ಕೊರೋನಾ ಅಥವಾ ಕೋವಿಡ್ -19 ಚೀನಾದಲ್ಲಿ ಹುಟ್ಟಿ ಇಡೀ ಜಗತ್ತನ್ನೇ ನಡುಗಿಸಿದೆ. ಕೆಲ ತಿಂಗಳುಗಳಲ್ಲೇ ಜಗತ್ತಿನ ಹೆಚ್ಚಿನ ದೇಶಗಳಲ್ಲಿ ತನ್ನದೇ ಆದ ಹವಾ ಕ್ರಿಯೇಟ್ ಮಾಡಿದ ಕೀರ್ತಿ ಸಹ ಕೊರೋನಾಗೆ ಸಲ್ಲುತ್ತದೆ. ಹೆಚ್ಚಾಗಿ ಚೀನಾದಲ್ಲಿ ಸೃಷ್ಟಿಯಾದ ಯಾವುದೇ ವಸ್ತು ವಿಚಾರಗಳಿಗೆ ಹೆಚ್ಚಿನ ಆಯಸ್ಸಿಲ್ಲ ಎಂಬ ಮಾತಿದೆ. ಆದರೆ ಈ ಉಕ್ತಿ ಮಹಾಮಾರಿ ಕೊರೋನಾ ವಿಚಾರದಲ್ಲಿ ಸಂಪೂರ್ಣ ಸುಳ್ಳಾಗಿ ಬಿಟ್ಟಿದೆ. ಇದಕ್ಕೆ ಔಷಧ ಕಂಡುಹಿಡಿಯಲು ವಿಶ್ವವೇ ಹೆಣಗುತ್ತಿರುವಾಗ, ಜನರು ಮಾತ್ರ ಬರು ಬರುತ್ತಾ ರಾಯರ ಕುದುರೆ ಕತ್ತೆ ಆಗೋಯ್ತು ಎಂಬಂತಾಗಿದ್ದಾರೆ. ಜನರ ಈ ಬೇಜವಾಬ್ದಾರಿಯ ಮನಸ್ಥಿತಿಯಿಂದ ಜಗತ್ತಿನ ಕೆಲವು ರಾಷ್ಟ್ರಗಳಲ್ಲಿ ಎರಡನೇ ಹಂತದ ಕೊರೋನಾ ಅಲೆ ಬೀಸುತ್ತಿದೆ. ಇದು ಬೆಚ್ಚಿ ಬೀಳಿಸುವ ಸಂಗತಿ.
ಹೌದು ಯುರೋಪ್ ಖಂಡದ ಕೆಲ ದೇಶಗಳಲ್ಲಿ ಕೊರೋನಾದ ಎರಡನೇ ಹೊಡೆತ ಆರಂಭವಾಗಿದೆ. ಕೊರೋನಾ ದೊಡ್ಡ ವಿಷಯವಲ್ಲ ಎಂದು ಭಾವಿಸಿ, ಸೂಕ್ತ ಸುರಕ್ಷತೆಗಳನ್ನು ಕಡೆಗಣಿಸಿದ್ದರ ಪರಿಣಾಮ ಐರೋಪ್ಯ ದೇಶಗಳಲ್ಲಿ ಕೊರೋನಾ ಮತ್ತೆ ಅಟ್ಟಹಾಸ ಮಾಡಲು ಆರಂಭ ಮಾಡಿವೆ. ಇನ್ನೂ ಕೊರೋನಾಗೆ ಲಸಿಕೆ ಕಂಡುಹುಡುಕುವ ನೆಲೆಯಲ್ಲಿ ಕೆಲಸಗಳು ಸಾಗುತ್ತಿವೆ ಅಷ್ಟೇ. ಆದರೂ ಕೊರೋನಾ ಕೇರ್ಲೆಸ್ ನಿಂದಾಗಿಯೇ ಇದೀಗ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ ಎಂದರೆ ತಪ್ಪಾಗಲಾರದು. ಕೊರೋನಾ ತಡೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಮರೆತ ಅಥವಾ ಮರೆತಂತೆ ನಟಿಸಿದ ಪರಿಣಾಮವಾಗಿಯೇ ನಮ್ಮ ಜೀವವನ್ನು ನಾವೇ ಅಪಾಯಕ್ಕೆ ದೂಡುತ್ತಿದ್ದೇವೆ ಎಂಬುದನ್ನು ಇನ್ನಾದರೂ ಅರಿಯದೇ ಹೋದಲ್ಲಿ ಜಗತ್ತು ಮತ್ತಷ್ಟು ಸಂಕಷ್ಟ ಅನುಭವಿಸುವ ಸ್ಥಿತಿ ಬರುತ್ತದೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯ ಬೇಡ.
