ಹ್ಯಾಮ್ ರೇಡಿಯೋ? ಹಾಗೆಂದರೇನು. ಆಕಾಶವಾಣಿ, ಎಫ್ಎಂ ಕೇಳಿದ್ದೇವೆ. ಇದ್ಯಾವುದಪ್ಪಾ ಹೊಸ ರೇಡಿಯೋ.. ನಾವು ಈವರೆಗೆ ಕೇಳದ್ದು ಏನೋ ಹೊಸ ಆವಿಷ್ಕಾರ ಇರಬಹುದು ಅಂತ ಯೋಚಿಸಿದರೆ ಆ ಯೋಚನೆ ತಪ್ಪು. ನೋಡುವುದಕ್ಕೆ ಮೊಬೈಲ್ನಂತೆ ಕಾಣುವ ಆದರೆ ಅದಕ್ಕಿಂತ ಭಿನ್ನವಾಗಿ ಕಾರ್ಯ ನಿರ್ವಹಿಸುವ ಈ ಸಾಧನದ ಮೂಲಕ ಪ್ರಪಂಚದ ಯಾವ ಮೂಲೆಯನ್ನು ಬೇಕಾದರೂ ಸಂಪರ್ಕಿಸಬಹುದು. 19ನೆಯ ಶತಮಾನದಲ್ಲಿಯೇ ಆವಿಷ್ಕಾರ ಮಾಡಲಾದ ಈ ರೇಡಿಯೋ ಸರಿಯಾಗಿ ಬಳಕೆಗೆ ಬಂದದ್ದು ಮಾತ್ರ 20ನೇ ಶತಮಾನದಲ್ಲಿ. ಹಿಂದಿನ ಕಾಲದಲ್ಲಿ ಹೆಚ್ಚಿನ ಜನರು ಬಳಕೆ ಮಾಡುತ್ತಿದ್ದ ಈ ರೇಡಿಯೋದ ಬಗ್ಗೆ ಇಂದಿನ ಯುವಜನಾಂಗಕ್ಕೆ ಪರಿಚಯವೇ ಇಲ್ಲ ಎನ್ನಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ಕೆಲವೇ ವ್ಯಕ್ತಿಗಳು ಹ್ಯಾಮ್ ರೇಡಿಯೋ ಸಂಪರ್ಕಗಳನ್ನು ಹೊಂದಿದ್ದಾರೆ.
ಈ ಹ್ಯಾಮ್ ರೇಡಿಯೋಗಳ ಕಾರ್ಯ ನಿರ್ವಹಣೆ ಹೇಗೆ?
ಒಂದು ಹ್ಯಾಮ್ ರೇಡಿಯೋ ಕೇಂದ್ರ ಮತ್ತೊಂದು ಹ್ಯಾಮ್ ರೇಡಿಯೋ ಕೇಂದ್ರದ ಜೊತೆ ಸಂಪರ್ಕವನ್ನು ಸಾಧಿಸಬಹುದಾಗಿದೆ. ಇದು ದ್ವಿಮುಖಿ ಸಂವಹನ ಮಾಧ್ಯಮವಾಗಿದ್ದು, ಇದರಲ್ಲಿ ಒಂದು ಪ್ರಸಾರಕವಾದರೆ ಮತ್ತೊಂದು ಸ್ವೀಕರಿಸುವುದಾಗಿದೆ. ಪ್ರತಿಯೊಬ್ಬ ಹವ್ಯಾಸಿಯು ತನ್ನದೇ ಅದ ಕರೆ ಗುರುತು ಸಂಖ್ಯೆ ಹೊಂದಿರುತ್ತಾನೆ. ಇದು ವ್ಯಕ್ತಿಗತ ಮನರಂಜನೆ, ಹಾಸ್ಯ, ವಾಣಿಜ್ಯೇತರ ಸಂದೇಶ, ವರದಿಗಾರಿಕೆ, ಹವಾಮಾನ, ವಾಹನ ಒತ್ತಡ, ತುರ್ತು ಸಂದೇಶ ರವಾನೆ, ಸ್ವರ ತರಬೇತಿ, ಚರ್ಚೆ, ಸಂವಾದ ಮೂಲಕ ಸ್ವಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವ ಹವ್ಯಾಸಗಳಲ್ಲೊಂದು. ಇತರ ಎಲ್ಲಾ ದೂರ ಸಂಪರ್ಕ ಮಾಧ್ಯಮಗಳು ನಿಷ್ಕ್ರಿಯಗೊಂಡಾಗ ಅತ್ಯುಪಯೋಗವಾಗುವ ಏಕೈಕ ಸಂಪರ್ಕ ಸಾಧನವೆಂಬ ಹೆಗ್ಗಳಿಕೆಯೂ ಇದಕ್ಕಿದೆ.
