ಬೆಳಗಾವಿ ವಿಭಾಗದ ಬಿಜೆಪಿ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ರವಿ (ರಾಜಶೇಖರ) ಹಿರೇಮಠ ಅವರು ಇನ್ನು ನೆನಪು ಮಾತ್ರ. ಚಿಕ್ಕೋಡಿ, ಬೆಳಗಾವಿ ಭಾಗದಲ್ಲಿ 1990 ರಿಂದ ತೊಡಗಿದಂತೆ ಸಮಾಜಮುಖಿ ಕಾರ್ಯಗಳು, ಬಿಜೆಪಿ ಪಕ್ಷ ಸಂಘಟನೆಗಾಗಿ ಇಡೀ ಬದುಕನ್ನು ಸವೆಸಿದ ನೈಜಾರ್ಥದ ನಾಯಕ ‘ರವಿ’ ಅಸ್ತಂಗತರಾಗಿರುವುದು (28 ನವೆಂಬರ್ 2020) ಅವರ ಕುಟುಂಬ ವರ್ಗ, ಸಹವರ್ತಿಗಳು, ಅಭಿಮಾನಿಗಳ ಪಾಲಿಗೆ ಅತೀವ ದುಃಖವನ್ನು ಉಂಟುಮಾಡಿದೆ ಎಂದರೆ ತಪ್ಪಾಗಲಾರದೇನೋ.
ಹುಕ್ಕೇರಿಯಿಂದ ಕುರಣಿಗೆ ಬಂದವರು ರವಿ. 1990 ರಲ್ಲೇ ಆರ್ಎಸ್ಎಸ್ ಜೊತೆಗೆ ನಿಕಟ ನಂಟು ಹೊಂದಿದ್ದವರು. ಇವರನ್ನು ಬಿಜೆಪಿಗೆ ಪರಿಚಯಿಸಿದ್ದು ಸಹ ಸಂಘವೇ. ಸಂಘದ ಶಾಖೆಗಳಲ್ಲಿ ಭಾಗವಹಿಸುವುದರ ಜೊತೆಗೆ ಐಟಿಸಿ (ಪ್ರಾಥಮಿಕ ಶಿಕ್ಷಾ ವರ್ಗ) ಸಹ ಪೂರೈಸಿದ್ದವರು. ಅವರು ಪ್ರಾಥಮಿಕ ಶಿಕ್ಷಾ ವರ್ಗದಲ್ಲಿ ಪ್ರಬಂಧ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ವಿಶೇಷವಾಗಿ ಆರೇಳು ವರ್ಗಗಳಲ್ಲಿ ಪಾಕ ಶಾಲೆಯ ಜವಾಬ್ದಾರಿಯನ್ನು ಹೊತ್ತುಕೊಂಡು ,ಅದನ್ನು ಯಾವುದೇ ಕುಂದಿಲ್ಲದಂತೆ ನಿರ್ವಹಿಸಿ, ಕೊಟ್ಟ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ಹೇಗೆ ತುದಿ ಮುಟ್ಟಿಸಬೇಕು ಎಂಬುದಕ್ಕೂ ಮೇಲ್ಪಂಕ್ತಿಯ ಉದಾಹರಣೆಯಾದವರು ಎನ್ನಬಹುದು. ಅದಾದ ಬಳಿಕ ಇವರ ಸಂಘಟನಾ ಚಾತುರ್ಯ, ಕಾರ್ಯ ವೈಖರಿಯನ್ನು ಗಮನಿಸಿದ ಸಂಘ ಇವರನ್ನು ಬಿಜೆಪಿ ಪಕ್ಷಕ್ಕೆ ಪರಿಚಯಿಸಿ, ಬೆಳೆಯುವಂತೆ ಮಾಡಿತು. 1991 ರಿಂದ ಬಿಜೆಪಿ ಪಕ್ಷದಲ್ಲಿ ಗ್ರಾಮೀಣ ಮಟ್ಟದಲ್ಲಿ ಪಕ್ಷ ಕಟ್ಟುವ ಜವಾಬ್ದಾರಿ ಹೊತ್ತುಕೊಂಡ ಇವರಿಗೆ ಪ್ರಸ್ತುತ ಬಿಜೆಪಿಯ ಬೆಳಗಾವಿ ವಿಭಾಗದ ಸಹ ಸಂಘಟನಾ ಕಾರ್ಯದರ್ಶಿ ಎಂಬ ಉನ್ನತ ಸ್ಥಾನ ನೀಡಿ, ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ವ್ಯಕ್ತಿಗೆ ನಿಜವಾದ ಗೌರವವನ್ನು ಸಲ್ಲಿಸಿತ್ತು. ವ್ಯಕ್ತಿ ಹೇಗಿರಬೇಕು, ಬದುಕುವ ಬಗೆ ಹೇಗೆ ಎಂಬುದಕ್ಕೆ ಮಾದರಿಯಂತಿರುವ ರವಿ ಹಿರೇಮಠ್ ಅವರ ಜೀವನ ಸಾಮಾನ್ಯರಿಂದ, ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡವರಿಗೂ ಪ್ರೇರಣೆಯಾಗಬಹುದು ಎಂಬುದು ನಿಸ್ಸಂಶಯ.
