ನಮ್ಮ ದೇಶದಲ್ಲಿ ಪ್ರವಾಸಿಗರನ್ನು ಮನಸೂರೆಗೊಳ್ಳುವಂತಹ ಅನೇಕ ಬೀಚ್ಗಳಿವೆ. ನೀಲಿ ಸೌಂದರ್ಯದಿಂದ ಕಂಗೊಳಿಸುವ ಈ ಬೀಚ್ಗಳು ಮಾನವನ ಕೆಟ್ಟ ಅಭ್ಯಾಸಗಳ ಕಾರಣದಿಂದಾಗಿ ಮಲಿನಗೊಳ್ಳುತ್ತಿವೆ. ಸಾವಿರಾರು ಕೆಜಿ ತ್ಯಾಜ್ಯಗಳನ್ನು ಜನ ಇಲ್ಲಿ ತಂದು ಸುರಿಯುತ್ತಿದ್ದಾರೆ. ಇದರಿಂದಾಗಿ ಅಲ್ಲಿ ಪರಿಸರ ಸಾಕಷ್ಟು ಕೆಟ್ಟು ಹೋಗಿದೆ. ಭಾರತದ ಯಾವುದೋ ಒಂದು ಬೀಚ್ನ ಪರಿಸ್ಥಿತಿಯಲ್ಲ ಇದು, ಬಹುತೇಕ ಬೀಚ್ಗಳ ಪರಿಸ್ಥಿತಿ ಹೀಗೆಯೇ ಇದೆ.
ಈ ಸಮಸ್ಯೆಯನ್ನು ಅರಿತುಕೊಂಡ ಕರ್ನಾಟಕದ ಕುಂದಾಪುರದ ಗೆಳೆಯರ ಬಳಗವೊಂದು ಕುಂದಾಪುರದ ಕೋಡಿ ಬೀಚ್ ಸ್ವಚ್ಛತಾ ಕಾರ್ಯಕ್ಕೆ ಇಳಿದಿದೆ. ಭರತ್ ಬಂಗೇರ ಅವರು ತಮ್ಮ ಸ್ನೇಹಿತರ ಬಳಗದೊಂದಿಗೆ ಇಲ್ಲಿಗೆ ತೆರಳಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಇದು ದೊಡ್ಡ ಮಟ್ಟದ ನಾಗರಿಕ ನೇತೃತ್ವ ಸ್ವಚ್ಛತಾ ಕಾರ್ಯವಾಗಿ ಹೊರಹೊಮ್ಮಿದೆ.
ಕಳೆದ ವರ್ಷದ ಫೆಬ್ರವರಿ ತಿಂಗಳಿನಿಂದ ಅವರ ಬೀಚ್ ಸ್ವಚ್ಛತಾ ಕಾರ್ಯ ಆರಂಭಗೊಂಡಿದೆ. ಇದಕ್ಕೆ ‘ಕ್ಲೀನ್ ಕುಂದಾಪುರ ಪ್ರಾಜೆಕ್ಟ್’ ಎಂದು ಹೆಸರಿಡಲಾಗಿದೆ. ಈ ಕಾರ್ಯಕ್ರಮದಲ್ಲಿ ಹಲವು ಸಂಖ್ಯೆ ಜನ ಸ್ವಯಂಪ್ರೇರಿತರಾಗಿ ಮುಂದೆ ಬಂದು ಬೀಚ್ ಸ್ವಚ್ಛತೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಪ್ರತಿ ಭಾನವಾರವೂ ಸ್ವಚ್ಛತಾ ಕಾರ್ಯ ನಡೆಯುತ್ತದೆ, ಸುಮಾರು ಎರಡು ಗಂಟೆಗಳ ಕಾಲ ಇದು ಮುಂದುವರೆಯುತ್ತದೆ. ಸ್ವಯಂಸೇವಕರು ಬೀಚ್ನಲ್ಲಿ ಜನ ಎಸೆದಿರುವ ಪ್ಲಾಸ್ಟಿಕ್ ಬಾಟಲ್, ರ್ಯಾಪರ್, ಬ್ಯಾಗ್, ಚಪ್ಪಲಿ, ತಿಂಡಿ ತಿನಿಸುಗಳನ್ನು ಹೆಕ್ಕಿ ಸ್ವಚ್ಛಗೊಳಿಸುತ್ತಾರೆ.
