ಪ್ರಪಂಚದಲ್ಲಿ ಎಲ್ಲದಕ್ಕಿಂತ ದೊಡ್ಡ ನೋವು ಯಾವುದು ಗೊತ್ತಾ? ಮಗನ ಶವಕ್ಕೆ ತಂದೆ ಸಂಸ್ಕಾರ ಮಾಡುವುದು. ಅಂತಹ ನೋವನ್ನು ನುಂಗಿದ ಅಪ್ಪ, ನನ್ನ ಮಗ ಅತ್ಯುನ್ನತ ತ್ಯಾಗ ಮಾಡಿದ್ದಾನೆ. ಅದಕ್ಕಾಗಿಯೇ ಅವನು ತರಬೇತಿ ಪಡೆದಿದ್ದ ಮತ್ತು ಅದನ್ನೇ ಸಾಧಿಸಿದ್ದಾನೆ ಎಂದರೆ ಏನರ್ಥ? ಒಂದೋ ಆ ತಂದೆ ಸೈನಿಕನಾಗಿರಬೇಕು ಅಥವಾ ಆ ಮಗ ವೀರ ಯೋಧನಾಗಿರಬೇಕು. ವಿಶೇಷ ಎಂದರೆ ಈ ಸಮಯದಲ್ಲಿ ಈ ಎರಡೂ ಸತ್ಯ. ಮೊನ್ನೆಯಷ್ಟೇ ಹಂಡ್ವಾರಾ ಎನ್ಕೌಂಟರ್ನಲ್ಲಿ ಹುತಾತ್ಮರಾದ ಮೇಜರ್ ಅನುಜ್ ಸೂದರ ತಂದೆ ನಿವೃತ್ತ ಬ್ರಿಗೇಡಿಯರ್ ಚಂದ್ರಕಾಂತ್ ಸೂದ್ರ ಮಾತು. ಅಬ್ಬಾ ಅದೆಂತಹ ದೇಶವಿದ್ದೀತು ಭಾರತ? ಇಂತಹ ಶ್ರೇಷ್ಠ ಮಕ್ಕಳ ಪಡೆಯಲು.
ಅವತ್ತು ಮೇ 2 ರ ಶನಿವಾರ. ಮಧ್ಯಾಹ್ನ ಮೂರುವರೆ ಗಂಟೆ ಸುಮಾರಿಗೆ ಉತ್ತರ ಕಾಶ್ಮೀರದ ಹಂಡ್ವಾರಾ ಬಳಿ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ಕಾಳಗ ಆರಂಭವಾಯಿತು. ಸಂಜೆಯ ಹೊತ್ತಿಗೆ ಇಬ್ಬರು ಮುಖ್ಯ ಸೇನಾಧಿಕಾರಿಗಳು ಲಷ್ಕರ್ ಉಗ್ರರೊಂದಿಗೆ ಒಂದು ಮನೆಯಲ್ಲಿ ಸಿಲುಕಿದ್ದಾರೆ ಎಂಬ ಸುದ್ದಿ ಬಂದಾಗ ಅವರನ್ನು ಸಂಪರ್ಕಿಸುವ ಎಲ್ಲಾ ಪ್ರಯತ್ನಗಳು ಆರಂಭವಾದವು. ದುರಾದೃಷ್ಟವಶಾತ್ ಯಾವ ಯಶಸ್ಸು ಸಿಗದಿದ್ದಾಗ ಕರ್ನಲ್ ಅಶುತೋಷ್ ಶರ್ಮಾರ ಮೊಬೈಲಿಗೆ ಕರೆ ಮಾಡಿದಾಗ ಅಸ್ಸಲಾಮ್ ವಾಲೇಕುಮ್ ಎಂದು ದುರುಳನೊಬ್ಬ ಪ್ರತಿಕ್ರಿಯಿಸಿದ. ಅಲ್ಲಿಗೆ ಭರವಸೆಗಳು ಕರಗಿದ್ದವು. ಮೇಜರ್ ಅನುಜ್ ಸೂದ್ರೊಂದಿಗೆ ಕರ್ನಲ್ ಅಶುತೋಷ್ ಶರ್ಮಾ, ನಾಯಕ್ ರಾಜೇಶ್, ಲ್ಯಾನ್ಸ್ ನಾಯಕ್ ದಿನೇಶ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಸಬ್ ಇನ್ಸ್ಪೆಕ್ಟರ್ ಶಕೀಲ್ ಖಾಜಿ ಹುತಾತ್ಮರಾದರು.
