ಕರ್ನಾಟಕ ಮತ್ತು ಕೇರಳದ ಗಡಿಭಾಗದಲ್ಲಿರುವ ಉತ್ತರ ಭಾಗದ ಘಟ್ಟ ಪ್ರದೇಶದಲ್ಲಿ ಅದೆಷ್ಟೋ ವನವಾಸಿ ಕುಟುಂಬಗಳು ವಾಸವಿವೆ. ಈ ಜನರು ಅರಣ್ಯ ಪ್ರದೇಶದ ನಡುವೆಯೇ ಪುಟ್ಟ ಪುಟ್ಟ ಗುಡಿಸಲುಗಳನ್ನು ಕಟ್ಟಿಕೊಂಡು, ಅರಣ್ಯವನ್ನೇ ದೇವರೆಂದು ಪೂಜಿಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ಪ್ರಕೃತಿಯ ಆರಾಧನೆಯ ಜೊತೆಗೆ ಅರಣ್ಯ ರಕ್ಷಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಹೀಗೆ ಬದುಕು ಸಾಗಿಸುತ್ತಿರುವ ಜನರ ಜೀವನಮಟ್ಟ ಮಾತ್ರ ತೀರಾ ದುಸ್ಥರ ಎನ್ನಬಹುದು.
ಬೇಸಿಗೆ ಕಾಲದಲ್ಲಿ ಹೇಗೋ ಇದ್ದ ಹರಕಲು, ಮುರುಕಲು ಗುಡಿಸಲಲ್ಲಿ, ಕಷ್ಟಪಟ್ಟು ಆಹಾರ ಸಂಗ್ರಹಿಸಿ ತಮ್ಮ ಕುಟುಂಬವನ್ನು ಪೊರೆಯುವ ಶಕ್ತಿ ಇಲ್ಲಿನ ನಿವಾಸಿಗಳಿಗಿದೆ. ಆದರೆ, ಹೀಗೆ ಬದುಕು ಸಾಗಿಸುವ ವನವಾಸಿಗಳ ಬದುಕು ಮಳೆಗಾಲದಲ್ಲಿ ಮಾತ್ರ ತುಂಬಾ ಹೀನಾಯ. ಒಂದೆಡೆಯಲ್ಲಿ ಗಾಳಿ, ಮಳೆಗೆ ಈಗಲೋ ಆಗಲೋ ಬೀಳುತ್ತದೆ ಎಂಬಂತಿರುವ ಗುಡಿಸಲುಗಳು, ಇನ್ನೊಂದು ಮಾಡಲು ಸರಿಯಾದ ಕೆಲಸವಿಲ್ಲದೆ ಆಹಾರಕ್ಕೂ ಪರದಾಡುವ ಸ್ಥಿತಿ. ಈ ನಡುವೆ ಕುಟುಂಬ ವರ್ಗದವರನ್ನು ಸಾಕುವ ಜವಾಬ್ದಾರಿ. ಈ ಎಲ್ಲ ಸಮಸ್ಯೆಗಳ ನಡುವೆ ಇಲ್ಲಿನ ವನ ನಿವಾಸಿಗಳ ಬದುಕು ಸಂಕಷ್ಟಗಳ ಸರಮಾಲೆಯನ್ನೇ ಎದುರಿಸಬೇಕಾದ ಪರಿಸ್ಥಿತಿ.
ಹೀಗೆ ಬದುಕು ನಡೆಸುತ್ತಿರುವ ಜನರಿಗೆ ಇವೆಲ್ಲದರ ನಡುವೆ ಬಿಡದೇ ಸುರಿಯುವ ಮಳೆ, ಅರಣ್ಯ ಪ್ರದೇಶವಾದ್ದರಿಂದ ಮರ ಗಿಡಗಳು ಮನೆ ಮೇಲೆ ಬೀಳುವ ಭಯ. ಜೊತೆಗೆ ಕೊರೋನಾ ಸಂಕಷ್ಟ. ಇಂತಹ ಭಯದ ಜೊತೆಗೇ ಬದುಕು ಸಾಗಿಸುತ್ತಿರುವ ವನವಾಸಿಗಳಿಗೆ ಅಭಯ ಒದಗಿಸುವ ನಿಟ್ಟಿನಲ್ಲಿ ಉತ್ತಿಷ್ಟಾ ಎಂಬ ಯುವಕರ ಸೇನೆಯೊಂದು ಕಾರ್ಯಪ್ರವೃತ್ತವಾಗಿದೆ.
