ಆಷಾಡ ಕಳೆದು ಶ್ರಾವಣ ಬಂತೆಂದರೆ ಸಾಕು, ನಾಗರ ಪಂಚಮಿಯಿಂದ ಹಿಡಿದು ಸಾಲು ಸಾಲು ಹಬ್ಬಗಳು ಜನರ ಸಂಭ್ರಮವನ್ನು ನೂರ್ಮಡಿಗೊಳಿಸುತ್ತವೆ. ಶ್ರಾವಣದ ಎರಡನೇ ಶುಕ್ರವಾರ ಬರುವ ವರಮಹಾಲಕ್ಷ್ಮಿ ವ್ರತ ಪ್ರತ್ಯೇಕವಾಗಿ ಹೆಣ್ಣು ಮಕ್ಕಳಿಗೆ ವಿಶೇಷವಾದ ದಿನ. ಈ ದಿನದಂದು ಮುತ್ತೈದೆಯರು ತಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಿಸಿ ಮಂಗಳವನ್ನುಂಟು ಮಾಡು ಎಂದು ಆ ತಾಯಿ ಲಕ್ಷ್ಮಿಯನ್ನು ಪ್ರಾರ್ಥಿಸಿದರೆ, ಮದುವೆಯಾಗದ ಯುವತಿಯರು ಯೋಗ್ಯ ವರ ಸಿಗಲಿ ಎಂಬುದಾಗಿ ಪ್ರಾರ್ಥಿಸಿ ಮಹಾತಾಯಿ ಲಕ್ಷ್ಮೀ ದೇವಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದಿದೆ.
ಪುರಾಣದ ಪ್ರಕಾರ ಲಕ್ಷ್ಮೀ ದೇವಿಯು ಕ್ಷೀರ ಸಾಗರ(ಹಾಲಿನ ಸಮುದ್ರ)ದಿಂದ ಅವತಾರ ತಾಳಿದ ದಿನವೆಂದೂ, ಈ ದಿನದಂದು ತನು, ಮನಗಳನ್ನು ಆಕೆಯಲ್ಲಿ ಸ್ಥಾಪಿಸಿ ಭಕ್ತಿಯಿಂದ ಪೂಜಿಸಿದರೆ ಆಕೆ ಪ್ರಸನ್ನಳಾಗಿ ಬೇಡಿದ ವರವನ್ನಿತ್ತು, ಸಕಲ ಸಂಕಷ್ಟಗಳನ್ನು ಪರಿಹಾರ ಮಾಡಿ ಸಲಹುತ್ತಾಳೆ ಎಂಬ ಮಾತು ಜನಜನಿತ. ಪುರಾಣದಲ್ಲಿ ದೇವತೆಗಳು ಮತ್ತು ರಾಕ್ಷಸರು ಕ್ಷೀರ ಸಾಗರವನ್ನು ಕಡೆದು ಅಮೃತ ಪಡೆಯುವ ಸಂದರ್ಭದಲ್ಲಿ ಆ ಸಾಗರದಲ್ಲಿ ಶ್ವೇತವರ್ಣೆಯಾಗಿ ಲಕ್ಷ್ಮೀ ಉದ್ಭವವಾಗುವ ದಿನದ ನೆನಪಿನ ಸಲುವಾಗಿಯೇ ವರಮಹಾಲಕ್ಷ್ಮಿ ವ್ರತವನ್ನು ಕರ್ನಾಟಕ, ತಮಿಳುನಾಡು, ತೆಲಂಗಾಣ ಮೊದಲಾದ ಕಡೆಗಳಲ್ಲಿ ಶ್ರಾವಣದ ಎರಡನೇ ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಮುಂಜಾವಿನಲ್ಲೇ ಎದ್ದು, ಸ್ನಾನಾದಿಗಳನ್ನು ಮುಗಿಸಿ ಮನೆಯ ಮುಂದೆ ರಂಗೋಲೆಗಳನ್ನು ಹಾಕಿ, ಮನೆಯ ಬಾಗಿಲಿಗೆ ತೋರಣ ಕಟ್ಟಿ ಶೃಂಗರಿಸುತ್ತಾರೆ. ಹೊಸ ಬಟ್ಟೆಯನ್ನು ಧರಿಸುವ ಮಹಿಳೆಯರು, ಕಲಶದಲ್ಲಿ ನೀರುತುಂಬಿ, ಅದರ ಮೇಲೆ ಜುಟ್ಟಿರುವ ತೆಂಗಿನಕಾಯಿ ಇರಿಸಿ, ಅದನ್ನೇ ಲಕ್ಷ್ಮೀದೇವಿ ಎಂದು ಸಂಕಲ್ಪ ಮಾಡಿಕೊಂಡು, ಅದಕ್ಕೆ ಹೊಸ ಬಟ್ಟೆ, ಆಭರಣ, ಹೂವುಗಳನ್ನು ತೊಡಿಸಿ, ಅರಶಿನ ಕುಂಕುಮದಿಂದ ಶೃಂಗರಿಸಿ, ಬಗೆ ಬಗೆ ಹೂವು, ಹಣ್ಣು ಹಂಪಲುಗಳನ್ನು, ಭಕ್ಷ್ಯ ಭೋಜನಗಳನ್ನು, ಸುವಸ್ತುಗಳನ್ನು ಆಕೆಗೆ ಸಮರ್ಪಿಸಿ, ಮಂಗಳಾರತಿ ಮಾಡುತ್ತಾರೆ. ಆಕೆಯಲ್ಲಿ ತಮ್ಮ ಮನೋಭಿಲಾಶೆಗಳನ್ನು ಈಡೇರಿಸುವಂತೆ ಪ್ರಾರ್ಥನೆ ಸಲ್ಲಿಸುತ್ತಾರೆ. ಪೂಜೆಯಿಂದ ಪ್ರಸನ್ನಳಾದ ತಾಯಿ ನಮ್ಮ ಇಷ್ಟಾರ್ಥ ಸಿದ್ಧಿಯಾಗುವ ವರಗಳನ್ನಿತ್ತು ಹರಸುತ್ತಾಳೆ ಎಂಬ ನಂಬಿಕೆ ಜನಮಾನಸದಲ್ಲಿ ನೆಲೆಯೂರಿದೆ.
ಮಹಾಲಕ್ಷ್ಮಿಗೆ ಕಮಲದ ಹೂವು, ಬಿಲ್ವಪತ್ರೆ ಎಂದರೆ ಬಲು ಪ್ರೀತಿ. ಈ ವ್ರತದಂದು ಪೂಜೆಯಲ್ಲಿ ಕಮಲದ ಹೂ, ಬಿಲ್ವಪತ್ರೆಗೂ ಮಹತ್ವ ಹೆಚ್ಚು. ಬಿಲ್ವ ವೃಕ್ಷದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬ ಪ್ರತೀತಿಯೂ ಇದೆ. ಈ ಕಾರಣದಿಂದ ಬಿಲ್ವಪತ್ರೆಯಿಂದ ತಾಯಿಯನ್ನು ಅರ್ಚಿಸಿದರೆ ತಾಯಿ ಪ್ರಸನ್ನಳಾಗಿ ಕಾಪಾಡುತ್ತಾಳೆ ಎಂಬ ನಂಬಿಕೆಯೂ ಜನರಲ್ಲಿದೆ. ಇನ್ನು ಗೋಧೂಳಿ ಲಗ್ನದಲ್ಲಿ ತಾಯಿಯ ಪೂಜೆ ಮಾಡಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಭಕ್ತರದ್ದು.
