ಬಾಗಲಕೋಟೆ ನಗರದ ಒಂದು ಮೊಹಲ್ಲಾ, ಅಲ್ಲಿ ಮದ್ಯಮ ವರ್ಗದ ಜನರೇ ಹೆಚ್ಚು ವಾಸಿಸುತ್ತಾರೆ. ತಿಂಗಳ ಪೂರ್ತಿ ದುಡಿದು ತಿಂಗಳ ಕೊನೆಗೆ ಬಂದ ಸಂಬಳದಲ್ಲಿ ಮನೆ ಸಾಗಿಸುವುದು ಅಲ್ಲಿನ ಹೆಚ್ಚಿನ ಜನರ ಕಾಯಕ. ಅದರಲ್ಲಿನ ಅಲ್ಪ ಸ್ವಲ್ಪ ಉಳಿದ ಹಣವನ್ನು ತೆಗೆದಿಟ್ಟು, ಅದರ ಜೊತೆಗೆ ಸ್ವಲ್ಪ ಸಾಲ ಸೂಲ ಮಾಡಿ ಕೊರೋನಾ ಸಮಯದಲ್ಲಿ ಮನೆ ನಿಭಾಯಿಸುತ್ತಿದ್ದಾರೆ.
ಒಂದು ಪ್ರೇರಣಾದಾಯಿ ಘಟನೆಯನ್ನು ತಿಳಿಸುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಿದ್ದೇನೆ.
ಬಾಗಲಕೋಟೆಯ ಆ ಏರಿಯಾ ಪೂರ್ತಿ ಸೀಲ್ಡೌನ್ ಆಗಿತ್ತು. ಜನವಸತಿ ಬಿಟ್ಟರೆ ಅಲೆದಾಟ ಮಾತ್ರ ಕಡ್ಡಾಯವಾಗಿ ನಿಷಿದ್ಧವಾಗಿತ್ತು. ಮನೆಯ ಪರಿಸ್ಥಿತಿ ನೆನಪಾದರೇ ಅಕ್ಷರಶಃ ಅಳು ಬರುತ್ತಿತ್ತು. ಕೊರೋನಾ ಸಮಯದಲ್ಲಿ ಮನೆಯನ್ನು ಹೇಗೆ ನಿಭಾಯಿಸಬೇಕು ಎನ್ನೋದೇ ದೊಡ್ಡ ಚಿಂತೆ. ತಂದೆ ತಾಯಿಯಿಂದ ಆದಾಯ ಅಸಾಧ್ಯ. ಸಹೋದರರಿಂದ ಆದಾಯದ ನಿರೀಕ್ಷೆಯೂ ಸುಳ್ಳಾಗಿತ್ತು. ಅವರ ಚಟಕ್ಕೆ ಅವರ ಆದಾಯ ಸೀಮಿತವಾಗಿತ್ತು. ಅಕ್ಕ ಪಕ್ಕದ ಬಂಧುಗಳಿಗೆ ಕೇಳೋಣವೆಂದರೆ ಸ್ವಾಭಿಮಾನ ಅಡ್ಡ ಬರುತ್ತಿತ್ತು. ದೂರದ ಸಂಬಂಧಿಗಳಿಗೆ ಕಷ್ಟವನ್ನು ಹೇಳೋಣವೆಂದರೆ ಪ್ರೀತಿಸಿದ ತಪ್ಪಿಗೆ ಅನುಭವಿಸು ಎನ್ನುವ ಮುನ್ಸೂಚನೆ. ಅಕ್ಷರಶಃ ನರಕಯಾತನೆ ಅನುಭವಿಸುತ್ತಿದ್ದಳು ಆ ಹೆಣ್ಣುಮಗಳು. ಆಕೆ ಎಷ್ಟು ಧೈರ್ಯವಂತೆ ಅಂದರೆ ಅವಳ ಸ್ವಾಭಿಮಾನದ ಮುಂದೆ ಪ್ರತಿಯೊಬ್ಬರೂ ಮಂಡಿಯೂರಲೇ ಬೇಕು. ಬೇರೆಯವರಿಗೆ ಕಷ್ಟವೆಂದರೆ ತಾನೂ ನೋವು ಪಟ್ಟುಕೊಳ್ಳುವ ಮನಸ್ಥಿತಿ ಅವಳದು. ನನ್ನತ್ರ ಸಹಾಯಕ್ಕೆ ಆಗಮಿಸುವವರು ಯಾರೂ ಸಹಾಯ ಪಡೆಯದೇ ವಾಪಸ್ ಹಿಂತಿರುಗಬಾರದು ಎನ್ನುವ ಅಭಿಲಾಸೆ ಆ ಹೆಣ್ಣುಮಗಳದು.
