ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ದೇಶವ್ಯಾಪಿಯಾಗಿ ಕೇಂದ್ರ ಸರಕಾರ ಲಾಕ್ ಡೌನ್ ಅನ್ನು ಜಾರಿಗೆ ತಂದಿತ್ತು. ಇದರ ಪರಿಣಾಮವಾಗಿ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ದೊಡ್ಡ ಪ್ರಮಾಣದ ಜನರು ತಮ್ಮ ಹಳ್ಳಿಗಳಿಗೆ ಹಿಂದಿರುಗಿದರು. ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಅವರಿಗೆ ಜೀವನೋಪಾಯವನ್ನು ಒದಗಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಮನ್ರೇಗಾ ಯೋಜನೆಯ ವಿಸ್ತರಣೆ ಕೂಡ ಸೇರಿದೆ.
ಮನ್ರೇಗಾ ಯೋಜನೆಯನ್ನು ಸಣ್ಣ ನಗರಗಳಿಗೂ ಕೂಡ ವಿಸ್ತರಣೆ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. 350 ಮಿಲಿಯನ್ ರೂಪಾಯಿ ವೆಚ್ಚದಲ್ಲಿ ನಗರಗಳಿಗೆ ಯೋಜನೆಯನ್ನು ವಿಸ್ತರಿಸಲಾಗುತ್ತದೆ. ಇದರಿಂದ ಸಣ್ಣ ನಗರಗಳಲ್ಲಿ ಜನರು ಕೆಲಸಕ್ಕಾಗಿ ಪರದಾಡುವುದು ತಪ್ಪುತ್ತದೆ ಎಂದು ಕೇಂದ್ರ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜಯ್ ಕುಮಾರ್ ಅವರು ಹೇಳಿದ್ದಾರೆ.
ಕಳೆದ ವರ್ಷದಿಂದಲೇ ಈ ಬಗ್ಗೆ ಸರಕಾರದ ಚಿಂತನೆಯನ್ನು ಆರಂಭಿಸಿದೆ. ಸಾಂಕ್ರಾಮಿಕ ರೋಗದ ದಾಳಿಯ ಬಳಿಕ ಈ ಬಗೆಗೆ ಹೆಚ್ಚು ಉತ್ತೇಜನ ಸಿಕ್ಕಿದೆ.
ಈ ವರ್ಷ ನರೇಂದ್ರ ಮೋದಿ ಸರ್ಕಾರವು ಗ್ರಾಮೀಣ ಉದ್ಯೋಗ ಕಾರ್ಯಕ್ರಮಕ್ಕೆ ಒಂದು ಟ್ರಿಲಿಯನ್ ರೂಪಾಯಿಗಳನ್ನು ಹೆಚ್ಚುವರಿಯಾಗಿ ವ್ಯಯಿಸುತ್ತಿದೆ. ವರ್ಷದಲ್ಲಿ ಕನಿಷ್ಠ ನೂರು ದಿನಗಳಾದರೂ ಕನಿಷ್ಠ ಕೂಲಿ 202 ರೂಪಾಯಿಗಳ ಕೆಲಸವನ್ನಾದರೂ ಪಡೆಯಲಿ ಎಂಬ ಉದ್ದೇಶ ಇದರ ಹಿಂದೆ ಇದೆ.
ಇದೀಗ ನಗರ ಪ್ರದೇಶಕ್ಕೂ ಯೋಜನೆಯ ವಿಸ್ತರಣೆಯು ಕೊರೋನಾ ಸಾಂಕ್ರಾಮಿಕ ರೋಗದಿಂದ ತತ್ತರಿಸಿ ಹೋದ ನಾಗರಿಕರಿಗೆ ನಿರಾಳತೆಯನ್ನು ನೀಡಲಿದೆ.
ದೊಡ್ಡ ನಗರದಲ್ಲಿ ಯೋಜನೆಗಳಿಗೆ ವೃತ್ತಿಪರ ತಜ್ಞತೆಯ ಅಗತ್ಯ ಇರುವುದರಿಂದ ಸಣ್ಣ ನಗರಗಳಲ್ಲಿ ಈ ಯೋಜನೆಯನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಕುಮಾರ್ ಅವರು ಹೇಳಿದ್ದಾರೆ.