ಗುರುರಾಜ್ ಕುಲಕರ್ಣಿ ಅವರು ಇವರನ್ನು ಸಂಘಕ್ಕೆ ಪರಿಚಯಿಸಿದವರು. ತರುಣಾವಸ್ಥೆಯಲ್ಲಿ ಸಂಘಕ್ಕೆ ಬಂದು, ಸಂಘಟನೆಯ ಎಲ್ಲಾ ವಿಚಾರಗಳನ್ನು ಕಡಿಮೆ ಅವಧಿಯಲ್ಲೇ ಅರಿತು, ಅಳವಡಿಸಿ ಈಗಿರುವ ಕಾರ್ಯಕರ್ತರಿಗೂ ಸ್ಪೂರ್ತಿಯಾದವರು. ತಮ್ಮ ಡೆಡಿಕೇಶನ್ ಮೂಲಕವೇ ಇತರರಿಗೆ ಮಾದರಿ ನಾಯಕನಾದವರು. ಹೆಸರು, ಪ್ರಚಾರಕ್ಕೆ ಒತ್ತು ನೀಡದೇ ಸೇವೆಯೇ ಸರ್ವಸ್ವ ಎಂಬ ಉಕ್ತಿಯಂತೆ ಬದುಕಿ ತೋರಿಸಿದವರು. ಬಾಲ್ಯದಲ್ಲೇ ಸಂಘದ ಸ್ವಯಂಸೇವಕನಲ್ಲದೇ ಹೋದರೂ, ಸಂಘದ ಪರಿಚಯವಾದ ಬಳಿಕ ಸಂಘಟನೆಯನ್ನು ಹಚ್ಚಿಕೊಂಡು ಕಾರ್ಯ ನಿರ್ವಹಿಸಿ ಕಾರ್ಯಕರ್ತನೆಂದರೆ ಹೀಗಿರಬೇಕು ಎಂಬುದಕ್ಕೆ ಮೇಲ್ಪಂಕ್ತಿಯ ಉದಾಹರಣೆಯಾದವರು ರವಿ ಎಂದು ನೆನಪಿಸಿಕೊಳ್ಳುತ್ತಾರೆ ಗುರುರಾಜ್ ಕುಲಕರ್ಣಿ ಅವರು. ಅಂತಹ ಸೇವಾ ಮನೋಭಾವ ಅವರಲ್ಲಿತ್ತು ಎಂಬುದು ಹಿರಿಯರ ಅಭಿಪ್ರಾಯ.
ಸಾಮಾನ್ಯ ಕೃಷಿ ಕುಟುಂಬದಿಂದ ಬಂದವರು ರವಿ. ಎಲ್ಲರ ಬದುಕಿನಂತೆಯೇ ರವಿ ಅವರ ಬದುಕು ಸಹ ಸಿಹಿ-ಕಹಿಗಳ ಸಮ್ಮಿಲನ. ಇದ್ದುದರಲ್ಲಿ ಹೇಗೆ ಸಂತೋಷದಿಂದ ಬದುಕುವುದು ಎಂಬುದನ್ನು ತಿಳಿದವರು ಅವರು. ಜೊತೆಗೆ ಪಕ್ಷದ ಜವಾಬ್ದಾರಿಯನ್ನೂ ಹೆಗಲಿಗೇರಿಸಿಕೊಂಡಿದ್ದರಿಂದ ಜನರಿಗೆ ಉಪಯೋಗವಾಗುವಂತೆ ಅನೇಕ ಕೆಲಸಗಳನ್ನು ಮಾಡಿದವರು. ಇದ್ದರೆ ರವಿ ಅವರಂತಿರಬೇಕು ಎಂಬುದಾಗಿ ಬದುಕಿ ತೋರಿಸಿದವರು. ಪಕ್ಷದ ಯಾವುದೇ ಕೆಲಸಗಳಿಗೆ ಎಷ್ಟು ದೂರ ತೆರಳಿದರೂ ಕುಟುಂಬದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದವರು. ಅವರ ಇಂತಹ ಮೌಲ್ಯಯುತ ಜೀವನ ಕಂಡು ವಿಧಿಗೂ ಹೊಟ್ಟೆ ಕಿಚ್ಚಾಯಿತೇನೋ, ಕೊರೋನಾ ಸಂದರ್ಭದಲ್ಲಿ ಸಾವಿರಾರು ಜನರಿಗೆ ಸಹಾಯಹಸ್ತ ಚಾಚಿದ್ದ ನಾಯಕ ವಯಸ್ಸಲ್ಲದ ವಯಸ್ಸಿನಲ್ಲಿ ಉಸಿರು ನಿಲ್ಲಿಸಿದ್ದು ಮಾತ್ರ ದುರಂತ. ಕಳೆದುಕೊಂಡವರಿಗೆ ನೋವು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂಬುದಷ್ಟೇ ಎಲ್ಲರ ಆಶಯ.