ಕೊರೋನಾ ಅಟ್ಟಹಾಸದ ಮಧ್ಯವೆ ಸೀಲ್ಡೌನ್ ಇದ್ದ ಪ್ರದೇಶದ ಮಧ್ಯದಲ್ಲಿಯೇ ಪ್ರತಿನಿತ್ಯ ಕೆಲಸಕ್ಕೆ ಹೋಗಬೇಕು. ಪ್ರತಿದಿನವೂ ಪೊಲೀಸರ ಕಣ್ಣು ತಪ್ಪಿಸಿಕೊಂಡು ದುಡಿಯೋಕೆ ಹೋಗಬೇಕು. ಬಾಗಲಕೋಟೆ ಉರಿಬಿಸಿಲು ಎಷ್ಟಾಗಿದೆ ಎಂದರೆ 38°-42°C, ಇಂತಹ ಬಿಸಿಲಲ್ಲೇ ಎರಡು ಕಿಲೋ ಮೀಟರ್ ನಡೆದುಕೊಂಡೆ ಹೋಗಬೇಕು. ವಾಪಸ್ ಬರುವಾಗಲೂ ನಡೆದುಕೊಂಡೇ ಬರಬೇಕು. ಅಕಸ್ಮಾತ್ ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡರೆ ಮನೆಯಲ್ಲಿರುವವರೆಲ್ಲರೂ ಸ್ವಚ್ಛವಾಗುವಂತೆ ಬೈಯ್ಯುತ್ತಿದ್ದರು. ಪ್ರತಿದಿನ ಒಂದು ತರಹ ಬಾರ್ಡರ್ ದಾಟಿಯೇ ಯುದ್ಧಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು.
ಇಷ್ಟೇಲ್ಲ ಕಷ್ಟ ಅನುಭವಿಸುತ್ತಿದ್ದರೂ ಒಂದೇ ಒಂದು ದಿನ ಮತ್ತೊಬ್ಬರ ಮುಂದೆ ತುಟಿ ಬಿಚ್ಚದಿರೋದು ಕೊರೋನಾದೊಂದಿಗಿನ ಮಹಾಸಮರದಲ್ಲಿ ಆಕೆಯ ಧೈರ್ಯವನ್ನು ಎತ್ತಿ ತೋರಿಸುತ್ತದೆ. ಎಷ್ಟೋ ಸಾರಿ ಪೋಲೀಸರಿಂದ ಬೈಸ್ಕೊಂಡಿದ್ದು ಉಂಟು. ಇವಳ ಕಷ್ಟದ ಬಗ್ಗೆ ಪೊಲೀಸರಿಗೂ ಅನುಭವವಾಗಿದೆ ಎಂದೆನಿಸುತ್ತದೆ ಅದಕ್ಕಾಗಿಯೇ ಅವಳನ್ನು ಮಾತನಾಡಿಸುವ ಗೋಜಿಗೆ ಅವರು ಹೋಗುತ್ತಿರಲಿಲ್ಲ.
ಬಿಸಿಲಿನ ಬೇಗೆ, ಮನೆಯ ಪರಿಸ್ಥಿತಿ, ಪೊಲೀಸರ ಕಿರಿಕಿರಿ, ಕೆಲಸದಲ್ಲಿನ ಒತ್ತಡ ಅವಳನ್ನು ಅವಳಾಗಿ ಉಳಿಸಿರಲಿಲ್ಲ. ಕೆಲಸ ಮುಗಿಸಿ ಬಂದು ಮನೆಯಲ್ಲಿ ವಿಶ್ರಮಿಸುತ್ತಿದ್ದಂತೆ ಮನೆಯಲ್ಲಿನ ಕೆಲಸ, ಕಿರಿಕಿರಿಗೆ ಸಾವೆ ಗತಿ ಎಂದು ನಿರ್ಧರಿಸಿದ್ದಳು.
