ಕಳೆದ ಬಹು ದಿನಗಳಿಂದ ಮನುಕುಲಕ್ಕೆ ಹೆಮ್ಮಾರಿಯಾಗಿ ಆವರಿಸಿರುವ ಔಷಧವಿಲ್ಲದ ಸಾಂಕ್ರಾಮಿಕ ರೋಗ ಕೋವಿಡ್-19 ಸಮಾಜದ ವ್ಯವಸ್ಥೆಯನ್ನು ಅಸ್ಥಿರಗೊಳಿಸಿರುವ ಸಂಗತಿ ನಮಗೆಲ್ಲ ತಿಳಿದಿರುವುದಲ್ಲದೇ ಅನುಭವಿಸಿದ್ದೂ ಆಯಿತು.
ಬಡವರು, ಕೂಲಿ ಕಾರ್ಮಿಕರು ಅಷ್ಟೇ ಅಲ್ಲದೇ ಶ್ರೀಮಂತರು, ಮೇಲ್ವರ್ಗದ ಜನ ಅನಿಸಿಕೊಂಡವರು ಅಕ್ಷರಶಃ ಹಸಿವು ಇದ್ದರೂ ಸ್ವಾಭಿಮಾನದ ಸಲುವಾಗಿ ಯಾರಿಗೂ ಹೇಳಿಕೊಳ್ಳದೇ ತಮ್ಮೊಳಗೆ ನೋವು, ಸಂಕಟ ಅನುಭವಿಸುತ್ತಿದ್ದಾರೆ. ನಗರ, ಪಟ್ಟಣಗಳಲ್ಲಿ ಸೇವಾ ಕಾರ್ಯಗಳು ವ್ಯವಸ್ಥಿತವಾಗಿ ವಿವಿಧ ಜನರಿಂದ, ಸಂಘಟನೆಗಳಿಂದ ನಿರಂತರವಾಗಿ ನಡೆಯುತ್ತಿವೆ. ಆದರೆ ಹಳ್ಳಿಗಳಲ್ಲಿರುವ ಸ್ವಾಭಿಮಾನಿ ಜನರ ಕಷ್ಟಕ್ಕೆ ಸ್ಪಂದಿಸುವುದಕ್ಕಾಗಿಯೇ ಯೋಜಿಸಿದ ಶ್ರೀರಾಮ ಉತ್ಸವ ಸೇವಾ ಸಮಿತಿ, ಸೂಳಿಕೇರಿ ಇವರು ಸ್ವಯಂಪ್ರೇರಿತರಾಗಿ ಸೇವೆಯ ಯೋಜನೆ ಮಾಡಿದರು. ಬಾಗಲಕೋಟೆ ನಗರದಿಂದ ಸೂಳಿಕೇರಿ ಗ್ರಾಮ 15 km ದೂರದಲ್ಲಿರುವ ಶ್ರೀರಾಮ ಉತ್ಸವ ಸೇವಾ ಸಮಿತಿ ಸದಸ್ಯರು ಬಾದಾಮಿ ತಾಲೂಕಿನ ಹಳ್ಳಿಗಳಲ್ಲಿರುವ ಕೆಲವು ಮೇಲ್ವರ್ಗದ ಬಡ ಕುಟುಂಬಗಳಿಗೆ ಕಿರಾಣಿ ಸಾಮಗ್ರಿಗಳನ್ನು ಕೊಡಲು ಕರಡು ಸಿದ್ಧವಾಯಿತು.
ಅಲ್ಲಲ್ಲಿ ಕೆಲವು ಕುಟಂಬಗಳು ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಕೊರೋನಾದ ವಕ್ರದೃಷ್ಠಿಗೆ ಸಿಲುಕಿ ತುಂಬಾ ಕಷ್ಟದಲ್ಲಿ ಬದುಕು ಸಾಧಿಸುತ್ತಿರುವ ಮನನೋಯುವ ಘಟನೆಗಳು ಕಾಣಸಿಕ್ಕವು. ಇಂತಹ ಕಷ್ಟದ ಸಂದರ್ಭದಲ್ಲಿ ಮಾನವೀಯ ಸ್ಪಂದನೆಯಂತೆ ನಮ್ಮ ಕೈಗೆ ಮಿಟುಕಿದಷ್ಟು ಸಹಾಯ ಮಾಡಿದರಾಯ್ತು ಎಂಬ ಅನಿಯಮಿತ ನಿರ್ಧಾರವೊಂದನ್ನು ಸಮಿತಿಯ ಹಿರಿಯರೊಂದಿಗೆ ಫೋನಾಯಿಸಿ ಚರ್ಚಿಸಿ ತೆಗೆದುಕೊಳ್ಳುವುದೊಂದೇ ತಡ, ಶ್ರೀರಾಮನ ಪ್ರೇರಣೆಯ ಫಲ ಹಾಗೂ ನಮ್ಮ ಹಿರಿಯರು ಹಾಕಿಕೊಟ್ಟ ಪರಂಪರೆಯ ಅನುರಕ್ತವಾದ ಸೂಳಿಕೇರಿಯ ಯುವಮಿತ್ರರು ಹಾಗೂ ಅವರವರ ಸಹ ಸಂಬಂಧಿಗಳ ಮೂಲಕ ಸಂಗ್ರಹವಾದ ಒಟ್ಟು ರೂ. 70 ಸಾವಿರ ಸಂಗ್ರಹಿಸಿ 40 ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಕಿರಾಣಿ ಸಾಮಾಗ್ರಿಗಳ ಸಿದ್ದತೆಯಲ್ಲಿ ತೊಡಗಿದ ಒಂದು ತಂಡ ದಿನಸಿ ಕಿಟ್ಗಳನ್ನು ಸಿದ್ದಗೊಳಿಸಿತು. ಇನ್ನೊಂದು ತಂಡ ಸಹಾಯದ ನಿರೀಕ್ಷೆಯಲ್ಲಿರುವ ಬಾದಾಮಿ ತಾಲೂಕಿನ ಎಲ್ಲ ಗ್ರಾಮಗಳ ಸಹಾಯ ನೀಡಬೇಕಾದ ಪಟ್ಟಿಯನ್ನು ಸಿದ್ದಪಡಿಸಿತು. ಇನ್ನೊಂದೆಡೆ ವಾಹನ ವ್ಯವಸ್ಥೆ, ರಸ್ತೆ ಮಾರ್ಗಸೂಚಿ, ಸಮಯ ಸಾರಿಣಿ ಸಿದ್ಧಗೊಳ್ಳುತ್ತಿತ್ತು.
ನರಸಿಂಹ ಜಯಂತಿಯ ಪೂರ್ವಾದಿನ ಕಾರ್ಯಸ್ವರೂಪ ಚರ್ಚಿಸಿ ಹೊರಡಲು ಸಿದ್ದವಾಯಿತಾದರೂ ಜಿಲ್ಲಾಡಳಿತದಿಂದ ಬರಬೇಕಿದ್ದ ಪರವಾನಿಗೆ ದೊರೆಯಲಿಲ್ಲ. ಅಂದು ರಾತ್ರಿ 11:00ಗಂಟೆ ವರೆಗೆ ಪ್ರಯಾಸಪಟ್ಟು ಅಧಿಕಾರಿಗಳಿಂದ ಮೌಖಿಕ ಪರವಾನಿಗೆ ಪಡೆಯುವಲ್ಲಿ ಯಶಸ್ಸು ಕಂಡೆವು.
ಎಪ್ರಿಲ್ 7 (ಗುರುವಾರ) ರಂದು 8 ಸೇವಾಕಾರ್ಯಕರ್ತರನ್ನು ಒಳಗೊಂಡ ತಂಡ ಬಾದಾಮಿ ತಾಲೂಕಿನ ಕೆಲೂಡಿ, ಗುಳೇದಗುಡ್ಡ, ಹೊಸೂರ, ಬೇಲೂರು, ಜಾಲಿಹಾಳ, ಗುಡ್ಡುದ ಮಲ್ಲಾಪುರ, ಕ್ಯಾಡ, ಒಡವಟ್ಟಿ, ಕುಳಗೇರಿ ಕ್ರಾಸ್, ಕೆರೂರ, ಜಮ್ಮನಕಟ್ಟಿ, ಹೂಲಗೇರಿ ಗ್ರಾಮಗಳಲ್ಲಿ ಸೇವೆಯ ನಿರೀಕ್ಷೆಯಲ್ಲಿದ್ದ ಒಟ್ಟು 40 ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು. ದಣಿವಿಲ್ಲದೆ ಹಸನ್ಮುಖಿಗಳಾಗಿ ಕಾಳಜಿಪೂರ್ವಕ ಸೇವೆಗೈದವರಿಗೆಲ್ಲ ನಮ್ಮ ಹಿರಿಯರ ಅಭಯ ಇದ್ದೇ ಇದೆ.
