ಆ ಹೆಸರನ್ನು ಕೇಳಿದ ಕೂಡಲೇ ದೇಶಭಕ್ತ ಜನರ ಮೈಯಲ್ಲೇನೋ ಮಿಂಚಿನ ಸಂಚಾರ. ರೋಮ ರೋಮಗಳಲ್ಲಿಯೂ ನಾವೂ ವಿರೋಧಿಗಳ ಹುಟ್ಟಡಗಿಸಬೇಕು ಎಂಬ ಕಿಚ್ಚು ಹುಟ್ಟುವುದು ಸಹಜ. ಆ ಹೆಸರಿನ ಮಹತ್ವವೇ ಅಂತದ್ದು. ದೇಶವನ್ನು ಸ್ವಾತಂತ್ರ್ಯಗೊಳಿಸಲು, ತಾಯಿ ಭಾರತಿಯನ್ನು ಪಾರತಂತ್ರ್ಯದ ದಾಸ್ಯ ಸಂಕೋಲೆಯಿಂದ ಬಿಡಿಸಲು ತನ್ನ ಕ್ರಾಂತಿಕಾರಿ ನಡೆಗಳ ಮೂಲಕವೇ ಪ್ರಯತ್ನಿಸಿದ, ಆ ಮೂಲಕ ಹೆಸರು ಕೇಳಿದಾಗಲೇ ಪರಕೀಯರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಮಹಾನ್ ವೀರ ಕ್ರಾಂತಿಯ ಕಿಚ್ಚು ‘ಕ್ರಾಂತಿಕಾರಿ ಭಗತ್ ಸಿಂಗ್’ರ ಜನ್ಮದಿನ ಇಂದು.
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಕೇವಲ 23ನೇ ವರ್ಷದಲ್ಲಿಯೇ ದೇಶಕ್ಕಾಗಿ ಹುತಾತ್ಮರಾದ ಭಗತ್ ಸಿಂಗ್ ಜನ್ಮ, ಜೀವನ ದೇಶದ ಜನರಿಗೆ ಸ್ಫೂರ್ತಿಯ ಕಣಜವೇ ಹೌದು. ಇವರು ಪ್ರಸ್ತುತ ಪಾಕಿಸ್ಥಾನಕ್ಕೆ ಸೇರಿರುವ ಲಾಯಲ್ಪುರ ಜಿಲ್ಲೆಯ ಜರಾನ್ ವಾಲಾ ತಾಲೂಕಿನ ಬಂಗಾ ಎಂಬ ಪ್ರದೇಶದಲ್ಲಿ ರಾಜಕೀಯ ಕುಟುಂಬವೊಂದರಲ್ಲಿ 1907 ರ ಸೆಪ್ಟೆಂಬರ್ 28 ರಂದು ಜನಿಸಿದರು. ಇನ್ಕ್ವಿಲಾಬ್ ಜಿಂದಾಬಾದ್ ಹುಟ್ಟಿದ್ದು ಸಹ ಈ ಕ್ರಾಂತಿಯ ಕಿಡಿ ಭಗತ್ ಸಿಂಗ್ ಅವರಿಂದಲೇ. ಇದು ಅಂದಿನ ಸಶಸ್ತ್ರ ಹೋರಾಟ ಪಡೆಯ ಧ್ಯೇಯವಾಕ್ಯವೂ ಆಗಿತ್ತು. ಇದರರ್ಥ ಕ್ರಾಂತಿ ಚಿರವಾಗಲಿ ಎಂಬುದು. ಅಂದರೆ ಆ ಸಮಯದಲ್ಲಿಯೇ ಅವರು ದೇಶದ ಸ್ವಾತಂತ್ರ್ಯ ಕೇವಲ ಅಹಿಂಸಾ ಮಾರ್ಗದಲ್ಲಿ ಹೋರಾಟ ಸಾಗಿದರಷ್ಟೇ ಸಾಧ್ಯವಾಗುವ ಮಾತಲ್ಲ. ಬದಲಾಗಿ ಕ್ರಾಂತಿಯ ಹೋರಾಟ ನಡೆದರಷ್ಟೇ ಭಾರತ ದಾಸ್ಯಮುಕ್ತವಾಗುವುದು ಎಂಬುದನ್ನು ನಂಬಿದ್ದರು. ಜೊತೆಗೆ ಕ್ರಾಂತಿಯ ಹಾದಿಯಲ್ಲಿಯೇ ತಮ್ಮ ಹೋರಾಟದ ಹೆಜ್ಜೆಗಳನ್ನು ಇಟ್ಟವರು. ಸಂತೋಷವೇನೆಂದರೆ ಅವರೂರಿದ ಆ ಹೆಜ್ಜೆಗಳ ಮೇಲೆ ದೇಶದ ವಿಚಾರಕ್ಕೆ ಬಂದಾಗ ಇಂದಿನ ದೇಶಭಕ್ತ ಯುವ ಮನಗಳೂ ಸಾಗುತ್ತಿವೆ ಎಂಬುದು. ಆಗಿನ ಮತ್ತು ಈಗಿನ ಹೋರಾಟಕ್ಕೆ ಕೊಂಚ ಭಿನ್ನತೆ ಇರಬಹುದಷ್ಟೇ. ಆದರೆ ಉದ್ದೇಶ ಮಾತ್ರ ‘ದೇಶ’ ಎಂಬುದು ಗಮನಾರ್ಹ.
