ಬೆಂಗಳೂರು: ಕೊರೋನಾ ಸಂಕಷ್ಟದ ಅವಧಿ ಶುರುವಾದ ಬಳಿಕ ಸಾಮಾಜಿಕ ಜಾಲತಾಣಗಳ ಮೂಲಕವೇ ಅದೆಷ್ಟೋ ಮಂದಿಗೆ ಬದುಕು ಕಟ್ಟಿಕೊಳ್ಳುವ ಮತ್ತು ಬದುಕು ಕಟ್ಟಿಕೊಡಲು ಪೂರಕವೆನಿಸುವ ಕಾರ್ಯಗಳು ನಡೆದಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ.
ಇದೀಗ ಸೋಷಿಯಲ್ ಮೀಡಿಯಾದ ಪ್ರಭಾವದಿಂದ ನಗರದ ಕನಕಪುರ ರಸ್ತೆಯ ಬದಿಯಲ್ಲಿ ಔಷಧ ಸಸ್ಯಗಳನ್ನು ಮಾರಾಟ ಮಾಡುವ 79 ವರ್ಷದ ರೇವಣ ಸಿದ್ದಪ್ಪ ಅವರ ಬದುಕು ಸಹ ಬದಲಾಗಿದೆ.
ಬಡ ವ್ಯಾಪಾರಿ ಸಿದ್ದಪ್ಪ ಅವರು ಸಸ್ಯಗಳನ್ನು ಕೊಳ್ಳುವವರಿಲ್ಲದೆ ಕಷ್ಟ ಅನುಭವಿಸುತ್ತಿದ್ದರು. ಕಳೆದ 3 ವರ್ಷಗಳಿಂದ ನೆಲದಲ್ಲೇ ಕುಳಿತು ವ್ಯಾಪಾರ ಮಾಡುತ್ತಿದ್ದರು. ದಿನಕ್ಕೆ ನಾಲ್ಕೈದು ಸಸಿಗಳಷ್ಟೇ ಮಾರಟವಾಗುತ್ತಿತ್ತು. ಸಸಿಗಳನ್ನು 20 ರೂ., 30 ರೂ. ಗಳಿಗೆ ಮಾರಾಟ ಮಾಡುತ್ತಿದ್ದರು. ಆದರೆ ಈ ದುಡಿಮೆ ಅವರಿಗೆ ಬದುಕಿನ ಅಗತ್ಯತೆಗಳನ್ನು ಪೂರೈಸಿಕೊಳ್ಳುವಲ್ಲಿ ಸಾಲುತ್ತಿರಲಿಲ್ಲ. ಇವರ ಸಂಕಷ್ಟದ ಬದುಕಿನ ಚಿತ್ರವನ್ನು ಯಾರೋ ಒಬ್ಬರು ಫೋಟೋ ತೆಗೆದು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.
ಆ ಬಳಿಕ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಈ ಚಿತ್ರವನ್ನು ನಟ ರಣದೀಪ್ ಹೂಡಾ ಅವರು ತಮ್ಮ ಖಾತೆಯಲ್ಲಿ ಹಂಚಿಕೊಂಡು ಅವರಿಗೆ ನೆರವಾಗುವಂತೆ ಮನವಿ ಮಾಡಿದ್ದರು. ಅವರ ಫೋಟೋ, ವಿಳಾಸವನ್ನು ಸಹ ರಣದೀಪ್ ಪ್ರಕಟಿಸುವ ಮೂಲಕ ಸಿದ್ದಪ್ಪ ಅವರಿಗೆ ಮತ್ತಷ್ಟು ನೆರವು ಹರಿದು ಬರುವಂತೆ ಮಾಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಸಿದ್ದಪ್ಪ ಕಥೆ, ಚಿತ್ರ ವೈರಲ್ ಆದ ಬಳಿಕ ಚೇಂಜ್ ಮೇಕರ್ಸ್ ಆಫ್ ಕನಕಪುರ ರೋಡ್ ಸದಸ್ಯರು ಅವರಿಗೆ ಮೇಜು, ಕುರ್ಚಿ, ಕೊಡೆಗಳನ್ನು ವಿತರಣೆ ಮಾಡಿದ್ದಾರೆ. ಜನರಿಂದಲೂ ನೆರವು ದೊರೆತಿದೆ. ಅದರ ಜೊತೆಗೆ ಈ ಹಿಂದೆ ದಿನಕ್ಕೆ 4-5 ಗಿಡಗಳು ಮಾರಾಟವಾಗುತ್ತಿತ್ತು. ಸದ್ಯ ಅವರಿಂದ ಸಸಿಗಳನ್ನು ಖರೀದಿ ಮಾಡುವವರ ಸಂಖ್ಯೆ ಸಹ ಹೆಚ್ಚಾಗಿದ್ದು ಸ್ವಾಭಿಮಾನಿ ಸಿದ್ದಪ್ಪ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ.
ಈ ಬಗ್ಗೆ ಸಿದ್ದಪ್ಪ ಅವರೇ ಮಾತನಾಡಿದ್ದು, ನನ್ನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುವುದಕ್ಕೂ ಮೊದಲು ವ್ಯಾಪಾರವಿಲ್ಲದೇ ಕಷ್ಟಪಡುವ ಸ್ಥಿತಿಯಲ್ಲಿ ಬದುಕು ನಿರ್ವಹಿಸುವುದೂ ಕಷ್ಟವಾಗಿತ್ತು. ಆದರೆ ಆ ಬಳಿಕ ಜನರು ತನ್ನ ಬಳಿ ಬಂದು ಸಸಿಗಳನ್ನು ಖರೀದಿ ಮಾಡಲು ತೊಡಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


