ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಕಲೆ ಮತ್ತು ಕಲಾವಿದನು ಇರುತ್ತಾನೆ, ಅದನ್ನು ಅರಿತು ಸದುಪಯೋಗ ಪಡಿಸಿಕೊಳ್ಳುತ್ತಿರುವ ವ್ಯಕ್ತಿಗಳ ಪೈಕಿ ತಾನೂ ಒಬ್ಬಳು ಎನ್ನುತ್ತಾಳೆ ಅನರ್ಘ್ಯ ಟಿಪಿ. ಅವಳ ತಂದೆ ಟಿ. ಪರಮೇಶ್ವರ ಭಟ್, ತಾಯಿ ಕುಸುಮ ಪಿ ಭಟ್. ಇವರು ಮೂಲತಃ ಕಾಸರಗೋಡಿನ ಮುಳ್ಳೇರಿಯಾ ಸಮೀಪದ ತೆಕ್ಕೆಕೆರೆ ಮನೆತನದವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲಸಿದ್ದಾರೆ. ಸಂತ ಜೋಸೆಫರ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ. ಎಸ್.ಸಿ ವ್ಯಾಸಂಗ ಮಾಡುತ್ತಿರುವ ಅನರ್ಘ್ಯಾಳ ಹವ್ಯಾಸ ಚಿತ್ರಕಲೆ.
ಅತ್ಯಂತ ಕಿರಿಯ ವಯಸ್ಸಿನಲ್ಲಿ ಚಿತ್ರಕಲೆಯ ಮೇಲೆ ಅವಳಿಗಿದ್ದ ಒಲವನ್ನು ಗುರುತಿಸಿದ ಪೋಷಕರು ಅವಳನ್ನು ಚಿತ್ರಕಲೆ ತರಗತಿಗೆ ಸೇರಿಸಿದರು. ಆರಂಭದಲ್ಲಿ ರಶ್ಮಿ ಎಂಬವರ ಬಳಿ ಸುಮಾರು ಐದು ವರ್ಷಗಳ ಕಾಲ ಚಿತ್ರಕಲೆಯನ್ನು ಅಭ್ಯಸಿಸಿದ ನಂತರ ಶ್ರೀಯುತ ಭಾಸ್ಕರ್ ಕಶ್ಯಪ್ ಅವರ ಬಳಿ ಚಿತ್ರಕಲೆ, ಅದರಲ್ಲೂ ವರ್ಣ ಚಿತ್ರ ಹಾಗೂ ವ್ಯಕ್ತಿ ಚಿತ್ರಗಳನ್ನು ಕಲಿಯಲು ಆರಂಭಿಸಿದಳು. ಅವರ ಮಾರ್ಗದರ್ಶನದಲ್ಲಿ ಬೇರೆ ಬೇರೆ ಕ್ರಮಗಳ ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿರುವಳು. ಅನರ್ಘ್ಯಾಳಿಗೆ ಬಹಳ ಇಷ್ಟವಾದ ಚಿತ್ರ ಕ್ರಮಗಳೆಂದರೆ – watercolor ಪೇಂಟಿಂಗ್, ಮಂಡಲ ಚಿತ್ರ, abstract ಪೇಂಟಿಂಗ್ ಹಾಗು 3D ಚಿತ್ರಗಳು. ಇದಲ್ಲದೆ 2-3 ಚಿತ್ರ ಕ್ರಮಗಳನ್ನು ಒಂದೇ ಚಿತ್ರದಲ್ಲಿ ಅಳವಡಿಸಿ, ಚಿತ್ರಕ್ಕೆ ಹೊಸ ರೂಪವನ್ನು ನೀಡುವ ನಿರಂತರ ಪ್ರಯತ್ನ ಮಾಡುತ್ತಿರವಳು. ಇದರೊಂದಿಗೆ ಜಾನಪದ ಶೈಲಿ ಪೇಂಟಿಂಗ್ – warli, mahadani ಚಿತ್ರಗಳನ್ನು ಬರೆಯುವ ಪ್ರಯತ್ನ ಮಾಡಿದ್ದಾಳೆ. ಸದ್ಯಕ್ಕೆ ವ್ಯಕ್ತಿ ಚಿತ್ರಗಳನ್ನು ಅಭ್ಯಾಸ ಮಾಡುತ್ತಿದ್ದು ಮುಂದೆ ಪರಿಸರ ಚಿತ್ರ, ಮಂಡಲದೊಂದಿಗೆ ಇದರಲ್ಲೂ ಪರಿಣತಿ ಹೊಂದಬೇಕೆಂಬ ಆಸೆಯಿದೆ.
ಶಾಲಾ ಹಾಗೂ ಕಾಲೇಜ್ ದಿನಗಳಲ್ಲಿ ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾಳೆ ಅನರ್ಘ್ಯ. ಸತತ ಎರಡು ವರ್ಷಗಳಿಂದ ಕಾಲೇಜಿನ ಚಿತ್ರ ಪ್ರದರ್ಶನದಲ್ಲಿ ಅವಳು ಬಿಡಿಸಿದ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಮುಂದಿನ ದಿನಗಳಲ್ಲಿ ಚಿತ್ರಕಲಾ ಪರಿಷತ್ತಿನಲ್ಲಿ ತನ್ನ ಚಿತ್ರಗಳನ್ನು ಪ್ರದರ್ಶಿಸಬೇಕೆಂಬ ಮಹದಾಸೆ, ಕನಸು ಇದೆ ಅವಳಿಗೆ. “ನನ್ನ ಎಲ್ಲಾ ಚಿತ್ರಕಲೆಗಳಿಗೆ ಪ್ರೇರಣೆ ನನ್ನ ಗುರುಗಳು ಹಾಗೂ ನೈಜ ಪ್ರಕೃತಿ ಸೌಂದರ್ಯ. ನನ್ನ ಎಲ್ಲಾ ಯಶಸ್ಸಿಗೆ ಕಾರಣ ತಂದೆ ತಾಯಿಯ ಪ್ರೋತ್ಸಾಹ” ಎಂದು ಅನರ್ಘ್ಯ ತನ್ನ ಮನದ ಮಾತುಗಳನ್ನು ವ್ಯಕ್ತಪಡಿಸಿದ್ದಾಳೆ. ತನ್ನ ಚಿತ್ರಗಳನ್ನು ಮೆಚ್ಚಿ ಪ್ರತಿಕ್ರಿಯಿಸುವ ಮಿತ್ರರು ಹಾಗೂ ಬಂಧುಗಳಿಗೆ ಈ ಸಂದರ್ಭದಲ್ಲಿ ಅವಳು ವಂದನೆಗಳನ್ನು ತಿಳಿಸಿದಳು.
✍️ ಸುರೇಶ ಮಾಗಿ, ಬಾಗಲಕೋಟೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.