ಸ್ವಾತಂತ್ರ್ಯ ದಿನಾಚರಣೆಯಂದು ದೇಶದ ಪ್ರಧಾನಮಂತ್ರಿಗಳು ಐತಿಹಾಸಿಕ ಕೆಂಪುಕೋಟೆಯ ಮೇಲೆ ನಿಂತು ದೇಶವನ್ನು ಉದ್ದೇಶಿಸಿ ಮಾತನಾಡುವ ಪರಿಪಾಠಕ್ಕೆ ಅದರದ್ದೇ ಆದ ಮಹತ್ವವಿದೆ. ದೇಶದ ಕೋಟ್ಯಾಂತರ ಜನರ ಆಶೋತ್ತರಗಳು, ಆಕಾಂಕ್ಷೆಗಳು ಸ್ವಾತಂತ್ರ್ಯ ದಿನದಂದು ಪ್ರಧಾನಿಯ ಮೂಲಕ ಕೆಂಪು ಕೋಟೆಯ ಮೇಲಿಂದ ಪ್ರತಿಫಲನಗೊಳ್ಳುತ್ತದೆ. ತನ್ನ ಸರ್ಕಾರ ಹಿಂದೆ ಮಾಡಿದ ಕಾರ್ಯವನ್ನು ಮತ್ತು ಮುಂದೆ ಮಾಡಲಿರುವ ಕಾರ್ಯವನ್ನು ಪ್ರಧಾನಿ ಇಲ್ಲಿ ಜನರ ಮುಂದೆ ಇಡುತ್ತಾರೆ. ಮಹತ್ವದ ಯೋಜನೆಗಳ ಘೋಷಣೆಗಳು ಇಲ್ಲಿ ಆಗುತ್ತದೆ. ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಕಾಲದಿಂದಲೂ ಇದು ಮುಂದುವರೆದುಕೊಂಡು ಬಂದಿದೆ.
ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಬಳಿಕ ಸ್ವಾತಂತ್ರ್ಯ ದಿನದಂದು ಕೆಂಪುಕೋಟೆಯಲ್ಲಿ ಮಾಡುವ ಭಾಷಣಕ್ಕೆ ಹೆಚ್ಚು ತೂಕ ಬಂದಿದೆ. ಇದಕ್ಕೆ ಪ್ರಮುಖ ಕಾರಣ ಮೋದಿಯವರ ವಾಕ್ಚಾತುರ್ಯ, ಅವರು ಎತ್ತಿಕೊಳ್ಳುವ ವಿಷಯ. ಮಾತಿನ ಮೂಲಕ ಎಂಥವರನ್ನೂ ಹಿಡಿದಿಟ್ಟುಕೊಳ್ಳುವ ಅಸಾಧಾರಣ ಸಾಮರ್ಥ್ಯ ಪ್ರಧಾನಿ ಮೋದಿಗೆ ಇದೆ. ಕಾಗದ ನೋಡಿಕೊಂಡು ಭಾಷಣ ಮಾಡುವ ಪದ್ಧತಿಗೆ ತಿಲಾಂಜಲಿ ಇಟ್ಟವರೇ ಪ್ರಧಾನಿ ಮೋದಿ. ಅವರಿಗಿಂತ ಮೊದಲು ಕೆಂಪುಕೋಟೆ ಮೇಲೆ ನಿಂತು ಭಾಷಣ ಮಾಡಿದ ಪ್ರಧಾನಿಗಳೆಲ್ಲರೂ ಕಾಗದದಲ್ಲಿ ಬರೆದುದನ್ನು ಒಂದಿಂಚೂ ಆಚೆ-ಈಚೆ ಆಗದಂತೆ ಓದಿದವರು. ಮನಬಿಚ್ಚಿ ದೇಶದ ಜನರನ್ನು ತಲುಪುವಂತೆ ಮಾತನಾಡುವ ಅಮೋಘ ಕಲೆ ಹೆಚ್ಚಿನ ಪ್ರಧಾನಿಗಳಿಗೆ ಇರಲಿಲ್ಲ. ಆದರೆ ಪ್ರಧಾನಿ ಮೋದಿಗೆ ಜನ್ಮದತ್ತವಾಗಿಯೇ ಈ ಕಲೆ ಒಲಿದಿದೆ.
