ಖಾನಾ ಸೊರ್,ಹರ್ದಾನ್, ಅದ್ನಾನಿಯಾ, ಜಝೀರಾ, ಅಲ್ ಶಿಮಾಲ್,ಮಾಟು ಹಳ್ಳಿಗಳಲ್ಲಿ ಕೊಂದು ಹಾಕಿತು ಐಎಸ್ ಐಎಸ್. ಇರಾಕಿ ಸರಕಾರ ನೀಡಿದ ಮಾಹಿತಿಯಂತೆ ಆಗಸ್ಟ್ 10 ರಂದು ಲೆಕ್ಕವಿಲ್ಲದಷ್ಟು ಸಂಖ್ಯೆಯ ಮಹಿಳೆಯರನ್ನು ಹಾಗೂ ಮಕ್ಕಳನ್ನು ಜೀವಂತವಾಗಿ ಮಣ್ಣಿನಡಿಯಲ್ಲಿ ಹುಗಿದು ಸಮಾಧಿ ಮಾಡಿದ್ದಾರೆ ಐಸಿಸ್ ಉಗ್ರರು. ವಿಶ್ವ ಸಂಸ್ಥೆಯ ಲೆಕ್ಕಾಚಾರದಂತೆ ಸಿಂಜಾರಾದಲ್ಲಿ ಐಸಿಸ್ ಉಗ್ರ ಸಂಘಟನೆಯು ಏನಿಲ್ಲವಂದರೂ 5000 ಮಂದಿ ಯಝಿದಿ ಗಂಡಸರನ್ನು ಕೊಂದು ಹಾಕಿದೆ ಹಾಗೂ 10,000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಹಾಗೂ ಮಕ್ಕಳನ್ನು ಅಪಹರಿಸಿ ಅವರನ್ನು ಲೈಂಗಿಕ ಜೀತದಾಳುಗಳನ್ನಾಗಿಸಿದೆ.
2014 ರ ಆಗಸ್ಟ್ 3 ರಂದು ಧಾಳಿ ಮಾಡಿದ ಐಸಿಸ್ ಸಾವಿರಾರು ಹೆಣ್ಣುಮಕ್ಕಳು ಹಾಗೂ ಮಕ್ಕಳನ್ನು ಅಪಹರಿಸಿತು. ಸುಮಾರು 450 ರಿಂದ 500 ರಷ್ಟು ಹೆಂಗಸರನ್ನು ಹಾಗೂ ಹುಡುಗಿಯರನ್ನು ತಾಲ್ ಅಫಾರ್ ಗೆ ಸಾಗಿಸಲಾಯಿತು. ನೂರಾರು ಹೆಣ್ಣುಮಕ್ಕಳನ್ನು ಅಪಹರಿಸಿ ಸಿ ಭಾಶಾ ಖಿದ್ರಿಗೆ ಹಾಗೂ ಬಾ ಅಜ್ ಗೆ ಸಾಗಿಸಿದರು. ಆಗಸ್ಟ್ 6 ರಂದು ಸಿಂಜಾರ್ ಗೆ ಧಾಳಿ ಮಾಡಿದ ಐಸಿಸ್ ಉಗ್ರರು 400 ಮಹಿಳೆಯರನ್ನು ಅಪಹರಿಸಿ ಲೈಂಗಿಕ ಜೀತದಾಳುಗಳನ್ನಾಗಿಸಿದರು. ಆಗಸ್ಟ್ 3 ಹಾಗೂ 6 ತಾರೀಕಿನ ನಡುವೆ ಬಾ ಅಜ್ ನಿಂದ 500 ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಅಪಹರಿಸಲಾಯಿತು ಹಾಗೂ ತಾಲ್ ಬನಾತ್ ನಿಂದ 200 ಮಂದಿಯನ್ನು ಅಪಹರಿಸಲಾಯಿತು. ಆಗಸ್ಟ್ 15 ರಂದು ಯೆಝಿದಿಗಳ ಹಳ್ಳಿಯಾದ ಖೋಚೋವಿನಿಂದ 1000 ಕ್ಕೂ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ಹಾಗೂ ಮಕ್ಕಳನ್ನು ಅಪಹರಿಸಲಾಯಿತು. ಅಪಹರಿಸಲಾದ ಹೆಂಗಸರನ್ನು ಗುಲಾಮರ ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು. ಸೆರೆ ಸಿಕ್ಕಿದ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರವನ್ನು ಯುದ್ಧದ ಭಾಗವಾಗಿ ಪರಿಗಣಿಸಲಾಗುತ್ತಿತ್ತು. ಬಲವಂತವಾಗಿ ಕರೆತರಲ್ಪಟ್ಟ ಹೆಣ್ಣು ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗಳನ್ನು ಮಾಡಲೂ ಐಸಿಸ್ ಬಳಿ ಗೈನೆಕಾಲಜಿಸ್ಟ್ ಗಳ ತಂಡವೇ ಇತ್ತು. ವೈದ್ಯರು ಈ ಸ್ತ್ರೀಯರನ್ನು ಪರೀಕ್ಷೆ ಮಾಡಿ ಇವರು ಕನ್ಯೆಯರು ಹೌದೋ ಅಲ್ಲವೋ ಎಂದು ಪರೀಕ್ಷೆ ಮಾಡುತ್ತಿದ್ದರು. ಕನ್ಯೆಯರಾದರೆ ಅವರನ್ನು ಯುವ ಐಸಿಸ್ ಹೋರಾಟಗಾರರಿಗೆ ಮದುವೆ ಮಾಡಲಾಗುತ್ತಿತ್ತು. ಈ ವಿವಾಹವು ತಾತ್ಕಾಲಿಕವಾಗಿದ್ದು ವಿವಾಹವಾದ ಉಗ್ರರು ಸ್ವಲ್ಪ ಕಾಲ ಇವರ ಮೇಲೆ ಅತ್ಯಾಚಾರ ಮಾಡಿ ನಂತರ ಬೇರೆ ವ್ಯಕ್ತಿಗಳಿಗೆ ಮಾರುತ್ತಿದ್ದರು. ಬಂಧಿತ ಮಹಿಳೆ ಈಗಾಗಲೇ ವಿವಾಹಿತೆಯೆಂದು ತಿಳಿದು ಬಂದರೆ ಅವರನ್ನು ಲೈಂಗಿಕ ಜೀತದಾಳುಗಳನ್ನಾಗಿಸಿ ಗುಲಾಮರ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಬೆಲೆಗೆ ಮಾರಲಾಗುತ್ತಿತ್ತು. ವೈದ್ಯರ ಪರಿಶೀಲನೆಯ ವೇಳೆಗೆ ಮಹಿಳೆಯರು ಗರ್ಭವತಿಯರೆಂದು ಕಂಡುಬಂದರೆ ಬಲವಂತವಾಗಿ ಅವರ ಗರ್ಭಪಾತ ಮಾಡಿಸಿ ನಂತರ ಅವರನ್ನು ಲೈಂಗಿಕ ಜೀತದಾಳುಗಳ ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು! ಯಝಿದಿಗಳು ಸೈತಾನನ ಆರಾಧಕರು ಎಂಬ ನೆಲೆಯಲ್ಲಿ ಯಝಿದಿ ಮಹಿಳೆಯರನ್ನು ಕೊಲ್ಲಲು, ಅತ್ಯಾಚಾರ ಮಾಡಲು, ಹಿಂಸಿಸಲು ತನ್ನ ಸೈನಿಕರಿಗೆ ಅನುಮತಿ ಕೊಟ್ಟಿತ್ತು.
