ಕೊರೋನಾವೈರಸ್ ಎಂಬ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ದೇಶವ್ಯಾಪಿಯಾಗಿ ಅನಿವಾರ್ಯವಾಗಿ ಲಾಕ್ಡೌನ್ ಪರಿಸ್ಥಿತಿಯನ್ನು ಹೇರಬೇಕಾಯಿತು. ಲಾಕ್ಡೌನ್ ಕಾರಣದಿಂದಾಗಿ ದೇಶದ ಅರ್ಥ ವ್ಯವಸ್ಥೆಯ ಮೇಲೆ ದೊಡ್ಡಮಟ್ಟದ ಪೆಟ್ಟು ಬಿದ್ದಿದೆ. ಅದರಲ್ಲೂ ಬೀದಿ ಬದಿ ವ್ಯಾಪಾರಿಗಳು ತೀವ್ರವಾದ ಸಂಕಷ್ಟಕ್ಕೆ ಒಳಗಾದರು. ಅವರ ಜೀವನೋಪಾಯವೇ ಅಪಾಯಕ್ಕೆ ದೂಡಲ್ಪಟ್ಟಿತು. ಇದನ್ನು ಮನಗಂಡ ಕೇಂದ್ರ ಸರಕಾರ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಜೀವನೋಪಾಯವನ್ನು ಮರಳಿ ಗಳಿಸುವ ಸಲುವಾಗಿ ಆತ್ಮನಿರ್ಭರ ಯೋಜನೆಯಡಿ ಪಿಎಂ ಸ್ವನಿಧಿ ಉಪಕ್ರಮವನ್ನು ಅನುಷ್ಠಾನಕ್ಕೆ ತಂದಿದೆ. ಜೂನ್ 1 ರಿಂದಲೇ ಯೋಜನೆ ಜಾರಿಯಾಗಿದ್ದು, ಬೀದಿಬದಿ ವ್ಯಾಪಾರಿಗಳಿಗೆ ತಮ್ಮ ವ್ಯಾಪಾರ ವಹಿವಾಟುಗಳನ್ನು ಮತ್ತೆ ಆರಂಭಿಸಲು ಕೈಗೆಟುಕುವ ಸಾಲವನ್ನು ಇದು ನೀಡುತ್ತದೆ.
ಆತ್ಮನಿರ್ಭರ ಭಾರತವನ್ನು ಸಾಧಿಸಲು ಬೀದಿ ಬದಿ ವ್ಯಾಪಾರಿಗಳ ಸಬಲೀಕರಣ ಅತೀ ಮುಖ್ಯ, ಇದನ್ನು ಸಾಧಿಸುವ ನಿಟ್ಟಿನಲ್ಲಿ ಜಾರಿಗೊಂಡ ಪಿಎಂ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ), ಕೈಗೆಟುಕುವ ಕಾರ್ಯಸಾಧ್ಯತೆ ಬಂಡವಾಳ ಸಾಲವನ್ನು ಪಡೆಯಲು ಬೀದಿ ಬದಿ ವ್ಯಾಪಾರಿಗಳಿಗೆ ಅನುವು ಮಾಡಿಕೊಡುವ ಕೇಂದ್ರ ವಲಯದ ಯೋಜನೆಯಾಗಿದೆ. ಇದರಡಿ ವ್ಯಾಪಾರಿಗಳು ತಲಾ ರೂ.10,000ವರೆಗೆ ಸಾಲ ಪಡೆಯಬಹುದು. 50 ಲಕ್ಷ ಬೀದಿ ಬದಿ ವ್ಯಾಪಾರಿಗಳನ್ನು ತಲುಪುವ ಗುರಿಯನ್ನು ಈ ಯೋಜನೆ ಹೊಂದಿದೆ.