ಪ್ರೇರಣಾದಾಯಿ ಘಟನೆಗಳು
ಗುಳೆದಗುಡ್ಡ ಅಗ್ರಹಾರ ದೇವಸ್ಥಾನದಲ್ಲಿ 9 ಕುಟುಂಬಗಳಿಗೆ ಕಿಟ್ ವಿತರಿಸಿದ ನಂತರ ನಮ್ಮೊಂದಿಗೆ ಮಾತಿಗಿಳಿದ ಸಂಘಟಿಕ ವ್ಯಕ್ತಿ, ಪ.ಪೂ.ಶ್ರೀ ಸತ್ಯಾತ್ಮ ತೀರ್ಥರ ಆದೇಶ ಪಾಲನೆಗಾಗಿ ತಾವೆಲ್ಲ ಶ್ರಮಿಸುತ್ತಿರುವುದು ಹಾಗೂ ಆಪತ್ಕಾಲದಲ್ಲಿ ನಮ್ಮೊಂದಿಗಿದಿರಲ್ಲ ಅಷ್ಟು ಸಾಕು, ಸೂಳಿಕೇರಿ ಶ್ರೀರಾಮ ಉತ್ಸವ ಸೇವಾ ಸಮಿತಿಯವರಿಗೆ ನಾವು ಚಿರರುಣಿ ಎನ್ನತ್ತ ಧನ್ಯತಾಭಾವ ಸೂಚಿಸಿದರು.
ಪ್ರಶಂಸಿದ ಗ್ರಾಮಸ್ಥರು
ಕೆರೂರು ಗ್ರಾಮದಲ್ಲಿ ಬಹುದಿನಗಳಿಂದ ವಯೋ ಸಹಜ ರೋಗದಿಂದ ಬಳಲುತ್ತಿರುವ ಒಂದು ಕುಟುಂಬದ ವೃದ್ಧ ದಂಪತಿಗಳಿಗೆ ನೀಡಿದ ಸಹಾಯ ಕಂಡು ಬೇರೆ ಸಮುದಾಯದ ಪ್ರಮುಖರೋರ್ವರು ತಮ್ಮ ಕಾರ್ಯ ಶ್ಲಾಘನೀಯ. ಇದು ನಮಗೂ ಅನುಪಮ ಆದರ್ಶ ಎಂದರು.
ವಿರೋಧ ಎದುರಿಸಿದ ಸೇವಾಕರ್ತರು
ಬೇಲೂರು ಸಮೀಪ ಬರುವ ಗುಡ್ಡದ ಮಲ್ಲಾಪೂರದಲ್ಲಿ ನೆಲೆಸಿರುವ ಒಂದು ಕುಟುಂಬ, ಆ ವೃದ್ಧ ದಂಪತಿಗಳಿಗೆ ಕಿಟ್ ವಿತರಣೆಗಾಗಿ ಗ್ರಾಮಕ್ಕೆ ತೆರಳಿದಾಗ ಗ್ರಾಮ ಪ್ರವೇಶಿಸಿದ್ದಕ್ಕೆ ಗ್ರಾಮಸ್ಥರು ಪ್ರತಿರೋಧ ವ್ಯಕ್ತಪಡಿಸಿದರು. ಸೇವಾಕರ್ತರು ಸಹನೆಯಿಂದ ವಿರೋಧ ಮನವರಿಕೆ ಮಾಡಿ ಕೊನೆಗೂ ಕಿಟ್ ವಿತರಿಸಿ ಪೂಜ್ಯ ಶ್ರೀಗಳ ಅನುಗ್ರಹ ಸಂದೇಶ ತಿಳಿಸಲಾಯಿತು.