ಇನ್ನು ಇವರು 1992 ರಲ್ಲಿ ರಾಮ ಜನ್ಮಭೂಮಿ ಗೆ ಸಂಬಂಧಿಸಿದಂತಹ ಅಭಿಯಾನದಲ್ಲಿ ಭಾಗವಹಿಸಿದ್ದರು. ಹಾಗೆಯೇ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲಿಗೂ ಹೋಗಿ ಬಂದವರು. ದೇಶ, ದೇಶಪ್ರೇಮವೆಂದರೆ ತಮ್ಮ ಜೀವ, ಜೀವನ ಎಂದು ಬದುಕಿದವರು ರವಿ. ದೇಶಪ್ರೇಮ ಹೊಂದಿರುವ ಯುವಕರನ್ನು ಗುರುತಿಸಿ ಅವರನ್ನು ಸಂಘ, ಸಂಘಟನೆಗೆ ಪರಿಚಯಿಸುವ ಕೆಲಸವನ್ನು ಸಹ ರವಿ ಅವರು ಮಾಡಿದ್ದಾರೆ. ಅವರು ಬಿತ್ತಿದ ದೇಶಪ್ರೇಮದ ಹಲವು ಬೀಜಗಳು, ಚಿಗುರಿ, ಗಿಡವಾಗಿ, ಮರವಾಗಿ ಇಂದು ಸಮಾಜಕ್ಕೆ ಫಲ ನೀಡುವಂತಾಗಿದೆ. ಅವರಿಂದಲೇ ಮುನ್ನೆಲೆಗೆ ಬಂದ ಹಲವರು ಇಂದು ಪಕ್ಷದ ಮುಖ್ಯ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತು, ಅಭಿವೃದ್ಧಿಯ ಆಶಯದ ಜೊತೆಗೆ ಸಾಗುತ್ತಿರುವುದೇ ಇದಕ್ಕೆ ಸಾಕ್ಷಿ ನುಡಿಯುತ್ತದೆ ಎಂಬುದು ಇವರ ನಿಕಟವರ್ತಿಗಳ ಅಭಿಪ್ರಾಯ. ಇನ್ನು ಪಕ್ಷದ ಎಲ್ಲಾ ರೀತಿಯ ಅಭಿಯಾನಗಳನ್ನು ಸಹ ಮುಂಚೂಣಿಯಲ್ಲಿ ಭಾಗವಹಿಸಿ ಗುರಿ ಮುಟ್ಟಿಸುವಲ್ಲಿಯೂ ರವಿ ಅವರ ಪಾತ್ರ ಅಪಾರ ಮತ್ತು ವರ್ಣನಾತೀತ. 1990 ರಿಂದ 2020 ರ ವರೆಗೆ ಸುಮಾರು ಮೂರು ತಲೆಮಾರಿನ ಜನರನ್ನು ಸಂಘಟಿಸಿ, ಬಿಜೆಪಿಯನ್ನು ಕಟ್ಟಿದ ರವಿ ಅವರದ್ದು ಅನುಸರಣಯೋಗ್ಯ ಬದುಕು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಅದೊಂದು ಮೋಟಾರ್ ಸೈಕಲ್. ಅದರಲ್ಲೇ ಕುಳಿತು ಪಕ್ಷದ ಸಂಘಟನೆಯ ಕೆಲಸ, ಸಂಘಟನಾತ್ಮಕ ಕೆಲಸಗಳನ್ನು ಮಾಡಿಕೊಂಡು ಬಂದವರು ರವಿ. ಬಲಗೈಯಲ್ಲಿ ಮಾಡಿದ ಕೆಲಸ ಎಡಗೈಗೂ ತಿಳಿಯಬಾರದು ಎಂಬಂತೆ, ತಾವು ಮಾಡಿದ ಸಮಾಜಮುಖಿ ಕೆಲಸಗಳನ್ನು ಎಲ್ಲಿಯೂ ಹೇಳಿಕೊಳ್ಳದವರು. ಕೆಲಸ ಯಾರು ಮಾಡಿದರು ಅಥವಾ ಯಾರು ಮಾಡಿಸಿದರು ಎಂಬುದು ಮುಖ್ಯವಲ್ಲ. ಬದಲಾಗಿ ಅಭಿವೃದ್ಧಿ ಆಗುವುದು ಮುಖ್ಯ. ಮಾಡಿದ ಕೆಲಸ ಸಕಾರಾತ್ಮಕವಾಗಿ ಸಮಾಜದ ಮೇಲೆ ಪರಿಣಾಮ ಬೀರುವುದು, ಸಮಾಜದ ಜನರ ಉಪಯೋಗಕ್ಕೆ ಬರುವುದು ಮಾತ್ರ ಮುಖ್ಯ ಎಂದು ನಂಬಿದ್ದವರು ಮತ್ತು ಅದರಂತೆಯೇ ನಿಶ್ಯಬ್ದವಾಗಿ ಕೆಲಸ ಮಾಡಿದವರು ರವಿ ಎಂಬ ಮಾತು ಅವರು ಹಾಕಿಕೊಟ್ಟ ಹಾದಿಯಲ್ಲಿ, ಅವರ ಆದರ್ಶಗಳ ದಾರಿಯಲ್ಲಿ ಹೆಜ್ಜೆ ಇಡುತ್ತಿರುವ ಹಲವರದ್ದು ಎಂದರೆ ನಂಬಲೇ ಬೇಕು.
ಪಕ್ಷ ಹೇಳಿದ ಎಲ್ಲಾ ಸಂಘಟನಾತ್ಮಕ ಕೆಲಸಗಳನ್ನು, ಪಕ್ಷದ ಎಲ್ಲಾ ಯೋಜನೆಗಳನ್ನು ಜನ ಸಾಮಾನ್ಯರಿಗೆ ತಲುಪಿಸುವಲ್ಲಿಯೂ ರವಿ ಅವರ ಕೊಡುಗೆ ಅಪಾರವಾದದ್ದು ಎಂದು ನೆನಪಿಸಿಕೊಳ್ಳುತ್ತಾರೆ ಅವರ ಒಡನಾಡಿ ಆರೆಸ್ಸೆಸ್ನ ಗಿರೀಶ್ ಅವರು. ಗ್ರಾಮ ಮಟ್ಟದಿಂದ ಆರಂಭಿಸಿದ ಇವರ ರಾಜಕೀಯ ಯಾನ, ತಾಲೂಕು, ಜಿಲ್ಲೆಗೆ ಸಂಬಂಧಿಸಿದಂತೆ ಮುಂದುವರಿದುಕೊಂಡು, ಬೆಳೆದುಕೊಂಡು ಬಂದ ಪರಿ ಅದ್ಭುತ ಎಂದೇ ಹೇಳಬಹುದು. ಯಾವುದೇ ರೀತಿಯ ಅಧಿಕಾರದ ಲಾಲಸೆ ಹೊಂದಿರದ ರವಿ ಅವರು, ಎಲೆ ಮರೆಯ ಕಾಯಿಯಂತೆಯೇ ಕಾರ್ಯ ನಿರ್ವಹಿಸಲು ಬಯಸುವವರು. ಮೊದಲೇ ಹೇಳಿದಂತೆ ಯಾರು ಮಾಡಿದರು ಎಂಬುದಕ್ಕಿಂತ ಅದರ ಸಂಪೂರ್ಣ ಉಪಯೋಗವನ್ನು ಜನರು ಪಡೆಯುವಂತಾಗಬೇಕು ಎಂಬ ಅಪೇಕ್ಷೆಯಷ್ಟೇ ರವಿ ಅವರಲ್ಲಿತ್ತು. ಅಷ್ಟು ನಿಷ್ಕಳಂಕ ವ್ಯಕ್ತಿತ್ವ ಅವರದ್ದು.
