ಮೈಸೂರು: ದೇಶದ ಹಲವು ರಾಜ್ಯಗಳಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡಲಾಗಿದೆ. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಇಂತಹ ಒಂದು ನಿರ್ಧಾರವನ್ನು ಹಲವು ರಾಜ್ಯ ಸರ್ಕಾರಗಳು ತೆಗೆದುಕೊಂಡಿವೆ. ಕರ್ನಾಟಕದಲ್ಲಿಯೂ ಹಸಿರು ಪಟಾಕಿ ಹೊರತಾಗಿ ಇನ್ಯಾವುದೇ ಪಟಾಕಿಗಳನ್ನು ಸಿಡಿಸುವಂತಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಹಿಂದೆಯೇ ಆದೇಶ ಹೊರಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಮೈಸೂರಿನ ಚಾಕೋಲೇಟ್ ತಯಾರಿಕಾ ಸಂಸ್ಥೆ ‘The Cocoa Works’ ಚಾಕೋಲೇಟ್ಗಳನ್ನು ಪಟಾಕಿಗಳ ರೂಪದಲ್ಲಿ, ವಿನ್ಯಾಸದಲ್ಲಿ ತಯಾರಿಸುವ ಮೂಲಕ ಗ್ರಾಹಕರನ್ನು ಸೆಳೆಯುವ ವಿನೂತನ ಪ್ರಯತ್ನವೊಂದಕ್ಕೆ ಕೈ ಹಾಕಿದೆ. ಸಂಸ್ಥೆಯ ಈ ಪ್ರಯತ್ನಕ್ಕೆ ಫಿದಾ ಆಗಿರುವ ಗ್ರಾಹಕರು ಸಹ ಈ ಎಡಿಬಲ್ ಚಾಕೋಲೇಟ್ಗಳನ್ನು ಕೊಳ್ಳಲು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ ಎಂದು ಸಂಸ್ಥೆಯ ಮೂಲಗಳು ಖಾಸಗಿ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಈ ಪಟಾಕಿ ರೂಪದ ಚಾಕೋಲೇಟ್ಗಳನ್ನು ಕೊಳ್ಳಲು ಜನರಿಂದ ಬೇಡಿಕೆಯೂ ಹೆಚ್ಚಾಗಿದೆ ಎಂದು ಸಂಸ್ಥೆ ಹೇಳಿದೆ. ಈ ಚಾಕೋಲೇಟ್ಗಳನ್ನು ರಾಕೆಟ್, ಲಕ್ಷ್ಮೀ ಪಟಾಕಿ, ಫ್ಲವರ್ ಪಾಟ್ಸ್, ಮಾಲೆ ಪಟಾಕಿ, ಬಾಂಬ್ ಮೊದಲಾದವುಗಳನ್ನೊಳಗೊಂಡಂತೆ ಇನ್ನೂ ತರಹೇವಾರಿ ಪಟಾಕಿಗಳ ಆಕರ್ಷಕ ರೂಪದಲ್ಲಿ ಸಿದ್ಧಪಡಿಸಲಾಗಿದೆ. ಬಳಿಕ ಇದನ್ನು ಒಪ್ಪ ಓರಣವಾಗಿ ಪಟಾಕಿ ಬಾಕ್ಸ್ ಗಳಂತೆಯೇ ಪೊಟ್ಟಣಗಳಲ್ಲಿ ಪ್ಯಾಕ್ ಮಾಡಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನೂ ಸಂಸ್ಥೆ ಮಾಡುತ್ತಿದೆ.
ಈ ಪಟಾಕಿ ಚಾಕೋಲೇಟ್ ಬಾಕ್ಸ್ಗಳ ಬೆಲೆಯೂ ಜನರ ಕೈಗೆಟಕುವಂತಿದೆ. ಬಾಕ್ಸ್ ಒಂದಕ್ಕೆ 200-250 ರೂ. ಗಳಿಗೆ ಇದನ್ನು ನೀಡಲಾಗುತ್ತಿದೆ. ಈ ಪಟಾಕಿ ಚಾಕೋಲೇಟ್ಗಳನ್ನು ಕೇವಲ ಮೈಸೂರಿನಲ್ಲಿ ಮಾತ್ರವಲ್ಲದೆ, ಬೆಂಗಳೂರಿನ ಗ್ರಾಹಕರ ಕೈಗೆ ತಲುಪಿಸುವ ಕೆಲಸವನ್ನೂ ಸಂಸ್ಥೆ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.