ಯಾರಾದರೂ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ಹೋದಾಗ “ಇದು ಮೊದಲ ಹೃದಯಾಘಾತವಲ್ಲ ಈ ಹಿಂದೆ ಮೊದಲು ಇವರಿಗೆ ಹೃದಯಾಘಾತ ಆಗಿದೆ” ಎಂದು ವೈದ್ಯರು ಹೇಳಿದ್ದನ್ನು ಕೇಳಿರಬಹುದು. ಆಗ ಹೀಗೇಕೆ ವೈದ್ಯರು ಹೇಳುತ್ತಿದ್ದಾರೆ ಎಂದು ನೀವು ಆಶ್ಚರ್ಯಚಕಿತರಾಗಿ ಇದ್ದಿರಬಹುದು! ಆದರೆ ತಪಾಸಣೆಗಳು ಹೃದಯದ ಮಾಂಸ ಕೋಶಗಳಿಗೆ ಉಂಟಾದ ಹಾನಿಯನ್ನು ತೆರೆದು ತೋರಿಸುತ್ತದೆ. ಈ ಮೊದಲು ಯಾವಾಗಲೋ ಒಮ್ಮೆ , “ಮೌನ ಹೃದಯಾಘಾತ ” ಎಂದು ವೈದ್ಯರು ಕರೆಯುವ ಸ್ಥಿತಿ ಉಂಟಾಗಿರಬಹುದು. ಮೌನ ಹೃದಯಾಘಾತ ವೆಂದರೆ, ಉಂಟಾದ ಲಕ್ಷಣಗಳು ಹೃದಯಾಘಾತಕ್ಕೆ ಸಂಬಂಧಪಟ್ಟದ್ದು ಎಂದು ದಾಖಲಾಗಿರುವುದಿಲ್ಲ ಅಥವಾ ಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳು ಎಂದು ವೈದ್ಯಕೀಯ ಪರೀಕ್ಷೆಗಳಿಂದ ಗಮನಿಸಲ್ಪಟ್ಟಿರುವುದಿಲ್ಲ.
ಎಷ್ಟೋ ಸಲ, ಎರಡನೆಯ ಹೃದಯಾಘಾತ ಉಂಟಾದರೂ ಬಚಾವ್ ಆಗಿರಬಹುದು. ಅದಕ್ಕೆ ಕಾರಣಗಳು ಇರಬಹುದು. ಹೃದಯಕ್ಕೆ ಅಪಾಯ ಉಂಟು ಮಾಡಬಹುದಾದ ಅಂಶಗಳನ್ನು ಅವರು ಬದಲಾವಣೆ ಮಾಡಿಕೊಂಡಿರಬಹುದು. ನಂತರವೂ ಎಷ್ಟೋ ದಶಕಗಳ ಕಾಲ ಆರಾಮವಾಗಿ ಜೀವನ ಮಾಡಿಕೊಂಡಿರಬಹುದು, ಯಾವುದೇ ತೊಂದರೆಗಳು ಇಲ್ಲದೆ.
ಜಗತ್ತಿನಲ್ಲಿ ಇನ್ನೂ ಎಷ್ಟೋ ಜನ ಈ ರೀತಿ ಇರಬಹುದು. ಮೌನ ಹೃದಯಾಘಾತ ಉಂಟಾಗಿ, ಎರಡನೆಯ ಸಲ ಹೃದಯಾಘಾತ ಆಗುವುದಕ್ಕೆ ಸಂದರ್ಭಗಳು ಕಾಯುತ್ತಿರಬಹುದು, ಮರಣವನ್ನು ಸಹಿತ.