ನಾನು ಸತ್ತರೆ ನನ್ನ ನಂಬಿದವರ ಗತಿಯೇನು ಎಂದು ಪ್ರಶ್ನೆ ಮೂಡಿದ ತಕ್ಷಣ ತಾನೂ ಇತರರಂತೆ ಸಮಾಜದಲ್ಲಿ ತಲೆಯೆತ್ತಿ ಬದುಕಬೇಕು, ಇತರರಿಗೂ ಮಾದರಿಯಾಗಬೇಕು ಎಂಬ ಛಲ ಆಕೆಯಲ್ಲಿ ದೃಢವಾಗುತ್ತಿತ್ತು. ಕೊರೋನಾದ ಸಲುವಾಗಿ ಕಷ್ಟ ಅನುಭವಿಸುತ್ತಿರುವವರಿಗೆ ನನ್ನಿಂದ ಕೈಲಾದ ಸಹಾಯವನ್ನು ನೀಡಬೇಕು. ಅವರ ಖುಷಿಯಲ್ಲಿ ನಾನು ಖುಷಿ ಕಾಣಬೇಕು ಅಂತ ಆಕೆ ನಿರ್ಧರಿಸಿದಳು. ಮನೆಗೆ ಸ್ವಲ್ಪ ಕಡಿಮೆ ಆದರೆ ಆಗಲಿ, ಬಡವರಿಗೆ, ಅನಾಥಶ್ರಮದಲ್ಲಿದ್ದವರಿಗೆ ಕೊರತೆಯಾಗಬಾರದು ಅಂತ ಯೋಚಿಸಿದಳು. ತನ್ನ ಕೈಲಾದಷ್ಟು ಸಹಾಯವನ್ನು ಮಾಡಬೇಕು ಅಂತ ಯೋಚಿಸಿದಳು.
ಅದೇ ಸಮಯಕ್ಕೆ ಅವಳ ಹುಟ್ಟಿದ ದಿನವೂ ಬಂದಿತ್ತು. ಇದೇ ಸೂಕ್ತ ಸಮಯ ಎಂದುಕೊಂಡು, ಏನು ಸಹಾಯ ಮಾಡಲಿ ಅಂತ ಯಾರಿಗಾದರೂ ವಿಚಾರಿಸಿದರೆ ನಿಮ್ಮ ಮನೆಯ ಪರಿಸ್ಥಿತಿನೇ ಸರಿಯಿಲ್ಲ ನಿನ್ನ ಸಹಾಯ ಬೇಡ ಅಂತ ಬೇರೆಯವರು ಅನ್ನುತ್ತಾರೆ ಅನ್ನೋದು ಅವಳಿಗೆ ಗೊತ್ತಿತ್ತು. ಅದಕ್ಕಾಗಿ ಅವಳ ಮಾಡಿದ ಉಪಾಯವೇನೆಂದರೆ ಪರಿಹಾರ ಕಾರ್ಯದಲ್ಲಿ ಓಡಾಡುತ್ತಿರುವ ನಂಬುಗೆಯ ವ್ಯಕ್ತಿಯನ್ನು ಗುರುತಿಸಿ ಅವರ ಕೈಯಲ್ಲಿ ಹಣವನ್ನು ಕೋರೋನಾ ಸಲುವಾಗಿ ಕಷ್ಟ ಅನುಭವಿಸುವವರಿಗೆ ಕೊಡಲು ಹೇಳಬೇಕು ಅಂತ ಯೋಜಿಸಿಕೊಂಡಳು.