ಗ್ರಾಮೀಣ ಕಾರ್ಯಕ್ರಮವು ರಸ್ತೆ ನಿರ್ಮಾಣ, ಅಗೆಯುವುದು ಮತ್ತು ಮರು ಅರಣ್ಯೀಕರಣದಂತಹ ಸ್ಥಳೀಯ ಲೋಕೋಪಯೋಗಿ ಯೋಜನೆಗಳಿಗೆ ಜನರನ್ನು ನೇಮಿಸಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಇದು ಈಗ 270 ದಶಲಕ್ಷಕ್ಕೂ ಹೆಚ್ಚು ಜನರನ್ನು ಒಳಗೊಳ್ಳುತ್ತಿದೆ ಮತ್ತು ಲಾಕ್ ಡೌನ್ ಕಾರಣದಿಂದ ನಗರಗಳಿಂದ ಹಿಂದಿರುಗಿದ ವಲಸೆ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುವ ಸಾಧನವಾಗಿ ಬಳಸಲ್ಪಡುತ್ತಿದೆ.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ಲೇಷಣೆಯ ಪ್ರಕಾರ, ಕೋವಿಡ್ -19 ನಗರ ಭಾರತದಲ್ಲಿ ಜೀವನೋಪಾಯವನ್ನು ಹಾಳುಮಾಡಿದೆ, ಬಡತನಕ್ಕೆ ತಳ್ಳಲ್ಪಟ್ಟ ಕಾರ್ಮಿಕರ ಹೊಸ ವರ್ಗವನ್ನು ಸೃಷ್ಟಿಸುತ್ತಿದೆ.
ಏಪ್ರಿಲ್ನಲ್ಲಿ 121 ದಶಲಕ್ಷಕ್ಕೂ ಹೆಚ್ಚು ಜನರು ಉದ್ಯೋಗ ಕಳೆದುಕೊಂಡಿದ್ದು, ಇದು ನಿರುದ್ಯೋಗ ದರವನ್ನು ದಾಖಲೆಯ 23% ಕ್ಕೆ ತಳ್ಳಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈ ಹೇಳಿದೆ. ಆದರೆ ಆರ್ಥಿಕತೆ ಮತ್ತೆ ತೆರೆದಂತೆ ನಿರುದ್ಯೋಗ ದರ ಕುಸಿದಿದೆ.
“ಜೀವನೋಪಾಯದ ಬಿಕ್ಕಟ್ಟನ್ನು ನಿವಾರಿಸಲು ರಾಷ್ಟ್ರೀಯ ಮಟ್ಟದ ಬದ್ಧತೆಯು ನಗರ ಕಾರ್ಮಿಕರನ್ನು ಬಡತನಕ್ಕೆ ಒಳಪಡದಂತೆ ತಡೆಯಲು ಮತ್ತು ಅಸಮಾನತೆಯ ಏರಿಕೆಯನ್ನು ಎದುರಿಸಲು ಅವಶ್ಯಕವಾಗಿದೆ” ಎಂದು ವರದಿಯ ಲೇಖಕರಾದ ಶಾನಿಯಾ ಭಲೋಟಿಯಾ, ಸ್ವಾತಿ ಧಿಂಗ್ರಾ ಮತ್ತು ಫೊಲ್ಲಾ ಕೊಂಡಿರೋಲಿ ಬರೆದಿದ್ದಾರೆ.
ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಈ ಹಿಂದೆ ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಈ ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ, ಈ ಹಿಂದೆ ಘೋಷಿಸಲಾದ 21 ಟ್ರಿಲಿಯನ್ ರೂಪಾಯಿ ಬೆಂಬಲ ಪ್ಯಾಕೇಜ್ ರ ಹಣಕಾಸಿನ ವರ್ಧನೆಯ ನಿರೀಕ್ಷೆಯನ್ನು ಹೆಚ್ಚಿಸಿದೆ ಎಂದಿದ್ದಾರೆ.
ಈ ಕಾರ್ಯಕ್ರಮವು ಆರ್ಥಿಕತೆಗೆ ಬೇಡಿಕೆಗೆ ಉತ್ತೇಜನವನ್ನು ನೀಡುತ್ತದೆ ಎಂದು ಮುಂಬೈನ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ರಿಸರ್ಚ್ ನ ಪ್ರಾಧ್ಯಾಪಕ ಮತ್ತು ಮೋದಿಯ ಸಲಹೆಗಾರ ಅಶಿಮಾ ಗೋಯಲ್ ಹೇಳಿದ್ದಾರೆ.
ಒಟ್ಟಿನಲ್ಲಿ ಗ್ರಾಮಗಳಿಗೆ ಮೀಸಲಾಗಿದ್ದ ಮನ್ರೇಗಾ ಯೋಜನೆಯನ್ನು ನಗರಗಳಿಗೆ ತರುವುದರಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲಿದೆ ಮತ್ತು ಜನರಿಗೆ ಜೀವನೋಪಾಯ ಸಿಗಲಿದೆ. ಸಾಂಕ್ರಾಮಿಕ ರೋಗ ನೀಡಿರುವ ಹೊಡೆತದಿಂದ ತಪ್ಪಿಸಿಕೊಳ್ಳಲು ಇದು ಸರಿಯಾದ ಯೋಜನೆಯೆಯೇ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.