ಅವರ ಭಾಷಣಕ್ಕೆ ಹೆಚ್ಚು ತೂಕ ಬರಲು ಮತ್ತೊಂದು ಕಾರಣ, ಅವರು ಎತ್ತಿಕೊಳ್ಳುವ ವಿಷಯ. ಜನಸಾಮಾನ್ಯನಿಗೆ ಸಾಮಾನ್ಯವಾದ ಭಾಷೆಯಲ್ಲೇ ಆರ್ಥಿಕತೆ, ನೈರ್ಮಲ್ಯ, ಆರೋಗ್ಯ, ಭದ್ರತೆ, ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಮನಮುಟ್ಟುವಂತೆ ಮಾಹಿತಿ ನೀಡುವ, ಸಂದೇಶ ನೀಡುವ ನಿಪುಣತೆ ಮೋದಿ ಅವರಿಗಿದೆ. ಪಾಂಡಿತ್ಯ ಪ್ರದರ್ಶಿಸಿ ಕ್ಲಿಷ್ಟಕರ ಭಾಷಾ ಪ್ರಯೋಗ ಮಾಡಿದರೆ ಕೇವಲ ದೇಶದ ಹೆಚ್ಚು ಶಿಕ್ಷಿತ ವರ್ಗವನ್ನು ಮಾತ್ರ ತಲುಪಲು ಸಾಧ್ಯ. ಆದರೆ ಸರಳವಾದ ಭಾಷೆಯಲ್ಲಿ ಕ್ಲಿಷ್ಟಕರ ವಿಷಯಗಳನ್ನು ವಿವರಿಸುವ, ಅದನ್ನು ಜನಸಾಮಾನ್ಯನಿಗೆ ತಲುಪುವಂತೆ ಮಾಡುವ ಜಾಣತನ ಪ್ರಧಾನಿ ಮೋದಿ ಅವರಿಗೆ ಇದೆ.
ಕೆಂಪು ಕೋಟೆಯ ಮೇಲೆ ನಿಂತು ಶೌಚಾಲಯದ ಬಗ್ಗೆ, ನೈರ್ಮಲ್ಯದ ಬಗ್ಗೆ, ಸ್ಯಾನಿಟರಿ ನ್ಯಾಪ್ಕಿನ್ಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಪ್ರಧಾನಿ ಬಹುಶಃ ಮೋದಿಯವರನ್ನು ಬಿಟ್ಟರೆ ಬೇರೆ ಯಾರು ಇಲ್ಲ. ಶೌಚಾಲಯದ ಬಗ್ಗೆ ಮಾತನಾಡುವುದು ಘನತೆಯನ್ನು ಕಮ್ಮಿ ಮಾಡುತ್ತದೆ ಎಂಬ ಮನಸ್ಥಿತಿ ಹಲವರಲ್ಲಿದೆ. ಇಂತಹ ಸಂದರ್ಭದಲ್ಲಿ ಪ್ರತಿ ಮನೆಗೂ ಶೌಚಾಲಯವನ್ನು ನಿರ್ಮಾಣ ಮಾಡುವುದು, ಭಾರತವನ್ನು ಬಯಲು ಶೌಚ ಮುಕ್ತಗೊಳಿಸುವುದು ನನ್ನ ಗುರಿ ಎಂದು ತಮ್ಮ ಮೊದಲ ಸ್ವಾತಂತ್ರ್ಯೋತ್ಸವದ ಭಾಷಣದಲ್ಲೇ ಮೋದಿ ಘೋಷಣೆ ಮಾಡಿದ್ದರು. ಅದರಂತೆ ಇಂದು ದೇಶ ಶೇಕಡಾ ನೂರರಷ್ಟು ಬಯಲು ಶೌಚ ಮುಕ್ತಗೊಂಡಿದೆ.