ಹ್ಯಾಮ್ ರೇಡಿಯೋದಲ್ಲಿ ನಿರ್ದಿಷ್ಟ ವ್ಯಕ್ತಿಯನ್ನು ಸಂಪರ್ಕಿಸಲು ಸಾಧ್ಯವಿಲ್ಲ. ಹ್ಯಾಮ್ ರೇಡಿಯೋವನ್ನು ಉಪಯೋಗಿಸುವ ಸಂದರ್ಭ ಸಂಪರ್ಕಕ್ಕೆ ಸಿಗುವ ಹ್ಯಾಮ್ ರೇಡಿಯೋಗಳ ಅಪರಿಚಿತ ಅಥವಾ ಪರಿಚಿತ ವ್ಯಕ್ತಿಗಳ ಜೊತೆಗೆ ಸಂಪರ್ಕ ಸಾಧಿಸಬಹುದಾಗಿದೆ. ಇದರಲ್ಲಿ ಎರಡು ವಿಧದ ಹ್ಯಾಮ್ ರೇಡಿಯೋಗಳು ಇವೆ. ಮೊದಲನೆಯದು VHF ವೆರೆ ಹೈ ಪ್ರೀಕ್ವೇನ್ಸಿ – ತಾನು ವಾಸಿಸುವ ಸ್ಥಳದ ವಲಯದಲ್ಲಿ ಕನೆಕ್ಟ್ ಆಗುವಂತ ಹ್ಯಾಮ್ ರೇಡಿಯೋಗಳು. ಮತ್ತೊಂದು UHF ಅಲ್ಟ್ರಾ ಹೈ ಪ್ರೀಕ್ವೇನ್ಸಿ – ಇದು ವಿಶ್ವದಾದ್ಯಂತವಿರುವ ಹ್ಯಾಮ್ ರೇಡಿಯೋ ಕೇಂದ್ರಗಳಲ್ಲಿ ಸಂಪರ್ಕ ಸಾಧಿಸುವ ಹ್ಯಾಮ್ ರೇಡಿಯೋಗಳು.
ಈ ಹ್ಯಾಮ್ ರೇಡಿಯೋದಲ್ಲಿನ ವಿಶೇಷತೆ ಏನೆಂದರೆ ಇಲ್ಲಿ ಯಾವುದೇ ಮುಚ್ಚುಮರೆಗಳಿಲ್ಲ ಅಂದರೆ ಗೌಪ್ಯತೆಗೆ ಅವಕಾಶವಿಲ್ಲ. ಇಲ್ಲಿ ಎಲ್ಲವೂ ಮುಕ್ತ ಮಾತುಕತೆ ಆದುದರಿಂದ ಆರೋಗ್ಯಕರ ಚರ್ಚೆಗಳಿಗೇ ಇಲ್ಲಿ ಪ್ರಥಮ ಆದ್ಯತೆ.
ಮಂಗಳೂರಿನಲ್ಲೂ ಇದ್ದಾರೆ ಹ್ಯಾಮ್ ರೇಡಿಯೋ ಬಳಸುವವರು
ಈ ಹ್ಯಾಮ್ ರೇಡಿಯೋಗೆ ತನ್ನ ಅಸ್ತಿತ್ವ ಕಳೆದುಕೊಳ್ಳುವ ಭಯವಿಲ್ಲ. ಈ ಅಪ್ಡೇಟ್ ತಂತ್ರಜ್ಞಾನದ ಭರಾಟೆಯಲ್ಲೂ ಅದನ್ನು ಉಳಿಸಲು ಬಯಸುವ ಹ್ಯಾಮ್ ರೇಡಿಯೋದ ತಂಡವೇ ಇದೆ. ಇಂದಿಗೂ ತಮ್ಮ ಜಂಜಾಟದ ಬದುಕಿನಲ್ಲಿ ಕನಿಷ್ಠ ಮೂರು ಗಂಟೆಯ ಅವಧಿಯನ್ನು ಇದಕ್ಕಾಗಿ ನೀಡುವವರೂ ಇದ್ದಾರೆ. ಈ ರೀತಿ ಹ್ಯಾಮ್ ರೇಡಿಯೋ ಪರಂಪರೆಯನ್ನು ಉಳಿಸುವಲ್ಲಿ ಮಂಗಳೂರಿಗರೂ ಇದ್ದಾರೆ. ಮಂಗಳೂರಿನ ಕಾವೂರಿನಲ್ಲಿ ಕುಡೂರು ರಾಮಚಂದ್ರ ಭಟ್ ಅವರು ತಮ್ಮ ಮನೆಯಲ್ಲಿ ಇಂದಿಗೂ ಈ ಹಳೆಯ ಕಾಲದ ಹ್ಯಾಮ್ ರೇಡಿಯೋ ತಂತ್ರಜ್ಞಾನವನ್ನು ಹಾಗೆಯೇ ಕಾಪಾಡಿಕೊಂಡು ಬಂದಿದ್ದಾರೆ. ಈ ಬಗ್ಗೆ ಅವರಲ್ಲಿ ಕೇಳಿದಾಗ ಖುಷಿಯಿಂದಲೇ “ಇದರಲ್ಲಿ ನಾವು ಯಾರ ಜೊತೆಯೂ ಮುಕ್ತವಾಗಿ ಮನಸ್ಸು ಬಿಚ್ಚಿ ಮಾತಾಡಬಹುದಾಗಿದ್ದು, ಇದು ಹ್ಯಾಮ್ ರೇಡಿಯೋದ ವಿಶೇಷತೆ” ಎನ್ನುತ್ತಾರೆ.
ಕೃಷಿಕ ಮತ್ತು ಉದ್ಯಮಿಯಾಗಿರುವ ಕುಡೂರು ರಾಮಚಂದ್ರ ಅವರಿಗೆ ಈ ಹ್ಯಾಮ್ ರೇಡಿಯೋದ ಮೇಲೆ ವಿಶೇಷ ಒಲವಿದೆ. ಹ್ಯಾಮ್ ರೇಡಿಯೋವನ್ನು ತಮ್ಮ ಮನೆಯಲ್ಲಿ ಅಲ್ಲದೆ ಅವರು ತಮ್ಮ ಕಾರ್ನಲ್ಲೂ ಅಳವಡಿಸಿಕೊಂಡಿದ್ದು ತಮ್ಮ ಪ್ರಯಾಣದ ಅವಧಿಯಲ್ಲಿ ಅನಿವಾರ್ಯತೆ ಬಂದಾಗ ಸಂವಹನ ನಡೆಸುತ್ತಾರೆ.
ಅವರು ಕೊಟ್ಟ ಮಾಹಿತಿ ಪ್ರಕಾರ ಹ್ಯಾಮ್ ರೇಡಿಯೋವನ್ನು ಮಂಗಳೂರಿನಲ್ಲಿ 10 ಕ್ಕೂ ಹೆಚ್ಚು ಮಂದಿ ಉಪಯೋಗಿಸುತ್ತಿದ್ದಾರೆ. ಹ್ಯಾಮ್ ರೇಡಿಯೋಗೆ ಸಂಬಂಧಪಟ್ಟಂತೆ ವಿಶ್ವದೆಲ್ಲೆಡೆ ಸ್ಪರ್ಧೆಗಳು ನಡೆಯುತ್ತವೆಯಂತೆ, ಆ ಸ್ಪರ್ಧೆಗೆ ಬರುವವರು ಈ ಹ್ಯಾಮ್ ರೇಡಿಯೋದ ಮೂಲಕ ಸ್ನೇಹಿತರಾದವರೇ ಹೆಚ್ಚು ಎಂಬುದನ್ನು ಅವರು ಬಹಳ ಸಂತೋಷದಿಂದ ಹೇಳುತ್ತಾರೆ.
