ಸೂರ್ಯ ತನ್ನ ಕಾರ್ಯಕ್ಕೆ ಹಾಜರಾಗುವ ಮುನ್ನವೇ, ತಮ್ಮ ಆ ದಿನದ ತುತ್ತಿನ ಚೀಲ ತುಂಬಿಸುವ ಸಲುವಾಗಿ ಅನೇಕರು ಚಿಂತಿತರಾಗಿರುತ್ತಾರೆ. ತಮ್ಮ ಅಂದಿನ ದುಡಿಮೆಗಾಗಿ ಬಸ್ಟ್ಯಾಂಡ್ಗಳಲ್ಲಿ ತಮ್ಮನ್ನು ಕರೆದೊಯ್ಯಲು ಯಾರಾದ್ರೂ ಬರುತ್ತಾರಾ ಎಂದು ಬಕಪಕ್ಷಿಯಂತೆ ಕಾಯುತ್ತಿರುತ್ತಾರೆ. ಇವರ ದುಡಿಯುವ ಸ್ಥಳ ಕಾಯಂ ಆಗಿರುವುದಿಲ್ಲ. ಇನ್ನು ನಿಗದಿತ ಸಂಬಳ ಎನ್ನುವುದು ಇವರಿಗೆ ಕನ್ನಡಿಯಲ್ಲಿ ಕಾಣುವ ನಿಧಿಯಂತೆ. ನಿತ್ಯ ಸಂಚಾರಿಯ ಬದುಕು ಇವರದ್ದು. ಇವರ ಮಾಲೀಕ ಕೂಡ ಬದಲಾಗುತ್ತಲೇ ಇರುತ್ತಾನೆ. ತಮ್ಮ ದೈಹಿಕ ಶ್ರಮದ ಮೇಲೆ ಸಂಬಳ ಪಡೆಯುವ ಶ್ರಮ ಜೀವಿಗಳು ಕಾರ್ಮಿಕರು. ಇದುಕೂಲಿ ಕಾರ್ಮಿಕರ ದಿನಚರಿ. ಕೊರೊನಾ ವೈರಸ್ಗೂ ಮುನ್ನ ಅವರ ದಿನಚರಿ ಹೀಗೆ ಇತ್ತು. ಆದರೆ ಈಗ ಸಂಪೂರ್ಣ ಬದಲಾಗಿದೆ. ಕೂಲಿ ಕಾರ್ಮಿಕರು ನಿತ್ಯ ಹಸಿವೆಂಬ ವೈರಸ್ನಿಂದ ಬಳಲುತ್ತಿದ್ದಾರೆ. ಕೈಯಲ್ಲಿ ಕಾಸಿಲ್ಲದೆ ಲಾಕ್ಡೌನ್ ಇಂದು ತೆರವಾಗುತ್ತೋ, ನಾಳೆ ತೆರವಾಗುತ್ತೋ ಎಂದು ಎಣಿಕೆ ಆರಂಭಿಸಿದ್ದಾರೆ. ಇನ್ನೊಂದು ಕಡೆ ಕೊರೊನಾ ವಾರಿಯರ್ಸ್ಗಳಾಗಿ ದಿನದ 24 ಗಂಟೆಯೂ ಜೀವದ ಹಂಗೂ ತೊರೆದು ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್, ಪೌರಕಾಮಿಕರು, ಪೊಲೀಸರು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇವರಿಗೆಲ್ಲ ಮನುಕುಲದ ಪರವಾಗಿ ಕಾರ್ಮಿಕರ ದಿನಾಚರಣೆ ಶುಭಾಶಯ ಹಾಗೂ ಅವರ ನಿಸ್ವಾರ್ಥ ಸೇವೆಗೊಂದು ಹ್ಯಾಟ್ಸ್ ಆಫ್…
ಕಾರ್ಮಿಕ ದಿನಾಚರಣೆಯ ಹಿನ್ನೆಲೆ
ಸಮಾಜದಲ್ಲಿ ಎರಡು ರೀತಿಯ ವರ್ಗಗಳು ಇಂದಿಗೂ ಅಸ್ತಿತ್ವದಲ್ಲಿವೆ. ಅವುಗಳೇ ಬಂಡವಾಳಶಾಹಿ ಮತ್ತು ಕಾರ್ಮಿಕವರ್ಗ ಅಥವಾ ಯಜಮಾನ ಮತ್ತು ಜವಾನ ಪದ್ಧತಿ. ಬಂಡವಾಳಶಾಹಿಗಳು ಹಣದ ಬಲವಿರುವ ಜನ, ಶ್ರೀಮಂತರು. ಕೂಲಿಕಾರ್ಮಿಕರ ಮೇಲೆ ಅವರ ದಬ್ಬಾಳಿಕೆ ಮುಂದುವರೆಯುತ್ತಲೇ ಇತ್ತು. ಬಂಡವಾಳಶಾಹಿಗಳಿಂದ ಕೂಲಿ ಕಾರ್ಮಿಕರು ಬೇಸತ್ತಿದ್ದರು. ಬಂಡವಾಳಶಾಹಿಗಳು ಮತ್ತು ಕಾರ್ಮಿಕ ವರ್ಗದ ನಡುವೆ ಶತಮಾನಗಳಿಂದ ಅನಿರ್ದಿಷ್ಟ ಅವಧಿ ದುಡಿಮೆಗಾಗಿ ಸಂಘರ್ಷ ನಡೆಯುತ್ತಲೇ ಇತ್ತು. ಬಂಡವಾಳಶಾಹಿಗಳು ಹಗಲಿರುಳೆನ್ನದೇ ಕಾರ್ಮಿಕ ವರ್ಗದವರಿಂದ ಕಡಿಮೆ ಸಂಬಳ ನೀಡಿ, ಹೆಚ್ಚು ಸಮಯ ದುಡಿಸಿಕೊಳ್ಳುತ್ತಿದ್ದರು. ದಿನದ 24 ಗಂಟೆಗಳಲ್ಲಿ 8 ಗಂಟೆ ದೈನಂದಿನ ಚಟುವಟಿಕೆಗಳಿಗಾಗಿ, ಇನ್ನು 8 ಗಂಟೆ ದುಡಿಮೆಗಾಗಿ ಮತ್ತು ಉಳಿದ 8ಗಂಟೆ ವಿಶ್ರಾಂತಿಗೆಂದು ವರ್ಗೀಕರಿಸಲಾಗಿತ್ತು. ಆದರೆ ಬಂಡವಾಳಶಾಹಿಗಳ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಬಂಡವಾಳ ಶಾಹಿಗಳ ವಿರುದ್ಧ ಹೋರಾಟ ಆರಂಭಿಸಿದರು.
ದುಡಿಯುವ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು 1886 ಮೇ 1 ರಂದು ಅಮೇರಿಕಾದ ಚಿಕಾಗೋದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರೆಲ್ಲ ಸೇರಿ ಹೋರಾಟ ಆರಂಭಿಸಿದರು. ಹೋರಾಟ ಉಗ್ರ ಸ್ವರೂಪ ಪಡೆದುದರ ಪರಿಣಾಮ, ಮೇ 4ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಇದರಿಂದಾಗಿ ನೂರಾರು ಕಾರ್ಮಿಕರು ಜೀವ ಕಳೆದುಕೊಂಡರು. ಆದರೂ ಹೋರಾಟ ಮುಂದುವರೆಯಿತು. ಇದರ ಫಲವಾಗಿ ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಗೆ ನಿಗದಿಪಡಿಸಲಾಯಿತು. ಇದರ ಸವಿನನಪಿಗಾಗಿ ಮೇ 1ರಂದು ‘ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತದೆ.
ಆಧುನಿಕತೆ ದಿನದಿಂದ ದಿನಕ್ಕೆ ಜನಜೀವನದಲ್ಲಿ ಹಾಸು ಹೊಕ್ಕುತ್ತಿದೆ. ಮಾನವನ ದೈಹಿಕ ಶ್ರಮ ಕಡಿಮೆಯಾಗಿ, ಬೌದ್ಧಿಕ ಜಾಣ್ಮೆ ಹೆಚ್ಚು ಮೌಲ್ಯವನ್ನು ಪಡೆದುಕೊಳ್ಳುತ್ತಿದೆ. ಅಕ್ಷರಸ್ಥರಿಗೆ ಈ ಬೆಳವಣಿಗೆಯಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ತಮ್ಮ ದೈಹಿಕ ಬಲವನ್ನು ನೆಚ್ಚಿಕೊಂಡಂತಹ ಕಾಮಿಕರು ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ನಗರಗಳಲ್ಲಿ ಗಗನಚುಂಬಿ ಕಟ್ಟಡಗಳ ಸಂಖ್ಯೆಗೇನೂ ಕಡಿಮೆಯಿಲ್ಲ. ಸಿದ್ಧಗೊಂಡ ಕಟ್ಟಡ ಕಂಡು, ಮಾಲೀಕನಿಗೆ ಪ್ರಶಂಸೆ ವ್ಯಕ್ತಪಡಿಸುವಜನ, ಒಮ್ಮೆಯೂ ಆ ಕಟ್ಟಡದ ಹಿಂದಿರುವ ಕೂಲಿಕಾರ್ಮಿಕರ ಶ್ರಮದ ಬಗ್ಗೆ ಮಾತನಾಡುವುದಿಲ್ಲ.