ಆದರೆ “ನೋವುಂಟು ಮಾಡುವ ಹೃದಯಾಘಾತಕ್ಕಿಂತ, ಯಾವುದೇ ಲಕ್ಷಣಗಳಿಲ್ಲದ ಮೌನ ಹೃದಯಾಘಾತ ಲೇಸು” ಎಂದು ಕೆಲವರಿಗೆ ಅನಿಸಬಹುದು. ಗೊತ್ತಿಲ್ಲದೆ ಇರುವುದು ಅಪಾಯಕಾರಿಯಲ್ಲ ಎಂಬ ಭ್ರಾಂತಿಯಲ್ಲಿ ಅವರು ದಿನ ಕಳೆಯಬಹುದು! ಆದರೆ ಅದೊಂದು ಸುಳ್ಳು ಭ್ರಾಂತಿ ಅಷ್ಟೇ. ಬದಲಿಗೆ ಹೃದಯಾಘಾತದ ಸಾಧ್ಯತೆ ನನ್ನಲ್ಲಿ ಇದೆ ಎಂದು ಗೊತ್ತಾಗುವುದು, ಹೆಚ್ಚು ಅನುಕೂಲ. ಇದು ದುಃಖದಾಯಕವಾದರೂ, ಗೊತ್ತಿಲ್ಲದೇ ಇರುವ ಸ್ಥಿತಿ ಉಂಟುಮಾಡುವ ಜಟಿಲತೆಗಳು ಉಂಟುಮಾಡುವಷ್ಟು ದುಃಖದಾಯಕವಲ್ಲ. ಗೊತ್ತಿಲ್ಲದೇ ಇದ್ದರೆ ನೀವು ಈಗ ಇರುವ ಶೈಲಿಯಲ್ಲಿ ಬದುಕುತ್ತೀರಿ. ಅದು ನಿಮ್ಮ ಹೃದಯವನ್ನು ಇನ್ನಷ್ಟು ಹಾನಿಗೆ ಈಡು ಮಾಡಬಹುದು.
ಮುನ್ಸೂಚನೆ ಕೊಡುವ ಹೃದಯಾಘಾತವು, ನಿಮ್ಮ ಜೀವನ ಶೈಲಿಯ ಬದಲಾವಣೆಗೆ ಕಾರಣವಾಗಬಹುದು. ಹೃದಯಕ್ಕೆ ಅಪಾಯ ತಂದೊಡ್ಡುವ ಅಂಶಗಳನ್ನು ನೀವು ಹದ್ದುಬಸ್ತಿನಲ್ಲಿಡುವುದಕ್ಕೆ ನಿಮ್ಮನ್ನು ಜಾಗೃತಗೊಳಿಸಬಹುದು. ರಕ್ತದೊತ್ತಡ ನಿಯಂತ್ರಣ, ಕೊಲೆಸ್ಟ್ರಾಲ್ ನಿಯಂತ್ರಣ, ಧೂಮಪಾನ ಬಿಡುವುದು , ಬೊಜ್ಜು ಕರಗಿಸುವುದು, ನಿತ್ಯ ವ್ಯಾಯಾಮ ಮಾಡುವುದು, ರಕ್ತದ ಸಕ್ಕರೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು – ಇತ್ಯಾದಿಗಳಿಗೆ ನಿಮ್ಮನ್ನು ಸಜ್ಜುಗೊಳಿಸಬಹುದು. ಆಹಾರ ಮತ್ತು ವ್ಯಾಯಾಮ ಇವುಗಳನ್ನು ನಿಯಂತ್ರಿಸದಿದ್ದಲ್ಲಿ ಔಷಧಗಳ ಸಹಾಯ ಪಡೆದುಕೊಳ್ಳಬಹುದು.
ಔಷಧಗಳ ಸಹಾಯ ಪಡೆಯದೇ, ಹೃದಯ ಸ್ನೇಹಿಯಾದ ಜೀವನಪದ್ಧತಿಯನ್ನು ಅಳವಡಿಸಿಕೊಂಡಲ್ಲಿ, ಹೃದಯಾಘಾತ ಉಂಟಾಗುವ ಸಾಧ್ಯತೆ ಇದ್ದರೂ, ಅದರಿಂದ ರಕ್ಷಣೆ ಪಡೆದುಕೊಳ್ಳಬಹುದು. ಆಗ ಹೃದಯಾಘಾತ ಉಂಟಾಗುವ ಸಾಧ್ಯತೆ 80 ಶೇಕಡಾದಷ್ಟು ಕಡಿಮೆಯಾಗುತ್ತದೆ. ಇದು ಹೃದ್ರೋಗ ತಜ್ಞರ ಅಭಿಪ್ರಾಯವಾಗಿದೆ.