ಹ್ಯಾಮ್ ರೇಡಿಯೋಗೆ ಲೈಸೆನ್ಸ್ ಬೇಕು
ಬಳಕೆಯಲ್ಲಿದ್ದ ಹ್ಯಾಮ್ ರೇಡಿಯೋವನ್ನು ಸರಕಾರವು ಭದ್ರತಾ ದೃಷ್ಟಿಕೋನದಲ್ಲಿಟ್ಟುಕೊಂಡು ನಿಷೇಧಿಸಿದೆ, ಆದರೆ ಈ ಹವ್ಯಾಸಿ ರೇಡಿಯೋ ಒಕ್ಕೂಟದ ಮನವಿಯ ಮೇರೆಗೆ ಹ್ಯಾಮ್ ರೇಡಿಯೋ ಹೊಂದುವವರಿಗೆ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದ್ದು, ಅದರಂತೆ ಹ್ಯಾಮ್ ರೇಡಿಯೋ ಹೊಂದುವವರಿಗೆ ಸರ್ಕಾರದಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯ ಎಂಬ ನಿಯಮವನ್ನೂ ತರಲಾಗಿದೆ. ದೇಶ ವಿರೋಧಿ ಚಟುವಟಿಕೆಗಳನ್ನು ಹತ್ತಿಕ್ಕಲು ಸರ್ಕಾರವು ಈ ಕ್ರಮವನ್ನು ಕೈಗೊಂಡಿತು ಎನ್ನಲಾಗಿದೆ. ಇವತ್ತಿಗೂ ಪ್ರೀಕ್ವೆನ್ಸಿಯಲ್ಲಿ ಹೊರಡುವ ಎಲ್ಲಾ ಮಾಹಿತಿಗಳ ಕಡೆಗೆ ಸರ್ಕಾರ ಗಮನ ಹರಿಸಿದೆ ಎನ್ನಲಾಗಿದೆ.
ರಕ್ಷಣಾ ವ್ಯವಸ್ಥೆಯಲ್ಲಿ ಹ್ಯಾಮ್ ರೇಡಿಯೋ
ಭೂಕಂಪ, ಸುನಾಮಿ, ಚಂಡಮಾರುತ, ಪ್ರವಾಹ ಮೊದಲಾದ ನೈಸರ್ಗಿಕ ಅವಘಢಗಳ ಸಂದರ್ಭದಲ್ಲಿ ಎಲ್ಲಾ ಸಂಪರ್ಕ ಸಾಧನಗಳು ನೆಲಕಚ್ಚಿದಾಗ ಯಾವುದೇ ಮಾಧ್ಯಮಗಳ ಹಂಗಿಲ್ಲದೇ ಪೋಲಿಸ್, ಮಿಲಿಟರಿ ವ್ಯವಸ್ಥೆಗಳ ಜೊತೆ ಕೈಜೋಡಿಸಿ ಮಾಹಿತಿ ಕಲೆಹಾಕಿ ಸಾಮಾನ್ಯರ ಪಾಲಿನ ಬಂಧುವಾಗಿ ಇದು ಸಹಾಯ ಮಾಡಬಲ್ಲದು. ನೈಸರ್ಗಿಕ ಅವಘಡದ ಸಂದರ್ಭದಲ್ಲಿ ಈ ಹವ್ಯಾಸಿ ಹ್ಯಾಮ್ ರೇಡಿಯೋ ಹೊಂದಿರುವವರು ತಕ್ಷಣಕ್ಕೆ ಸೇವೆ ಸಲ್ಲಿಸಲು ತಯಾರಾಗಿರುತ್ತಾರೆ. ಹೀಗೆ ಹ್ಯಾಮ್ ರೇಡಿಯೋ ಸಮಾಜದಲ್ಲಿ ತನ್ನದೇ ಆದ ಪ್ರಾಶಸ್ತ್ಯವನ್ನು ಹೊಂದಿದೆ.
✍ ವಿಶ್ವಾಸ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.