ಅನುಜ್ ಸೂದರ ತಂದೆಯವರ ಮಗನ ಸಾವಿನ ಬಗ್ಗೆ ಕೇಳಿದರೆ ಇಲ್ಲ ಅವನು ಅದಕ್ಕೆಂದೇ ಇದ್ದವನು. ನಮ್ಮ ಕಾಯುವುದೇ ಅವನ ಹೊಣೆ. ಆದರೆ ಆತನ ವಿವಾಹವಾಗಿ ಕೆಲವು ತಿಂಗಳು ಅಷ್ಟೇ ಆಗಿತ್ತು. ಅದಕ್ಕೆ ನನ್ನ ಸೊಸೆಯನ್ನು ನೆನೆದು ದುಃಖವಾಗುತ್ತಿದೆ ಎಂದರು. ಸ್ವತಃ ಚಂದ್ರಕಾಂತ್ ಅವರು ನಿವೃತ್ತ ಬ್ರಿಗೇಡಿಯರ್. ನಿಜಕ್ಕೂ ಹೆಮ್ಮೆ ಅನ್ನಿಸುತ್ತದೆ. ಆದರೆ ಮುವತ್ತೊಂದರ ಹರೆಯದ ಅನೂಜ್ ಸೂದರ ಕುರಿತು ನಿಮಗೆ ಹೇಳಬೇಕಿದೆ. “When you’re older, you will realise the only thing that matters, the only thing, is that you had courage and honour. Lose those things and you won’t die any quicker, but you’ll be less than the dirt from your boots. You’ll still be dust, but you’ll have wasted a short time in the light.” ಇದು ಅನುಜ್ ಸೂದರ ಇನ್ಸ್ಟಾಗ್ರಾಂನಲ್ಲಿ ಹಾಕಿದ ಸಾಲುಗಳು, “ನೀನು ವೃದ್ಧನಾದಾಗ ಒಂದು ವಿಷಯ ಅರ್ಥ ಆಗುತ್ತೆ. ಅದೇನೆಂದರೆ ನಿಜಕ್ಕೂ ಮಹತ್ವ ಅಂತಿದ್ದರೆ ಅದು ಧೈರ್ಯ ಮತ್ತು ಗೌರವಕ್ಕೆ ಅಷ್ಟೇ ಅಂತ. ಅವನ್ನು ಕಳೆದುಕೊಂಡರೆ ನೀನೇನು ಬೇಗ ಸಾಯದೇ ಇರಬಹುದು. ಆದರೆ ನಿನ್ನ ಕಾಲ ಧೂಳಿಗೂ ತೃಣ ಆಗ ನೀನು. ನಿಜವಾಗಿಯೂ ನೀನು ಮಹತ್ತರವಾದದ್ದು ಕಳೆದುಕೊಂಡಿರ್ತಿಯಾ.” ಒಬ್ಬ ವೀರನ ಪುತ್ರನಿಂದ, ಪುತ್ರನೂ ಮಹಾವೀರನಾದಾಗ ಅವನಿಂದ ಇದನ್ನಲ್ಲದೆ ಮತ್ತೇನು ನಿರೀಕ್ಷಿಸಲು ಸಾಧ್ಯ?
