ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರ ವಯಸ್ಸು 82 ವರ್ಷ. ಆದರೆ ಈ ವಯಸ್ಸಿನಲ್ಲೂ ಅವರು ಯುವಕರು ನಾಚುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ. ನೀರಿಗೆ ಸಂಕಷ್ಟ ಅನುಭವಿಸುತ್ತಿದ್ದ ತಮ್ಮ ಗ್ರಾಮದಲ್ಲಿ ಅವರು 14 ಕೊಳಗಳನ್ನು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಅಂತರ್ಜಲ ಸಂರಕ್ಷಣೆ ಮಾಡುತ್ತಿದ್ದಾರೆ, ಪ್ರಾಣಿ ಪಕ್ಷಿಗಳ, ಜನರ ದಾಹವನ್ನು ನೀಗಿಸುತ್ತಿದ್ದಾರೆ. ಈಗಲೂ ಅವರ ಕೊಳ ನಿರ್ಮಾಣದ ಕಾರ್ಯ ಮುಂದುವರೆಯುತ್ತಲೇ ಇದೆ. ಪರಿಸರದ ಬಗ್ಗೆ ಬಹಳಷ್ಟು ತಿಳಿದುಕೊಂಡಿರುವ ತಜ್ಞರು ಕೂಡ ಮಾಡಲಾಗದ ಸಾಧನೆಯನ್ನು ಇವರು ಮಾಡಿ ತೋರಿಸಿದ್ದಾರೆ.
ತಮ್ಮ ಸಾಧನೆಯ ಕಾರಣದಿಂದಲೇ ಅವರು ಪ್ರಧಾನಿಯಿಂದ ಶಹಬ್ಬಾಸ್ ಗಿರಿ ಪಡೆದುಕೊಂಡಿದ್ದಾರೆ. ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿಯವರು ಕಾಮೇಗೌಡರ ಸಾಧನೆಯನ್ನು ಹಾಡಿಹೊಗಳಿದ್ದಾರೆ. “ಕರ್ನಾಟಕದ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 80-85 ರ ಹರೆಯದ ಕಾಮೇಗೌಡ ಎನ್ನುವ ಓರ್ವ ಸಾಧಾರಣ ರೈತ ಇದ್ದಾರೆ. ಆದರೆ ಅವರ ವ್ಯಕ್ತಿತ್ವ ಅಸಾಧಾರಣವಾಗಿದೆ. ತಮ್ಮ ಇಳಿ ವಯಸ್ಸಿನಲ್ಲೂ ಜಾನುವಾರುಗಳನ್ನು ಮೇಯಿಸುತ್ತಾ ಹೊಸ ಕೊಳವೊಂದನ್ನು ರಚನೆ ಮಾಡುವ ನೇತೃತ್ವ ವಹಿಸಿದ್ದಾರೆ.ತಮ್ಮ ಊರಿನ ನೀರಿನ ಸಮಸ್ಯೆಯನ್ನು ದೂರ ಮಾಡಲು ಬಯಸುತ್ತಿರುವ ಕಾಮೇಗೌಡರು ಜಲಸಂರಕ್ಷಣೆ ಕಾರ್ಯದಲ್ಲಿ ತೊಡಗಿ ಸಣ್ಣ ಸಣ್ಣ ಕೊಳಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅವರು ಇದುವರೆಗೆ 16 ಕೊಳಗಳನ್ನು ತಮ್ಮ ಪ್ರಯತ್ನದ, ಪರಿಶ್ರಮದ ಮೂಲಕ ನಿರ್ಮಿಸಿದ್ದಾರೆ. ಅವರು ನಿರ್ಮಿಸಿದ್ದು ಸಣ್ಣ ಸಣ್ಣ ಕೊಳಗಳೇ ಆಗಿರಬಹುದು, ಆದರೆ ಅವರ ಪ್ರಯತ್ನ ತುಂಬಾ ದೊಡ್ಡದು. ಇವರು ಪರಿಶ್ರಮದಿಂದ ನಿರ್ಮಿಸಿರುವ ಈ ಕೊಳಗಳಿಂದ ಇಂದು ಊರಿನವರಿಗೆ ಹೊಸ ಜೀವನ ಸಿಕ್ಕಂತಾಗಿದೆ” ಎಂದು ಮೋದಿ ಹೇಳಿದ್ದಾರೆ.