2020ರ ಜೂನ್ 1ರಂದು ಆರಂಭಗೊಂಡ ಈ ಯೋಜನೆಗೆ, ಜುಲೈ 2ರಂದು ಸಾಲದ ಅರ್ಜಿ ಸಲ್ಲಿಕೆ ಪ್ರಾರಂಭವಾಯಿತು. ಮಾರ್ಚ್, 2022 ರವರೆಗೆ ಯೋಜನೆ ಅನುಷ್ಠಾನದಲ್ಲಿ ಇರುತ್ತದೆ
ಪಿಎಂ ಸ್ವನಿಧಿ ಯೋಜನೆಯ ವೈಶಿಷ್ಟಗಳು
🔷 ಕಾರ್ಯಸಾಧ್ಯತೆ ಬಂಡವಾಳದ ಸಾಲದ ಅವಧಿ 1 ವರ್ಷ
🔷 ಸಮಯೋಚಿತ ಮರುಪಾವತಿಯ ಮೇಲೆ ಬಡ್ಡಿ ಸಬ್ಸಿಡಿ 7%, ತ್ರೈಮಾಸಿಕ ಪಾವತಿಗೂ ಅವಕಾಶ
🔷 ಡಿಜಿಟಲ್ ವಹಿವಾಟಿನ ಮೇಲೆ ಮಾಸಿಕ ಕ್ಯಾಶ್ ಬ್ಯಾಕ್ ಪ್ರೋತ್ಸಾಹಕ
🔷 ಮೊದಲ ಸಾಲದ ಸಮಯೋಚಿತ/ಶೀಘ್ರ ಪಾವತಿಯ ಮೇಲೆ ಸಾಲ ಅರ್ಹತೆ ಏರಿಸಲಾಗುತ್ತದೆ
🔷 ದೇಶದಾದ್ಯಂತದ ನಗರ ಸ್ಥಳೀಯ ಸಂಸ್ಥೆಗಳನ್ನು ಈ ಯೋಜನೆಯು ಒಳಗೊಳ್ಳುತ್ತದೆ
🔷 ಸಾಲ ಪಡೆಯಲು ಯಾವುದೇ ಮೇಲಾಧಾರ ಭದ್ರತೆಯ ಅಗತ್ಯವಿಲ್ಲ. ಶೀಘ್ರ ಪಾವತಿಗೆ ಯಾವುದೇ ದಂಡವಿಲ್ಲ
🔷 ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್ ಪೋರ್ಟಲ್ ಆಧಾರಿತ ಅರ್ಜಿ ಪ್ರಕ್ರಿಯೆ
2020ರ ಮಾರ್ಚ್ 24ರ ಸಮಯದಲ್ಲಿ ಮತ್ತು ಮೊದಲು ನಗರ ಪ್ರದೇಶದಲ್ಲಿ ವ್ಯಾಪಾರ ಮಾಡುತ್ತಿದ್ದವರು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ವ್ಯಾಪಾರ ಮಾಡುತ್ತಿರುವ ಎಲ್ಲಾ ಗ್ರಾಮೀಣ/ನಗರ ವ್ಯಾಪಾರಿಗಳು ಪಿಎಂ ಸ್ವನಿಧಿ ಯೋಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. ಇಂತಹ ವ್ಯಾಪಾರಿಗಳು ವ್ಯಾಪಾರ ಮಾಡುವ ಬಗೆಗಿನ ಸರ್ಟಿಫಿಕೇಟ್ (CoV) ಅಥವಾ ವ್ಯಾಪಾರಿಗಳ ಗುರುತಿನ ಚೀಟಿ (ID) ಅಥವಾ ವ್ಯಾಪಾರ ಮಾಡುವ ಪ್ರೊವಿಶನಲ್ ಸರ್ಟಿಫಿಕೇಟ್ ಅಥವಾ ಶಿಫಾರಸ್ಸಿನ ಪತ್ರ (LoR)ವನ್ನು ಸಾಲ ಪಡೆಯಲು ಅರ್ಜಿ ಸಲ್ಲಿಸುವ ಸಂದರ್ಭ ತೋರಿಸಬೇಕಾಗುತ್ತದೆ.
ಪಿಎಂ ಸ್ವನಿಧಿಗೆ ಸಾಲ ನೀಡುವ ಸಂಸ್ಥೆಗಳು ಯಾವುದೆಂದರೆ:- ಬ್ಯಾಂಕುಗಳು, ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ (ಎಸ್ಸಿಬಿ), ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್ಆರ್ಬಿ), ಸಣ್ಣ ಹಣಕಾಸು ಬ್ಯಾಂಕ್ (ಎಸ್ಎಫ್ಬಿ)& ಕೋಅಪರೇಟಿವ್ ಬ್ಯಾಂಕ್, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಎಸ್ಎಚ್ಜಿ ಬ್ಯಾಂಕ್. ಉದಾ:- ಸ್ಟ್ರೀಟ್ ನಿಧಿ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು (ಎನ್ಬಿಎಫ್ಸಿಗಳು) ಮತ್ತು ಸಣ್ಣ ಹಣಕಾಸು ಸಂಸ್ಥೆಗಳು (ಎಂಎಫ್ಐಗಳು).
ವೆಬ್ ಪೋರ್ಟಲ್ www.pmsvanidhi.mohua.gov.in ಮೂಲಕ ಸಾಲ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಾಲ ಪಡೆಯಲು ʼApply for loan’ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಈ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಕೆಗೆ ಬೇಕಾದ ಹೆಚ್ಚಿನ ವಿವರಗಳೂ ಲಭ್ಯವಿದೆ. ಪಿಎಂ ಸ್ವನಿಧಿ ಮೊಬೈಲ್ ಅಪ್ಲಿಕೇಸನ್ ಅನ್ನು ಕೂಡ ಬಳಸಬಹುದಾಗಿದೆ.
ಪಿಎಂ ಸ್ವನಿಧಿ ಯೋಜನೆಯಡಿ ಈಗಾಗಲೇ ದೇಶದಾದ್ಯಂತದ 10,42,224 ಬೀದಿ ಬದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 3,56,538 ಜನರಿಗೆ ಈಗಾಗಲೇ ಸಾಲ ಮಂಜೂರಾಗಿದೆ. 93,956 ಮಂದಿಗೆ ಸಾಲವನ್ನು ವಿತರಣೆ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.