ರೋಮಾಂಚನವಾಗುತ್ತದೆ ವೀರನ ಕಥೆ ಹೇಳಲು, ಇನ್ನೆಷ್ಟು ಚಂದವಿರಬೇಡ ಆ ಬದುಕು.?! ಬದುಕಿದರೆ ಹಾಗೆ ಬದುಕಬೇಕು. Indian Institute of Science (IISc) ನಲ್ಲಿ M.Tech ಪದವೀಧರ. Indian Institute of Technology (IIT) ಪಾಸ್ ಆದವರು. ಅವರು ಹೇಳಿದ ಉದ್ಯೋಗ ಅವರ ಅರಸಿ ಬರುತ್ತಿತ್ತು. ಎಲ್ಲಾ ಬಿಟ್ಟು ಜೀವ ಪಣಕ್ಕಿಟ್ಟು ಸೇನೆ ಸೇರಿದರು. ತಂದೆಯ ಬದುಕು, ಉದ್ಯೋಗ ಕಣ್ಣಾರೆ ಕಂಡು ನಂತರ ಇಂತಹ ಪ್ರತಿಭಾವಂತ ಯುವಕ ಈ ಹಾದಿಯನ್ನು ತುಳಿದಿದ್ದರೆ ಅದು ಖಂಡಿತ ಅವರಲ್ಲಿನ ರಾಷ್ಟ್ರ ಪ್ರೇಮವೇ ಆಗಿರುತ್ತದೆ. ಒಮ್ಮೊಮ್ಮೆ ಬೇಸರವಾಗುತ್ತದೆ. ಈ ನಮ್ಮ ಭಾರತದಲ್ಲಿ ಸೈನಿಕರ ಬಲಿದಾನಗಳಿಗೆ ಸಾಕ್ಷಿ ಕೇಳುವವರು ಇದ್ದಾರಲ್ಲ ಅಂತ. ಈಗಲೂ ಅಂತಹುದೇ ಒಂದು ಘಟನೆ ನಡೆಯಿತು. ಅವರ ಬಗ್ಗೆ ಜಾಮಿಯ ವಿವಿಯ ಒಂದು ಎಡಬಿಡಂಗಿ ಹೇಳ್ತಾಳೆ ಅವರೆಲ್ಲ War Criminals ಅಂದರೆ ಯುದ್ಧಾಪರಾಧಿಗಳು. ಅವರಿಗೆ ಯಾಕೆ ನೀವು ಇಷ್ಟು ರೋಧಿಸುವಿರಿ? ಅಂತ. ರಕ್ತ ಕುದ್ದು ಬಿಡುತ್ತದೆ. ಯಾರನ್ನು ನೋಡಿ ಅನಕ್ಷರಸ್ಥ ಗ್ರಾಮ ಭಾರತ ಕಂಬನಿ ಮಿಡಿಯುತ್ತೋ, ವಿದ್ಯಾವಂತರಲ್ಲದ ಅಕ್ಷರಸ್ಥ ಅನಾಗರೀಕರು ತಮ್ಮ ಪ್ರಚಾರದ ಹುಚ್ಚಿಗೆ ವೀರರ ಹೀಗಳೆಯುವ ಕಾಯಕ ಮಾಡುತ್ತಾರೆ. ಅವರಿಗೆ ಕೊನೆಗೆ ಒಂದು ಶಿಕ್ಷೆಯೂ ನಮ್ಮ ಸಂವಿಧಾನ ನೀಡುವುದಿಲ್ಲ.