ತನ್ನನ್ನು ಮನ್ ಕೀ ಬಾತ್ನಲ್ಲಿ ಉಲ್ಲೇಖಿಸಿ ದೇಶಕ್ಕೆ ತಿಳಿಯುವಂತೆ ಮಾಡಿದ ಪ್ರಧಾನಿಗೆ ಕಾಮೇಗೌಡರು ವಿನಂಬ್ರವಾಗಿ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.
ಎಲ್ಲರೂ ಮನುಷ್ಯರ ದಾಹದ ಬಗ್ಗೆಯಷ್ಟೇ ಮಾತನಾಡುತ್ತಾರೆ. ಆದರೆ ಪ್ರಾಣಿ ಪಕ್ಷಿಗಳು ನೀರಿಗಾಗಿ ಪಡುವ ಬವಣೆ ಯಾರಿಗೂ ಕಾಣಿಸುವುದೇ ಇಲ್ಲ. ಆದರೆ ಕಾಮೇಗೌಡರು ಪ್ರಾಣಿ-ಪಕ್ಷಿಗಳು ನೀರಿಗಾಗಿ ಪಡುತ್ತಿರುವ ಕಷ್ಟವನ್ನು ನೋಡಲಾಗದೆ 4 ದಶಕಗಳ ಹಿಂದೆ ಕೊಳಗಳನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ತೊಟ್ಟರು. “ನನ್ನ ಜೀವನದುದ್ದಕ್ಕೂ ನಾನು ಪ್ರಾಣಿಗಳಂತೆ ಬದುಕಿದ್ದೇನೆ. 5 ವರ್ಷದ ಬಾಲಕನಾಗಿರುವಾಗಿನಿಂದಲೂ ನಾನು ಕುರುಬನಾಗಿ ಮೇಕೆಯನ್ನು ಮೇಯಿಸುತ್ತಿದ್ದೇನೆ. ಹೀಗಾಗಿ ಪ್ರಾಣಿಗಳ ಕಷ್ಟವನ್ನು ನಾನು ಅರ್ಥಮಾಡಿಕೊಂಡಿದ್ದೇನೆ” ಎಂದು ಕಾಮೇಗೌಡರು ಹೇಳುತ್ತಾರೆ.
ನಾವು ಮಾನವರು ಪರಿಸರದ ಬಗೆಗೆ ನಿರ್ಲಕ್ಷ್ಯ ವಹಿಸಿದ ಕಾರಣದಿಂದ ಇಂದು ನೀರಿನ ಬಿಕ್ಕಟ್ಟು ಸಂಭವಿಸಿದೆ. ತಡವಾಗಿಯಾದರೂ ನಾವು ಏನನ್ನಾದರೂ ಮಾಡುವ ಸಮಯ ಇದು. ಕಳೆದ ಕೆಲವು ದಶಕಗಳಲ್ಲಿ ಮಳೆಗಳು ಅನಿಶ್ಚಿತತೆಯನ್ನು ತೋರಿಸುತ್ತಿದೆ, ನಿತ್ಯ ಬೇಸಿಗೆ ಎಂಬ ಸ್ಥಿತಿ, ಹಸಿರೇ ಇಲ್ಲ, ಮಳೆನೀರು ಭೂಮಿಯಿಂದ ಹೀರಲ್ಪಡುತ್ತದೆ, ಆವಿಯಾಗುತ್ತದೆ ಅಥವಾ ಹರಿಯುತ್ತದೆ ಆದರೆ ಅದನ್ನು ಉಳಿಸಿಕೊಳ್ಳಲು ಏನನ್ನೂ ನಾವು ಮಾಡುತ್ತಿಲ್ಲ. ಇದನ್ನು ಅರ್ಥಮಾಡಿಕೊಂಡಿರುವ ಕಾಮೇಗೌಡರು ಒಂದು ಮಾತು ಹೇಳುತ್ತಾರೆ, ಅದೇನೆಂದರೆ “ನಾವು ವಾಸಿಸುವ ಭೂಮಿಯನ್ನು ರಕ್ಷಿಸಬೇಕಾಗಿದೆ ಎಂಬ ಅರಿವು ನಮಗೆ ಇಲ್ಲ ಎಂದಾದ ಮೇಲೆ ಶಿಕ್ಷಣದ ಪ್ರಯೋಜನವೇನು?” ಎಂದು ಅವರು ಪ್ರಶ್ನಿಸುತ್ತಾರೆ. ಅವರ ಮಾತು ನಿಜಕ್ಕೂ ನಿಜ. ಅವರು ಅನಕ್ಷರಸ್ಥರನಾದರೂ ಅಕ್ಷರಸ್ಥರನ್ನು ನಾಚಿಸುವಂತೆ ಪರಿಸರದ ಬಗ್ಗೆ ದೊಡ್ಡ ಜ್ಞಾನವನ್ನು ಹೊಂದಿದ್ದಾರೆ.
