ಮನುಷ್ಯನ ವ್ಯಕ್ತಿತ್ವಕ್ಕೆ ತೂಕ ತಂದುಕೊಡುವ ಕೆಲಸವನ್ನು ಇಸ್ತ್ರಿ ಹಾಕಿದ ಬಟ್ಟೆಗಳು ಮಾಡುತ್ತವೆ ಎಂಬುದು ಸುಳ್ಳಲ್ಲ. ಮನುಷ್ಯನ ಗಾಂಭೀರ್ಯಕ್ಕೆ ಕಳೆ ತಂದು ಕೊಡುವ ವಿಚಾರದಲ್ಲಿ ಬಟ್ಟೆಗಳು ಸಹ ಪ್ರಮುಖ ಪಾತ್ರ ವಹಿಸುತ್ತದೆ. ನಾವೆಲ್ಲರೂ ವಿದ್ಯುತ್ ಸಹಾಯದಿಂದ ಕಾರ್ಯ ನಿರ್ವಹಿಸುವ, ಇದ್ದಿಲಿನ ಸಹಾಯದಿಂದ ಕಾರ್ಯ ನಿರ್ವಹಿಸುವ ಇಸ್ತ್ರಿ ಪೆಟ್ಟಿಗೆಗಳ ಬಗ್ಗೆ ಕೇಳಿದ್ದೇವೆ. ಆದರೆ ಇದೀಗ ತಮಿಳುನಾಡಿನ 14 ವರ್ಷದ ಹುಡುಗಿ ಸೌರ ಚಾಲಿತ ಇಸ್ತ್ರಿ ಪೆಟ್ಟಿಗೆ ತಯಾರಿಸಿ ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದಾರೆ. ಜೊತೆಗೆ ತಮ್ಮ ಈ ಸಾಧನೆಗೆ ಪ್ರತಿಷ್ಠಿತ ‘ಚಿಲ್ಡ್ರನ್ಸ್ ಕ್ಲೈಮೇಟ್ ಪ್ರಶಸ್ತಿ’ ಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಅವರ ಹೆಸರು ವಿನಿಶಾ ಉಮಾಶಂಕರ್. 14 ವರ್ಷದ ಬಾಲಕಿ. ಇವರು ತಿರುವಣ್ಣಾಮಲೈನ ಖಾಸಗಿ ಶಾಲೆಯೊಂದರ 9 ನೇ ತರಗತಿಯ ವಿದ್ಯಾರ್ಥಿನಿ. ಇವರು ಸಾಂಪ್ರದಾಯಿಕ ಇದ್ದಿಲಿನ ಇಸ್ತ್ರಿ ಪೆಟ್ಟಿಗೆ, ವಿದ್ಯುತ್ ಐರನ್ ಬಾಕ್ಸ್ ಗಳಂತೆಯೇ, ಸೌರ ಶಕ್ತಿಯನ್ನು ಬಳಸಿ ಬಟ್ಟೆಗಳಿಗೆ ಇಸ್ತ್ರಿ ಮಾಡಲು ಪೂರಕವಾಗುವಂತೆ ಇಸ್ತ್ರಿ ಪೆಟ್ಟಿಗೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಇದನ್ನು ಎಲ್ಲೆಂದರಲ್ಲಿ ಸುಲಭವಾಗಿ ಬಳಕೆ ಮಾಡಬಹುದಾಗಿದೆ ಮತ್ತು ವಿದ್ಯುತ್, ಇದ್ದಿಲಿನ ಸಹಾಯವಿಲ್ಲದೆ ಸೂರ್ಯನ ಸಹಾಯದಿಂದಲೇ ಇದರ ಬಳಕೆ ಸಾಧ್ಯ ಎಂದು ವಿನಿಶಾ ಅಭಿಪ್ರಾಯ ಪಡುತ್ತಾರೆ.
ಇವರು ಸೌರ ಫಲಕಗಳನ್ನು ಬಳಸಿ ಮೊಬೈಲ್ ಇಸ್ತ್ರಿ ಕಾರ್ಟ್ ಗಳನ್ನು ಆರಂಭಿಸಿದ್ಧಾರೆ. ಇವರ ಈ ಆವಿಷ್ಕಾರ ಅನೇಕ ಜನರ ಸ್ವ ಉದ್ಯೋಗದ ಕಲ್ಪನೆಗೆ ಮತ್ತಷ್ಟು ಬಲ ನೀಡಿದಂತಾಗಿದೆ. ಜೊತೆಗೆ ಪರಿಸರ, ನೀರು, ವಾಯು ಮಾಲಿನ್ಯ ತಡೆಯುವ ದೃಷ್ಟಿಯಿಂದಲೂ ಸಹ ಇವರ ಈ ಆವಿಷ್ಕಾರ ಅತ್ಯಂತ ಮಹತ್ವ ಪಡೆದಿದೆ. ಇವರ ಈ ಪ್ರಾಜೆಕ್ಟ್ಗೆ ಪದಕ, 8.6 ಲಕ್ಷ ರೂ.ಗಳ ಬಹುಮಾನ ಬಂದಿದೆ. ಇದನ್ನು ಸ್ವೀಡನ್ನ ಮಕ್ಕಳ ಹವಾಮಾನ ಪ್ರತಿಷ್ಠಾನ ನೀಡುತ್ತಿದೆ. ಇದು ಮಕ್ಕಳ ಹವಾಮಾನ ಪ್ರಶಸ್ತಿಯ ಐದನೇ ಆವೃತ್ತಿಯ ಭಾಗವಾಗಿದೆ. ಇದು ವಿಶ್ವದ ಟ್ರೆಲ್ಬ್ಲೇಜರ್ಗಳಿಗೆ ನೀಡುವ ಅತಿ ದೊಡ್ಡ ಅಂತರರಾಷ್ಟ್ರೀಯ ಹವಾಮಾನ ಪ್ರಶಸ್ತಿಗಳಲ್ಲಿ ಒಂದಾಗಿದೆ.