ಪ್ರಸ್ತುತ ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿದೆ. ಈ ಸಂದರ್ಭದಲ್ಲಿ ಎರಡೂ ಸರ್ಕಾರಗಳು ಜನಸಾಮಾನ್ಯರಿಗೆ ಪೂರಕವಾಗುವಂತೆ ಅನೇಕ ಜನಸ್ನೇಹಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಎಲ್ಲವನ್ನೂ ಯಾವುದೇ ಸ್ವ ಹಿತಾಸಕ್ತಿ ಇಲ್ಲದೆ ಅರ್ಹರಿಗೆ ತಲುಪಿಸುವ ಕೆಲಸದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಇದರ ಹೊರತಾಗಿ ಕೆಲ ವರ್ಷಗಳ ಹಿಂದೆ ಬಿಜೆಪಿ ಆಡಳಿತದಲ್ಲಿ ಇರದೇ ಹೋದಾಗಲೂ, ಸಾಮಾನ್ಯ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ರವಿ ಅವರು ಮುಂಚೂಣಿಯಲ್ಲಿರುತ್ತಿದ್ದರು. 1990 ರಿಂದ ಆರಂಭಗೊಂಡ ಪಕ್ಷದ ಜೊತೆಗಿನ ನಿಕಟ ಸಂಬಂಧ, ಸಂಪರ್ಕ, ಜಿಲ್ಲೆಯಲ್ಲಿ ಪಕ್ಷವನ್ನು ಜನರಿಗೆ ಆಪ್ತವಾಗಿಸುವ ನಿಟ್ಟಿನಲ್ಲಿ ರವಿ ಅವರು ಮಾಡಿದ ಕಾರ್ಯಗಳು ಸದಾ ಸ್ಮರಣೀಯ. ಜೊತೆಗೆ ಅವರ ಆದರ್ಶಗಳಿಂದ, ಅವರ ಜೀವನ ಕ್ರಮದಿಂದಲೇ ಪ್ರೇರಣೆ ಪಡೆದ ಹಲವು ಮಂದಿ ಇಂದು ಪಕ್ಷದಲ್ಲಿ ಉನ್ನತ ಸ್ಥಾನಮಾನ ಹೊಂದಿರುವುದು ಅವರು ಎಷ್ಟು ಪ್ರಾಬಲ್ಯ ಹೊಂದಿದ್ದರು ಎಂಬುದಕ್ಕೆ ಸಾಕ್ಷಿ.
ಇನ್ನು ಇವರು ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ. ಆದರೆ ಪಕ್ಷ ಇವರ ಸಂಘಟನಾತ್ಮಕ ಗುಣಗಳು, ಕಾರ್ಯ ವೈಖರಿ ಮತ್ತು ಜೀವನ ಕ್ರಮ, ಶ್ರಮ ಗಳನ್ನು ಗಮನಿಸಿ ಈ ವರೆಗಿನ ಎಲ್ಲಾ ಹುದ್ದೆಗಳನ್ನು ನೀಡಿದೆ ಎಂದರೆ ನಂಬಲೇ ಬೇಕು. ತಮ್ಮ ಸುತ್ತಮುತ್ತಲಲ್ಲಿ ಎಲ್ಲಾ ರೀತಿಯ ಜನರನ್ನು, ನಿಕಟವರ್ತಿಗಳನ್ನು ಹೊಂದಿದ್ದರೂ, ಅವರಲ್ಲಿ ಯಾರು ನಿಸ್ವಾರ್ಥ ಮನೋಭಾವದಿಂದ, ಯಾವುದೇ ಅಧಿಕಾರ, ಇನ್ನಿತರ ಆಸೆಯನ್ನು ಹೊಂದಿರದೆ ಸಂಘಟನೆಗೆ ಬಂದವರು, ಸಮಾಜಮುಖಿಯಾಗಿ ತೊಡಗಿಸಿಕೊಂಡವರು ಎಂಬುದನ್ನು ಗಮನಿಸುವ, ಗುರುತಿಸುವ ಅದ್ಭುತ ಶಕ್ತಿಯನ್ನು ರವಿ ಅವರು ಹೊಂದಿದ್ದರು. ಹಾಗೆಯೇ ಅಂತಹವರನ್ನು ಪಕ್ಷದ ಮುಖ್ಯ ನೆಲೆಗೆ ತರುವಲ್ಲಿ ,ಸಂಘಟನಾತ್ಮಕ ಜವಾಬ್ದಾರಿಗಳನ್ನು ವಹಿಸುವಲ್ಲಿಯೂ ಕೆಲಸ ಮಾಡಿದವರು.
