ಯಾ ದೇವಿ ಸರ್ವಭೂತೇಷು ಮಾ ಕಾಲರಾತ್ರಿ
ರೂಪೇಣ ಸಂಸ್ಥಿತಾ
ನಮಸ್ತಾಸ್ಯೈ ನಮಸ್ತಾಸ್ಯೈ ನಮಸ್ತಾಸ್ಯೈ ನಮೋ ನಮ:
ನವರಾತ್ರಿಯ ಒಂಭತ್ತು ದಿನಗಳಲ್ಲಿ ದೇವಿಯ 9 ರೂಪಗಳನ್ನು ಪೂಜಿಸಲಾಗುವುದು. ನವರಾತ್ರಿಯ ಸಪ್ತಮಿಯ (ಏಳನೇಯ) ದಿನ ಪೂಜಿಸುವ ದುರ್ಗಾ ಮಾತೆಯ ಅವತಾರವೇ ಕಾಲರಾತ್ರಿ. ನೋಡಲು ಭಯಂಕರಿಯಾದರೂ ಭಕ್ತರ ಪಾಲಿಗೆ ಆಕೆ ಶುಭಂಕರಿ, ಜಗದಲ್ಲಿನ ಅಂಧಕಾರವನ್ನು ಕಳೆದು ಬೆಳಕನ್ನು ನೀಡುವವಳು.
ಗಾಡಾಂಧಕಾರದಂತೆ ಶರೀರವೆಲ್ಲಾ ಕಪ್ಪಾಗಿ ಕತ್ತೆಯ ಮೇಲೆ ವಿರಾಜಮಾನಳಾಗಿ ಭಕ್ತರ ಅಭೀಷ್ಟವನ್ನು ನೆರೆವೇರಿಸುವವಳೇ ಕಾಲರಾತ್ರಿ. ಆಕೆಯನ್ನು ಶುಭಂಕರಿಯೆಂದೂ ಕರೆಯುತ್ತಾರೆ. ದೇವಿಯ ಹಲವು ರೂಪಗಳಲ್ಲಿ ಹೆಚ್ಚು ಭೀಭತ್ಸವಾದ ರೂಪವೆಂದರೆ ಕಾಲರಾತ್ರಿ. ಅಸುರರ ಪಾಲಿಗೆ ದುಃಸ್ವಪ್ನ ಈ ಕಾಲರಾತ್ರಿ. ಧರ್ಮದ ರಕ್ಷಣೆಗಾಗಿ , ಅಧರ್ಮದ ಪಾಲಿಗೆ ಭಯ ಹುಟ್ಟಿಸುವವಳು ಈಕೆ. ಆದರೆ ತನ್ನನ್ನು ಪೂಜಿಸುವ ಭಕ್ತರ ಪಾಲಿಗೆ ಮಾತ್ರ ಮಾತೃ ಸ್ವರೂಪಿಣಿಯಾದ ಪಾರ್ವತಿಯಾಗಿರುವವಳು.
ಕಾಲರಾತ್ರಿ ದೇವಿಯ ರೂಪ
ಹೆಸರೇ ಹೇಳುವಂತೆ ತಾಯಿಯು ಕಾರ್ಗತ್ತಲು ಮತ್ತು ಸಮಯದ ರೂಪವಾಗಿದ್ದಾಳೆ. ಬ್ರಹ್ಮಾಂಡದಂತೆ ದುಂಡಾಗಿರುವ ತ್ರಿನೇತ್ರೆಯ ಕಣ್ಣುಗಳಿಂದ ಕಾಂತಿಯು ಹೊರಹೊಮ್ಮುತ್ತದೆ. ಶ್ವಾಸೋಶ್ವಾಸ ಮಾಡುವಾಗ ಅಗ್ನಿಯ ಜ್ವಾಲೆಗಳು ಹೊರಹೊಮ್ಮುತ್ತವೆ. ಬಲಗಡೆಯ ಕೈಗಳಲ್ಲಿ ವರಮುದ್ರೆ ಹಾಗೂ ಅಭಯಮುದ್ರೆ ಇದ್ದರೆ ಎಡಗೈಗಳಲ್ಲಿ ಕಬ್ಬಿಣದ ಮುಳ್ಳು ಹಾಗೂ ಖಡ್ಗವಿದೆ. ಆಕೆಯ ವಾಹನ ಗಾರ್ದಭ (ಕತ್ತೆ).