ಮಂಗಳವಾರ ಬೆಳಿಗ್ಗೆ ಪಂಚಕುಲಾಗೆ ಹುತಾತ್ಮ ಯೋಧ ಅನುಜರ ದೇಹ ತಂದಾಗ ಆಕ್ರಂದನ ಹೃದಯ ತಟ್ಟುತ್ತಿತ್ತು. ಚಿಕ್ಕ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡ ಪತ್ನಿ ಆಕೃತಿ, ಮಗನ ಶವಕ್ಕೆ ಸಂಸ್ಕಾರ ಮಾಡಬೇಕಾದ ತಂದೆ. ತುಂಬಾ ಕಠಿಣವಾದ ಘಳಿಗೆ. ಲಾಕ್ಡೌನ್ ಮುಗಿದ ಮೇಲೆ ಬರುವ ಭರವಸೆ ಕೊಟ್ಟು ಹೋದ ಮನೆಯ ಮಗ ಬಂದಿದ್ದು ಹುತಾತ್ಮನಾಗಿ. ಇದು ಕೇವಲ ಅನುಜ್ ಸೂದ್ ಒಬ್ಬರ ಕಥೆಯಲ್ಲ. ಭಾರತೀಯ ಪ್ರತಿ ಯೋಧನ ಜೀವನ. ಅವರ ಹೃದಯದಲ್ಲಿ ರಾಷ್ಟ್ರಪ್ರೇಮ ಬಿಟ್ಟರೆ ಮತ್ತೇನು ಇರಲು ಸಾಧ್ಯವೇ ಇಲ್ಲ. ಹೃದಯದ ಪ್ರತಿ ಬಡಿತವೂ ಮತ್ತಷ್ಟು ದೇಶಭಕ್ತಿಯನ್ನೇ ಸ್ಪುರಿಸುತ್ತದೆ. ಅನುಜರ ದಿಟ್ಟಿಸಿ ನೋಡುತ್ತಾ, ಮತ್ತೊಮ್ಮೆ ಬಾಚಿ ಅಳುತ್ತಾ ಇದ್ದ ಆಕೃತಿಯವರ ನೋಡುತ್ತಿದ್ದರೆ, ಅನೂಜ್ ಸೂದ್ ಎದ್ದು ಬರಬಾರದೋ ಎನ್ನಿಸುತ್ತಿತ್ತು.
ಅವರಿಗೇನಿತ್ತು ಅಂತಹ ಜವಾಬ್ದಾರಿ? ಕೈ ತುಂಬಾ ಸಂಬಳ ಪಡೆಯಲು ಎಂದೋ ಕಳಿಸಬಹುದಿತ್ತು. ವೀರರ ಕುಟುಂಬಗಳೇ ಹಾಗೆ. ಅವರು ಅನನ್ಯ ದೇಶಭಕ್ತರರೇ ಆಗಿರುತ್ತಾರೆ. ಅಂತಹುದರಲ್ಲಿ ಅವರಿಗೆ ಸಾಕ್ಷಿ ಪುರಾವೆ ಕೇಳುವುದು, ಯುದ್ಧ ಅಪರಾಧಿಗಳು ಅಂತ ಹೀಗಳೆಯುವುದು ಅಥವಾ ಹೊಟ್ಟೆಪಾಡಿಗಾಗಿ ವೃತ್ತಿ ಮಾಡುವವರು ಎನ್ನುವುದು ತುಂಬಾ ದೊಡ್ಡ ಅಪರಾಧ. ಸಂವಿಧಾನಾತ್ಮಕ ಶಿಕ್ಷೆ ವಿಧಿಸುವ ಕ್ರಮ ಆರಂಭವಾಗಲಿ.
ನಿಜಕ್ಕೂ ಇಂತಹ ವೀರ ಪುತ್ರರ ಪಡೆದ ಭಾರತ ಮಾತೆ ಧನ್ಯಳು. ಅವರ ಕಾಲ ಧೂಳಿಗೂ ನಾವು ಸಮಾನರಲ್ಲ. ಈ ಪೀಳಿಗೆ ಅಸಂಖ್ಯವಾಗಲಿ. ಈ ಸಂದರ್ಭದಲ್ಲಿ ಶ್ರೇಷ್ಠ ಸಂತ ವಿದ್ಯಾನಂದ ಶೆಣೈಯವರ ಕೆಲ ಸಾಲುಗಳು ನೆನಪಿಗೆ ಬರುತ್ತಿದೆ.
ಮೂರು ಸಾಗರ, ನೂರು ಮಂದಿರ ದೈವ ಸಾಸಿರವಿದ್ದರೆ,
ಗಂಗೆಯಿದ್ದರೆ ಸಿಂಧುವಿದ್ದರೆ ಗಿರಿ ಹಿಮಾಲಯವಿದ್ದರೆ,
ವೇದವಿದ್ದರೆ ಭೂಮಿಯಿದ್ದರೆ ಘನ ಪರಂಪರೆಯಿದ್ದರೆ,
ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ…?
ಅರ್ಥ ಆಗುವವರಿಗೆ ಅರ್ಥ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.