ತನ್ನ ಯೋಜನೆಯಂತೆಯೇ ನಗರದಲ್ಲಿ RSS ಸ್ವಯಂಸೇವಕರು ಸೇವಾ ಕಾರ್ಯಗಳಲ್ಲಿ ಭಾಗಿರೋದು ಕಂಡು ಅವರಲ್ಲಿಯೇ ಯಾರಿಗಾದರೂ ಹಣವನ್ನು ಕೊಡಲು ಸಿದ್ದಳಾದಳು. ಅದೃಷ್ಟವಶಾತ್ ಆ ದಿನ ಆ ವ್ಯಕ್ತಿ ಸಿಗಲೇ ಇಲ್ಲ ಅವಳಿಗೆ. ಒಂದೆರಡು ದಿನದ ಬಳಿಕ ಸಿಕ್ಕ ತಕ್ಷಣ ಅವನ ಕೈಯಲ್ಲಿ ನೇರವಾಗಿ ಹಣ ಕೊಡದೇ ಮುಚ್ಚಿಟ್ಟಿದ್ದ ಕರವಸ್ತ್ರದಲ್ಲಿ ಹಣದ ನೋಟುಗಳನ್ನು ಇಟ್ಟು ಹೊರಟು ಬಿಟ್ಟಳು. ಆ ಸ್ವಯಂಸೇವಕನಿಗೆ ಆಶ್ಚರ್ಯ ಇಷ್ಟು ದುಡ್ಡು ಯಾಕೆ ಕೊಟ್ಟಳು? ಯಾರಿಗೋಸ್ಕರ ಇದು ಅನ್ನೋದೇ ಅವನಿಗೆ ಆಶ್ಚರ್ಯವಾಗಿತ್ತು, ಹಣವನ್ನು ತನ್ನಲ್ಲೇ ಭದ್ರವಾಗಿಟ್ಟುಕೊಂಡು ಮತ್ತೇ ತನ್ನ ಸೇವಾ ಕಾರ್ಯದಲ್ಲಿ ತೊಡಗಿದ.
ನಂತರ ಸ್ವಲ್ಪ ಸಮಯದ ನಂತರ ಪೋನ್ ಮಾಡಿದ ಆಕೆ, ಆ ದುಡ್ಡನ್ನು ಅವಶ್ಯಕತೆ ಇರುವ ಬಡವರಿಗೆ ಏನಾದರೂ ಸಹಾಯ ಮಾಡಲು ಬಳಸಿ ಅಂತ ಹೇಳಿದಳು. ಅವಳ ಸೇವಾ ಭಾವ ಕಂಡು ಸ್ವಯಂಸೇವಕನಿಗೆ ಹೆಮ್ಮೆ ಅನಿಸಿತ್ತು, ಆನಂದಭಾಷ್ಪ ಜಿನುಗಿತು. ಸಾವರಿಸಿಕೊಂಡು ಮಾತಿಗಿಳಿದ ಸ್ವಯಂಸೇವಕ ಇವಳ ಎಲ್ಲ ಹಿನ್ನಲೆ ಕೇಳಿ ಅಲ್ಲಿಂದಲೇ ಅವಳಿಗೊಂದು ಸೆಲ್ಯೂಟ್ ಮಾಡಿದ. ಆ ಕರವಸ್ತ್ರದಲ್ಲಿ ಹಣ ಎಷ್ಟಿತ್ತೆಂದರೆ 5500 ರೂ.ಗಳು. ಅವಳು ಒಂದು ತಿಂಗಳು ಕಷ್ಟಪಟ್ಟು, ನೋವು ಪಟ್ಟು ದುಡಿದ ಹಣವದು. ಕಡಿಮೆ ಹಣ ಅನಿಸಿದರೂ ಆದಾಯದ ಎಲ್ಲಾ ಹಣವನ್ನೂ ನೀಡುವ ಭಾವ ಮಾತ್ರ ಬಹು ದೊಡ್ಡದು. ಮನೆಗೆ ಏನ್ಮಾಡ್ತಿಯ ಅಂತಂದರೆ ದೇವರಿದ್ದಾನೆ ನಿಮ್ಮಂತಹ ಸ್ವಯಂಸೇವಕರ ಮುಂದೆ ನನ್ನ ಸೇವೆ ದೊಡ್ಡದಲ್ಲ ಎನ್ನುತ್ತಾಳೆ. ಅಂದರೆ ಅವಳಿಗೆ ಸೇವೆ ಮಾಡಿದೆ ಎನ್ನುವ ಕಿಂಚಿತ್ತು ಗರ್ವವಿಲ್ಲ.