ಕಾಲರಾತ್ರಿದೇವಿಯ ಮಂತ್ರ
ಓಂ ದೇವೀ ಕಾಲರಾತ್ತೈ ನಮಃ
ಓಂ ದೇವೀ ಕಾಲರಾತ್ತೈ ನಮಃ ಎಕ್ವೇಣಿ
ಜಪಕಾರ್ಣಪೂರ ನಗ್ನಾ ಖರಾಸ್ಥಿತಾ
ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ
ಶರೀರಿಣೀ ವಂ
ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ
ಭರ್ಧನ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ
ಭಯಂಕರಿ
ರಕ್ತ ಬೀಜಾಸುರನನ್ನು ಸಂಹಾರ ಮಾಡುವ ಸಲುವಾಗಿ ದುರ್ಗೆಯು ಕಾಲರಾತ್ರಿಯ ರೂಪದಲ್ಲಿ ಅವತರಿಸುತ್ತಾಳೆ. ರಕ್ತ ಬೀಜಾಸುರನನ್ನು ಕೊಂದು ರಕ್ತ ಬೀಜಾಸುರನ ರಕ್ತದ ಒಂದು ಹನಿಯೂ ಕೆಳಗೆ ಬೀಳದಂತೆ ಕುಡಿದು ವಿಜಯ ಸಾಧಿಸಿ ನರ್ತಿಸುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರ ಆಕೆಯು ಸಹಜ ಸ್ಥಿತಿಗೆ ಬರುತ್ತಾಳೆ. ಈಕೆಯನ್ನು ಆರಾಧಿಸುವವರ ಮನಸ್ಸು ಸ್ಥಿತಗೊಂಡು ಪಾಪ ಹಾಗೂ ವಿಘ್ನಗಳು ನಾಶವಾಗಿ ಪುಣ್ಯಲೋಕ ಪ್ರಾಪ್ತಿಯಾಗುವುದು.
ಕಾಲರಾತ್ರಿಯು ಶನಿಗ್ರಹದ ಅಧಿಪತಿ. ಜನರು ಮಾಡಿರುವಂತಹ ಕೆಡಕು ಹಾಗೂ ಒಳಿತನ್ನು ನೋಡಿಕೊಂಡು ವರ ನೀಡುವವಳು. ತಾಯಿ ಕಾಲರಾತ್ರಿಯನ್ನು ಪೂಜಿಸುವುದರಿಂದ ಶನಿಯಿಂದ ಆಗುವ ತೊಂದರೆಯ ಪ್ರಮಾಣವನ್ನು ತಗ್ಗಿಸಬಹುದು.
ಕಾಲರಾತ್ರಿ ದೇವಿಯ ಪೂಜಾ ವಿಧಾನ
ಕಾಲರಾತ್ರಿಗೆ ಅರ್ಪಿಸಲು ಅತ್ಯುತ್ತಮವಾಗಿರುವ ಹೂವೆಂದರೆ ರಾತ್ರಿ ಅರಳುವ ಮಲ್ಲಿಗೆ ಹೂವು. ಶ್ರದ್ದಾ ಭಕ್ತಿಯಿಂದ ನವರಾತ್ರಿಯ ಏಳನೇಯ ದಿನ ಕಾಲರಾತ್ರಿ ಪೂಜೆ ಸಲ್ಲಿಸಬೇಕು. ಈ ದಿನ ಮೊದಲು ಗಣೀಶನಿಗೆ ಪೂಜೆಯನ್ನು ಸಲ್ಲಿಸಿದ ನಂತರ ಕಾಲರಾತ್ರಿಗೆ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ಆರತಿಯೊಂದಿಗೆ ಪೂಜೆಯನ್ನು ಕೊನೆಗೊಳಿಸಬೇಕು.ಈ ದಿನ ಕಾಲರಾತ್ರಿ ದೇವಿಗೆ ಅನ್ನದಿಂದ ಮಾಡಿದ ಯಾವುದೇ ನೈವೇದ್ಯ ಅರ್ಪಿಸಬಹುದು. ಇದರಿಂದ ಆಕೆ ಸಂಪ್ರೀತಳಾಗಿ ಭಕ್ತರನ್ನು ಹರಸುತ್ತಾಳೆ ಎಂಬ ನಂಬಿಕೆ ಜನಮಾನಸದ್ದು.
-ಲತಾ.ಕೆ.ಜಿ
ಶಿಕ್ಷಕಿ,
ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆ,
ಕಾರೇಹಳ್ಳಿ ಭದ್ರಾವತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.