ಯಾರ ಮನೆ-ಮನಗಳು ಶುದ್ಧವಾಗಿರುತ್ತದೆಯೋ ಅಲ್ಲಿ ಲಕ್ಷ್ಮೀನಾರಾಯಣರು ವಾಸ ಮಾಡುತ್ತಾರೆ ಎಂದು ಹೇಳಿದ್ದಾರೆ ಬಲ್ಲವರು. ಯಾರ ತನು, ಮನದಲ್ಲಿ ಶ್ರದ್ಧೆ, ಭಕ್ತಿ, ಸಹಕಾರ ಮನೋಭಾವ ತುಂಬಿರುವುದೋ ಅಂತಹ ಮನಸ್ಸೇ ತಾಯಿಗೆ ದೇಗುಲ. ಯಾರು ಮನೋ ನೈರ್ಮಲ್ಯದಿಂದ ತಾಯಿಯನ್ನು ಬೇಡಿಕೊಳ್ಳುವರೋ ಅವರಿಗೆ ಸನ್ಮಂಗಳವನ್ನು ತಾಯಿ ಒದಗಿಸುತ್ತಾಳೆ. ಒಂದು ವರಮಹಾಲಕ್ಷ್ಮಿ ಪೂಜೆ ಎಂದರೆ ಅಷ್ಟ ಲಕ್ಷ್ಮಿಯರ ಆರಾಧನೆ ನಡೆಸಿದ ಪುಣ್ಯದ ಫಲ ನಮ್ಮದಾಗುತ್ತದೆ ಎಂಬ ನಂಬಿಕೆಯೂ ಭಕ್ತರದ್ದು. ಈ ದಿನದಂದು ಲಕ್ಷ್ಮಿಗೆ ಪ್ರಿಯವಾದ ಕಡ್ಲೇಬೇಳೆಯಿಂದ ತಯಾರಿಸಿದ ಆಹಾರ, ಸಿಹಿ ತಿನಿಸುಗಳಿಗೆ ವಿಶೇಷ ಮಾನ್ಯತೆ ಇದೆ.
ಒಟ್ಟಿನಲ್ಲಿ ಜಗತ್ತು ಎಷ್ಟೇ ಮುಂದುವರಿದರೂ, ಆಧುನಿಕತೆಯತ್ತ ಅದೆಷ್ಟು ಸಾಗಿದರೂ ಹಿಂದೂ ಹಬ್ಬಗಳು ಮಾತ್ರ ಕಳೆಗುಂದಿಲ್ಲ ಎಂಬುದಕ್ಕೆ ವರಮಹಾಲಕ್ಷ್ಮಿ ಹಬ್ಬವೂ ಸಾಕ್ಷಿ ಎನ್ನಬಹುದು. ಈ ದಿನದಂದು ಊರಿನ ದೇವಾಲಯ, ಸಂಘ ಸಂಸ್ಥೆಗಳು ಸಾರ್ವಜನಿಕವಾಗಿಯೂ ಈ ವ್ರತವನ್ನು ಹಮ್ಮಿಕೊಳ್ಳುವ ಮೂಲಕ ಒಗ್ಗಟ್ಟಿನ ಮಂತ್ರವನ್ನು ಸಾರುತ್ತಿರುವುದು ಸುಳ್ಳಲ್ಲ.
ಈ ಬಾರಿ ಎಲ್ಲಾ ಹಬ್ಬಗಳೂ ಕೊರೋನಾ ಸಂಕಷ್ಟದ ಕಾರಣದಿಂದ ಕೇವಲ ಅವರವರ ಮನೆಗಳಿಗಷ್ಟೇ ಸೀಮಿತವಾಗಿ ಬಿಟ್ಟಿದೆ. ಸಾರ್ವಜನಿಕವಾಗಿ ಹೆಚ್ಚು ಮಂದಿ ಸೇರಿ ಯಾವುದೇ ಆಚರಣೆಯನ್ನು ನಡೆಸುವಂತಿಲ್ಲ. ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ಅನಿವಾರ್ಯತೆಯನ್ನು ಒಪ್ಪಿಕೊಂಡು, ನಮ್ಮ ನಮ್ಮ ಮನೆಗಳಲ್ಲಿಯೇ ಹಬ್ಬಗಳನ್ನು ಆಚರಿಸೋಣ. ನಮ್ಮ ನಮ್ಮ ಇಷ್ಟಾರ್ಥ ಸಿದ್ದಿಸುವ ಜೊತೆಗೆ ಜಗತ್ತಿಗೇ ಅಂಟಿಕೊಂಡಿರುವ ಮಹಾಮಾರಿ ಕೊರೋನಾ ನಿರ್ಮೂಲನೆಯಾಗಲಿ ಎಂಬುದಾಗಿಯೂ ಆ ತಾಯಿ ಲಕ್ಷ್ಮೀ ದೇವಿಯಲ್ಲಿ ಪ್ರಾರ್ಥಿಸೋಣ.
ಭುವನ ಬಾಬು✍️
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.