ಅಧಿಕಾರಿಗಳ ಅಡಚಣೆಯ ಮಧ್ಯ ಅತಿಥಿ ಸತ್ಕಾರ
ಡಾಣಕಶಿರೂರನಲ್ಲಿ ಈ ಪೂರ್ವ ದೊಡ್ಡ ಸಂಖ್ಯೆಯಲ್ಲಿ ಕೊರೋನಾ ರೋಗಿಗಳ ಪತ್ತೆ ಆಗಿದ್ದರಿಂದಾಗಿ ಬೇಲೂರಿನಲ್ಲಿ ಯಾವುದೇ ವಾಹನ/ಜನರಿಗೆ ಓಡಾಟಕ್ಕೆ ಅವಕಾಶವೇ ಇರಲಿಲ್ಲ. ಅಂತಹ ಸಂದಿಗ್ಧ ಸಮಯದಲ್ಲಿ ಒಂದೆಡೆ ನಮಗೆ ಅಧಿಕಾರಿಗಳು ಗ್ರಾಮ ತೊರೆಯುವಂತೆ ಬೆನ್ನು ಹತ್ತಿದ್ದರು, ಅದೆಲ್ಲದರ ಮಧ್ಯೆ ಸ್ಥಳಿಯ ಒಂದು ಕುಟುಂಬದವರು ಎಲ್ಲ ಸೇವಾಕಾರ್ಯಕರ್ತರರಿಗೆ ಉಣಬಡಿಸಿದರು. ಅನ್ನದಾತ ಸುಖೀ ಭವ.
ಸಂತಸ ಪಟ್ಟು ಸೇವೆ ಪಡೆದವರು, ಸ್ಮರಿಸಿದ ರಾಮನವಮಿ
ಕುಳಗೇರಿ, ಕೆರೂರು, ಹೊಲಗೇರಿ, ಜಮ್ಮನಕಟ್ಟಿಯಲ್ಲಿ ಸಮೀತಿಯ ಕಾರ್ಯವನ್ನು ಕಂಡು ಸಂತಸ ಪಟ್ಟು….ಸೂಳಿಕೇರಿ ರಾಮನವಮಿಯ ಕುರಿತು ಗತವೈಭವ ಸ್ಮರಿಸಿ. ಗ್ರಾಮದೊಂದಿಗೆ ತಮ್ಮ ಪೂರ್ವಜರ ಬಾಂಧವ್ಯ ಹಂಚಿಕೊಂಡರು.
ವಾಹನ ಚಾಲಕರ ಚಾಣಾಕ್ಷತನ
ಎಲ್ಲ ಗ್ರಾಮಗಳಿಗೂ ಸಮಯಕ್ಕೆ ಸರಿಯಾಗಿ ಅಧಿಕಾರಿಗಳ ತೊಂದರೆಯ ಮಧ್ಯೆಯೂ, ಸಹನೆಯಿಂದ ಅಧಿಕಾರಿಗಳಿಗೆ ಅರಿಕೆ ಮಾಡಿ ಕಾರ್ಯಸಾಧನೆಯಲ್ಲಿ ಚಾಣಾಕ್ಷತನ ತೋರಿದ ಚಾಲಕರ ಸಹಕಾರಕ್ಕೆ ಅಭಿನಂದನೆ ಈ ಸಮಿತಿಯರಿಂದ.
ಪ.ಪೂ.ಶ್ರೀ ಸತ್ಯಾತ್ಮತೀರ್ಥರ ಅನುಜ್ಞೆಯಂತೆ, ಎಲ್ಲ ಸಮಿತಿಗೆ ಸಂಬಂಧಿಸಿದವರೆಲ್ಲರೂ ತನು, ಮನ, ಧನ ಸಹಕಾರ ಭಾವದಿಂದಾಗಿ, “ಕೇಶವಂ ಪ್ರತಿಗಚ್ಛತಿ”, “ಅನ್ಯತಃ ಶರಣಂ ನಾಸ್ತಿ” ಎಂಬ ಭಾವದೊಂದಿಗೆ ಈ ಕಾರ್ಯದ ಫಲವನ್ನು ಅಂತರ್ಗತ ಪ್ರಭು ಶ್ರೀ ರಾಮಚಂದ್ರ ಪ್ರಾಣ ದೇವರಿಗೆ ಸಮರ್ಪಿಸಿ, ಇದು ಹೀಗೆ ಅನವರತವಾಗಲಿ.