ನಮ್ಮ ದೇಶದಲ್ಲಿಯೇ ಗಮನಿಸಿ. ಕೊರೋನಾ ಆರಂಭದ ಕಾಲ ಅಂದರೆ ಮಾರ್ಚ್ ಸಂದರ್ಭದಲ್ಲಿ ಕೊರೋನಾ ನಿಯಂತ್ರಣ ಕ್ರಮಗಳನ್ನು ಸರಿಯಾಗಿ ಪಾಲಿಸುಕೊಂಡು ಬರುತ್ತಿದ್ದೆವು. ಆದರೆ ಕಾಲ ಕ್ರಮೇಣ ಕೊರೋನಾ ಅಂದರೆ ಅದೇನೋ ಅಲಕ್ಷ್ಯ ಭಾವ ನಮ್ಮೊಳಗೆ ಎಲ್ಲಾ ವಿಚಾರಗಳಂತೆಯೇ ಸೃಜಿಸತೊಡಗಿದೆ. ಕೊರೋನಾ ಹಬ್ಬಿಸಿಕೊಂಡರೆ ಸೂಕ್ತ ಲಸಿಕೆಗಳಿಲ್ಲ ಎಂಬುದನ್ನು ತಿಳಿದೂ ಸಹ ಕೊರೋನಾಗೆ ಲಸಿಕೆ ಕಂಡು ಹಿಡಿಯುವವರೆಗೂ ಕಾಯದ ನಾವು ಬೇಕಾಬಿಟ್ಟಿ ಓಡಾಡುವುದು, ಕೊರೋನಾ ನಿಯಂತ್ರಣ ಕ್ರಮಗಳನ್ನು ಗಾಳಿಗೆ ತೂರಿ ಹೇಗೆ ಬೇಕೋ ಹಾಗೆ ವರ್ತಿಸುವುದು ಮಾಡುತ್ತಿದ್ದೇವೆ. ಈ ದಿನ, ಈ ಕ್ಷಣ ಎಂಬಂತಿರುವ ನಾವು ನಾಳೆಯೂ ಬದುಕಿದೆ, ನಾವು ಈ ರೀತಿ ವರ್ತಿಸಿದರೆ ಇದರಿಂದ ಎಲ್ಲಾ ರೀತಿಯ ಕೊರೋನಾ ನಿಯಂತ್ರಣ ಕ್ರಮ ಅನುಸರಿಸುವವರಿಗೆ ಸಹ ಅಪಾಯವಾಗುತ್ತದೆ ಅಥವಾ ಅಂತಹ ಸಾಧ್ಯತೆ ಇದೆ ಎಂಬುದನ್ನು ಮರೆತು ಬದುಕುತ್ತಿದ್ದೇವೆ ಎಂಬುದು ದುರದೃಷ್ಟಕರ.
ಹೀಗಾದರೆ ಸದ್ಯ ಐರೋಪ್ಯ ರಾಷ್ಟ್ರಗಳಿಗೆ ಬಂದು ಒದಗಿರುವ ಕೊರೋನಾ ಎರಡನೇ ಹಂತದ ಬಿರುಗಾಳಿ ನಮ್ಮಲ್ಲಿಯೂ ಬೀಸಬಹುದೇನೋ. ಮಾಸ್ಕ್ ಧರಿಸದೆ ಇರುವುದು, ಸಾಮಾಜಿಕ ಅಂತರ ಮರೆಯಯುವುದು, ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸುವುದು, ಗುಂಪುಗೂಡುವುಜು, ಸ್ವಚ್ಛತೆಗೆ ಆದ್ಯತೆ ನೀಡದೇ ಇರುವುದು ಮಾಡುವುದರಿಂದಲೂ ನಾವು ಮುಂದಿನ ದಿನಗಳಲ್ಲಿ ಸಮಸ್ಯೆ ಅನುಭವಿಸಬೇಕಾಗಿ ಬರುವುದು ಎಂಬುದರಲ್ಲಿ ಹೆಚ್ಚು ಸಂಶಯ ಬೇಕಾಗಿಲ್ಲ. ಏಕೆಂದರೆ ನಮ್ಮ ವರ್ತನೆಯೇ ಹಾಗಿದೆ. ಈ ಬೇಜವಾಬ್ದಾರಿ ಮನಸ್ಥಿತಿಯೇ ನಮ್ಮ ನಾಶಕ್ಕೆ, ಕೇಡಿಗೆ ಕಾರಣವಾಗಲಿದೆ ಎಂಬುದು ಸತ್ಯ.