ಈಚೆಗೆ ಐಸ್ಲ್ಯಾಂಡ್ ಹಾಗೂ ಫಿನ್ಲ್ಯಾಂಡ್ನಲ್ಲಿ ನಡೆಸಿದ ಅಧ್ಯಯನಗಳು, ಇದಕ್ಕೆ ಸಾಕ್ಷಿ ಒದಗಿಸುತ್ತವೆ. ಅಲ್ಲಿ ಪ್ರತಿಯೊಬ್ಬನ ವೈದ್ಯಕೀಯ ದಾಖಲೆಗಳನ್ನು ಅಚ್ಚುಕಟ್ಟಾಗಿ ಇಡಲಾಗುತ್ತದೆ. ಇದು, ಮೌನ ಹೃದಯಾಘಾತದ ಸಂದರ್ಭಗಳನ್ನು, ನಂತರದ ದಿನಗಳಲ್ಲಿ ಕಂಡುಬರುವ ಜಟಿಲತೆಗಳನ್ನು ನಿರ್ಧರಿಸಲು ಸಹಕಾರಿಯಾಗುತ್ತದೆ. ಕಳೆದ ಅಕ್ಟೋಬರ್ ತಿಂಗಳ ” JAMA cardiology ” ಎಂಬ ಹೃದಯಕ್ಕೆ ಸಂಬಂಧಿಸಿದ ವೈದ್ಯಕೀಯ ಪತ್ರಿಕೆಯಲ್ಲಿ ಈ ಕುರಿತು ವರದಿ ಪ್ರಕಟವಾಗಿತ್ತು.” ಹೃದಯವು ನನ್ನ ಜೀವಧಾರಕ ಸಾಮರ್ಥ್ಯ ಕುಂದಿದೆ ಎಂಬ ಅಪಾಯದ ಸಂಕೇತಗಳನ್ನು ಕಳಿಸುವುದಕ್ಕೆ ಕಾಯದೆ, ಹೃದಯಕ್ಕೆ ಅಪಾಯ ತಂದೊಡ್ಡುವ ಅಂಶಗಳನ್ನು ಗಮನಿಸಿ, ಅವುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಹೃದಯಾಘಾತವನ್ನು ತಡೆಗಟ್ಟುವಲ್ಲಿ ಕ್ರಮಕೈಗೊಳ್ಳಬೇಕು” ಎಂಬುದಾಗಿ ಅದರಲ್ಲಿ ಉಲ್ಲೇಖಿಸಿದೆ.
