ಲಕ್ನೋ: ಭಾರತೀಯ ಅಸಂಖ್ಯಾತ ಜನರ ಮನೋಭಿಲಾಶೆಯಾಗಿದ್ದ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ರಂದು ಪ್ರಧಾನಿ ಮೋದಿ ಅವರು ಭೂಮಿ ಪೂಜೆ ನಡೆಸಿ ಚಾಲನೆ ನೀಡಿದ್ದಾರೆ. ಪ್ರಬಲ ಭೂಕಂಪಕ್ಕೂ ಜಗ್ಗದ ಬೃಹತ್ ಮಂದಿರ ನಿರ್ಮಾಣ ಕೈಂಕರ್ಯಗಳೂ ಆರಂಭವಾಗಿದ್ದು ಮಂದಿರ ಇನ್ನೇನು ಕೆಲವೇ ಸಮಯದಲ್ಲಿ ಸಂಪೂರ್ಣಗೊಳ್ಳಲಿದೆ.
ಈ ರಾಮ ಮಂದಿರಕ್ಕೆ 2,100 ಕೆ.ಜಿ. ತೂಕದ ಭಾರೀ ಗಾತ್ರದ ಗಂಟೆಯೊಂದನ್ನು ಉತ್ತರ ಪ್ರದೇಶದ ಜಲೇರಸ್ನಲ್ಲಿ ಸಿದ್ಧಗೊಳಿಸಲಾಗುತ್ತಿದ್ದು, ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಒಂದಾಗಿ ಈ ಬೃಹತ್ ಗಂಟೆಯನ್ನು ಸಿದ್ಧಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಗಂಟೆಯನ್ನು ಚಿನ್ನ, ಬೆಳ್ಳಿ, ತಾಮ್ರ, ಸತು, ಸೀಸ, ಕಬ್ಬಿಣ, ಪಾದರಸ, ತವರ ಎಂಬ ಅಷ್ಟ ಧಾತುಗಳನ್ನು ಬಳಕೆ ಮಾಡಿಕೊಂಡು ತಯಾರಿಸಲಾಗುತ್ತಿದೆ. ಈ ಗಂಟೆ ದೇಶದ ಅತ್ಯಂತ ದೊಡ್ಡ ಗಂಟೆ ಎಂಬ ಖ್ಯಾತಿಗೂ ಭಾಜನವಾಗಲಿದೆ.
ರಾಮ ಮಂದಿರಕ್ಕೆಂದೇ ವಿಶೇಷವಾಗಿ ಈ ಗಂಟೆಯನ್ನು ಸಿದ್ಧಪಡಿಸುತ್ತಿದ್ದೇವೆ. ಈ ವಿಚಾರವೇ ಈ ಗಂಟೆ ತಯಾರಿಕೆಯ ಸಂದರ್ಭದಲ್ಲಿ ನಮಗೆ ಹೆಚ್ಚಿನ ಉತ್ಸಾಹ, ಹುಮ್ಮಸ್ಸು ನೀಡುತ್ತಿದೆ. ಈ ತಯಾರಿ ಕೆಲಸದಲ್ಲಿ ಯಾವುದೇ ಲೋಪದೋಷಗಳು ಕಂಡು ಬರದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಲಾಗುತ್ತಿದೆ ಎಂದು ಈ ಗಂಟೆ ತಯಾರಿಸುತ್ತಿರುವ ತಂಡದ ನೇತೃತ್ವ ವಹಿಸಿರುವ ದೌ ದಯಾಳ್ ತಿಳಿಸಿದ್ದಾರೆ.
ಈ ಗಂಟೆ ತಯಾರಿಸಲು ಸುಮಾರು 21 ಲಕ್ಷ ರೂ. ಗಳಷ್ಟು ವೆಚ್ಚವಾಗಲಿದೆ. ಈ ಗಂಟೆಯನ್ನು ಹೊಸದಾಗಿ ನಿರ್ಮಾಣವಾಗುವ ರಾಮನ ಆಲಯಕ್ಕೆ ಕೊಡುಗೆ ನೀಡಲು ಬಯಸುವುದಾಗಿ ಗಂಟೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ವರ್ಕ್ ಶಾಪ್ನ ಆದಿತ್ಯ ಮಿತ್ತಲ್ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ದೌ ದಯಾಳ್ ಅವರು 101 ಕೆಜಿ ತೂಕದ ಗಂಟೆಯೊಂದನ್ನು ತಯಾರಿಸಿದ್ದು, ಈ ಗಂಟೆ ಕೇದಾರನಾಥದ ದೇವಾಲಯವೊಂದರಲ್ಲಿರುವುದಾಗಿಯೂ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.