ಉತ್ತಿಷ್ಟಾ ತಂಡ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ ವಾಸಿಸುವ 550 ಕ್ಕೂ ಹೆಚ್ಚು ಕುಟುಂಬಗಳನ್ನು ಗುರುತಿಸಿ, ಅವರ ಸೂರಿಗೆ ಟಾರ್ಪಲ್ ಶೀಟುಗಳನ್ನು ಒದಗಿಸುವ ಮೂಲಕ ಅವರಿಗೆ ಮಳೆಯಿಂದ ರಕ್ಷಣೆ, ಭದ್ರತೆ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ಕಾರ್ಯಕ್ಕೆ ಅವರು ಅಂಬ್ರೆಲ್ಲಾ (ಕೊಡೆ) ಎಂದು ಹೆಸರಿಟ್ಟಿದ್ದಾರೆ. ದಾನಿಗಳಿಂದ ನೆರವು ಪಡೆದು ಈ ಉತ್ಸಾಹಿ ತಂಡ ಉತ್ತಿಷ್ಟಾ ವನವಾಸಿಗಳಿಗೆ ಮಳೆ, ಗಾಳಿ ಸೇರಿದಂತೆ ಇನ್ನಿತರ ಪ್ರಾಕೃತಿಕ ವಿಕೋಪಗಳಿಂದಲೂ ರಕ್ಷಣೆ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಜೊತೆಗೆ ವನವಾಸಿ ಜನರಿಗೆ ಬೇಕಾದ ಆಹಾರ, ದವಸ ಧಾನ್ಯಗಳನ್ನು, ತರಕಾರಿ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ನೀಡುವ ಮೂಲಕವೂ ಬದುಕು ಕಟ್ಟಿಕೊಳ್ಳಲು ನೆರವು ನೀಡುತ್ತಿದ್ದಾರೆ. ಇಲ್ಲಿನ ನಿವಾಸಿಗಳು ಕೊರೋನಾ ಲಾಕ್ಡೌನ್ನೊಂದಿಗೆ ಸಂಕಷ್ಟದ ಬದುಕು ನಡೆಸುತ್ತಿದ್ದಾರೆ. ಒಂದು ಕಡೆಯಿಂದ ಮನೆಯಿಂದ ಹೊರ ಹೋಗುವಂತಿಲ್ಲ, ಮಾಡಲು ಕೆಲಸವೂ ದೊರೆಯುತ್ತಿಲ್ಲ. ಈ ನಡುವೆ ರೋಗ ಭಯ. ಜೊತೆಗೆ ಹೊಟ್ಟೆ ತುಂಬಿಸಿಕೊಳ್ಳಲು ಬೇಕಾದ ಆಹಾರ ಸಂಗ್ರಹಿಸಿಕೊಳ್ಳುವ ಸವಾಲು. ಕಾಡು ಜನರ ಈ ಎಲ್ಲಾ ಸಂಕಷ್ಟಕ್ಕೂ ಉತ್ತಿಷ್ಟತಾ, ಜಾಗ್ರತಾ ಎಂಬಂತೆ ಸಮರೋಪಾದಿಯಲ್ಲಿ ನೆರವು ನೀಡಲು ಮುಂದಾಗಿದೆ ಉತ್ತಿಷ್ಟತಾ ಎಂಬ ಉತ್ತಮರ ತಂಡ.
ಕೊರೋನಾ ಲಾಕ್ಡೌನ್ ನಿಂದಾಗಿ ಕಾಡು ವಾಸಿಗಳಿಗೆ ಮಳೆಗಾಲಕ್ಕೆ ಅವಶ್ಯವಾದ ಕೆಲಸಗಳತ್ತಲೂ ಗಮನ ಹರಿಸುವುದು ಸಾಧ್ಯವಾಗಿಲ್ಲ. ಇದರಿಂದ ಅವರು ತೀರಾ ತೊಂದರೆಯನ್ನು ಅನುಭವಿಸುತ್ತಿದ್ದು ಅವರ ನೆರವಿನ ಸಂಪೂರ್ಣ ಜವಾಬ್ದಾರಿಯನ್ನು ಈ ತಂಡ ಹೊತ್ತುಕೊಂಡು ಕೆಲಸ ಮಾಡಲಾರಂಭಿಸಿದೆ. ಬಿದಿರು, ಮರದ ರೆಂಬೆಗಳನ್ನು, ಎಲೆಗಳನ್ನು ಬಳಸಿ ಇಲ್ಲಿನ ನಿವಾಸಿಗಳು ಕಟ್ಟಿಕೊಂಡಿರುವ ಮನೆಗಳು ಮಳೆಗಾಲದಲ್ಲಿ ಅವರಿಗೆ ಯಾವುದೇ ರೀತಿಯ ರಕ್ಷಣೆಯನ್ನು ನೀಡುವುದು ಸಾಧ್ಯವಿಲ್ಲ ಎಂಬುದನ್ನು ಮನಗಂಡಿರುವ ಈ ತಂಡ, ಆ ನಿಟ್ಟಿನಲ್ಲಿ ಅವರಿಗೆ ವಾಸ್ತವ್ಯಕ್ಕೆ ಪೂರಕವಾದ ಅಗತ್ಯತೆಗಳನ್ನು ಕಲ್ಪಿಸುವ ಮೂಲಕ ಮಾದರಿ ಕೆಲಸವನ್ನು ಮಾಡಿದೆ.
