ಇಂದು ಶಿಕ್ಷಕರ ದಿನಾಚರಣೆ. ಜೀವನಕ್ಕೆ ದಾರಿ ತೋರಿಸುವವನು ಗುರು. ವ್ಯಕ್ತಿಯ ವ್ಯಕ್ತಿತ್ವ ರೂಪಿಸುವವನು ಗುರು. ದೇಶ ನಿರ್ಮಾಣ ಕಾರ್ಯದಲ್ಲಿ ಗುರುವಿನ ಕೊಡುಗೆ ಅಪಾರ. ಇಂತಹ ಗುರುವಿನ ಶ್ರಮ, ತ್ಯಾಗ ಮತ್ತು ಸಮರ್ಪಣೆಯನ್ನು ಗುರುತಿಸುವ, ಸ್ಮರಿಸುವ ಸಲುವಾಗಿ ಶಿಕ್ಷಕರ ದಿನವನ್ನು ನಮ್ಮ ದೇಶದಲ್ಲಿ ಆಚರಿಸಲಾಗುತ್ತದೆ. ಭಾರತದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ. ಓರ್ವ ಶಿಕ್ಷಕ ತನ್ನ ಕೊಡುಗೆ ಮತ್ತು ಅಪಾರ ಜ್ಞಾನದಿಂದ ದೇಶಕ್ಕೆ ಹೇಗೆ ಉನ್ನತವಾದ ಕೊಡುಗೆಯನ್ನು ನೀಡಬಲ್ಲ ಎಂಬುದಕ್ಕೆ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನವೇ ಒಂದು ದೊಡ್ಡ ಉದಾಹರಣೆ. ರಾಷ್ಟ್ರಪತಿಯಾಗಿ ಮತ್ತು ಶಿಕ್ಷಕರಾಗಿ ಅವರು ಸಲ್ಲಿಸಿದ ಉದಾತ್ತ ಸೇವೆ ಅಜರಾಮರವಾಗಿದೆ
ಇಂಜಿನಿಯರ್, ವೈದ್ಯ, ಪತ್ರಕರ್ತ, ವಕೀಲ, ರಾಜಕಾರಣಿ ಹೀಗೆ ಯಾವುದೇ ವ್ಯಕ್ತಿ ಇರಲಿ ಆತನ ಹಿಂದೆ ಶಿಕ್ಷಕರ ಕೊಡುಗೆ ಇದ್ದೇ ಇರುತ್ತದೆ. ಶಿಕ್ಷಕರು ಇಲ್ಲದೆ ಯಾವುದೇ ಕ್ಷೇತ್ರವೂ ಇರಲು ಸಾಧ್ಯವಿಲ್ಲ. ದೇಶದ ಪ್ರತಿ ಕ್ಷೇತ್ರದ ಅಭಿವೃದ್ಧಿಯಾಗಬೇಕಾದರೆ ಅದರಲ್ಲಿ ಶಿಕ್ಷಕರ ಪಾತ್ರ ಬಹಳಷ್ಟು ಇರುತ್ತದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಸಂಸ್ಕಾರವನ್ನೂ ರೂಪಿಸುತ್ತಾರೆ, ವೃತ್ತಿ ಬದುಕನ್ನೂ ಬೆಳಗಿಸುತ್ತಾರೆ. ಶಿಕ್ಷಕನಿಗೆ ಸಮಾಜದಲ್ಲಿರುವ ಸ್ಥಾನಮಾನ ಉತ್ಕೃಷ್ಟ ಮಟ್ಟದ್ದು. ಆತನನ್ನು ಸಮಾಜ ಮಾದರಿ ವ್ಯಕ್ತಿಯಾಗಿ ನೋಡುತ್ತದೆ. ಆತನಿಂದ ಸದಾ ಉತ್ತಮವಾದುದನ್ನೇ ಬಯಸುತ್ತದೆ. ಒಂದು ಅರ್ಥದಲ್ಲಿ ಸಮಾಜದ ಆಶಾವಾದ ನಿಂತಿರುವುದೇ ಶಿಕ್ಷಕರ ಮೌಲ್ಯದ ಮೇಲೆ, ಅವರು ಹಾಕಿಕೊಟ್ಟ ಸಂಸ್ಕಾರದ ಮೇಲೆ.
ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಒಂದು ವ್ಯಾಪಾರೀಕರಣವಾಗಿದೆ. ಹೀಗಾಗಿ ಶಿಕ್ಷಕ ವೃತ್ತಿ ಬಗೆಗಿನ ದೃಷ್ಟಿ ಕೂಡ ಬದಲಾಗಿದೆ. ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ವೇತನ ಲಕ್ಷಗಟ್ಟಲೆ ಇದೆ. ಅದೇ ಸಾಮಾನ್ಯ ಶಾಲೆಯ ಶಿಕ್ಷಕರ ವೇತನ ಇನ್ನೂ ಸುಧಾರಣೆ ಕಂಡಿಲ್ಲ. ಹೀಗಾಗಿ ಕೆಲವರು ಶಿಕ್ಷಕ ವೃತ್ತಿಗೆ ಬರಲು ಹಿಂಜರಿಯುತ್ತಾರೆ. ಶಿಕ್ಷಣದ ಗುಣಮಟ್ಟ ಕುಸಿದಂತೆ ಶಿಕ್ಷಕರ ಮೌಲ್ಯಗಳೂ ಕೂಡ ಕಡಿಮೆಯಾಗುತ್ತಿದೆ ಎಂಬ ಭಾವನೆ ಜನರಲ್ಲಿದೆ.
ಕೋರೋನಾ ಸಾಂಕ್ರಾಮಿಕ ರೋಗ ಶಿಕ್ಷಕರನ್ನು ಸಂಕಷ್ಟಕ್ಕೆ ದೂಡಿದೆ. ಒಂದು ಕಡೆ ಶೈಕ್ಷಣಿಕ ವರ್ಷ ಆರಂಭವಾಗದೆ ಶಿಕ್ಷಕರು ನಿರುದ್ಯೋಗಿಗಳಾಗಿ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಬಂದಿದೆ. ಇನ್ನು ಕೆಲವು ಕಡೆ ಶಿಕ್ಷಕರಿಂದ ಆನ್ಲೈನ್ ಪಾಠ ಮಾಡಿಸಲಾಗುತ್ತಿದೆ, ಆದರೆ ವೇತನ ಮಾತ್ರ ಅರ್ಧವೂ ನೀಡಲಾಗುತ್ತಿಲ್ಲ. ವೃತ್ತಿಯನ್ನು ನಂಬಿ ಸಾಲಸೋಲ ಮಾಡಿದ ಶಿಕ್ಷಕರ ಪಾಡು ದೇವರೇ ಗತಿ ಎಂಬ ಪರಿಸ್ಥಿತಿಯಾಗಿದೆ. ಕೆಲವು ಕಡೆಗಳಲ್ಲಿ ಶಿಕ್ಷಕರು ಕೂಲಿ ಕೆಲಸ ಮಾಡುತ್ತಿರುವ ಬಗ್ಗೆ ವರದಿಗಳೂ ಬರುತ್ತಿವೆ. ಜೀವನೋಪಾಯಕ್ಕಾಗಿ ಅದು ಅವರಿಗೆ ಅನಿವಾರ್ಯ ಕೂಡ ಆಗುತ್ತಿದೆ.
ಶಿಕ್ಷಕರ ದಿನಾಚರಣೆ ಈ ಸಂದರ್ಭದಲ್ಲಾದರೂ ಸರ್ಕಾರಗಳು ಶಿಕ್ಷಕರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಚಿಂತನೆ ನಡೆಸಿ ಪರಿಹಾರಗಳನ್ನು ಒದಗಿಸಬೇಕಾಗಿದೆ. ಶಿಕ್ಷಕರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಅನಿವಾರ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.