ಬಾಲ್ಯದ ಬಗ್ಗೆ ಹೇಳುವುದಾದರೆ ಅವರಿಗೆ ಎಳವೆಯಿಂದಲೇ ಕ್ರಾಂತಿಕಾರಿ ವಿಚಾರಗಳನ್ನು ತಿಳಿಯುವಲ್ಲಿ ಹೆಚ್ಚಿನ ಆಸಕ್ತಿ. ಕ್ರಾಂತಿಗೆ ಸಂಬಂಧಿಸಿದಂತೆ ಇರುವ ಅನೇಕ ಪುಸ್ತಕಗಳನ್ನು ಅವರು ಓದಿದ್ದರು. ಇನ್ನು ಬಾಲ್ಯದಲ್ಲಿಯೇ ಅವರು ಭಾರತದ ಸ್ವಾತಂತ್ರ್ಯದ ಕನಸನ್ನು ಕಟ್ಟಿಕೊಂಡಿದ್ದರು ಎಂಬುದಕ್ಕೆ ಸಾಕ್ಷಿ ಎಂಬಂತೆ ಒಂದು ವಿಚಾರವನ್ನು ನಾವಿಲ್ಲಿ ಗಣನೆಗೆ ತೆಗೆದುಕೊಳ್ಳಬಹುದು. ಅವರಿಗಾಗ 3 ವರ್ಷ. ತಮ್ಮ ತಂದೆಯ ಮತ್ತು ತಂದೆಯ ಸ್ನೇಹಿತರೊಬ್ಬರ ಜೊತೆಗೆ ಭತ್ತ ಬೆಳೆದಿದ್ದ ಹೊಲದ ಬಳಿ ಕುಳಿತು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಭಗತ್ ಗದ್ದೆಯಲ್ಲಿ ‘ಭತ್ತದ ಬದಲು ಬಂದೂಕುಗಳನ್ನು ನೆಡುತ್ತೇನೆ’ ಎಂದು ಹೇಳುತ್ತಾರೆ. ಇದರಿಂದಲೇ ಆಂಗ್ಲರನ್ನು ಭಾರತದಿಂದ ತೊಲಗಿಸಲು ಸಾಧ್ಯ ಎಂದು ಅವರು ನುಡಿಯುತ್ತಾರೆ. ಆ ಸಂದರ್ಭದಲ್ಲಿ ಅವರೊಳಗಿದ್ದ ವಯೋ ಸಹಜ ಮುಗ್ಧತೆಗೂ ದೇಶ ಸ್ವಾತಂತ್ರ್ಯವಾಗಬೇಕು. ಹಾಗಾಗುವುದು ಬಂದೂಕುಗಳಿಂದಲೇ (ಕ್ರಾಂತಿಯಿಂದ) ಸಾಧ್ಯ ಎಂಬುದರ ಸ್ಪಷ್ಟ ಅರಿವಿತ್ತು ಎಂಬುದು ಅವರೊಳಗಿನ ದೇಶಭಕ್ತಿಯ ಧ್ಯೋತಕವೇ ಹೌದು.