ಈ ಅಧ್ಯಯನದಲ್ಲಿ ಬೊಟ್ಟು ಮಾಡಿ ತೋರಿಸುವ ಸಂಗತಿಯಿದೆ. 67 ರಿಂದ 93 ವರ್ಷ ವಯಸ್ಸಿನ 935 ವ್ಯಕ್ತಿಗಳನ್ನು ಆಯ್ಕೆ ಮಾಡಿ ದಾಖಲಿಸಲಾಯಿತು. 13 ವರ್ಷಗಳ ಕಾಲ ನಿರಂತರವಾಗಿ ಅವರ ಮೇಲೆ ನಿಗಾ ಇಡಲಾಯಿತು. ಅಧ್ಯಯನದ ಆರಂಭದಲ್ಲಿ ಪ್ರತಿಯೊಬ್ಬರನ್ನು ಹೃದಯದ ಎಂ. ಆರ್. ಐ. ತಪಾಸಣೆಗೆ ಒಳಪಡಿಸಲಾಯಿತು. ಅದು ಮೌನ ಹೃದಯಾಘಾತವನ್ನು ಪತ್ತೆಹಚ್ಚಲು ಅತ್ಯುತ್ತಮ ವಿಧಾನ. ಆರಂಭದಲ್ಲಿ 17 ಶೇಕಡ ಜನ ಮಾತ್ರ ಮೌನ ಹೃದಯಾಘಾತ ಹೊಂದಿದವರಾಗಿದ್ದರು. ಹತ್ತು ಶೇಕಡಾದಷ್ಟು ಜನ ಮಾತ್ರ ಗುರುತಿಸಲ್ಪಟ್ಟ ಹೃದಯಾಘಾತ ಉಳ್ಳವರಾಗಿದ್ದರು. ಮೊದಲ ಮೂರು ವರ್ಷ ಗಮನಿಸಿದಾಗ, ಮೌನ ಹೃದಯಾಘಾತ ಆದವರಲ್ಲಿ ಮತ್ತು ಆಗದೆ ಇದ್ದವರಲ್ಲಿ, ಪ್ರಮಾಣ ಕೇವಲ ಮೂರು ಶೇಕಡ ಆಗಿತ್ತು. ಇದು ಗುರುತಿಸಲ್ಪಟ್ಟ ಹೃದಯಾಘಾತ ಇದ್ದವರಲ್ಲಿ ಕಂಡುಬಂದ 9 ಶೇಕಡಾ ಮರಣ ಪ್ರಮಾಣಕ್ಕಿಂತ ಎಷ್ಟೋ ಕಡಿಮೆಯಾಗಿತ್ತು. ಸಮಯ ಕಳೆದಂತೆ ಮೌನ ಹೃದಯಾಘಾತ ಉಂಟಾದವರ ಪರಿಸ್ಥಿತಿ ಹದಗೆಡುತ್ತಾ ಹೋಯಿತು. ದಾಖಲೆಯಾದ ಹತ್ತು ವರ್ಷಗಳ ನಂತರ, ಮೌನ ಹೃದಯಾಘಾತ ಆದವರಲ್ಲಿ ಅರ್ಧದಷ್ಟು ಜನ ಅಸುನೀಗಿದ್ದರು. ಈ ಮರಣ ಪ್ರಮಾಣವು, ಗುರುತಿಸಲ್ಪಟ್ಟ ಹೃದಯಾಘಾತ ಆದವರಷ್ಟೇ ಆಗಿತ್ತು!
ಸಾವು ಎಂಬುದು ಮೌನ ಹೃದಯಾಘಾತ ಉಂಟಾದ ನಂತರದ ಗಂಭೀರ ಪರಿಣಾಮ. ಅಷ್ಟೇ ಅಲ್ಲದೆ, ಇತರ ಜಟಿಲತೆಗಳ ಸಾಧ್ಯತೆಗಳು ಅಧಿಕ.
ಹೃದಯದ ವೈಫಲ್ಯ ( congestive heart failure) , ಅದರ ಪರಿಣಾಮವಾಗಿ ಬರುವ ಉಬ್ಬಸ, ಅತಿಯಾದ ಸುಸ್ತು, ಪಾದಗಳ ಊತ, ಕೆಲಸ ಮಾಡಲು ಕಷ್ಟ – ಇತ್ಯಾದಿ ಸಂಕೀರ್ಣ ಪರಿಸ್ಥಿತಿಗಳು ಉಂಟಾಗುವುದು. ಹಾಗೆ ಹೃದಯ ವೈಫಲ್ಯ ಉಂಟಾದವರಲ್ಲಿ ಅರ್ಧದಷ್ಟು ಜನ, ವೈಫಲ್ಯ ಪತ್ತೆಯಾದ ಒಂದು ವರ್ಷದ ಒಳಗೆ ಮರಣ ಹೊಂದುವ ಸಂದರ್ಭಗಳು ಇವೆ.
ಇನ್ನೊಂದು ಅಧ್ಯಯನ, ಜುಲೈ ತಿಂಗಳ ” JAMA cardiology ” ಪತ್ರಿಕೆಯಲ್ಲಿ ಬಂದ ವರದಿ. ಸರಾಸರಿ 65 ವರ್ಷ ವಯಸ್ಸಿನ, 5869 ಜನರ autopsy ತಪಾಸಣೆ ನಡೆಸಲಾಯಿತು. ಉತ್ತರ ಫಿನ್ಲ್ಯಾಂಡಿನ ಭಾಗದಲ್ಲಿ ವಾಸಿಸುವ ಈ ಜನರ ಹಠಾತ್ತನೆ ಉಂಟಾದ ಮರಣದ ಕಾರಣವನ್ನು ತಿಳಿಯಲು 1322 ವ್ಯಕ್ತಿಗಳಲ್ಲಿ ಮೌನ ಹೃದಯಾಘಾತದ (silent myocardial infarction) ಚಿಹ್ನೆಗಳು ಕಂಡುಬಂದವು. ಆದರೆ ಅವರಾರಿಗೂ, ಈ ಮೊದಲು ಹೃದಯದ ರಕ್ತನಾಳಗಳ ಕಾಯಿಲೆಯ ಚರಿತ್ರೆ ಇದ್ದಿರಲಿಲ್ಲ! ಇದೆಲ್ಲಕ್ಕೂ ಮಿಗಿಲಾಗಿ, ಯಾರು ಶರೀರ ಶ್ರಮದ ಸಂದರ್ಭದಲ್ಲಿ ಅಕಸ್ಮಾತ್ ಮರಣಹೊಂದಿದರೋ, ಅವರ ಹೃದಯಗಳ ಗಾತ್ರ ದೊಡ್ಡದಾಗಿದ್ದದ್ದು ಕಂಡುಬಂತು. ಇದು, ಶರೀರದ ಅಗತ್ಯಗಳಾದ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ರಕ್ತ ಪಂಪು ಮಾಡುವುದರ ಮೂಲಕ ಪೂರೈಸಲು ಹೃದಯವು ಹೆಣಗಾಡುವಾಗ ಉಂಟಾದ ಒತ್ತಡದ ಲಕ್ಷಣ.
ಹೃದಯದ ಗಾತ್ರ ದೊಡ್ಡದಾಗುವುದು ಎಂಬುದೇ ಹಠಾತ್ತನೆ ಹೃದಯಾಘಾತ ಉಂಟಾಗುವುದಕ್ಕೆ ಕಾರಣವಾಗಬಹುದು. ಹಿಂದಿನ ಮೌನ ಹೃದಯಾಘಾತದ ಕಲೆಗಳು ಹೃದಯದ ಮಾಂಸ ಕೋಶಗಳಲ್ಲಿ ಇದ್ದಾಗ ಪರಿಸ್ಥಿತಿ ಇನ್ನೂ ಬಿಗಡಾಯಿಸಬಹುದು! ಮೌನ ಹೃದಯಾಘಾತಕ್ಕೆ ಒಳಗಾದ ವ್ಯಕ್ತಿಗಳು ಅದರ ಬಗ್ಗೆ ಅರಿವನ್ನು ಹೊಂದಿರುವುದಿಲ್ಲ. ಆದಕಾರಣ ಶಾಶ್ವತವಾಗಿ ತಮ್ಮ ಶರೀರ ಶ್ರಮವನ್ನು ಮಿತಿಗೊಳಿಸಿರುವುದಿಲ್ಲ, ಜೀವನಪದ್ಧತಿಯನ್ನು ಬದಲಾಯಿಸಿ ಕೊಂಡಿರುವುದಿಲ್ಲ. ಹೃದಯದಲ್ಲಿ ಕಲೆಗಳು ಉಂಟಾದಲ್ಲಿ ಹೃದಯದ ಬಡಿತದ ಲಯದಲ್ಲಿ (rhythm) ತೊಂದರೆಗಳು ಉಂಟಾಗಬಹುದು. ಇಂತಹವರು ಕೆಲಸ ಮಾಡುತ್ತಿರುವಾಗ, ಅಥವಾ ಯಾವುದೇ ಶಾರೀರಿಕ ಚಟುವಟಿಕೆಯಲ್ಲಿ ತೊಡಗಿಕೊಂಡಾಗ ಹಠಾತ್ತನೆ ಮರಣ ಉಂಟಾಗಬಹುದು..
