ಕಾಲಕ್ಕೆ ತಕ್ಕಂತೆ ಜಗತ್ತು ಬದಲಾವಣೆಗೆ ತೆರೆದುಕೊಳ್ಳುತ್ತದೆ. ಹರಿವ ನೀರಿನಂತೆ ಬೇಕಾದ ಆಕಾರಕ್ಕೆ ತನ್ನನ್ನು ತಾನು ಒಗ್ಗಿಸಿಕೊಳ್ಳುತ್ತದೆ. ಪ್ರಕೃತಿಯ ಚರಾಚರ ವಸ್ತುಗಳಿಗೆ ಬದಲಾವಣೆಗೆ ತೆರೆದುಕೊಳ್ಳುವುದು, ಒಗ್ಗಿಸಿಕೊಳ್ಳುವುದು ದೊಡ್ಡ ವಿಷಯವೂ ಅಲ್ಲ. ಅದೊಂದು ವಿಶೇಷವೂ ಅಲ್ಲ. ಇದಕ್ಕೆ ಸಾಕ್ಷಿ ನಾವುಗಳೇ. ಕೊರೋನಾ ಸಂಕಷ್ಟದ ಕಾರಣದಿಂದ ಜಗತ್ತಿನಲ್ಲಿ ಒಂದು ಸುತ್ತಿನ ಬದಲಾವಣೆಯ ಗಾಳಿ ಬೀಸಿದೆ. ಈ ಗಾಳಿಯ ಸೆಳೆತಕ್ಕೆ ನಾವೆಲ್ಲರೂ ಸಿಕ್ಕಿಕೊಂಡು ಒಂದಷ್ಟು ನಲುಗಿದ್ದೇವೆ. ಅಯ್ಯೋ, ಇಂತಹ ಬದುಕನ್ನು ಬದುಕುವುದಾದರೂ ಸಾಧ್ಯವೇ ಎಂಬುದಾಗಿಯೂ ಚಿಂತಿಸಿದ್ದೇವೆ. ಆದರೆ ಕೊನೆಗೂ ಅದೇ ಬದಲಾವಣೆಯ, ಬದಲಾಗುತ್ತಿರುವ ಬದುಕನ್ನು ಒಪ್ಪಿ ನಡೆಯುವುದನ್ನೂ ರೂಢಿ ಮಾಡಿಕೊಂಡಿದ್ದೇವೆ. ಜನರಿಗೆ ಕೊರೋನಾ ಸಂಕಷ್ಟ ಒಂದಷ್ಟು ಮಟ್ಟಿಗೆ ಪಾಠವನ್ನೇ ಕಲಿಸಿದೆ, ಕಲಿಸುತ್ತಲೇ ಇದೆ ಎಂಬುದಕ್ಕೆ ಸಾಕ್ಷಿಗಳಾಗಿ ನಾವಿದ್ದೇವೆ.
ಕೊರೋನಾ ವಿಚಾರದಲ್ಲಿ ಜಗತ್ತಿನ ವಿಚಾರ ಹಾಗಿರಲಿ. ಮೊದಲು ನಮ್ಮ ದೇಶದ ಸ್ಥಿತಿಗತಿ, ಆ ವಿಷಮ ಪರಿಸ್ಥಿತಿಗೆ ಭಾರತೀಯರು ಶರಣಾದ ರೀತಿ, ಆ ಕಠಿಣ ಸಂಕಷ್ಟದಿಂದ ಸಮಾಜವನ್ನು ಪಾರು ಮಾಡಲು ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳು, ಆರೋಗ್ಯ, ಆರ್ಥಿಕ ಬದುಕಿನ ಮೇಲಾದ ಹೊಡೆತ ಇವೆಲ್ಲದರ ಬಗೆಗೂ ಒಮ್ಮೆ ಹಿಂತಿರುಗಿ ನೋಡಿದಾಗ ಕೊರೋನಾ ರಣಕೇಕೆ ಮತ್ತು ಅದನ್ನು ಮಣಿಸಲು ದೇಶ ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳ ಬಗ್ಗೆ ಸತ್ಯದರ್ಶನವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ.