ಶ್ರೀಮಂತ ಪಂಜಾಬಿ ಸಿಖ್ ಕುಟುಂಬದ ಮಗನಾಗಿದ್ದವರು ಭಗತ್ ಸಿಂಗ್. ಉನ್ನತ ಶಿಕ್ಷಣ, ಶ್ರೀಮಂತಿಕೆ ಇವೆಲ್ಲವೂ ಅವರಿಗೆ ಪಡೆದುಕೊಳ್ಳಲು ಕಷ್ಟದ ವಿಚಾರವೇನಲ್ಲ. ಆದರೆ ಇವೆಲ್ಲದರಿಂದಲೂ ವಿರಕ್ತನಾದ ಅವರು ದೇಶ ಸೇವೆಯ ಕಡೆಗೆ ಅನುರಕ್ತರಾಗುತ್ತಾರೆ. ಇದೇ ಕಾರಣಕ್ಕಾಗಿ ಮದುವೆ ಎಂಬ ಬಂಧನಕ್ಕೆ ಒಳಗಾಗುವುದಿಲ್ಲ. ದೇಶದ ಸ್ವಾತಂತ್ರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಅವರು ಕ್ರಾಂತಿಯ ಕುಡಿಯಾಗುತ್ತಾರೆ. ನಂತರ ಕಿಡಿಯಾಗುತ್ತಾರೆ. ಈ ಸ್ವಾತಂತ್ರ್ಯ ಕಿಡಿ ಅನೇಕ ಮಂದಿ ಸ್ವಾತಂತ್ರ್ಯ ಹೋರಾಟಗಾರರ ಹೃದಯದಲ್ಲಿ ದೇಶಪ್ರೇಮ, ಸ್ವಾತಂತ್ರ್ಯದ ದೀಪವಾಗಿ ಬೆಳಗುತ್ತದೆ. ಇಂದಿಗೂ ಭಗತ್ ಸಿಂಗ್ ಅಂದು ಹಚ್ಚಿದ ಸ್ವಾತಂತ್ರ್ಯದ ಕಿಡಿ ಭಾರತದ ಕೋಟ್ಯಂತರ ಜನರ ಮನದಲ್ಲಿ ದೀಪವಾಗಿ ದೇಶವನ್ನು ಪ್ರಜ್ವಲಿಸುವಂತೆ ಮಾಡಿದೆ ಎಂದು ಘಂಟಾಘೋಷವಾಗಿ ಹೇಳಬಹುದು. ಇವರು ನೌಜವಾನ್ ಭಾರತ್ ಸಭಾ, ಕೀರ್ತಿ ಕಿಸಾನ್ ಪಾರ್ಟಿ, ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಸ್ಥಾಪಿಸಿ ಆ ಮೂಲಕವೂ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಕಾರ್ಯ ಪ್ರವೃತ್ತರಾದರು.
ಇವರು ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಎಸೆದರು. ಇವರ ಸ್ನೇಹಿತರ ಜೊತೆಗೂಡಿ ಮಾಡಿದ ಈ ಕೆಲಸದ ಉದ್ದೇಶ ಬ್ರಿಟಿಷರ ಗಮನಕ್ಕೆ ಸತ್ಯ ವಿಚಾರಗಳನ್ನು ತರುವುದೇ ಆಗಿತ್ತು. ಇದಕ್ಕಾಗಿ ಬಾಂಬ್ ಎಸೆದ ಬಳಿಕ ಬ್ರಿಟಿಷರ ಜೊತೆಗೆ ಸ್ವಾತಂತ್ರ್ಯದ ಕುರಿತ ಮಾತುಕತೆಗೆ ಅವಕಾಶ ಮಾಡಿಕೊಳ್ಳುವ ಉದ್ದೇಶದಿಂದ ಶರಣಾಗುತ್ತಾರೆ. ಇನ್ಕ್ವಿಲಾಬ್ ಜಿಂದಾಬಾದ್ ಘೋಷಣೆಯ ಜೊತೆಗೆ ಸೆರೆಯಾಗುತ್ತಾರೆ. ಇದಾಗಿ ಪೊಲೀಸ್ ಅಧಿಕಾರಿಗೆ ಗುಂಡಿಕ್ಕಿರುವ ಆರೋಪದ ಮೇಲೆ ಕ್ರಾಂತಿಕಾರಿ ಭಗತ್ ಸಿಂಗ್, ರಾಜಗುರು, ಸುಖದೇವರನ್ನು ಗಲ್ಲಿಗೇರಿಸಲು ಬ್ರಿಟಿಷ್ ಸರ್ಕಾರ ನಿರ್ಧಾರ ಮಾಡುತ್ತದೆ. ಇನ್ನೇನು ತನ್ನ ಪ್ರಾಣವೇ ಹೋಗುತ್ತದೆ ಎಂಬ ಸಂದರ್ಭದಲ್ಲಿ ಸಹ ಭಗತ್ ಕ್ರಾಂತಿಕಾರಿ ವಿಚಾರಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಓದುತ್ತಿದ್ದರು. ಈ ಸಂದರ್ಭದಲ್ಲಿ ಅವರ ಈ ಸುಸ್ಥಿರ ಧೈರ್ಯಶಾಲಿ ಮನಸ್ಥಿತಿ ಕಂಡು ಅವರ ವಕೀಲ ಪ್ರಾಣನಾಥ ಮೆಹ್ತಾ ಎಂಬವರು ದೇಶವಾಸಿಗಳಿಗೆ ಅವರ ಕೊನೆಯ ಸಂದೇಶ ಏನೆಂದು ಕೇಳುತ್ತಾರೆ. ಆ ಸಂದರ್ಭದಲ್ಲಿ ಭಗತ್ ಸಿಂಗ್ ‘ಸಾಮ್ರಾಜ್ಯಶಾಹಿ ವ್ಯವಸ್ಥೆಗೆ ಧಿಕ್ಕಾರ, ಇನ್ಕ್ವಿಲಾಬ್ ಜಿಂದಾಬಾದ್’ ಎಂದು ಕೆಚ್ಚೆದೆಯಿಂದ ನುಡಿಯುತ್ತಾರೆ.