ಆದರೆ ಕುತೂಹಲದ ಸಂಗತಿಯೆಂದರೆ, ಮೌನ ಹೃದಯಾಘಾತವು ನಿಜಕ್ಕೂ ಮೌನವಲ್ಲ!!! ಹಾಗೆಂದರೇನು? ಗೊಂದಲ ಉಂಟಾಗುತ್ತಿದೆಯೇನು? ಖಂಡಿತವಾಗಿಯೂ ಇಲ್ಲ.
ಹೃದಯಾಘಾತ ಉಂಟಾದಾಗ ಕಂಡುಬರುವ ಸಣ್ಣ ಸಣ್ಣ ಲಕ್ಷಣಗಳನ್ನು ವ್ಯಕ್ತಿಗಳು ಗಣನೆಗೆ ತೆಗೆದುಕೊಳ್ಳುವುದಿಲ್ಲ! ಅವರ ಲೆಕ್ಕಕ್ಕೆ ಅವುಗಳು ಸಣ್ಣಸಣ್ಣ ಲಕ್ಷಣಗಳು! ಎದೆಯ ಒಳಗೆ ಅನನುಕೂಲದ ಅನುಭವ ಉಂಟಾಗುವುದು, ಎದೆ ಉರಿ, ಉಸಿರಾಟಕ್ಕೆ ಕಷ್ಟವಾಗುವುದು, ವಿಪರೀತ ಸುಸ್ತು – ಮೊದಲಾದ ಲಕ್ಷಣಗಳು ಬಹಳಷ್ಟು ಜನರಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಭಾರತದಲ್ಲಿ ಜನರು ಇವುಗಳನ್ನು ” ಗ್ಯಾಸ್ಟ್ರಿಕ್ ಎಂಬ ಹಣೆಬರಹ” ದಡಿಯಲ್ಲಿ ನೋಡಬಹುದು!
ಹಾಗೂ ವೈದ್ಯರ ಗಮನಕ್ಕೆ ಇವುಗಳನ್ನು ತಾರದೆ ಇರಬಹುದು.
ಆದರೂ, ಪ್ರತಿಯೊಬ್ಬರನ್ನು ಎಂ .ಆರ್.ಐ. ತಪಾಸಣೆಗೆ ಒಳಪಡಿಸುವುದು ಪ್ರಾಯೋಗಿಕವಲ್ಲ ಮತ್ತು ಆರ್ಥಿಕವಾಗಿ ಅಷ್ಟೊಂದು ಸುಲಭ ಅಲ್ಲ. ಆರಂಭಿಕವಾಗಿ, ಸರಳ ಮತ್ತು ಸುಲಭವಾದ, ಆರ್ಥಿಕವಾಗಿಯೂ ವೆಚ್ಚದಾಯಕವಲ್ಲದ ಇ.ಸಿ.ಜಿ. ಪರೀಕ್ಷೆಯ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಆದರೂ ಇದು ಎಂ. ಆರ್.ಐ. ತಪಾಸಣೆಯಷ್ಟು ನಿಖರವಲ್ಲ. ಹಾಗಾದರೆ ನಾವು ಯಾವುದಕ್ಕೆ ಹೆಚ್ಚು ಒತ್ತು ಕೊಡಬೇಕು? ಎಂಬ ಪ್ರಶ್ನೆ ಉಂಟಾಗುತ್ತದೆ.