ಕೇಂದ್ರ, ರಾಜ್ಯ ಸರ್ಕಾರಗಳು ಕೊರೋನಾ ನಿಯಂತ್ರಣಕ್ಕೆ ಅನೇಕ ಕ್ರಮಗಳನ್ನು ,ಮುಂಜಾಗ್ರತೆಗಳನ್ನು ವಹಿಸುವಂತೆ ಬೊಬ್ಬೆ ಹೊಡೆಯುತ್ತಲೇ ಇವೆ. ಆದರೆ ಅದು ಕೋಣನ ಮುಂದೆ ಬಾರಿಸುವ ಕಿನ್ನರಿಯಂತಾಗುತ್ತಿದೆ. ಇದನ್ನೆಲ್ಲಾ ಗಮನಿಸುವಾಗ ಇಂದು ಯುರೋಪ್ನಲ್ಲಿ ಎರಡನೇ ಬಾರಿ ಅಬ್ಬರಿಸಿ ಬೊಬ್ಬಿರಿಯಲು ಆರಂಭ ಮಾಡಿರುವ ಕೊರೋನಾಸುರ ನಾಳೆ ಭಾರತದಲ್ಲಿಯೂ ತನ್ನ ಅಟ್ಟಹಾಸ ಮೆರೆಯಲು ಆರಂಭ ಮಾಡಿದರೆ ಅಚ್ಚರಿಯೇನಿಲ್ಲ. ಆದರೆ ಹೀಗೆನಾದರೂ ಆದಲ್ಲಿ ಅದಕ್ಕೆ ಸಂಪೂರ್ಣ ಜವಾಬ್ದಾರಿ ನಾವೇ ಆಗಿರುತ್ತೇವೆ. ಇಂದು ನಾವು ಯಾವ ಮುಂಜಾಗ್ರತಾ ಕ್ರಮಗಳನ್ನು ಮರೆತು ಬೇಕಾಬಿಟ್ಟಿ ಬದುಕೂತ್ತಿದ್ದೇವೋ, ಅದೇ ನಮ್ಮ ಅವಸಾನಕ್ಕೆ, ಕೊರೋನಾ ಎರಡನೇ ಬಾರಿ ನಮ್ಮ ನಿದ್ದೆ ಕೆಡಿಸುವುದಕ್ಕೆ ಕಾರಣವಾಗಲಿದೆ ಎಂಬುದಂತೂ ನಿಜ. ಒಟ್ಟಿನಲ್ಲಿ ಹೇಳುವುದಾದರೆ ಈಗ ಎಚ್ಚರ ತಪ್ಪಿದೆವೋ, ಮುಂದೆ ಅದೇ ನಮ್ಮ ಬದುಕಿಗೆ ಮತ್ತೆ ಸವಾಲೊಡ್ಡುವ ಸಾಧ್ಯತೆ ಇದೆ. ಆದ್ದರಿಂದ ಈಗಲೇ ಎಚ್ಚೆತ್ತೆವೋ, ಈಗಲೇ ಕೊರೋನಾ ಮುಂಜಾಗ್ರತಾ ಕ್ರಮ ಅನುಸರಿಸಿದೆವೋ ನಮ್ಮ ಉಳಿವು ಸಾಧ್ಯ. ನಮ್ಮ ಆರೋಗ್ಯ, ಬದುಕು ನಮ್ಮ ಕೈಯಲ್ಲೇ..
ಹಾಗಾಗಿ ಎಚ್ಚರ ತಪ್ಪದಿರೋಣ. ಕೊರೋನಾ ಅಟ್ಟಹಾಸವನ್ನು ಅದಕ್ಕೆ ಔಷಧ ಕಂಡುಹಿಡಿಯುವ ವರೆಗಾದರೂ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವತ್ತ ಚಿತ್ತ ಹರಿಸೋಣ. ಇದು ಚೀನಾದ ಉಳಿದ ವಸ್ತುಗಳಂತಲ್ಲ. ಹೆಚ್ಚು ಬೇಗ ನಾಶವಾಗುವುದಲ್ಲ ಎಂಬುದನ್ನು ಕೊರೋನಾ ಈಗಾಗಲೇ ಸಾಬೀತು ಮಾಡಿದೆ. ಹಾಗಾಗಿ ನಮ್ಮ ಎಚ್ಚರದಲ್ಲಿ ನಾವಿರೋಣ. ಈಗ ಎಚ್ಚರ ತಪ್ಪಿದಲ್ಲಿ ಮುಂದೆ ಶಿಕ್ಷೆ ಅನುಭವಿಸುವವರೂ ನಾವೇ. ಎಚ್ಚರ. ಎಚ್ಚರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.