ಅಧ್ಯಯನಶೀಲ ಮನಸ್ಸು ಹೊಂದಿದ್ದ ರವಿ ಅವರು ಹೆಚ್ಚು ಓದುತ್ತಿದ್ದರು ಎಂದು ಅವರ ಆಪ್ತ ವಲಯ ಹೇಳುತ್ತದೆ. ಒಂದು ದೇಶ ಅಥವಾ ಸಮಾಜದ ಅಭಿವೃದ್ಧಿಯಲ್ಲಿ ಶಿಕ್ಷಣ ಮಹತ್ವದ ಪಾತ್ರ ವಹಿಸುತ್ತದೆ. ಇದನ್ನು ಅರಿತಿದ್ದವರು ರವಿ. ಅವರು ಸಂಕೇಶ್ವರದಲ್ಲಿ ‘ಪಂಚಾಚಾರ್ಯ’ ಎಂಬ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ ಅಲ್ಲಿ ಎಲ್ಕೆಜಿ ಯಿಂದ ಹತ್ತನೇ ತರಗತಿಯ ವರೆಗಿನ ಶಿಕ್ಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಹಾಗೆಯೇ ಸಂಕೇಶ್ವರದಲ್ಲಿಯೇ ಪಂಚಾಚಾರ್ಯ ಎಂಬ ಸಹಕಾರಿ ಸೊಸೈಟಿ ಯನ್ನು ಸಹ ಸ್ಥಾಪಿಸಿದ ಕೀರ್ತಿ ಇವರದ್ದು. ಇನ್ನು ತಮ್ಮ ಜಿಲ್ಲೆಯಲ್ಲಿ ಪ್ರವಾಹ ಬಂದಾಗ, ಸಂತ್ರಸ್ತರಾದವರಿಗೆ ತಕ್ಷಣದ ಪರಿಹಾರ ಕಾರ್ಯಗಳನ್ನು ಒದಗಿಸುವಲ್ಲಿಯೂ ಇವರ ಶ್ರಮ ಅಪಾರ. ಮನೆ ಮಠ ಕಳೆದುಕೊಂಡವರಿಗೆ ವಸತಿ ಕೇಂದ್ರಗಳನ್ನು ಒದಗಿಸುವ, ಅವರಿಗೆ ಆಹಾರಕ್ಕೆ ಅಗತ್ಯ ವ್ಯವಸ್ಥೆ ಕಲ್ಪಿಸುವುದು ಜೊತೆಗೆ ಪ್ರವಾಹದ ಬಳಿಕ ಅವರಿಗೆ ಮನೆ ನಿರ್ಮಿಸಲು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಒದಗಿಸಿ ಕೊಡುವುದು ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಯಾವುದೇ ಬೇಧವಿಲ್ಲದೆ ಒದಗಿಸಿಕೊಡುವ, ಸರ್ಕಾರದಿಂದ ತಲುಪಿಸಿಕೊಡುವಲ್ಲಿ ಶ್ರಮಿಸಿದವರು. ಇಂತಹ ಸಮಾಜಮುಖಿ ಕೆಲಸಗಳ ಮೂಲಕವೇ ಎಲ್ಲಾ ಜಾತಿ, ವರ್ಗಗಳ, ಬಡವ, ಶ್ರೀಮಂತ ಎಂಬ ಭೇದವಿಲ್ಲದೆ ಎಲ್ಲಾ ರೀತಿಯ ಜನರ ಸ್ನೇಹ ಸಂಪಾದಿಸಿದವರು. ಇಡೀ ಊರಿಗೆ ಬೇಕಾದವರಾಗಿದ್ದವರು. ಯಾರೇ ಕಷ್ಟ ಹೇಳಿಕೊಂಡು ಬಂದಾಗಲೂ ತಮ್ಮ ಕೈಲಾದ, ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ಅಗತ್ಯತೆಗಳನ್ನು ಸಿಗುವಂತೆ ಮಾಡುವಲ್ಲಿ ಒಂದು ಶಕ್ತಿಯಾಗಿ ಕೆಲಸ ಮಾಡುವ ಮೂಲಕವೇ ಮನೆಮಾತಾಗಿದ್ದ ಸಹೃದಯ ವ್ಯಕ್ತಿ ಎಂದರೆ ತಪ್ಪಾಗಲಾರದೇನೋ. ಜೊತೆಗೆ ಹಿಂದೂ ಸಂಸ್ಕೃತಿ, ಪದ್ಧತಿಗಳಿಗೂ ಅವರು ಅಪಾರ ಗೌರವ ನೀಡುತ್ತಿದ್ದವರು.