ಹೃದಯಕ್ಕೆ ಅಪಾರ ಅಪಾಯಕಾರಿಯಾದ ಸಂಗತಿಗಳನ್ನು ಜೀವನದಲ್ಲಿ ಗುರುತಿಸಿಕೊಳ್ಳುವುದೇ ಇದಕ್ಕಿರುವ ಮಾರ್ಗ. ವೈದ್ಯರು ರೋಗಿಗಳಲ್ಲಿ ಇಂತಹ ಅಪಾಯಕಾರಿ ಅಂಶಗಳನ್ನು ಗಮನಿಸಿ ಸಲಹೆ-ಸೂಚನೆಗಳನ್ನು, ಔಷಧಗಳನ್ನು ಕೊಡುವುದರ ಮುಖಾಂತರ ತಡೆಗಟ್ಟುವುದಕ್ಕೆ ಆದ್ಯತೆ ಕೊಡಬೇಕು. ಏನಾದರೂ ಅಪಾಯ ಉಂಟಾಗುವ ತನಕ ಅವಗಣನೆ ಮಾಡುವುದು ಮನುಷ್ಯನ ಸಹಜ ಸ್ವಭಾವ. ಅಮೆರಿಕಾದಲ್ಲಿ, 65 ವರ್ಷ ಮೇಲ್ಪಟ್ಟವರಲ್ಲಿ, ಹಠಾತ್ತನೆ ಉಂಟಾಗುವ ಹೃದಯಾಘಾತವು ಮರಣ ಪ್ರಮಾಣ ಹೆಚ್ಚುವುದಕ್ಕೆ ಕಾರಣವಾಗಿದೆ.
ನಮ್ಮ ದೇಶದಲ್ಲಿ ವೈದ್ಯರು ಇಸಿಜಿ, ಇಕೋ ಕಾರ್ಡಯೋಗ್ರಂ ಹಾಗೂ ಟ್ರೀಡ್ಮಿಲ್ ಟೆಸ್ಟ್ ಮೊದಲಾದವುಗಳನ್ನು ಅಳವಡಿಸಿಕೊಂಡು ಹೃದಯದ ಸ್ಥಿತಿಯನ್ನು ಕಂಡುಕೊಳ್ಳಬಹುದು.
ಎಲ್ಲಕ್ಕೂ ಮಿಗಿಲಾಗಿ, ಆಹಾರ ಮತ್ತು ಜೀವನ ಶೈಲಿಯಲ್ಲಿ ಪರಿವರ್ತನೆ.
ನಾವುಗಳು, ಹೃದಯವು ಕೊಡುವ ಅಪಾಯದ ಮುನ್ಸೂಚನೆಗೆ ಕಾಯುವುದು ಬೇಡ… ಹಿತವಾದದ್ದನ್ನು ಮಿತವಾಗಿ ತಿನ್ನೋಣ. ಪ್ರಾಕೃತಿಕವಾಗಿ ದೊರೆಯುವ ತುಳಸಿ, ಶುಂಠಿ, ಅರಸಿನ, ಬೆಳ್ಳುಳ್ಳಿ ಇತ್ಯಾದಿಗಳನ್ನು ದಿನನಿತ್ಯ ಬಳಸೋಣ. ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುತ್ತಾ, ” “ಹೃದಯವಂತ “ರಾಗೋಣ. ಗಟ್ಟಿ ಹೃದಯ ಹೊಂದಿದ ಗಟ್ಟಿಗರು ಆಗೋಣ. “ಫಿಟ್” ಆಗಿ “ಫಿಟ್ ಇಂಡಿಯಾ” ಕಟ್ಟೋಣ.
ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ
ಆಯುರ್ವೇದ ತಜ್ಞ ವೈದ್ಯರು
ಪ್ರಸಾದ್ ಹೆಲ್ತ್ ಕೇರ್ ಸೆಂಟರ್, ಪುರುಷರಕಟ್ಟೆ ಪುತ್ತೂರು.
ಅಸಿಸ್ಟೆಂಟ್ ಪ್ರೊಫೆಸರ್
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ,ಸುಳ್ಯ
ಮೊಬೈಲ್:9740545979
rpbangaradka@gmail.com.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.