ಇವಳ ಈ ಸೇವಾ ಭಾವವನ್ನು ಸಮಾಜದಲ್ಲಿ ತುಂಬಾ ಸೇವೆ ಮಾಡಿದ್ದೇವೆ ಎನ್ನುವವರಿಗೆ ತಿಳಿಸೋಣ, ತಮ್ಮ ಪೋಟೋ, ಹೆಸರು ವಿವರವನ್ನು ಹಾಕೋಣವೆಂದರೆ ಅದಕ್ಕೂ ಒಪ್ಪಲಿಲ್ಲ. ನನ್ನ ಹೆಸರು, ನನ್ನ ಪೋಟೋವನ್ನು ಎಲ್ಲಿಯೂ ಹಾಕಿದರೇ ದೇವರಾಣೆ ಎಂದು ಆಣೆ ಮಾಡಿಯೇ ಬಿಟ್ಟಳು. ಇನ್ನೂ ನನ್ನಿಂದ ಏನಾದರೂ ಸಹಾಯ ಬೇಕಾದರೆ ಯಾವುದೇ ಸಮಯದಲ್ಲಾದರೂ ಕೇಳಿ. ನನ್ನ ಕೈಲಾದಷ್ಟು ಸಹಾಯ ಮಾಡುವೆ ಎಂದು ಮಾತು ಕೊಟ್ಟಿದ್ದಾಳೆ. ಅಷ್ಟೋತ್ತಿಗಾಗಲೇ ಸ್ವಯಂಸೇವಕನ ಮನವೆಲ್ಲ ದುಃಖದಿಂದ ಕಣ್ಣಂಚಿನಲ್ಲಿ ನೀರು ತಾನಾಗಿಯೇ ಜಿನುಗಿ ಜಲಪಾತದಂತೆ ಹರಿಯಿತು. ಇಷ್ಟು ಸಾಕಲ್ಲವೇ ಆ ಸ್ವಯಂಸೇವಕನಿಗೆ ಇನ್ನೂ ಹೆಚ್ಚಿನ ಸೇವಾಕಾರ್ಯ ಮಾಡಲು. ತನ್ನ ಕಷ್ಟವನ್ನು ಮರೆತು ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಗುಣ ಇರುವವಳಿಗೆ ಅವಳ ಹಾಗೇ ಇರುವ ಗಂಡನೇ ಸಿಗಲಿ, ಆಕೆಯ ಸೇವೆ ಸಮಾಜದಲ್ಲಿ ಇನ್ನೊಬ್ಬರಿಗೆ ಪ್ರೇರಣೆಯಾಗಲಿ ಎಂದು ಹೇಳಿ ಜನ್ಮದಿನದ ಶುಭಾಶಯಗಳನ್ನು ಆ ಸ್ವಯಂಸೇವಕ ತಿಳಿಸಿದ.
ಸಮಾಜದಲ್ಲಿ ಈ ತರಹದ ವ್ಯಕ್ತಿಗಳು ಅದರಲ್ಲಿಯೂ ಹೆಣ್ಣುಮಕ್ಕಳು ಇದ್ದಾರೆಂದರೆ ನಿಜಕ್ಕೂ ಅವರು ತಾಯಿ ಭಾರತೀಯ ಅವತಾರವೇ ಸರಿ. ಒಬ್ಬ ನಿಜವಾದ ತಾಯಿ ತನ್ನ ಮಕ್ಕಳನ್ನು ಹೇಗೆ ಕಿಂಚಿತ್ತು ತೊಂದರೆ ಆಗದೆ ಹೇಗೇ ಸಾಕುತ್ತಾಳೋ ಹಾಗೇನೆ ಈ ತಾಯಿತ್ವವನ್ನು ಪ್ರಚಾರ ಬಯಸದೇ ನೀಡಿರೋದು ಅವೀಸ್ಮರಣೀಯ. ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ (ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ) ಎಂಬ ಶ್ಲೋಕ ಖಂಡಿವಾಗಿಯೂ ಸತ್ಯವೆನಿಸುತ್ತದೆ. ಈ ತರಹ ಸ್ವಯಂ ಕೊರೋನಾ ವಾರಿಯರ್ ಆಗಿ ಸೇವೆ ಸಲ್ಲಿಸುವ ಎಲ್ಲ ಮಾತೆಯರಿಗೂ, ಈ ಪ್ರೇರಣಾದಾಯಿ ಸೇವಾ ಕಾರ್ಯ ಮಾಡಿದ ಹೆಣ್ಣು ಮಗಳಿಗೂ ಅನಂತ ಅನಂತ ಧನ್ಯವಾದಗಳೊಂದಿಗೆ, ಅವಳ ಭವಿಷ್ಯ ಉಜ್ವಲವಾಗಿ ದೇಶದ ಸಂಪತ್ತಾಗಿ, ಆಕೆ ಮಾದರಿ ಜೀವನ ನಡೆಸಲಿ ಎನ್ನುವ ಹಾರೈಕೆಯ ಆಶಯದೊಂದಿಗೆ ಲೇಖನ ಮುಗಿಸುತ್ತೇನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.