ಈಗಾಗಲೇ ಔಷಧ ಕಂಡುಹಿಡಿಯದ ರೋಗಕ್ಕೇ ಭಯ ಬೀಳುವ ನಾವುಗಳು, ಕಣ್ಣಿಗೆ ಕಾಣದ, ಔಷಧವೇ ಇರದ ವೈರಾಣುವಿನ ಕಾಟಕ್ಕೆ ಸಿಲುಕಿ ನಲುಗಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಜನರ ಆರೋಗ್ಯ, ಆರ್ಥಿಕತೆ ಎಲ್ಲವನ್ನೂ ಕಾಪಾಡುವ ನಿಟ್ಟಿನಲ್ಲಿ ದೇಶದ ಸಮರ್ಥ ನಾಯಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕಾನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಆಹಾರ, ಆರೋಗ್ಯ, ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದ ಜನರ ಕಣ್ಣೀರೊರೆಸುವ ಕಾರ್ಯವನ್ನು ನಮೋ ಸರ್ಕಾರ ಯಶಸ್ವಿಯಾಗಿ ಮಾಡಿದೆ.
ಕೊರೋನಾ ಕಾರಣದಿಂದ ದೇಶದ ಅದೆಷ್ಟೋ ಜನರು ಆರೋಗ್ಯ ಕೆಡಿಸಿಕೊಂಡು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಇಂತಹ ಸಂದರ್ಭದಲ್ಲಿ ಪೂರಕ ಚಿಕಿತ್ಸೆಗೆ ತುರ್ತು ಅಗತ್ಯ ಎನಿಸಿದ ಎಲ್ಲಾ ರೀತಿಯ ನೆರವನ್ನು ಇಡೀ ದೇಶಕ್ಕೆ ಒದಗಿಸಿಕೊಡುವ ಪ್ರಯತ್ನವನ್ನು ನಮೋ ಸರ್ಕಾರ ಮಾಡಿತು. ಪಿಪಿಇ ಕಿಟ್, ಚಿಕಿತ್ಸೆಗೆ ಅಗತ್ಯ ಎನಿಸಿದ ಔಷಧಗಳ ಪೂರೈಕೆ, ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಸೇರಿದಂತೆ ಇನ್ನಿತರ ಅತ್ಯಗತ್ಯ ವಸ್ತುಗಳನ್ನು ದೇಶದ ಪ್ರತಿಯೊಂದು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಿಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿತು. ಇದಲ್ಲದೆ, ದೇಶದ ಹಲವಾರು ರಾಜ್ಯಗಳಲ್ಲಿ ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆಗಳು, 1000 ಕ್ಕೂ ಅಧಿಕ ಕೋವಿಡ್ ಪ್ರಯೋಗಾಲಯಗಳು, ಆಸ್ಪತ್ರೆಗಳಿಗೆ ವೆಂಟಿಲೇಟರ್ ವ್ಯವಸ್ಥೆ, ವೈದ್ಯಕೀಯ ಸಲಕರಣೆ, ಹೆಚ್ಚುವರಿ ಹಾಸಿಗೆ ಹೀಗೆ ಹತ್ತು ಹಲವು ರೀತಿಯ ವ್ಯವಸ್ಥೆಗಳನ್ನು ಮಾಡಿ ಕೊಟ್ಟಿತು. ಕೊರೋನಾ ಸೋಂಕಿತರ ಚಿಕಿತ್ಸೆಗೆ ಬೇಕಾದ ಎಲ್ಲಾ ತರದ ವ್ಯವಸ್ಥೆಗಳನ್ನೂ ಕೇವಲ ಕೆಲವೇ ಸಮಯದ ಅವಧಿಯಲ್ಲಿ ಪೂರೈಸಿಕೊಟ್ಟ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಂದರೂ ಅತಿಶಯವಾಗಲಾರದು.