ಸ್ನೇಹಿತರ ಬಳಗದಿಂದ ಆರಂಭಗೊಂಡ ಈ ಕಾರ್ಯ ಇಂದು ನಾಗರಿಕರ ಭಾಗಿದಾರಿತ್ವವನ್ನು ಕಾಣುತ್ತಿದೆ. ವಿವಿಧ ವೃತ್ತಿಪರರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಈ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಪ್ರತಿ ವಾರ 500 ಕಿಲೋ ಕಸವನ್ನು ಇವರು ಹೆಕ್ಕುತ್ತಾರೆ. ಬಳಿಕ ಹಸಿ ಮತ್ತು ಒಣ ಕಸಗಳನ್ನು ಪ್ರತ್ಯೇಕಿಸುತ್ತಾರೆ. ಅದನ್ನು ನಗರ ಪಾಲಿಕೆಗೆ ಹಸ್ತಾಂತರ ಮಾಡುತ್ತಾರೆ ಮತ್ತು ಸ್ಥಳೀಯ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ನೀಡುತ್ತಾರೆ.
ಈ ಬೀಚ್ನಲ್ಲಿ ಬೀಳುವ ಶೇ. 80 ರಷ್ಟು ಕಸಗಳು ಸಮುದ್ರಕ್ಕೆ ಬಂದು ಸೇರುವ ನದಿಯ ಮುಖಾಂತರ ಬರುತ್ತವೆ, ಉಳಿದ ಕಸಗಳನ್ನು ಇಲ್ಲಿಗೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರು ಎಸೆಯುತ್ತಾರೆ. ಇಲ್ಲಿ ಹರಿಯುವ ಪಂಚಗಂಗಾ ನದಿ ನಿತ್ಯ ಕೆಜಿಗಟ್ಟಲೆ ಕಸಗಳನ್ನು ಹೊತ್ತು ತಂದು ಇಲ್ಲಿಗೆ ಹಾಕುತ್ತಿರುವುದರಿಂದ 8 ಕಿಲೋಮೀಟರ್ ಉದ್ದದ ಈ ಬೀಚ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಕಷ್ಟಸಾಧ್ಯ. ಆದರೂ ಸ್ವಯಂಸೇವಕರು ತಮ್ಮ ಕಾರ್ಯವನ್ನು ಯಾವುದೇ ಬೇಸರವಿಲ್ಲದೆ ಮುಂದುವರೆಸಿದ್ದಾರೆ.
ಕಳೆದ 12 ತಿಂಗಳಲ್ಲಿ ಈ ಸ್ಥಳಿಯ ಸ್ವಚ್ಛತಾ ಸ್ವಯಂಸೇವಕರು ಬೀಚ್ನಿಂದ 25 ಸಾವಿರ ಕೆಜಿ ತ್ಯಾಜ್ಯವನ್ನು ಹೊರತೆಗೆದಿದ್ದಾರೆ. ಬೀಚ್ ಸ್ವಚ್ಛತೆಯಲ್ಲಿ ಜನ ಮನ್ನಣೆಗೆ ಪಾತ್ರರಾಗಿರುವ ಅಪ್ರೋಝ್ ಶಾ, ಆನಂದ್ ಮಲ್ಲಿಗೆವಾಡ್ ಮತ್ತು ಮಲ್ಹಾರ್ ಕಲಂಬೆ ಅವರು ಇವರಿಗೆ ಪ್ರೇರಣೆಯಾಗಿದ್ದಾರೆ.
ಬೀಚ್ಗಳಲ್ಲಿ ಸಮರ್ಪಕವಾದ ರೀತಿಯಲ್ಲಿ ಕಸದ ಬುಟ್ಟಿಗಳನ್ನು ಇಡದೇ ಇರುವುದು ಕೂಡ ಕಸದ ಸಮಸ್ಯೆಗೆ ಒಂದು ಮೂಲ ಕಾರಣವಾಗಿದೆ. ಒಂದು ವೇಳೆ ಸರ್ಕಾರ ಬೀಚ್ಗಳಲ್ಲಿ ಕಸದ ಬುಟ್ಟಿಯನ್ನು ಸರಿಯಾಗಿ ಅಳವಡಿಸಿದರೆ ಜನರಿಂದ ಸೃಷ್ಟಿಯಾಗುವ ಕಸಗಳ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಲಿದೆ. ಹೀಗಾಗಿ ಈ ಸ್ವಚ್ಛತಾ ಕಾರ್ಯಕರ್ತರು ಕಸದ ಬುಟ್ಟಿಗಳನ್ನು ಬೀಚ್ಗಳಲ್ಲಿ ಇಡುವಂತೆ ಸರ್ಕಾರಕ್ಕೂ ಮನವಿ ಮಾಡುತ್ತಿದ್ದಾರೆ.
ಎಫ್ಎಸ್ಎಲ್ ಇಂಡಿಯಾ, ರೀಫ್ವಾಚ್ ಮರೀನ್ ಕನ್ಸರ್ವೇಶನ್ ಮುಂತಾದ ಎನ್ಜಿಓಗಳು ಈ ಸ್ವಚ್ಛತಾ ಕಾರ್ಯಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ.
ಕುಂದಾಪುರ ಜನತೆಯ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಜನರು ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಮುಂದೆ ಬರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.