ಅಪಹರಿಸಲ್ಪಟ್ಟ ಯಝಿದಿ ಮಹಿಳೆಯರನ್ನು ಲೈಂಗಿಕ ಜೀತದಾಳುಗಳನ್ನಾಗಿಸಿ ನಿರಂತರ ಅತ್ಯಾಚಾರವೆಸಗುತ್ತಿದ್ದ ಐಸಿಸ್ ಉಗ್ರರು ಅವರನ್ನು ಅತ್ಯಂತ ಅಮಾನವೀಯ ರೀತಿಯಿಂದ ನಡೆಯಿಸಿಕೊಳ್ಳುತ್ತಿದ್ದರು. ಐಸಿಸ್ ಉಗ್ರರ ಕೈಗೆ ಸಿಕ್ಕಿಬಿದ್ದ ಯಝಿದಿ ಮಹಿಳೆಯರು ಕಣ್ಣೀರ ಕಥೆಗಳಿಗೆ ಕೊನೆಯೇ ಇಲ್ಲ. ಇರಾಕಿನ ಯಝಿದಿ ಸಮುದಾಯದ ಏಕೈಕ ಎಂಪಿ ವಿಯಾನ್ ದಾಖಿಲ್ ಐಸಿಸ್ ಉಗ್ರರ ಕೈಗೆ ಸಿಕ್ಕಿಬಿದ್ದ ಹೆಣ್ಣು ಮಕ್ಕಳ ದುರಂತ ಕಥೆಗಳನ್ನು ಹೇಳುತ್ತಾರೆ. ಒಂದು ವರ್ಷದ ಮಗುವಿನ ಸಮೇತ ಒಬ್ಬಾಕೆ ಯೆಝಿದಿ ಮಹಿಳೆಯನ್ನು ಅಪಹರಿಸಿದ ಉಗ್ರರು ಮಗುವನ್ನು ತಾಯಿಯಿಂದ ಪ್ರತ್ಯೇಕಿಸಿ, ತಾಯಿಯನ್ನು ಸತತ ಮೂರು ದಿನಗಳ ಕಾಲ ನೀರು ಹಾಗೂ ಅನ್ನಾಹಾರಗಳಿಲ್ಲದೆ ಜೈಲಿನಲ್ಲಿ ಕೂಡಿ ಹಾಕಿದರು. ಮೂರು ದಿನಗಳ ನಂತರ ಆಕೆಗೆ ಒಂದು ಬಟ್ಟಲು ಅನ್ನ ಹಾಗೂ ಬೇಯಿಸಿದ ಮಾಂಸವನ್ನು ತಂದು ಕೊಡಲಾಗುತ್ತದೆ. ಮೂರುದಿನಗಳ ಹಸಿವೆಯಿಂದ ಕಂಗೆಟ್ಟಿದ್ದ ಆಕೆ ಆಹಾರವನ್ನು ಉಣ್ಣುತ್ತಾಳೆ. ಆಕೆ ಉಂಡು ಮುಗಿಸಿದ ನಂತರ ಉಗ್ರರು ಆಕೆಯ ಬಳಿ ನೀನು ತಿಂದ ಮಾಂಸ ನಿನ್ನ ಒಂದು ವರ್ಷದ ಮಗುವನ್ನು ಕೊಂದು ಮಾಡಿದ್ದು ಎಂದು ಹೇಳುತ್ತಾರೆ. ಹೆತ್ತಬ್ಬೆಯೇ ತನ್ನ ಮಗುವಿನ ಮಾಂಸವನ್ನು ತಿನ್ನುವಂತೆ ಮಾಡಿದ ಉಗ್ರರ ಕ್ರೌರ್ಯ ಎಂಥದ್ದು!? ಮಗುವಿನ ಮಾಂಸವನ್ನೇ ಅರಿಯದೆ ಉಂಡ ತಾಯಿಯ ಮನಸ್ಸಿಗೆ ಹೇಗಾಗಿರಬೇಡ? ಉಗ್ರರ ಕೈಯಿಂದ ತಪ್ಪಿಸಿಕೊಂಡು ಬಂದ ಇನ್ನೋರ್ವ ಹೆಣ್ಣು ಮಗುವಿನ ಕಥೆಯನ್ನೂ ವಿಯಾನ್ ಹೇಳುತ್ತಾರೆ. ಒಂದು ಕುಟುಂಬದ 7 ಮಂದಿ ಸಹೋದರಿಯರನ್ನು ಅಪಹರಿಸಿದ ಉಗ್ರರು ಅವರಲ್ಲಿ ಕಿರಿಯಳಾದ 10 ವರ್ಷದ ಹೆಣ್ಣುಮಗುವನ್ನು ತಂದೆ ತಾಯಿಯರ ಎದುರಿಗೇ ಅಮಾನವೀಯವಾಗಿ ಸರಣಿ ಅತ್ಯಾಚಾರ ಮಾಡುತ್ತಾರೆ. ಆ ನತದೃಷ್ಟ ಬಾಲೆ ಅತ್ಯಾಚಾರದ ತೀವ್ರತೆಗೆ ತಂದೆ ತಾಯಿಯರ ಕಣ್ಣೆದುರೇ ಕೊನೆಯುಸಿರೆಳೆಯುತ್ತಾಳೆ!
ಫರ್ಯಾಲ್ ಎಂಬ ಹೆಸರಿನ ಹೆಣ್ಣುಮಗಳನ್ನು ಲೈಂಗಿಕ ಜೀತದಾಳನ್ನಾಗಿಸಿ 6 ಬಾರಿ ಮಾರಾಟ ಮಾಡಲಾಯಿತು. ಇವಳನ್ನು ಖರೀದಿಸಿದ ವ್ಯಕ್ತಿ ಬೇರೊಬ್ಬಳು ಬೇಕೆ ಅನಿಸಿದಾಗ ಇವಳನ್ನು ಹಣಕ್ಕಾಗಿ ಅಥವಾ ಸಾಲಕ್ಕಾಗಿ ಇನ್ನೊಬ್ಬಾತನಿಗೆ ಮಾರುತ್ತಿದ್ದ. ಆ ರಾಕ್ಷಸರು ನಮ್ಮನ್ನು ಪ್ರಾಣಿಗಳನ್ನು ಹಿಂಸಿಸುವಂತೆ ಹಿಂಸಿಸುತ್ತಿದ್ದರು ಎಂದು ಹೇಳಿದ್ದಾಳೆ ಫರ್ಯಾಲ್. ಇಬ್ಬರು ಹೆಣ್ಣುಮಕ್ಕಳ ತಾಯಿ ನೌರ್ ಎಂಬಾಕೆಯನ್ನು ಐಸಿಸ್ ಉಗ್ರರು ಬಂಧಿಸುವಾಗ ಆಕೆ ಗರ್ಭಿಣಿ. ಉಗ್ರರ ವಶದಲ್ಲಿರುವಾಗಲೇ ಆಕೆ ಗಂಡುಮಗುವೊಂದರ ತಾಯಿಯಾಗುತ್ತಾಳೆ. ಮಗುವಿಗೆ ಕುಡಿಸಲು ಹಾಲನ್ನೂ ಕೂಡಾ ಉಗ್ರರು ಆಕೆಗೆ ಒದಗಿಸುವುದಿಲ್ಲ. ನಂತರ ಆಕೆಯನ್ನು ಮಾರಾಟ ಮಾಡಲಾಗುತ್ತದೆ. ಏಳು ಬಾರಿ ಆಕೆಯನ್ನು ವಿವಿಧ ಮಾಲಿಕರಿಗೆ ಮಾರಾಟಮಾಡಲಾಗುತ್ತದೆ. ಪ್ರತಿಯೊಬ್ಬರೂ ಆಕೆಯನ್ನು ಅತ್ಯಾಚಾರಮಾಡುತ್ತಿದ್ದರು. ಆಕೆಯ ಹೆಣ್ಣುಮಕ್ಕಳಿಗೆ ಬಾಸುಂಡೆ ಬರುವಂತೆ ಬಡಿಯಲಾಗುತ್ತಿತ್ತು. ಒಂದು ಬಾರಿ ಆಕೆ ಖರೀದಿಸಿದವನ ಮನೆಯಿಂದ ಹೇಗೋ ತಪ್ಪಿಸಿಕೊಂಡು ಹೊರ ಹೋಗುತ್ತಾಳೆ. ಆದರೆ ಹೊರಗೆ ಯಾರೂ ಕೂಡಾ ಆಕೆಯ ಪ್ರಯಾಣಕ್ಕೆ ಹಣ ಕೊಡುವುದಿಲ್ಲ. ಜನರು ಆಕೆಗೆ ಸಹಾಯ ಮಾಡುವುದು ಇರಲಿ ಬಾಯಾರಿ ಕಂಗೆಟ್ಟಿದ್ದ ಇಬ್ಬರು ಹೆಣ್ಣುಮಕ್ಕಳಿಗೆ ಕುಡಿಯಲೂ ನೀರನ್ನೂ ಕೊಡುಲಿಲ್ಲ. ಕೊನೆಗೆ ನಿರ್ವಾಹ ಇಲ್ಲದೆ ಆಕೆ ತಾನು ಯಾವ ಮನೆಯಿಂದ ತಪ್ಪಿಸಿಕೊಂಡಿದ್ದಳೋ ಆ ಮನೆಗೇ ಹಿಂತಿರುಗಬೇಕಾಯಿತು.
ಯಝಿದಿ ಮಹಿಳೆಯರನ್ನು ಲೈಂಗಿಕ ಜೀತದಾಳುಗಳನ್ನಾಗಿಸಿ ಮಾರುಕಟ್ಟೆಯಲ್ಲಿ ಮಾರುವ ದೃಶ್ಯಗಳಂತೂ ಸಾಮಾನ್ಯವಾಗಿತ್ತು. ಇಂಟರ್ ನೆಟ್, ಯುಟ್ಯೂಬ್ಗಳಲ್ಲಿ ಈ ಲೈಂಗಿಕ ಜೀತದಾಳುಗಳನ್ನು ಮಾರಾಟ ಮಡುತ್ತಿರುವ ವೀಡಿಯೋಗಳು ಕಾಣಸಿಗುತ್ತವೆ. ಹೆಣ್ಣುಮಕ್ಕಳ ಸೌಂದರ್ಯದ ಅಧಾರದಲ್ಲಿ ಅವರ ಬೆಲೆ ನಿರ್ಧಾರವಾಗುತ್ತಿತ್ತು. ಐಸಿಸ್ ಆನ್ಲೈನ್ನಲ್ಲಿಯೂ ಲೈಂಗಿಕ ಜೀತದಾಳುಗಳನ್ನು ಮಾರಾಟ ಮಾಡುತ್ತಿತ್ತು. “12 ವರ್ಷದ ಸುಂದರಿಯಾದ ಕನ್ಯೆ 12,500 ಡಾಲರ್ ಬೆಲೆಗೆ ಮಾರಾಟಕ್ಕಿದ್ದಾಳೆ” ಎನ್ನುವ ಆನ್ಲೈನ್ ಜಾಹೀರಾತು ಮಾಡಲಾಗಿತ್ತು. ಬೆಳಗ್ಗೆ ತನ್ನ ವಶದಲ್ಲಿದ್ದ ಹೆಣ್ಣು ಮಕ್ಕಳನ್ನು ಮಾರಾಟಕ್ಕೆ ಮಾರುಕಟ್ಟೆಗೆ ಕೊಂಡು ಹೋಗುವುದು ಹಾಗೂ ಮರಾಟವಾಗದೇ ಇರುವ ಹೆಣ್ಣು ಮಕ್ಕಳನ್ನು ಹಿಂದಕ್ಕೆ ಸಂಜೆ ಕರೆತರುವ ದೃಶ್ಯ ಕೂಡಾ ಅಲ್ಲಿ ಕಾಣ ಸಾಮಾನ್ಯವಾಗಿತ್ತು. ಬಂಧನದಲ್ಲಿದ್ದ ಎಷ್ಟೋ ಹೆಣ್ಣು ಮಕ್ಕಳು ತಾವು ಮಾರಾಟವಾಗದೇ ಉಳಿಯುವ ಉದ್ದೇಶದಿಂದ ಸುಂದರವಾಗಿ ಕಾಣಿಸಿಕೊಳ್ಳದೇ ಇರಲು ಬಹಳ ಕೆಟ್ಟದಾಗಿ ಅಲಂಕಾರ ಮಾಡಿಕೊಳ್ಳುತ್ತಿದ್ದರು ಹಾಗೂ ತಮ್ಮ ಮುಖದಲ್ಲಿ ಗಾಯ ಮಾಡಿಕೊಳ್ಳುತ್ತಿದ್ದರು. ಉಗ್ರರ ವಶದಲ್ಲಿ ನಿರಂತರ ಹಿಂಸೆ ಹಾಗೂ ಅತ್ಯಾಚಾರಕ್ಕೆ ಒಳಗಾದ ಎಷ್ಟೋ ಮಂದಿ ಯಝಿದಿ ಹೆಣ್ಣು ಮಕ್ಕಳು ಆತ್ಮಹತ್ಯೆಯನ್ನು ಮಡಿಕೊಂಡಿದ್ದಾರೆ ಎನ್ನುತ್ತಾರೆ ಉಗ್ರ ವಶದಿಂದ ತಪ್ಪಿಸಿಕೊಂಡು ಬಂದ ಹೆಣ್ಣು ಮಕ್ಕಳು. ದಿನ ನಿತ್ಯ ಐದಾರು ಮಂದಿಯಿಂದ ಸರಣಿ ಅತ್ಯಾಚಾರ, ಹೊಡಿತ ಬಡಿತ, ಸಿಗರೇಟಿನಿಂದ ಸುಡುವುದು ಹೀಗೆ ಐಸಿಸ್ ಉಗ್ರರ ವಶದಲ್ಲಿ ಯಝಿದಿ ಹೆಣ್ಣುಮಕ್ಕಳು ಅನುಭವಿಸಿದ ಹಿಂಸೆಯ ನೋವಿನ ಕಥೆಗಳಿಗೆ ಕೊನೆಯೇ ಇಲ್ಲ. ಐಸಿಸ್ ತಾನು ಅಪಹರಿಸಿದ ಯಝಿದಿ ಸಮುದಾಯದ ಹುಡುಗರನ್ನು ಉಗ್ರಗಾಮಿಗಳನ್ನಾಗಿ ಬೆಳೆಸುತ್ತಿದೆ. ಅವರಿಗೆ ಗನ್ ಉಪಯೋಗಿಸುವುದು, ಶೂಟ್ ಮಾಡುವುದು, ಬಾಂಬ್ ಹಾಕುವುದು ಮೊದಲಾದ ವಿಷಯಗಳ ಕುರಿತು. ಈ ಮಕ್ಕಳಿಗೆ ಐಸಿಸ್ ಮಾದರಿಯಲ್ಲಿ ತಲೆ ಕತ್ತರಿಸುವುದು ಹೇಗೆ ಎಂಬುದನ್ನೂ ಕಲಿಸುತ್ತಿದೆ ಐಸಿಸ್!
