ಕೆಲವೇ ದಿನಗಳ ಅಂತರದಲ್ಲಿ ಫ್ರಾನ್ಸ್ ರಾಷ್ಟ್ರದಲ್ಲಿ ನಡೆದ ಎರಡು ಭಯೋತ್ಪಾದನಾ ಕೃತ್ಯಗಳು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಪ್ರವಾದಿ ಮೊಹಮ್ಮದರ ಕಾರ್ಟೂನ್ ತೋರಿಸಿದ್ದಾರೆ ಎಂಬ ಕಾರಣಕ್ಕೆ ಶಿಕ್ಷಕನನ್ನು ಶಿರಚ್ಛೇದ ಮಾಡಲಾಗಿದೆ. ಈ ಘಟನೆ ನಡೆದ ಕೆಲವೇ ದಿನಗಳ ಬಳಿಕ ಉಗ್ರರು ಮತ್ತೆ ತಮ್ಮ ನೀಚ ಕೃತ್ಯವನ್ನು ಮುಂದುವರೆಸಿ ಮೂವರನ್ನು ಹತ್ಯೆ ಮಾಡಿದ್ದಾರೆ. ಚರ್ಚ್ ಒಳಗಡೆಯೂ ಹತ್ಯೆ ನಡೆಸಲಾಗಿದೆ. ಇದು ನಿಜಕ್ಕೂ ಸಹಿಸಲಾಗದ ಕೃತ್ಯ. ಇಂತಹ ಭಯೋತ್ಪಾದನೆಯ ವಿರುದ್ಧ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ ಇದೆ.
ತನ್ನ ರಾಷ್ಟ್ರದಲ್ಲಿ ನಡೆದ ಘಟನೆಯನ್ನು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಕಟುವಾಗಿ ಖಂಡಿಸಿದ್ದಾರೆ. ಇಸ್ಲಾಂ ಮೂಲಭೂತವಾದವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಕಠಿಣ ಸಂದೇಶವನ್ನು ಅವರು ರವಾನಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅವರು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಮ್ಯಾಕ್ರೋನ್ ಅವರ ಈ ನಡೆ ಕೆಲವು ಇಸ್ಲಾಮ್ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಫ್ರಾನ್ಸ್ ಅನ್ನು ಬಹಿಷ್ಕರಿಸುವ ಬಗ್ಗೆ ಪಾಕಿಸ್ಥಾನ ಮತ್ತು ಟರ್ಕಿ ದೇಶಗಳು ಬಹಿರಂಗವಾಗಿ ಹೇಳಿಕೆ ನೀಡಿವೆ. ಇನ್ನೊಂದೆಡೆ ಮಲೇಶಿಯಾದ ಮಾಜಿ ಪ್ರಧಾನಿ ಮುಸ್ಲಿಮರಿಗೆ ಕೋಪಗೊಳ್ಳುವ, ಫ್ರೆಂಚರನ್ನು ಹತ್ಯೆ ಮಾಡುವ ಹಕ್ಕಿದೆ ಎನ್ನುವಂತಹ ಅರ್ಥ ಬರುವ ಟ್ವೀಟ್ ಮಾಡಿದ್ದಾರೆ. ಟ್ವಿಟರ್ ಸಂಸ್ಥೆ ಈ ಟ್ವಿಟ್ ಅನ್ನು ಅಳಿಸಿ ಹಾಕಿದ್ದರೂ ಅವರು ಮಾತ್ರ ತಮ್ಮ ಹೇಳಿಕೆಗೆ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಇನ್ನೊಂದೆಡೆ, ಫ್ರಾನ್ಸ್ ಉತ್ಪನ್ನಗಳನ್ನು ಬಹಿಷ್ಕರಿಸುವ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಆದರೆ ಇಸ್ಲಾಂ ಮೂಲಭೂತವಾದದ ವಿರುದ್ಧ ಫ್ರಾನ್ಸ್ ಅಚಲ ಧೋರಣೆಯನ್ನು ಪ್ರದರ್ಶನ ಮಾಡಿದೆ.