ಕೊರೋನಾ ಸಂಕಷ್ಟದ ಅವಧಿಯಲ್ಲಿ ಜನಜಾಗೃತಿ ಮೂಡಿಸುವಲ್ಲಿಯೂ ಶ್ರೀಯುತರು ಅನೇಕ ಕೆಲಸಗಳನ್ನು ಮಾಡಿದ್ದಾರೆ. ತಾವು ಮತ್ತು ತಮ್ಮ ಪತ್ನಿ ಮನೆಯಲ್ಲಿಯೇ ಫೇಸ್ಮಾಸ್ಕ್ ಗಳನ್ನು ತಯಾರಿಸಿ ಅಗತ್ಯವುಳ್ಳವರಿಗೆ ನೀಡುವ, ಅದನ್ನು ಹಂಚುವ ಮೂಲಕವೂ ಮಾದರಿಯಾದವರು ರವಿ. ಜೊತೆಗೆ ಕೊರೋನಾ ಸಂಕಷ್ಟದ ಅವಧಿಯಲ್ಲಿ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದ ಅನೇಕ ಜನರಿಗೆ ನೆರವಾಗುವ ಮೂಲಕ ಮಾದರಿಯಾಗಿದ್ದವರು. ಅನಾರೋಗ್ಯಕ್ಕೆ ತುತ್ತಾಗಿ ಕಳೆದ ಒಂದೂವರೆ ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ವಿಧಿ ಬಾರದೂರಿಗೆ ಕರೆದುಕೊಂಡು ತೆರಳಿದೆ.
ಇವರ ನಿಕಟವರ್ತಿ, ಇವರ ಆದರ್ಶದ ಜೊತೆಗೇ ಪಕ್ಷದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ ರಾಜೇಶ್ ನೀರ್ಳಿ ಅವರ ಪ್ರಕಾರ, ಸರಳತೆ, ಸಜ್ಜನಿಕೆಗೆ ಹೆಸರಾಗಿದ್ದ ವ್ಯಕ್ತಿ ಇಂದು ನಮ್ಮೊಂದಿಗಿಲ್ಲ ಎಂಬುದನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ಕಠಿಣ ಪರಿಸ್ಥಿತಿಯನ್ನು ಅರಗಿಸಿಕೊಳ್ಳುವುದೇ ಒಂದು ಸವಾಲು. ರವಿ ಅವರು ಇನ್ನಷ್ಟು ಬದುಕಬೇಕಿತ್ತು. ಇನ್ನಷ್ಟು ಸಾಧನೆಗಳನ್ನು ಅವರು ಮಾಡಬೇಕಾಗಿತ್ತು. ಹಾಗೆಯೇ ಅವರು ಸಮಾಜಕ್ಕಾಗಿ, ಸಮಾಜದ ಜನರಿಗಾಗಿ ಮತ್ತಷ್ಟು ಕೊಡುಗೆಗಳನ್ನು ನೀಡುವುದಿತ್ತು. ಜಿಲ್ಲೆಯಲ್ಲಿ ಪಕ್ಷ ಬಲಿಷ್ಠವಾಗಿದೆ ಎಂದರೆ ಅದರ ಹಿಂದಿನ ಶಕ್ತಿಯಾಗಿದ್ದವರು ರವಿ ಅವರು. ಅವರಿಂದಾಗಿ ಅದೆಷ್ಟೋ ಜನರು ಮುನ್ನೆಲೆಗೆ ಬಂದು, ಪಕ್ಷದಲ್ಲಿ ಗುರುತಿಸಿಕೊಳ್ಳುವಂತಾಗಿದೆ. ಅವರ ಆದರ್ಶಗಳ ಜೊತೆಗೆ, ಅವರು ಹಾಕಿ ಕೊಟ್ಟ ಹಾದಿಯಲ್ಲಿ ನಡೆಯುವವರಲ್ಲಿ ನಾನು ಒಬ್ಬ. ರವಿ ಅವರು ನಮಗೆಲ್ಲಾ ಹಿರಿಯಣ್ಣನಂತಿದ್ದರು. ಅವರಲ್ಲಿ ಎಲ್ಲರನ್ನೂ ಒಳಗೊಂಡು ಸಾಗುವ ಒಂದು ಗುಣವಿತ್ತು. ಈ ಗುಣವೇ ಅವರನ್ನು ಓರ್ವ ಸಂಘಟನಾ ಚತುರ ವ್ಯಕ್ತಿ ಶಕ್ತಿಯನ್ನಾಗಿ ರೂಪಿಸಿತ್ತು. ಅವರಿಗೆ ಪಕ್ಷದ ಉನ್ನತ ನಾಯಕರಿಂದ ಹಿಡಿದು, ಸಾಮಾನ್ಯ ಕಾರ್ಯಕರ್ತರ ಜೊತೆಗೂ ಉತ್ತಮ ಬಾಂಧವ್ಯ ಇತ್ತು. ಈ ಬಾಂಧವ್ಯವೇ ಅವರನ್ನು ಇಷ್ಟು ಎತ್ತರಕ್ಕೆ ಏರಿಸಿದೆ. ಅವರನ್ನು ಕಳೆದುಕೊಂಡಿರುವುದು ಪಕ್ಷ ಮತ್ತು ಸಮಾಜಕ್ಕೆ, ಅವರ ಕುಟುಂಬ ವರ್ಗಕ್ಕೆ, ಆಪ್ತ ವಲಯಕ್ಕೆ ತುಂಬಲಾರದ ನಷ್ಟವೇ ಸರಿ ಎಂದು ಭಾವುಕರಾಗಿ ನುಡಿಯುತ್ತಾರೆ. ಇಷ್ಟು ಸಾಕಲ್ಲವೇ ರವಿ ಅವರು ಸಮಾಜಕ್ಕೆ, ಪಕ್ಷಕ್ಕೆ ಎಷ್ಟು ಬೇಕಾದವರು ಎಂಬುದನ್ನು ಅರಿತುಕೊಳ್ಳಲು.