ದೇಶಕ್ಕೆ ದೇಶವೇ ಲಾಕ್ಡೌನ್ ಆದಾಗ ದೇಶದ ಆರ್ಥಿಕತೆಗೂ ಹೊಡೆತ ಬಿತ್ತು. ಅದೆಷ್ಟೋ ಬಡ ಜನರಿಗೆ ಒಪ್ಪೊತ್ತಿನ ಊಟ ಹೊಂದಿಸಿಕೊಳ್ಳುವುದೂ ಕಷ್ಟವಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಡವರಿಗೆ ಉಚಿತ ರೇಶನ್ ನೀಡುವ ಮೂಲಕ ಅವರ ಆಹಾರದ ಅವಶ್ಯಕತೆಗೂ ಪರಿಹಾರ ಒದಗಿಸಿಕೊಟ್ಟಿತು. ನೆಲೆ ಕಳೆದುಕೊಂಡು, ಕೆಲಸವನ್ನು ಕಳೆದುಕೊಂಡು ಊರಲ್ಲದ ಊರಲ್ಲಿ ಸಂಕಷ್ಟಕ್ಕೆ ಒಳಗಾದ ಜನರಿಗೆ ಅವರವರ ಊರಿಗೆ ತೆರಳಲು ನೆರವು ನೀಡಿತು. ಅಲ್ಲದೆ ಊರಲ್ಲಿಯೇ ಅವರಿಗೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿಯೂ ಕ್ರಮ ಕೈಗೊಂಡಿತು. ಲಾಕ್ಡೌನ್ನಿಂದಾಗಿ ಕಂಗೆಟ್ಟಿದ್ದ ಬಡ ವರ್ಗವನ್ನು ಗುರುತಿಸಿ ಅವರಿಗೆ ಪರಿಹಾರಧನವನ್ನೊದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುವ ಮೂಲಕ ಸಮಸ್ಯೆಗೆ ಕೊಂಚ ಮಟ್ಟಿಗೆ ತಾತ್ಕಾಲಿಕ ಪರಿಹಾರವನ್ನು ನೀಡಿತು. ಆರ್ಥಿಕತೆ ಮತ್ತೆ ಬಲಿಷ್ಠ ಆಗಬೇಕಾದರೆ ಜನರು ಮತ್ತೆ ಕೊರೋನಾ ಭಯವಿಲ್ಲದೆ ಕೆಲಸ ಮಾಡುವಂತಾಗಬೇಕು ಎಂಬುದನ್ನು ಅರಿತು ಅದಕ್ಕೆ ಬೇಕಾದ ಕಾರ್ಯಯೋಜನೆಗಳನ್ನು ಅನುಷ್ಠಾನ ಮಾಡುವ ಎಲ್ಲಾ ಯೋಜನೆಗಳನ್ನೂ ಸಿದ್ಧಗೊಳಿಸಿತು. ದೇಶದ ಆರ್ಥಿಕತೆಯನ್ನು ಮತ್ತೆ ಮೇಲೆತ್ತಲು ಬೇಕಾದ ಅಗತ್ಯ ಕ್ರಮಗಳ ಬಗೆಗೂ ಗಮನ ಹರಿಸಿ, ಆ ನಿಟ್ಟಿನಲ್ಲಿ ಜನರನ್ನು ತೊಡಗಿಸಿಕೊಳ್ಳಲು ಪ್ರೇರೇಪಣೆಯನ್ನು ನೀಡಿತು.
ನಾವಿಲ್ಲಿ ಶ್ಲಾಘಿಸಬೇಕಾದದ್ದು, ಈ ಸಂಕಷ್ಟದ ಅವಧಿಯಲ್ಲಿ ಮೋದಿ ಸರ್ಕಾರ ಈ ಗಂಭೀರ ಸ್ಥಿತಿಯ ಬಗ್ಗೆ ಅಯ್ಯೋ ಮುಂದೇನಪ್ಪಾ?… ಎಂದು ತಲೆಗೆ ಕೈ ಹೊತ್ತು ಕುಳಿತುಕೊಳ್ಳದೆ, ಇದನ್ನು ಅವಕಾಶವಾಗಿ ಬಳಸಿಕೊಳ್ಳುವುದು ಹೇಗೆ ಎಂಬ ನಿಟ್ಟಿನಲ್ಲಿ ಯೋಚನೆ ಮಾಡಿದ್ದು. ಕೊರೋನಾ ವಕ್ಕರಿಸುವುದಕ್ಕೂ ಮೊದಲು ದೇಶದಲ್ಲಿ ಪಿಪಿಇ ಕಿಟ್ ಉತ್ಪಾದನೆಯೇ ಇರಲಿಲ್ಲ. ಆದರೆ ಕೊರೋನಾ ಬಂದ ಬಳಿಕ ದೇಶದಲ್ಲಿ ಪಿಪಿಇ ಕಿಟ್ ತಯಾರಿಕೆಯಲ್ಲಿ ತೊಡಗಿದ ಭಾರತ ಇಂದು ದಿನವೊಂದಕ್ಕೆ ಲಕ್ಷಕ್ಕೂ ಅಧಿಕ ಪಿಪಿಇ ತಯಾರಿಸಲು ಶಕ್ತವಾಗಿದೆ. ನಮ್ಮ ದೇಶದಲ್ಲಿ ಚಿಕಿತ್ಸೆಗೆ ಬಳಕೆ ಮಾಡುವ ವೆಂಟಿಲೇಟರ್ನಿಂದ ಹಿಡಿದು ಇನ್ನಿತರ ಅಗತ್ಯ ಸಲಕರಣೆಗಳನ್ನೂ ನಾವೇ ತಯಾರಿಸುವಂತಾಗಿದೆ. ಮಾಸ್ಕ್, ಸ್ಯಾನಿಟೈಸರ್ ತಯಾರಿಕೆಯಲ್ಲಿ ದೇಶದ ಸಾಮಾನ್ಯ ಜನರೂ ತೊಡಗಿಸಿಕೊಳ್ಳುವ ಮೂಲಕ ಸ್ವಾವಲಂಬನೆಯ ಕನಸಿನ ಜೊತೆಗೆ ಹೆಜ್ಜೆ ಹಾಕುವಂತಾಗಿದೆ. ಕೊರೋನಾ, ಕೊರೋನೇತರ ಸ್ವದೇಶಿ ಅಭಿವೃದ್ಧಿಯ ಅದೆಷ್ಟೋ ಮೊಬೈಲ್ ಅಪ್ಲಿಕೇಶನ್ಗಳ ಉದಯವಾಗಿದೆ. ಉದಯೋನ್ಮುಖ ಪ್ರತಿಭೆಗಳು ತಮ್ಮ ಚಾಕಚಕ್ಯತೆಯಿಂದ ಪ್ರಚಾರಕ್ಕೆ ಬರುವಂತಾಗಿದೆ. ಒಟ್ಟಿನಲ್ಲಿ ದೇಶದಲ್ಲೊಂದು ಸ್ವದೇಶೀ ಮಂತ್ರವೇ ಕೊರೋನಾ ಬದಲಾವಣೆಯ ಕಾರಣದಿಂದಾಗಿದೆ.
ಈ ಎಲ್ಲಾ ಧನಾತ್ಮಕ ಬದಲಾವಣೆಗಾಗಿ ಜನರನ್ನು ಬೆಂಬಲಿಸಿ, ಅವರಿಗೆ ಬೇಕಾದ ನೆರವು, ಪ್ರೋತ್ಸಾಹಗಳನ್ನು ನೀಡಿದ ಶಕ್ತಿಯಾಗಿ ನಮಗೆ ನರೇಂದ್ರ ಮೋದಿ ಅವರೇ ಕಂಡು ಬರುತ್ತಿದ್ದಾರೆ. ಅವರ ಕನಸಿನ ಆತ್ಮನಿರ್ಭರ ಸ್ವದೇಶಿ, ಸ್ವಾವಲಂಬಿ ರಾಷ್ಟ್ರದ ಪರಿಕಲ್ಪನೆಯ ದೃಷ್ಟಿಕೋನವನ್ನು ಇಂತಹ ಕಠಿಣ ಪರಿಸ್ಥಿತಿಯಲ್ಲಿಯೇ ಜನರ ಮನಸ್ಸಿಗೆ ತುಂಬಿ ಅದರಲ್ಲಿ ಯಶಸ್ಸು ಪಡೆದಿದ್ದಾರೆ ಎಂದರೆ ಅವರಿಗೆ ದೇಶದ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಕಾಳಜಿ, ಮತ್ತು ಅನಿವಾರ್ಯತೆಗಳನ್ನು ಒಪ್ಪಿ, ಅಪ್ಪಿಕೊಂಡು ಸಾಗುವ ಚಾಕಚಕ್ಯತೆ ಇದೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕು. ಮೋದಿ ಅವರ ದೂರದೃಷ್ಟಿಯ ಫಲವಾಗಿಯೇ ದೇಶದ ಮಿಲಿಟರಿಗೆ ಬೇಕಾದ ಹೆಚ್ಚಿನ ಅಗತ್ಯ ರಕ್ಷಣಾ ಪರಿಕರಗಳ ಉತ್ಪಾದನೆಯೂ ದೇಶದೊಳಗೆಯೇ ಆಗುವಂತಾಗಿದೆ. ಓರ್ವ ವ್ಯಕ್ತಿಯ ಸಾಮರ್ಥ್ಯದ ಅರಿವಾಗಬೇಕಾದರೆ ಇದಕ್ಕಿಂತ ಒಳ್ಳೆಯ ಉದಾಹರಣೆ ಸಿಗಲಾರದೇನೋ ಎಂಬಷ್ಟರ ಮಟ್ಟಿಗೆ ಮೋದಿ ದೇಶದಲ್ಲಿ ಬದಲಾವಣೆಯ ಪರ್ವವನ್ನು ಆರಂಭ ಮಾಡಿದ್ದಾರೆ.