ಭಾರತದಲ್ಲೂ ಕೆಲವರು ಮೈಕ್ರೋನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡ ಮಟ್ಟದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಿದ್ದಾರೆ. ಮುಂಬೈ ನಗರಗಳಲ್ಲಿ ಮಾರ್ಗಗಳ ಮೇಲೆ ಮ್ಯಾಕ್ರೋನ್ ಪೋಸ್ಟರ್ ಅಂಟಿಸಿ ಅವಮಾನ ಮಾಡಿದ್ದಾರೆ. ಆದರೆ ಮ್ಯಾಕ್ರೋನ್ ಅವರನ್ನು ಹಿಂದೆ ಉದಾರವಾದಿ ಎಂದು ಬಣ್ಣಿಸಿದ್ದ ಕೆಲವು ಬುದ್ಧಿಜೀವಿಗಳು ಈಗ ತಮ್ಮ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಅತ್ತ ಮ್ಯಾಕ್ರೋನ್ ಅವರನ್ನು ಸಮರ್ಥಿಸಿಕೊಳ್ಳಲಾಗದೆ, ಇತ್ತ ಭಯೋತ್ಪಾದನಾ ಘಟನೆಯನ್ನು ಖಂಡಿಸಲಾಗದೆ ಎಡಬಿಡಂಗಿ ಸ್ಥಿತಿಯಲ್ಲಿ ಅವರಿದ್ದಾರೆ. ಮ್ಯಾಕ್ರೋನ್ ಅವರನ್ನು ಖಂಡಿಸಿದರೆ ಭಯೋತ್ಪಾದನೆಯನ್ನು ಸಮರ್ಥಿಸಿದಂತೆ ಆಗುತ್ತದೆ, ಭಯೋತ್ಪಾದನಾ ಕೃತ್ಯವನ್ನು ಖಂಡಿಸಿದರೆ ಇವರು ಶಾಂತಿಪ್ರಿಯರು ಎಂದು ಕರೆಯುತ್ತಿದ್ದ ಜನರ ಇವರ ಮೇಲೆ ತಿರುಗಿ ಬೀಳುತ್ತಾರೆ. ಹೀಗಾಗಿ ಏನನ್ನೂ ಮಾತನಾಡದೆ ಸ್ವಯಂಘೋಷಿತ ಬುದ್ಧಿಜೀವಿಗಳು ಮೌನಕ್ಕೆ ಶರಣಾಗಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವವರು ನಾಪತ್ತೆಯೇ ಆಗಿದ್ದಾರೆ.
ಯಾವುದೇ ಧರ್ಮವನ್ನು ಅವಹೇಳನ ಮಾಡುವುದು ತಪ್ಪು. ಧಾರ್ಮಿಕವಾಗಿ ಪೂಜನೀಯ ಸ್ಥಾನದಲ್ಲಿರುವ ಶ್ರೇಷ್ಠರನ್ನು ಅವಮಾನಿಸುವುದು ಧಾರ್ಮಿಕ ಭಾವನೆಯನ್ನು ಕೆರಳಿಸುತ್ತದೆ. ಭಾರತದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇದೆ. ಹಿಂದೂ ಧರ್ಮವನ್ನು ಹೆಚ್ಚು ಗುರಿಯಾಗಿಸಿ ಅವಮಾನ ಮಾಡಲಾಗುತ್ತದೆ. ಹಿಂದೂ ದೇವರುಗಳನ್ನು ಚಿತ್ರ ವಿಚಿತ್ರವಾಗಿ ತೋರಿಸಲಾಗುತ್ತದೆ. ಆದರೂ ಹಿಂದುಗಳು ಶಿರಚ್ಛೇದ ಮಾಡುವ ಮಟ್ಟಕ್ಕೆ ಇಳಿದಿಲ್ಲ. ಕಾನೂನು ಹೋರಾಟದ ಮೂಲಕ ಅಥವಾ ಪ್ರತಿಭಟನೆಯ ಮೂಲಕ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡಮಟ್ಟದಲ್ಲಿ ಅಭಿಯಾನ ನಡೆಸುವ ಮೂಲಕ ತಮ್ಮ ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ. ಹತ್ಯೆಯಂತಹ ಘಟನೆಯನ್ನು ಯಾರು ಕೂಡ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ ಭದರಿಂದ ಮಾನವತೆಯ ನಾಶವಾಗುತ್ತದೆ ಎಂಬ ಕನಿಷ್ಠ ಪ್ರಜ್ಞೆಯನ್ನು ಈ ರಾಷ್ಟ್ರಗಳು ಹೊಂದಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.