ಕೊರೋನಾ ವಾರಿಯರ್ಸ್ ಅಂದ ತಕ್ಷಣ ನೆನಪಾಗೋದು ಡಾಕ್ಟರ್ಗಳು, ನರ್ಸ್ಗಳು, ಪೋಲೀಸರು ಹಾಗೂ ಪೌರ ಕಾರ್ಮಿಕರು. ಕೊರೋನಾದ ಸಲುವಾಗಿ ಅನುಭವಿಸಿದ ಕಷ್ಟಕ್ಕೆ ಸ್ಪಂದಿಸಿದವರು ಜೊತೆಗೆ ನಿರಂತರ ಸೇವೆ ಒದಗಿಸಿದವರು ನಮ್ಮ ಪ್ರಕಾರ ಕೊರೋನಾ ಯೋಧರೆ. ಯೋಧರಿಗೆ ಶತ್ರುಗಳ ದಮನಿಸೋದೇ ಕರ್ತವ್ಯ ಇಲ್ಲಿ ತೊಂದರೆಯಲ್ಲಿರುವವರಿಗೆ ಸೇವೆ ಮುಟ್ಟಿಸುವುದು ಕರ್ತವ್ಯದ ಭಾವವೇ.
ಎಷ್ಟೇ ಕಷ್ಟ ಬಂದರೂ, ಅಧಿಕಾರಿಗಳಿಂದ ತೊಂದರೆಯಾದರೂ ಅದೆಲ್ಲವನ್ನು ಲೆಕ್ಕಿಸದೆ ಸ್ವಯಂಪ್ರೇರಿತರಾಗಿ ಸೇವೆ ಭಾವ ಉತ್ತುಂಗಕ್ಕೇರಲು ಈ ಅವಿರತ ಪರಿಶ್ರಮ ಕಾರಣವೆನಿಸುತ್ತದೆ. ಸೇವಾಕರ್ತರು ಕೈಯಲ್ಲಿ ಜೀವ ಹಿಡಿದುಕೊಂಡೆ ಸೇವೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಸ್ವಲ್ಪ ಯಾಮಾರಿದರೂ ನಮಗಷ್ಟೇ ಅಲ್ಲ ಮನೆಯವರಿಗೂ ತೊಂದರೆಯಾಗುತ್ತದೆ. ಅದೆಲ್ಲವೂ ಗೊತ್ತಿದ್ದರೂ ಯಾವುದನ್ನೂ ಅಪೇಕ್ಷೆ ಪಡದೇ ತನು, ಮನ, ಧನದಿಂದ ಬಡವರಿಗೆ ಮುಟ್ಟುವುದು ಯಜ್ಞವೇ ಸರಿ. ಅಲ್ಲಿ ನಡೆಯುವ ಘಟನೆಗಳು ಸೇವಾಕರ್ತರ ಹುಮ್ಮಸ್ಸನ್ನು ನೂರು ಪಟ್ಟು ಹೆಚ್ಚು ಮಾಡುತ್ತಿರೋದು ಮಾತ್ರ ಸುಳ್ಳಲ್ಲ. ಈ ತರಹ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕೊರೋನಾ ಯೋಧರಿಗೆ ಮನೆಯಿಂದಲೇ ಧನ್ಯವಾದ ತಿಳಿಸಿ, ಅನುಭವ ಹಂಚಿಕೊಂಡರೆ ಅವರ ಕಾರ್ಯದಲ್ಲಿ ಮತ್ತಷ್ಟು ದಕ್ಷತೆ ಹೆಚ್ಚಾಗುತ್ತದೆ. ನಿಸ್ವಾರ್ಥ ಸೇವೆಯೂ ಯಾವತ್ತಿಗೂ ಅನುಪಮ, ಅದರ ಅನುಭವ ಮಾತ್ರ ಅನನ್ಯ ಎನ್ನುವ ಆಶಯದೊಂದಿಗೆ.
✍️ ಶ್ರೀ ಮೋಹನ ದೇಶಪಾಂಡೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.