ಲಕ್ನೋ: ದೇಶದ ಅತ್ಯಂತ ಕಿರಿಯ ಸ್ನಾತಕೋತರ ಪಧವೀದರೆ ಎನಿಸಿಕೊಂಡಿರುವ 15ವರ್ಷದ ಸುಷ್ಮಾ ವರ್ಮಾ ಈಗ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾಳೆ. ಪಿಎಚ್ಡಿ ಕೋರ್ಸ್ಗೆ ಸೇರಿದ ಅತಿ ಕಿರಿಯ ಭಾರತೀಯಳು ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಲಕ್ನೋದ ಬಾಬಾಸಾಹೇಬ್ ಭೀಮ್ರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಈಕೆ ಪಿಎಚ್ಡಿ ಮಾಡಲು ಅರ್ಹತೆ ಪಡೆದುಕೊಂಡಿದ್ದಾಳೆ, ಎನ್ವಿರಾನ್ಮೆಂಟಲ್ ಮೈಕ್ರೋಬಯಾಲಜಿ ವಿಷಯ ಅಧ್ಯಯನ ನಡೆಸುವ ಸಲುವಾಗಿ ವಿಶ್ವವಿದ್ಯಾನಿಲಯ ನಡೆಸಿದ ಸಂಶೋಧನ ಪ್ರವೇಶ ಪರೀಕ್ಷೆಯಲ್ಲಿ ಈಕೆ 7ನೇ ರ್ಯಾಂಕ್ ಪಡೆದುಕೊಂಡಿದ್ದಾಳೆ.
ಅತ್ಯಂತ ಬಡತನದಿಂದ ಬಂದು ಇಷ್ಟು ದೊಡ್ಡ ಸಾಧನೆ ಮಾಡಿರುವ ಸುಷ್ಮಾಳಿಗೆ ವಿಶ್ವವಿದ್ಯಾನಿಲಯ ವಿಶೇಷ ಉಚಿತ ಹಾಸ್ಟೆಲ್ ಮತ್ತು ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ಪ್ರೋತ್ಸಾಹ ನೀಡುವುದಾಗಿ ಘೋಷಿಸಿದೆ.
ಈಕೆಯ ತಂದೆ ಕೂಲಿ ಕಾರ್ಮಿಕ ಮತ್ತು ತಾಯಿ ಅನಕ್ಷರಸ್ಥೆ. ಆದರೂ ಓದುವುದರಲ್ಲಿ ಅತೀವ ಆಸಕ್ತಿಯಿದ್ದ ಸುಷ್ಮಾ ಕಳೆದ ಜೂನ್ನಲ್ಲಿ ಸ್ನಾತಕೋತರ ಪದವಿಯನ್ನು ಪೂರೈಸಿದ್ದಳು. ಅಲ್ಲದೇ ೭ನೇ ವಯಸ್ಸಿಗೆ ೧೦ನೇ ತರಗತಿ ಪಾಸು ಮಾಡಿದ್ದ ಈಕೆ ದೇಶದ ಅತಿ ಕಿರಿಯ ಮೆಟ್ರಿಕ್ಯುಲೇಟ್ ಎಂದು ಲಿಮ್ಕಾ ದಾಖಲೆ ಮಾಡಿದ್ದಾಳೆ.
ಈಕೆಯ ಸಹೋದರ ಶೈಲೇಂದ್ರ ದೇಶದ ಅತಿ ಕಿರಿಯ ಕಂಪ್ಯೂಟರ್ ಸೈನ್ಸ್ ಪದವೀಧರ ಎಂಬ ದಾಖಲೆ ಹೊಂದಿದ್ದಾನೆ. 14ನೇ ವಯಸ್ಸಿಗೆ ಬಿಸಿಎ ಪದವಿ ಪಡೆದಿದ್ದ. ಇದೀಗ ಆತ ಬೆಂಗಳೂರಿನಲ್ಲಿ ಎಂಬಿಎ ಮಾಡುತ್ತಿದ್ದಾನೆ.
ನಾನು ಅನಕ್ಷರಸ್ಥ, ಮಕ್ಕಳಿಗೆ ನನ್ನಿಂದ ಏನೂ ಕಲಿಸಲು ಸಾಧ್ಯವಿಲ್ಲ. ನನ್ನ ಮಕ್ಕಳು ಏನು ಸಾಧಿಸಿದ್ದಾರೋ ಅದು ತಾಯಿ ಸರಸ್ವತಿಯ ಕೃಪೆಯಿಂದ ಸಾಧಿಸಿದ್ದಾರೆ ಎನ್ನುತ್ತಾರೆ ಈ ಹೆಮ್ಮೆಯ ಮಕ್ಕಳ ಹೆಮ್ಮೆಯ ತಂದೆ ತೇಜ್ ಬಹದ್ದೂರ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.