ಇಂದಿರುವ ಮನುಷ್ಯ, ನಾಳೆ ನಮ್ಮ ಜೊತೆಗೆ ಇರುತ್ತಾನೆ ಎಂಬುದೂ ನಂಬಿಕೆಗೆ ಅರ್ಹವಾದ ಮಾತಲ್ಲ. ಹೋದವರು ಹೋದರು, ಆದರೆ ಆ ಅಗಲುವಿಕೆಯ ನೋವಿಂದ ಅವರು ಸಂಪಾದಿಸಿದ ಜನರು ಅನುಭವಿಸುವ ನೋವಿದೆಯಲ್ಲಾ ಅದು ಹೇಳಲಸಾಧ್ಯ. ಆ ನೋವನ್ನು ಅನುಭವಿಸಿದವರಷ್ಟೇ ಬಲ್ಲರು. ನಾವು ಇಹಲೋಕ ತ್ಯಜಿಸಿದ ಬಳಿಕವು ನಾಲ್ಕು ಮಂದಿ ಕಣ್ಣಲ್ಲಿ ನೀರು ತುಂಬಿ ‘ಇವರಿರಬೇಕಿತ್ತು’ ಎಂದು ಹೇಳುವುದಿದೆಯಲ್ಲಾ ಅದು ಇನ್ನಿಲ್ಲವಾದ ವ್ಯಕ್ತಿಯ ಜೀವನ ಎಷ್ಟು ಅರ್ಥಪೂರ್ಣವಾಗಿತ್ತು ಎಂಬುದರ ಸಂಪೂರ್ಣ ಚಿತ್ರಣವನ್ನು ನಮ್ಮ ಮುಂದಿಡುತ್ತದೆ. ಓರ್ವ ಸಾಮಾನ್ಯ ವ್ಯಕ್ತಿ ನಾಯಕನಾಗಿ ಹೇಗೆ ಬೆಳೆಯಬಹುದು ಎಂಬುದನ್ನು ತೋರಿಸಿಕೊಟ್ಟವರು ರವಿ ಹಿರೇಮಠ್ ಅವರು.
ಬದುಕುವುದು ಎಲ್ಲರೂ ಬದುಕುತ್ತಾರೆ. ಆದರೆ ಎಲ್ಲರಿಂದಲೂ ಒಪ್ಪಿತವಾದ ಸಾರ್ಥಕ ಬದುಕು ಬಾಳಬೇಕಾದರೆ ಸುಲಭದ ಮಾತಲ್ಲ. ಅಂತಹ ಅರ್ಥಪೂರ್ಣ ಜೀವನ, ಆದರ್ಶಗಳ ಜೊತೆಗೆ ಬದುಕಿದ್ದಾರೆ ರವಿ. ತಮ್ಮ ಆದರ್ಶಗಳನ್ನು ಜನರ ಮುಂದಿಟ್ಟು ರವಿ ಅಸ್ತಂಗತರಾಗಿದ್ದಾರೆ. ಅವರಿಲ್ಲದಿದ್ದರೂ ಅವರ ಸಮಾಜಮುಖಿ ಆಶಯಗಳು ನಮ್ಮ ಮುಂದೆ ಜೀವಂತ. ಉಸಿರು ಹೋದ ಮೇಲೂ ರವಿ ಅವರ ಹೆಸರು ಚಿರಸ್ಥಾಯಿ ಎಂಬುದಕ್ಕೆ ಅವರಿಂದ ಸಂಘಟನೆಯತ್ತ, ಪಕ್ಷದತ್ತ ಮುಖ ಮಾಡಿದ ಅವರ ಅನುಯಾಯಿಗಳೇ ಸಾಕ್ಷಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.