ತಮ್ಮ ಕೊನೆಯ ದಿನಗಳಲ್ಲಿ ಭಗತ್ ಸಿಂಗ್ ತಮ್ಮ ತಾಯಿಗೆ ಪತ್ರವೊಂದನ್ನು ಬರೆಯುತ್ತಾರೆ. ಈ ಪತ್ರದಲ್ಲಿ ಅಮ್ಮ, ನೀನೇನೂ ಚಿಂತಿಸಬೇಡ. ಗಲ್ಲು ಶಿಕ್ಷೆಯಾದರೆ ಏನು. ಬ್ರಿಟಿಷರ ಸರ್ಕಾರ ಕಿತ್ತೊಗೆಯಲು ನಾನು ಮತ್ತೆ ಒಂದೇ ವರ್ಷದಲ್ಲಿ ಮತ್ತೆ ಹುಟ್ಟಿ ಬರುವೆನು ಎಂದು ಬರೆಯುತ್ತಾರೆ. ಆ ಮೂಲಕ ತಾಯಿ, ತಾಯಿನಾಡಿನ ಬಗೆಗಿನ ತನ್ನ ಪ್ರೀತಿಯನ್ನು ತಮ್ಮ ಕೊನೆಯ ಕ್ಷಣಗಳಲ್ಲಿಯೂ ಭಗತ್ ಸಿಂಗ್ ವ್ಯಕ್ತಪಡಿಸುತ್ತಾರೆ.
1931 ಮಾರ್ಚ್ 24 ರಂದು ಅವರನ್ನು ನೇಣುಗಂಬಕ್ಕೇರಿಸಲು ಬ್ರಿಟಿಷ್ ಸರ್ಕಾರ ತೀರ್ಮಾನ ಮಾಡಿತ್ತು. ಆದರೆ ಭಗತ್ಗೆ ಗುಂಡೇಟಿನ ಮೂಲಕ ಸಾಯುವ ಬಯಕೆ ಇತ್ತು. ಆದರೆ ಆ ಆಸೆ ನೆರವೇರಲಿಲ್ಲ. ಬದಲಾಗಿ 23 ನೇ ದಿನಾಂಕದಂದು ಅಂದರೆ ಗಲ್ಲು ನಿಗಧಿಯಾಗಿದ್ದ 11 ಗಂಟೆಗಳಿಗೂ ಮುನ್ನವೇ ಅವರನ್ನು ಗಲ್ಲಿಗೇರಿಸಲಾಗುತ್ತದೆ. ಆ ಬಳಿಕ ಸಟ್ಲೆಜ್ ನದಿ ತೀರದಲ್ಲಿ ರಹಸ್ಯವಾಗಿ ಜೈಲು ಅಧಿಕಾರಿಗಳೇ ಅವರ ಅಂತ್ಯಕ್ರಿಯೆಯನ್ನು ನೆರವೇರಿಸುತ್ತಾರೆ.
