ನವದೆಹಲಿ: ದೇಶಾದ್ಯಂತ ಹೆಚ್ಚು ಬಳಕೆಯಲ್ಲಿರುವ ಝೂಮ್ ಆ್ಯಪ್ಗೆ ಬದಲಾಗಿ ರಿಲಾಯನ್ಸ್ ಜಿಯೋ ಜಿಯೋಮೀಟ್ ಎಂಬ ದೇಶೀಯ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಿದೆ.
ಚೀನಾ ಕಾಲ್ಕೆರೆದುಕೊಂಡು ಭಾರತದ ಗಲ್ವಾನ್ ಗಡಿಯಲ್ಲಿ ಸಂಘರ್ಷ ಆರಂಭಿಸಿದ ಬಳಿಕ ಭಾರತದಲ್ಲಿ ದೇಶೀಯ ವಸ್ತುಗಳಿಗೆ ಪ್ರಾಶಸ್ತ್ಯ, ವಿದೇಶಿ ವಸ್ತುಗಳಿಗೆ ಬದಲಾಗಿ ಭಾರತೀಯ ವಸ್ತುಗಳ ಬಳಕೆ, ದೇಶೀಯ ಆ್ಯಪ್ಗಳ ಬಳಕೆ ಮೊದಲಾದವುಗಳಿಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಲು ಆರಂಭಿಸಿದೆ. ಇದಕ್ಕೆ ಪೂರಕ ಎಂಬಂತೆ ಜಿಯೋ ಈಗ ಝೂಮ್ ಆ್ಯಪ್ಗೆ ಪರ್ಯಾಯವಾಗಿ ಜಿಯೋಮೀಟ್ ಅನ್ನು ಅಭಿವೃದ್ಧಿಪಡಿಸಿದೆ.
ಕೊರೋನಾ ಲಾಕ್ಡೌನ್ ನಂತರದಲ್ಲಿ ಮನೆಯಲ್ಲೇ ಕುಳಿತು ಕಾರ್ಯನಿರ್ವಹಿಸುವರ ಸಂಖ್ಯೆ ಹೆಚ್ಚಾಗಿದ್ದು, ಈ ಸಂದರ್ಭದಲ್ಲಿ ಹೆಚ್ಚಿನ ಕಂಪನಿಗಳು, ಶಾಲೆಗಳು, ಇನ್ನಿತರ ವಿಚಾರಗಳಿಗೆ ಝೂಮ್ ಆ್ಯಪ್ ಬಳಕೆ ಹೆಚ್ಚಾಗಿದೆ. ಆದರೆ ಈಗ ಇದಕ್ಕೆ ಪರ್ಯಾಯವಾಗಿ ಜಿಯೋಮೀಟ್ ಅಭಿವೃದ್ಧಿ ಆಗಿದ್ದು, ದೇಶೀಯವಾಗಿ ಇದೊಂದು ಹೊಸ ಪ್ರಯತ್ನ ಎನಿಸಿದೆ. ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಆ್ಯಪ್ ಸ್ಟೋರ್ನಿಂದ ಈ ವಿಡಿಯೋ ಕಾನ್ಫರೆನ್ಸ್ ಆ್ಯಪ್ ಎಚ್ಡಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದೂ ಜಿಯೋ ಮಾಹಿತಿ ನೀಡಿದೆ.
ಈ ವಿಡಿಯೋ ಕಾನ್ಫರೆನ್ಸ್ ಆ್ಯಪ್ನಲ್ಲಿ ಏಕಕಾಲಕ್ಕೆ 100 ಜನರು ಭಾಗವಹಿಸುವ ಅವಕಾಶ ನೀಡಲಾಗಿದೆ. 24 ಗಂಟೆಗಳವರೆಗೆ ನಿರಂತರ ಮೀಟಿಂಗ್ಗೆ ಅವಕಾಶ ನೀಡಲಾಗಿದೆ. ಡೆಸ್ಕ್ಟಾಪ್ ನಲ್ಲಿ ಈ ಆ್ಯಪ್ ಬಳಕೆಗೆ ಜಿಯೋಮೀಟ್ ಇನ್ವೈಟ್ ಲಿಂಕ್ ಬಳಕೆ ಮಾಡುವ ಮೂಲಕ ಗೂಗಲ್ ಕ್ರೋಂ, ಮೊಝಿಲ್ಲಾ ಫೈರ್ಫಾಕ್ಸ್ ಬ್ರೌಸರ್ ಮೂಲಕ ನೇರವಾಗಿ ಬಳಕೆ ಮಾಡಬಹುದಾಗಿದೆ ಎಂದೂ ಜಿಯೋ ತಿಳಿಸಿದೆ. ಇದರಲ್ಲಿ ಮೀಟಿಂಗ್ ಶೆಡ್ಯೂಲ್, ಸ್ಕ್ರೀನ್ ಶೇರಿಂಗ್ ಸೇರಿದಂತೆ ಝೂಮ್ ಆ್ಯಪ್ನಲ್ಲಿರುವ ಹಲವಾರು ಆಯ್ಕೆಗಳನ್ನೂ ನೀಡಲಾಗಿದೆ. ಇ ಮೇಲ್ ಅಥವಾ ಮೊಬೈಲ್ ಸಂಖ್ಯೆ ನಮೂದಿಸುವ ಮೂಲಕ ಇದನ್ನು ಬಳಕೆ ಮಾಡಬಹುದಾಗಿದೆ ಎಂದು ಜಿಯೋ ತಿಳಿಸಿದೆ.
ಜೂನ್30 ರಂದು ಈ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು, ಈ ವರೆಗೆ 1 ಲಕ್ಷ ಬಾರಿ ಡೌನ್ಲೋಡ್ ಆಗಿದೆ. 4.6 ರೇಟಿಂಗ್ ಹೊಂದಿದೆ. ಡೆಸ್ಕ್ಟಾಪ್ ಮತ್ತು ಲ್ಯಾಪ್ಟ್ಯಾಪ್ನಲ್ಲಿ ಮೈಕ್ರೋಸಾಫ್ಟ್ ವಿಂಡೋಸ್ 10 ಸೌಲಭ್ಯ ಹೊಂದಿರಬೇಕು ಎಂದು ಜಿಯೋ ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.