ತಡವಾಗಿಯಾದರೂ ಯಝಿದಿ ಸಮುದಾಯದ ರಕ್ಷಣೆಗೆ ಬಂದದ್ದು ಅಂದಿನ ಅಮೇರಿಕದ ಅಧ್ಯಕ್ಷರಾದ ಬರಾಕ್ ಒಬಾಮಾ ಹಾಗೂ ಅವರ ಸರಕಾರ. ಅಮೇರಿಕನ್ ನೇತೃತ್ವದ ಮಿತ್ರ ರಾಷ್ಟ್ರಗಳ ಪಡೆಗಳು ಐಸಿಸ್ ಉಗ್ರರ ಮೇಲೆ ವಾಯು ದಾಳಿಯನ್ನೆಸಗಿ ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಸಿಂಜಾರಾ ಬೆಟ್ಟಗಳಲ್ಲಿ ಅನ್ನಾಹಾರಗಳಿಲ್ಲದೆ ಅಡಗಿ ಕುಳಿತಿದ್ದ ಯಝಿದಿಗಳಿಗೆ ನೀರು ಆಹಾರವನ್ನು ವಿಮಾನಗಳ ಮೂಲಕ ಕೆಳಗೆ ಬೀಳಿಸಿ ದೊರಕಿಸಲಾಯಿತು. ಜಾಗತಿಕ ಮಾನವ ಹಕ್ಕುಗಳ ಸಂಘಟನೆಗಳು ಈ ಹೆಣ್ಣುಮಕ್ಕಳನ್ನು ರಕ್ಷಿಸುವ ಕಾಯಕದಲ್ಲಿ ತೊಡಗಿವೆ. ಸುಮಾರು 7000 ಹೆಣ್ಣು ಮಕ್ಕಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಇನ್ನೂ ಮೂರು ಸಾವಿರ ಮಂದಿ ಹೆಣ್ಣು ಮಕ್ಕಳು ಲೈಂಗಿಕ ಜೀತದಾಳುಗಳಾಗಿ ಇರಾಕ್ ಹಾಗೂ ಸಿರಿಯಾ ದೇಶಗಳಲ್ಲಿ ಐಸಿಸ್ ವಶದಲ್ಲೇ ಇದ್ದಾರೆ. ಉಗ್ರರ ವಶದಿಂದ ರಕ್ಷಿಸಲ್ಪಟ್ಟರೂ ಆ ಹೆಣ್ಣು ಮಕ್ಕಳು ಐಸಿಸ್ ವಶದಲ್ಲಿದ್ದಾಗ ತಾವು ಅನುಭವಿಸಿದ ಕರಾಳ ಅನುಭವಗಳನ್ನು ಮರೆಯಲಾರದವರಾಗಿದ್ದಾರೆ. ಕಣ್ಣೆದುರೇ ಅಪ್ಪ ಅಮ್ಮ, ಗಂಡಂದಿರು, ಸಹೋದರರು, ಮಕ್ಕಳು ಹಾಗೂ ಸಂಬಂಧಿಕರ ಸಾವನ್ನು ಕಂಡಿದ್ದ ಅವರ ಮಾನಸಿಕ ಸ್ಥಿತಿಗತಿ ಹೇಗಿರಬಹುದು? 21 ನೇ ಶತಮಾನದ ಈ ಅಧುನಿಕ ಕಾಲದಲ್ಲೂ ಇಂಥಹ ಹತ್ಯಾಕಾಂಡ ಹಾಗೂ ಅನಾಚಾರ ನಮ್ಮ ಕಣ್ಣೆದುರೇ ನಡೆದಿದೆ. ಆದರೂ ಜಾಗತಿಕ ಮಾಧ್ಯಮಗಳು ಈ ಘಟನೆಯನ್ನು ವರದಿ ಮಾಡುವಲ್ಲಿ ಏಕೆ ನಿರ್ಲಕ್ಷ್ಯ ತೋರಿದರು ಎಂಬ ವಿಷಯ ಅರ್ಥವಾಗುವುದಿಲ್ಲ!
✍️ ಗಣೇಶ್ ಭಟ್ ವಾರಣಾಸಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.