ಕಾರ್ಮಿಕರೆಂಬ ಕೀಳರಿಮೆ ಬೇಡ
ಕಾರ್ಮಿಕರೆಂದರೆ ಕೇವಲ ಕೂಲಿಗಳು ಮಾತ್ರವಲ್ಲ, ಹೊಟೇಲ್ಗಳಲ್ಲಿ ದುಡಿಯುವ ಮಾಣಿಗಳು, ಫ್ಯಾಕ್ಟರಿಗಳಲ್ಲಿ ದುಡಿಯುವವರು, ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರು, ಸಣ್ಣ ಉದ್ದಿಮೆಗಳಲ್ಲಿ ತೊಡಗಿರೋರು ಹೌದು. ಇವರ ಶ್ರಮದ ಮೇಲೆ ಕಂಪನಿ, ಕಾರ್ಖಾನೆಗಳ ಕಾರ್ಯ ಮುಂದುವರೆಯುತ್ತಿರುತ್ತದೆ. ಕಾರ್ಮಿಕರಿಲ್ಲದಿದ್ದರೆ ಎಷ್ಟೋ ಕೆಲಸ-ಕಾರ್ಯಗಳು ಸ್ಥಗಿತಗೊಂಡು ಬಿಡುತ್ತವೆ. ಬೆಳಕು ಹರಿಯುತ್ತಿದ್ದಂತೆ ನಾವು ನಡೆದಾಡುವ ರಸ್ತೆ ಸ್ವಚ್ಛವಾಗಿಡಲು, ಬೀದಿ ಬದಿಯ ಕಸ ವಿಲೇವಾರಿ ಮಾಡಲು, ಚರಂಡಿ ಶುಚಿಗೊಳಿಸಲು ಪೌರಕಾರ್ಮಿಕರೇ ಬರಬೇಕು. ಹಣವಂತರು ವಾಸಿಸುವ ಅಪಾರ್ಟಮೆಂಟ್, ಅಕ್ಷರಸ್ಥರು ದುಡಿಯುವ ಕಂಪನಿಗಳು, ಶಿಕ್ಷಣ ಸಂಸ್ಥೆಗಳು ಇವುಗಳ ಹಿಂದೆ ಅದೇಷ್ಟೊ ಕೂಲಿಕಾರ್ಮಿಕರ ಶ್ರಮವಿದೆ. ಆದರೂ ಅವರಿಗೆ ಒಂದು ದಿನವೂ ನಾವು ಕೃತಜ್ಞತೆ ಹೇಳಿರುವುದೇ ಇಲ್ಲ. ಇಂದಾದರೂ ಸಿಂಪಲ್ಲಾಗಿ ಒಂದು ಹಾಟ್ರ್ಲಿ ಥ್ಯಾಂಕ್ಸ್ ಹೇಳಿಬಿಡಿ.
ಇದು ವ್ಯವಹಾರಿಕ ಸಂಬಂಧವಾದರೂ, ಕೇವಲ ಹಣಕಾಸಿಗೆ ಮೀಸಲಾಗಿರದೇ ಅದರಾಚೆಗೂ ಮಾನವೀಯ ಸಂಬಂಧಗಳು, ಮನುಷ್ಯ-ಮನುಷ್ಯರ ನಡುವೆ ಇರಬೇಕಾದ ಪ್ರೀತಿ, ವಾತ್ಸಲ್ಯ, ನಂಬಿಕೆಯ ಬೇರುಗಳು ಬಲವಾಗಿರಬೇಕಾಗಿರುವುದು ಮುಖ್ಯ. ಈ ಬಾಂಧವ್ಯಗಳೇ ಹೆಚ್ಚುದಿನ ಉಳಿಯುವಂತಹವು ಹೊರತು ಹಣವಲ್ಲ. ಹಾಗಾಗಿ ಕಾರ್ಮಿಕರೆಂದು ಕೀಳಾಗಿ ನೋಡದೇ ಅವರನ್ನು ಕೂಡ ಪ್ರೀತಿ, ಆದರದಿಂದ ಕಾಣಿ ಮತ್ತು ಗೌರವ ಕೊಡಿ. ಪ್ರತಿದಿನ ಪರರಿಗಾಗಿ ತಮ್ಮ ದೈಹಿಕ ಶ್ರಮ ವ್ಯಯಿಸುವ ಶ್ರಮಜೀವಿಗಳಿಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.
✍️ ಗೌರಿ ಭೀ. ಕಟ್ಟಿಮನಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.