ಇನ್ನು ಹೆಣ್ಣುಮಕ್ಕಳ ಋತುಸ್ರಾವ, ಸ್ಯಾನಿಟರಿ ನ್ಯಾಪ್ಕಿನ್, ಸುರಕ್ಷಿತ ಮಾತೃತ್ವ ಮುಂತಾದ ವಿಷಯಗಳ ಬಗ್ಗೆ ಸಾಮಾನ್ಯ ಪುರುಷ ಕೂಡ ಮಾತನಾಡಲು ಹಿಂಜರಿಯುತ್ತಾನೆ. ಹೆಣ್ಣಿಗೆ ಮಾತ್ರ ಸಂಬಂಧಿಸಿದ ವಿಷಯ ಇದು ಎಂಬುದು ಹಲವರ ಧೋರಣೆ. ಭೂಮಿ ಮೇಲೆ ಮನುಷ್ಯನ ಅಸ್ತಿತ್ವ ಉಳಿಯಲು ಹೆಣ್ಣು ಋತುಮತಿಯಾಗಲೇಬೇಕು. ಇದು ಪ್ರಕೃತಿಯ ಸಹಜ ನಿಯಮ. ಈ ಸಹಜತೆಯನ್ನು ಅಸಹಜ ಎಂಬಂತೆ ಈ ಸಮಾಜ ಬಿಂಬಿಸಿದೆ. ಹೆಣ್ಣಿನ ಸುರಕ್ಷಿತ ಋತುಸ್ರಾವವನ್ನು ಖಚಿತಪಡಿಸುವುದು ಕೂಡ ನಮ್ಮ ವ್ಯವಸ್ಥೆಯ ಪ್ರಮುಖ ಕರ್ತವ್ಯವಾಗಿರುತ್ತದೆ. ದುಬಾರಿ ಬೆಲೆಯ ಸ್ಯಾನಿಟರಿ ನ್ಯಾಪ್ಕಿನ್ ಬಡ ವರ್ಗದ ಹೆಣ್ಣು ಮಕ್ಕಳಿಗೆ ಇಂದಿಗೂ ಕೈಗೆಟುಕುತ್ತಿಲ್ಲ. ಇದರ ಪರಿಣಾಮವಾಗಿ ಋತುಸ್ರಾವದ ವೇಳೆ ನೈರ್ಮಲ್ಯ ಕಾಪಾಡುವುದು ಅನೇಕ ಹೆಣ್ಣುಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ನರೇಂದ್ರ ಮೋದಿ ಸರ್ಕಾರ ಕಡಿಮೆ ಬೆಲೆಗೆ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ಒದಗಿಸುತ್ತಿದೆ. ಇಂದು ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ನರೇಂದ್ರ ಮೋದಿ ಇದನ್ನೇ ಹೇಳಿದ್ದಾರೆ.
“ನಮ್ಮ ಸರ್ಕಾರ ನಮ್ಮ ಹೆಣ್ಣುಮಕ್ಕಳ ಮತ್ತು ಸಹೋದರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಆರು ಸಾವಿರ ಜನ ಔಷಧಿ ಕೇಂದ್ರಗಳ ಮೂಲಕ 5ಕೋಟಿ ಮಹಿಳೆಯರು 1 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ಪಡೆದುಕೊಂಡಿದ್ದಾರೆ” ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಸ್ಯಾನಿಟರಿ ನ್ಯಾಪ್ಕಿನ್ ಬಗ್ಗೆ ಕೆಂಪುಕೋಟೆ ಮೇಲೆ ನಿಂತು ಮಾತನಾಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೋದಿಯವರ ಪ್ರತಿ ಮಾತಿಗೂ ಅದ್ಭುತವನ್ನು ಸೃಷ್ಟಿಸುವ ಶಕ್ತಿ ಇದೆ. ಹೆಣ್ಣು ಮಕ್ಕಳ ಬಗೆಗಿನ ಅವರ ಮಾತು ಕೂಡ ಹೆಣ್ಣಿನ ಆರೋಗ್ಯದ ಬಗೆಗಿನ ಸಮಾಜದ ಸಂಕುಚಿತ ಮನಸ್ಥಿತಿಯನ್ನು ಬದಲಾಯಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಹಿಂದಿನ ಪ್ರಧಾನಿಗಳು ಮಾತನಾಡಲು ಹಿಂಜರಿಯುತ್ತಿದ್ದ ವಿಷಯಗಳನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯ ಮೇಲೆ ನಿಂತು ರಾಜ ಗಾಂಭೀರ್ಯದೊಂದಿಗೆ ಮಾತನಾಡುತ್ತಿದ್ದಾರೆ. ಅವರ ಸರಳತೆಗೆ, ಅವರ ವಿನಮ್ರತೆಗೆ ನಾವು ತಲೆದೂಗಲೇಬೇಕು.
ಶರಣ್ಯ ಶೆಟ್ಟಿ✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.