ಇಚ್ಛಾಶಕ್ತಿ ಇರುವಲ್ಲಿ ಮಾರ್ಗ ಖಂಡಿತಾ ಇರುತ್ತದೆ ಎಂಬುದಕ್ಕೆ ಕಾಮೇಗೌಡರು ಉದಾಹರಣೆ. ಎಲ್ಲಾ ಗಳಿಕೆಗಳನ್ನು ಮತ್ತು ಪ್ರಶಸ್ತಿಗಳಿಂದ ಬಂದ ಹಣವನ್ನು ಅವರು ಕೊಳಗಳನ್ನು ರಚಿಸಲು ಮತ್ತು ಅವುಗಳನ್ನು ನಿರ್ವಹಿಸಲು ಖರ್ಚು ಮಾಡಲಾಗುತ್ತಿದೆ. ಇಲ್ಲಿಯವರೆಗೆ ಅವರು 15 ಲಕ್ಷಕ್ಕೂ ಹೆಚ್ಚು ಹಣವನ್ನು ಕೊಳಗಳಿಗಾಗಿ ಎಚ್ಚರಿಕೆಯಿಂದ ಖರ್ಚು ಮಾಡಿದ್ದಾರೆ ಮತ್ತು ಆ ಖರ್ಚಿನಿಂದ ಬಂದ ಫಲಿತಾಂಶಗಳನ್ನು ನೋಡಿ ಅವರು ತೃಪ್ತರಾಗಿದ್ದಾರೆ. ಮಾತ್ರವಲ್ಲ ಅವರು ತಮ್ಮ ಕುರಿಗಳಿಗಾಗಿ ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ಹಾದಿಗಳನ್ನು ಕೂಡ ಮಾಡಿದ್ದಾರೆ. ಕೊಳದಲ್ಲಿ ನೀರು ಕುಡಿಯಲು ಅವುಗಳಿಗೆ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.
ಶಿಕ್ಷಣವು ಪರಿಸರದಲ್ಲಿದೆ. ಯುವಕ ಅಥವಾ ವಯಸ್ಸಾದವರು ಎಲ್ಲರಿಗೂ ಪರಿಸರದ ಬಗ್ಗೆ ಜವಾಬ್ದಾರಿ ಇರುತ್ತದೆ. ಪ್ರತಿಯೊಬ್ಬರಿಗೂ ಕೊಳಗಳನ್ನು ನಿರ್ಮಿಸಲು ಸಾಧ್ಯವಾಗದೇ ಇರಬಹುದು, ಆದರೆ ನೀರಿನ ಸಂರಕ್ಷಣೆಯ ಕಾರ್ಯವನ್ನು ಎಲ್ಲರೂ ಮಾಡಬಹುದು. ಪ್ರಾಣಿ ಪಕ್ಷಿಗಳ ನೀರಿನ ಹಾಹಾಕಾರವನ್ನು ನೀಗಿಸುವ ಕಾರ್ಯವನ್ನೂ ಎಲ್ಲರೂ ಮಾಡಬಹುದು. ತಮ್ಮ ಕಾರ್ಯದ ಬಗ್ಗೆ ಹೇಳಿಕೊಳ್ಳುವ ಕಾಮೇಗೌಡ ಅವರು, “ನಾನು ಆರೋಗ್ಯಕರ ಚಟವನ್ನು ಹೊಂದಿದ್ದೇನೆ ಮತ್ತು ನನ್ನ ಕೊನೆಯರೆಗೂ ಇದನ್ನು ಮುಂದುವರಿಯುತ್ತೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.