ನವದೆಹಲಿ: ರೈಲ್ವೆ ಮಂಡಳಿಯು ನವೆಂಬರ್ ಅಂತ್ಯದ ವೇಳೆಗೆ 370 ರೈಲುಗಳಲ್ಲಿ 1,000 ಸಾಮಾನ್ಯ ಕೋಚ್ಗಳ ಸೇರ್ಪಡೆಯ ಗುರಿ ಹೊಂದಿದ್ದು, ಈ ಗುರಿ ಪೂರ್ಣಗೊಳ್ಳುವ ಹಾದಿಯಲ್ಲಿದೆ. ಈ ಕೋಚುಗಳು ಪ್ರತಿದಿನ ಹೆಚ್ಚುವರಿ ಒಂದು ಲಕ್ಷ ಪ್ರಯಾಣಿಕರಿಗೆ ಪ್ರಯಾಣದ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ.
ಈ ಪೈಕಿ 583 ಕೋಚ್ಗಳನ್ನು ಈಗಾಗಲೇ ಹಲವಾರು ರೈಲುಗಳಲ್ಲಿ ನಿಯೋಜಿಸಲಾಗಿದೆ ಎಂದು ಮಂಡಳಿ ತಿಳಿಸಿದೆ. “ಉಳಿದ ಕೋಚ್ಗಳನ್ನು ಸೇರಿಸುವ ಪ್ರಕ್ರಿಯೆಯು ಎಲ್ಲಾ ರೈಲ್ವೆ ವಲಯಗಳು ಮತ್ತು ವಿಭಾಗಗಳಲ್ಲಿ ನಡೆಯುತ್ತಿದೆ ಮತ್ತು ಈ ತಿಂಗಳ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ” ಎಂದು ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ 2025 ರಲ್ಲಿ ಹೋಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಯ ಹೆಚ್ಚಳವನ್ನು ನಿರ್ವಹಿಸಲು ಮಂಡಳಿಯು ಸಿದ್ಧತೆಗಳನ್ನು ಪ್ರಾರಂಭಿಸಿದೆ ಎಂದು ಅಧಿಕಾರಿ ಬಹಿರಂಗಪಡಿಸಿದ್ದಾರೆ.
ಮಹತ್ವದ ದೀರ್ಘಾವಧಿಯ ಉಪಕ್ರಮದಲ್ಲಿ, ಮುಂದಿನ ಎರಡು ವರ್ಷಗಳಲ್ಲಿ 10,000 ನಾನ್-ಎಸಿ ಕೋಚ್ಗಳನ್ನು ಪರಿಚಯಿಸಲು ರೈಲ್ವೆ ಮಂಡಳಿ ಯೋಜಿಸಿದೆ. ಈ ವಿಸ್ತರಣೆಯು ಪ್ರತಿದಿನ ಎಂಟು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಪ್ರಯಾಣವನ್ನು ಸುಗಮಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಬೋಗಿಗಳ ತಯಾರಿಕೆಯನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ ಮತ್ತು ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿಯಲ್ಲಿ ತ್ವರಿತಗೊಳಿಸಲಾಗುತ್ತಿದೆ. “ಗಡುವನ್ನು ಪೂರೈಸಲು ಉತ್ಪಾದನೆಯು ಸಮರೋಪಾದಿಯಲ್ಲಿ ಮುಂದುವರಿಯುತ್ತಿದೆ” ಎಂದು ಅಧಿಕಾರಿ ತಿಳಿಸಿದ್ದಾರೆ
ಎಲ್ಲಾ 10,000 ಕೋಚ್ಗಳು LHB ವರ್ಗಕ್ಕೆ ಸೇರಿದ್ದು, ಸುಧಾರಿತ ಸುರಕ್ಷತಾ ಕಾರ್ಯವಿಧಾನಗಳು ಮತ್ತು ಸುಧಾರಿತ ಪ್ರಯಾಣಿಕ ಸೌಕರ್ಯಗಳನ್ನು ಒಳಗೊಂಡಿರುತ್ತವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.