ನಿನ್ನೆ ಬೆಳಗ್ಗೆ ರಿಪಬ್ಲಿಕ್ ವಾಹಿನಿಯ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತರಾದ ಅರ್ನಬ್ ಗೋಸ್ವಾಮಿ ಅವರನ್ನು ಅವರ ನಿವಾಸದಿಂದ ಮುಂಬೈ ಪೊಲೀಸರು ಬಂಧಿಸಿದ ಪ್ರಕರಣ ಎಲ್ಲರಿಗೂ ಗೊತ್ತೇ ಇದೆ. ಅವರನ್ನು ಪೊಲೀಸರು ನಡೆಸಿದ ರೀತಿ ನಿಜಕ್ಕೂ ಪ್ರಜಾಪ್ರಭುತ್ವ ತಲೆ ತಗ್ಗಿಸುವಂತದ್ದು. ಅವರ ನಿವಾಸಕ್ಕೆ ನುಗ್ಗಿ ಅವರೊಂದಿಗಿದ್ದ ಅವರ ಅತ್ತೆ, ಮಾವ, ಪತ್ನಿ ಹಾಗೂ ಅವರ ಪುತ್ರನ ಮೇಲೂ ಮುಂಬೈ ಪೊಲೀಸರು ದೈಹಿಕ ಹಲ್ಲೆಯನ್ನೂ ನಡೆಸಿದ್ದಾರೆ. ಅರ್ನಬ್ ಗೋಸ್ವಾಮಿಯವರ ನಿವಾಸಕ್ಕೆ ಪ್ರವೇಶಿಸಿದ ಪೊಲೀಸರು ಅರ್ನಬ್ ಮತ್ತವರ ಕುಟುಂಬಸ್ಥರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ ಘಟನೆಯ ವಿಡಿಯೋವನ್ನೂ ರಿಪಬ್ಲಿಕ್ ವಾಹಿನಿಯು ಪ್ರಸಾರ ನಡೆಸಿದೆ. ಮುಂಬೈ ಪೊಲೀಸ್ ನ ಎನ್ಕೌಂಟರ್ ಸ್ಪೆಷ್ಯಾಲಿಸ್ಟ್ ಎಪಿಐ ಸಚಿನ್ ವಾಝೆ ಅವರು ಅರ್ನಬ್ ಅವರ ಬಂಧನದ ಸುದ್ದಿಯನ್ನು ಖಚಿತಪಡಿಸಿದ್ದು, ಎರಡು ವರ್ಷಗಳಿಗೆ ಮುನ್ನ ಪೊಲೀಸರೇ ಮುಚ್ಚಿದ್ದ ಕಡತದ ಪ್ರಕರಣವೊಂದರ ಅಡಿಯಲ್ಲಿ ಅವರನ್ನು ಬಂಧಿಸಲಾಗಿದ್ದು, ರಿಪಬ್ಲಿಕ್ ಟಿವಿ ವಾಹಿನಿಯು ಒಳಪಟ್ಟಿರುವ ಟಿಆರ್ ಪಿ ಪ್ರಕರಣಕ್ಕೂ ಬಂಧನಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಪೊಲೀಸರು ವಶಕ್ಕೆ ಪಡೆದ ಅರ್ನಬ್ ಅವರನ್ನು ರಾಯ್ ಘಡ್ನ ಜೈಲಿನಲ್ಲಿ ಇರಿಸಲಾಗಿತ್ತು, ಬಳಿಕ ನ್ಯಾಯಾಂಗ ಬಂಧನಕ್ಕೆ ಒದಗಿಸಲಾಗಿದೆ.
ಅರ್ನಬ್ ಗೋಸ್ವಾಮಿಯನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ಕೋರಿ ಮುಂಬೈ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಅಲಿಬಾಗ್ ನ್ಯಾಯಾಲಯ ತಿರಸ್ಕರಿಸಿದೆ, ನ್ಯಾಯಾಂಗ ಕಸ್ಟಡಿ ನೀಡಿದೆ ಮತ್ತು ಜಾಮೀನು ಪತ್ರಗಳನ್ನು ಸಿದ್ಧವಾಗಿಡುವಂತೆ ತಿಳಿಸಿದೆ. ಮಧ್ಯರಾತ್ರಿಯವರೆಗೆ ನಡೆದ ವಿಚಾರಣೆಯ ನಂತರ, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಕಸ್ಟಡಿಯನ್ನು ನೀಡಿತು, ಅಂದರೆ ಮುಂಬೈ ಪೊಲೀಸರು ಅರ್ನಬ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಾಗುವುದಿಲ್ಲ.
ಕಳೆದ ಏಪ್ರಿಲ್ ನಲ್ಲಷ್ಟೇ ಅರ್ನಬ್ ಗೋಸ್ವಾಮಿ ಹಾಗೂ ಅವರ ಪತ್ನಿ ಸಮಯಬ್ರತಾ ರೇ ರಿಪಬ್ಲಿಕ್ ಟಿವಿಯ ಕೇಂದ್ರ ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದ ಸಮಯದಲ್ಲಿ ಅವರಿಬ್ಬರ ಮೇಲೆ ದಾಳಿ ನಡೆಸಲಾಗಿತ್ತು. ಅಂದರೆ ಅವರನ್ನು ಹತ್ತಿಕ್ಕುವ ಕಾರ್ಯವನ್ನು ಗುಪ್ತವಾಗಿ ಮತ್ತು ಬಹಿರಂಗವಾಗಿಯೇ ಮಾಡಲಾಗುತ್ತಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಈ ಘಟನೆಯನ್ನು ಖಂಡಿಸಿ ” ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಪತ್ರಿಕಾ ಸ್ವಾತಂತ್ರದ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ. ಮಾಧ್ಯಮಗಳನ್ನು ನಡೆಸಿಕೊಳ್ಳುವ ರೀತಿಯು ಇದಲ್ಲ, ಈ ಘಟನೆಯು ನಮಗೆ ಮಾಧ್ಯಮಗಳ ಇದೆ ರೀತಿಯಾಗಿ ನಡೆಸಿಕೊಂಡ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ ” ಎಂದಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿಯವರೂ ಸಂವಿಧಾನ ವಿರೋಧಿ ಕೃತ್ಯವನ್ನು ಖಂಡಿಸುತ್ತಾ “ಪತ್ರಿಕೋದ್ಯಮದಲ್ಲಿದ್ದೂ ಅರ್ನಬ್ ರ ಪರವಾಗಿ ನಿಲ್ಲದಿದ್ದಲ್ಲಿ ನೀವು ಸಂವಿಧಾನ ವಿರೋಧೀ ಕೃತ್ಯಗಳನ್ನು ಬೆಂಬಲಿಸಿದಂತಾಗುತ್ತದೆ. ನೀವು ಅವರನ್ನು ಇಷ್ಟಪಡದಿರಬಹುದು, ಅವರ ವಿಚಾರಗಳೊಂದಿಗೆ ನೀವು ಸಹಮತವನ್ನು ಹೊಂದಿಲ್ಲದೆಯೂ ಇರಬಹುದು, ನೀವು ಅವರ ಅಸ್ತಿತ್ವವನ್ನೂ ತಿರಸ್ಕರಿಸಬಹುದು , ಆದರೆ ಇಂದು ಮೌನವಾಗಿ ಉಳಿದು ದಮನಕಾರೀ ನೀತಿಯನ್ನು ಬೆಂಬಲಿಸಿದರೆ, ನಾಳೆ ನಿಮಗೆ ಇಂತಹಾ ಪರಿಸ್ಥಿತಿ ಬಂದೊದಗಿದರೆ ನಿಮ್ಮ ಪರವಾಗಿ ಮಾತನಾಡಲು ಯಾರಿದ್ದಾರೆ ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ #ಐಸಪೋರ್ಟ್ಅರ್ನಬ್ ಟ್ರೆಂಡ್ ಸೃಷ್ಟಿ ಮಾಡಿದೆ. ದೇಶದ ಮೂಲೆ ಮೂಲೆಯಿಂದಲೂ ಅವರಿಗೆ ಬೆಂಬಲಗಳು ವ್ಯಕ್ತವಾಗಿದೆ. ಮುಚ್ಚಿದ ಪ್ರಕರಣವನ್ನು ಮತ್ತೆ ತೆರೆದು ಮುಂಬೈ ಪೊಲೀಸರು ಮತ್ತು ಸರ್ಕಾರ ಅರ್ನಬ್ ವಿರುದ್ಧ ದ್ವೇಷವನ್ನು ಸಾಧಿಸುತ್ತಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಒರ್ವ ಪತ್ರಕರ್ತನನ್ನು ಈ ರೀತಿ ನಡೆಸಿಕೊಳ್ಳುವುದು ಪ್ರಜಾಪ್ರಭುತ್ವಕ್ಕೂ ಮಾರಕವಾಗಿದೆ.
✍️ದೀಪಾ ಜಿ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.