ಈ ಸಂಬಂಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ವಿನಿಶಾ, ನಮ್ಮ ಬೀದಿಯಲ್ಲಿಯೂ ಐರನ್ ಅಂಗಡಿಗಳಿವೆ. ಅವರು ಐರನ್ ಮಾಡಲು ಬಳಸಿದ ಇದ್ದಿಲುಗಳು ತಣಿಯಲು ರಸ್ತೆಯ ಮೇಲೆ ಹಾಕುತ್ತಾರೆ. ಅವುಗಳು ತಣಿದ ಮೇಲೆ ಅವುಗಳನ್ನು ಕಸದ ಜೊತೆಗೆ ಎಸೆಯಲಾಗುತ್ತದೆ. ಇದರಿಂದಾಗಿ ಪ್ರಕೃತಿಯ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ನಾನು ಚಿಂತಿಸಿದ್ದೇನೆ. ಹಾಗೆಯೇ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳಲು ಸಾಧ್ಯ ಎಂಬುದರ ಬಗೆಗೂ ಸಂಶೋಧನೆ ಮಾಡಲಾಗಿದೆ. ಆಗ ಸೌರ ಶಕ್ತಿ ಬಳಸಿ ಇಸ್ತ್ರಿ ಮಾಡುವ ವಿಧಾನದ ಬಗ್ಗೆ ಚಿಂತನೆ ನಡೆಸಿ ಅದನ್ನು ಆವಿಷ್ಕಾರ ಮಾಡಿದ್ದೇನೆ. ಸೌರ ಚಾಲಿತ ಮೊಬೈಲ್ ಐರನ್ ಬಾಕ್ಸ್ಗಳ ಬಳಕೆಯಿಂದ ಪರಿಸರ ,ಗಾಳಿ, ನೀರಿನ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಆಗುವುದಿಲ್ಲ ಎಂಬುದು ವಿನಿಶಾ ತಿಳಿಸಿದ್ದಾರೆ.
ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಸುಮಾರು 10 ಮಿಲಿಯನ್ ಐರನ್ ಅಂಗಡಿಗಳಿರಬಹುದು. ಪ್ರತಿಯೊಂದು ಅಂಗಡಿಗಳು ದಿನಕ್ಕೆ 5 ಕೆಜಿ ಗಳಷ್ಟು ಇದ್ದಿಲು ಸುಡುತ್ತವೆ. ಇದು ಪರಿಸರಕ್ಕೆ ಹೆಚ್ಚಿನ ಮಟ್ಟದಲ್ಲಿ ಹಾನಿಯನ್ನು ಉಂಟುಮಾಡುತ್ತದೆ. ಈ ಹಿನ್ನೆಲೆಯಲ್ಲಿ ಮನೆಯ ಮೇಲ್ಛಾವಣಿಗಳ ಮೇಲೆ ಸೌರ ಫಲಕಗಳನ್ನು ಸ್ಥಾಪಿಸಿ ಮೊಬೈಲ್ ಇಸ್ತ್ರಿ ಕಾರ್ಟ್ಗಳನ್ನು ವಿನಿಶಾ ರೂಪಿಸಿದ್ದಾರೆ. ಇದು ಬ್ಯಾಟರಿ ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದನ್ನು 5 ಗಂಟೆಗಳ ಕಾಲ ಚಾರ್ಜ್ ಮಾಡುವ ಮೂಲಕ ಬಳಕೆ ಮಾಡಬಹುದಾಗಿದೆ ಎಂದು ವಿನಿಶಾ ತಿಳಿಸಿದ್ದಾರೆ.
ಇನ್ನು ವಿನಿಶಾ ಅವರು ಮಾಡಿರುವ ಈ ಉತ್ತಮ ಸಾಧನೆಯ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರೂ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ವಿನಿಶಾ ತಮ್ಮ ಆವಿಷ್ಕಾರದ ಪೇಟೆಂಟ್ಗಳಿಗಾಗಿ ಕಾಯುತ್ತಿದ್ದಾರೆ. ಹಾಗೆಯೇ ಈ ಆವಿಷ್ಕಾರಕ್ಕೆ ವಿನಿಶಾ ತೆಗೆದುಕೊಂಡ ಸಮಯ 2 ತಿಂಗಳು.
ಸಾಧಿಸುವ ಹಠ ಇದ್ದವರಿಗೆ ಸಾಧನೆಗೆ ಸಾವಿರ ದಾರಿಗಳು ಗೋಚರವಾಗುತ್ತವೆ. ಇದಕ್ಕೆ ಸಾಕ್ಷಿ 14 ವರ್ಷದ ವಿನಿಶಾ. ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತಂದು, ಪರಿಸರ ಹಾನಿ ತಡೆಯುವ ನಿಟ್ಟಿನಲ್ಲಿ ಅವರ ಸೋಲಾರ್ ಮೊಬೈಲ್ ಐರನ್ ಕಾರ್ಟ್ ನಿಜಕ್ಕೂ ಮಾದರಿಯೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.