ಜೊತೆಗೆ ಕರ್ನಾಟಕದ ಬೆಂಗಳೂರಿನ ಕುಂಬಳಗೋಡುವಿನಲ್ಲಿ ಕಾಣಸಿಗುವ ಹಕ್ಕಿ ಪಿಕ್ಕಿ ಜನಾಂಗದ ಜನರೂ ಲಾಕ್ಡೌನ್ನಿಂದಾಗಿ ಮಾಡಲು ಕೆಲಸವಿಲ್ಲದೆ, ಹೊಟ್ಟೆಗೆ ಕೂಳಿಲ್ಲದೆ ಸಂಕಷ್ಟದಿಂದ ಬದುಕು ಸಾಗಿಸುತ್ತಿದ್ದಾರೆ. ಸುಮಾರು 215ರಷ್ಟು ಹಕ್ಕಿ ಪಿಕ್ಕಿ ಜನಾಂಗದ ಕುಟುಂಬಗಳಿಗೆ ಲಾಕ್ಡೌನ್ನಿಂದಾಗಿ ಹೆಚ್ಚಿನ ಸಮಸ್ಯೆ ಉಂಟಾಗಿದೆ. ಮಕ್ಕಳು, ಮಹಿಳೆಯರು ಉಪವಾಸ ಬೀಳುವಂತಾಗಿದೆ. ಇತರ ಸಮಸ್ಯೆಗಳನ್ನೂ ಮನಗಂಡಿರುವ ಉತ್ತಿಷ್ಟಾ ತಂಡ ಇಂತಹ ಬಡ ವರ್ಗಗಳ ಮೂಲ ಅವಶ್ಯಕತೆಗಳನ್ನು ಒದಗಿಸುವ ನಿಟ್ಟಿನಲ್ಲಿಯೂ ಕೆಲಸ ಮಾಡಿದೆ. 1500 ಕೆಜಿಗಳಷ್ಟು ಆಹಾರವನ್ನು ಒದಗಿಸುವ ನಿಟ್ಟಿನಲ್ಲಿಯೂ ಪೂರಕ ಕ್ರಮಗಳನ್ನು ಕೈಗೊಂಡಿದೆ. ಅದರೊಂದಿಗೆ ಕೋಲಾರದ ಮಾಲೂರಿನ ಸಣ್ಣ ಪ್ರಮಾಣದ ರೈತರಿಗೆ 16,000 ಕೆಜಿ ಗಳಷ್ಟು ತರಕಾರಿಗಳನ್ನು ಈ ತಂಡ ಒದಗಿಸಿಕೊಟ್ಟಿದೆ.
ಇಷ್ಟೆಲ್ಲಾ ಮಾದರಿ ಕಾರ್ಯ ಮಾಡಿರುವ ‘ಉತ್ತಿಷ್ಟಾ’ ದ ಬಗ್ಗೆ ಹೇಳುವುದಾದರೆ, ಸ್ವಾಮಿ ವಿವೇಕಾನಂದರಿಂದ ಸ್ಫೂರ್ತಿ ಪಡೆದು 2006 ರಲ್ಲಿ ಜನ್ಮ ತಾಳಿದ ಯುವಕರ ತಂಡವೇ ಉತ್ತಿಷ್ಟಾ. ಸಮಾಜದ ಆರ್ಥಿಕ ಮತ್ತು ಸಾಮಾಜಿಕ ದುರ್ಬಲರನ್ನು ಸಬಲರನ್ನಾಗಿಸುವಲ್ಲಿ, ಅವರಿಗೆ ಬೇಕಾದ ಅಗತ್ಯ ಅವಶ್ಯಕತೆಯನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಈ ತಂಡ ಕಾರ್ಯನಿರ್ವಹಿಸುತ್ತಲೇ ಬಂದಿದೆ. ಜೊತೆಗೆ ಭಾರತದ ಸಂಸ್ಕೃತಿ ಮತ್ತು ಇತಿಹಾಸವನ್ನು ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಜೊತೆಗೆ ಪ್ರತಿ ವರ್ಷವೂ ಸಮಾಜದ ದುರ್ಬಲ ವರ್ಗವನ್ನು, ಜೊತೆಗೆ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಚಾರಿಟೇಬಲ್ ಟ್ರಸ್ಟ್ ಗಳನ್ನು ಗುರುತಿಸಿ ಅವುಗಳಿಗೆ ಉತ್ತಿಷ್ಟಾ ಸೇವಾ ಪುರಸ್ಕಾರವನ್ನೂ ಇದು ನೀಡುತ್ತಾ ಬಂದಿದೆ. ಈ ವರೆಗೆ ಸುಮಾರು 6 ಪುರಸ್ಕಾರಗಳನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ನೀಡಲಾಗಿದೆ. ಈ ಬಾರಿ ಧರ್ಮಸ್ಥಳದ ಸೇವಾ ಭಾರತಿ ಕನ್ಯಾಡಿಗೆ ಈ ಪುರಸ್ಕಾರ ನೀಡಿ ಉತ್ತಿಷ್ಟಾ ಗೌರವ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.