ಕೊರೋನಾ ಸಂಕಷ್ಟದಿಂದ ಭಾರತವನ್ನು ಪಾರು ಮಾಡುವತ್ತ ಮಾತ್ರವೇ ಮೋದಿ ಚಿತ್ತ ನೆಟ್ಟಿಲ್ಲ. ಬದಲಾಗಿ ವಿದೇಶಗಳಿಗೂ ಔಷಧ, ವೈದ್ಯಕೀಯ ಉಪಕರಣಗಳನ್ನು ಒದಗಿಸಿಕೊಟ್ಟು ನೆರವು ನೀಡುವ ಮೂಲಕ ಸಂಕಷ್ಟದಿಂದ ಹೊರಬರಲು ಸಹಾಯ ಮಾಡಿದ್ದಾರೆ. ಜಗತ್ತಿನ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮೆರಿಕ, ಎಲ್ಲಾ ರೀತಿಯಲ್ಲೂ ಅಭಿವೃದ್ಧಿ ಹೊಂದಿದೆ ಎಂದೇ ನಂಬಲಾಗಿರುವ ಅಮೆರಿಕಾಗೂ ಭಾರತ ಈ ಸಂಕಷ್ಟದ ಅವಧಿಯಲ್ಲಿ ನೆರವು ನೀಡಿದೆ ಎಂದರೆ ಮೋದಿ ಭಾರತವನ್ನು ಜಾಗತಿಕ ಮಟ್ಟದಲ್ಲಿಯೂ ಇತರ ರಾಷ್ಟ್ರಗಳಿಗೆ ಬೆಳಕು ನೀಡುವ ಹಾಗೆ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. ಇಂದು ಜಗತ್ತಿನ ಹೆಚ್ಚಿನ ಎಲ್ಲಾ ರಾಷ್ಟ್ರಗಳಿಗೂ ಭಾರತ ತಮ್ಮ ಮಿತ್ರ ರಾಷ್ಟ್ರ ಎಂಬ ಕಲ್ಪನೆ ಬಂದಿದೆ ಎಂದಾದರೆ ಆ ಗೆಳೆತನದ ಹಿಂದೆ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರದ ಸಹಕಾರ, ಪರಸ್ಪರತೆಯ ಮಂತ್ರವಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ.
ಒಟ್ಟಿನಲ್ಲಿ ಹೇಳುವುದಾದರೆ ಕೊರೋನಾ ಬಂದು ಭಾರತದ ಶಕ್ತಿಯನ್ನು ವಿಶ್ವಕ್ಕೆ, ನರೇಂದ್ರ ಮೋದಿ ಅವರ ಶಕ್ತಿಯನ್ನು ಭಾರತೀಯರಿಗೆ ಅರಿವು ಮಾಡಿಸಿಕೊಟ್ಟಿದೆ ಎಂದು ನಿಸ್ಸಂಶಯವಾಗಿ ಹೇಳಬಹುದು. ಈ ಕಠಿಣ ಪರಿಸ್ಥಿತಿಯಲ್ಲಿ ಮೋದಿ ಅವರ ಬದಲಾಗಿ ಬೇರೆ ಯಾರೇ ಪ್ರಧಾನಿಯಾಗಿದ್ದರೂ ಇದನ್ನು ಇಷ್ಟು ಸರಳವಾಗಿ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ ಎಂಬುದಂತೂ ಸತ್ಯ. ವಿರೋಧಿಗಳ ವಿರೋಧದ ನಡುವೆಯೂ ಕೊರೋನಾ ವಿರುದ್ಧ ಸಮರ್ಪಕವಾಗಿ, ಸಮರ್ಥವಾಗಿ ಹೋರಾಡುವ, ಅಂತಃಶಕ್ತಿಯನ್ನು ಜನರಲ್ಲಿ ತುಂಬುತ್ತಿರುವ ‘ಜನ ಮನ ಮೆಚ್ಚಿದ ನಾಯಕ ನಮೋ’ಗೆ ಹ್ಯಾಟ್ಸಾಪ್ ಹೇಳಲೇ ಬೇಕು. ಮೋದಿ ಸಾಮಾನ್ಯ ವ್ಯಕ್ತಿಯಲ್ಲ. ಬದಲಾಗಿ ಭವ್ಯ ಭಾರತದ ಅಭಿವೃದ್ಧಿಯ ಹಿಂದಿನ ಮಹಾನ್ ಶಕ್ತಿ ಎಂದರದು ಅತಿಶಯವಾಗಲಾರದು.
✍️ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.