ಹುಟ್ಟು ದೇವರ ಭಿಕ್ಷೆ, ಸಾವೂ ಸಹ ಪೂರ್ವಯೋಜಿತ. ಇದೆರಡರಲ್ಲಿ ಮನುಷ್ಯನ ಎಣಿಕೆ ನಡೆಯಲಾರದು. ಆದರೆ ಈ ನಡುವಿನ ಜೀವನ ಇದೆಯಲ್ಲಾ ಅದನ್ನು ನಡೆಸುವ ರೀತಿ ಮಾತ್ರ ಮನುಷ್ಯನ ಕೈಯಲ್ಲೇ ಇದೆ. ಇದಕ್ಕೆ ಸಾಕ್ಷಿ ಭಗತ್ ಸಿಂಗ್. ಅವರು ಸಿರಿವಂತ ಕುಟುಂಬದ ಮಗ. ಬೇಕಾದ್ದೆಲ್ಲವೂ ಇತ್ತು. ಆದರೆ ಅವೆಲ್ಲವೂ ನಶ್ವರ. ನಾನು ದೇಶಕ್ಕಾಗಿ ಹುಟ್ಟಿದ್ದು. ದೇಶ ಸೇವೆ ಮಾಡಬೇಕು ಎಂಬ ದೃಢ ನಿಶ್ಚಯ ಅವರನ್ನು ದೇಶದ ಓರ್ವ ಮಹಾನ್ ನಾಯಕನಾಗಿ ಇಂದಿಗೂ ಭಾರತೀಯರು ನೆನಪಿನಲ್ಲಿ ಇರಿಸಿಕೊಳ್ಳುವಂತೆ ಮಾಡಿದೆ.
23 ನೇ ವಯಸ್ಸಿನಲ್ಲಿಯೇ ದೇಶಕ್ಕಾಗಿ ಪ್ರಾಣ ಕೊಟ್ಟ ಭಗತ್ ಸಿಂಗ್ ಅಂದಿನಿಂದ ಇಂದಿನವರೆಗೂ ಪ್ರಸ್ತುತರು. ಸ್ಮರಣೀಯರು. ಅವರಿಗೆ ಧರ್ಮದ ಆಧಾರದಲ್ಲಿ ದೇಶ ವಿಭಜನೆ ಮಾಡುವ ಅಂದರೆ ಒಡೆದಾಳುವ ಬ್ರಿಟಿಷ್ ನೀತಿ ಮೊದಲೇ ಅರ್ಥವಾಗಿತ್ತೋ ಏನೋ, ಏಕೆಂದರೆ ಅವರು ದೇಶದ ಏಕತೆಯನ್ನು ಕುರಿತಂತೆ, ಅದರ ಮಹತ್ವದ ಕುರಿತಂತೆ ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದರು. ಶಾಲಾ ದಿನಗಳಲ್ಲಿಯೇ ಜಲಿಯನ್ವಾಲಾಬಾಗ್ ಹತ್ಯಾಕಾಂಡ ನಡೆದ ಪ್ರದೇಶಕ್ಕೂ ಅವರು ಭೇಟಿ ನೀಡುತ್ತಿದ್ದರು. ಇವರ ಮನಸ್ಸಿನಲ್ಲಿ ಆ ಘಟನೆ ಅಚ್ಚಾಗಿ ಉಳಿದು ಬಿಟ್ಟಿತ್ತು. ಅವರೊಳಗಿನ ಸ್ವಾತಂತ್ರ್ಯ ಕಿಚ್ಚಿಗೆ ಇದೂ ಒಂದು ಪ್ರಮುಖ ಪ್ರೇರಣೆಯಾಯಿತು.
ಭಗತ್ ಸಿಂಗ್ ಕೇವಲ ವ್ಯಕ್ತಿಯಲ್ಲ. ಭಾರತದ ಸ್ವಾತಂತ್ರ್ಯದ ಹಿಂದಿನ ಶಕ್ತಿ ಎನ್ನಬಹುದು. ತ್ಯಾಗ, ಶೌರ್ಯ, ಬಲಿದಾನಕ್ಕೆ ಸಮಾನಾರ್ಥಕವಾಗಿಯೂ ಭಗತ್ ಸಿಂಗ್ ಅವರ ಜೀವನ ನಮಗೆ ಮಾದರಿಯೇ ಹೌದು. ಅವರ ಧೈರ್ಯ, ಸಾಹನ, ಸ್ವಾತಂತ್ರ್ಯದ ಕಿಚ್ಚು ಇಂದಿನ ಯುವ ಮನಗಳಿಗೂ ಸ್ಫೂರ್ತಿ. ಅವರು ಅಂದು ಹಚ್ಚಿದ ದೇಶಪ್ರೇಮವೆಂಬ ಕ್ರಾಂತಿಯ ಕಿಡಿ ಇಂದಿಗೂ ಜೀವಂತವಿದೆ. ದೀಪವಾಗಿ ಪ್ರಜ್ವಲಿಸುತ್ತಿದೆ ಎಂಬುದೇ ಅವರ ಸಾಧನೆಗೆ ಸಾಕ್ಷಿ ನುಡಿಯುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.