‘ಮನಸ್ಸಿದ್ದರೆ ಮಾರ್ಗ’ ಎಂಬ ಮಾತನ್ನು ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ ಬಿಎಂಟಿಸಿ ಕಂಡೆಕ್ಟರ್ ಎನ್.ಸಿ ಮಧು. ಕಂಡೆಕ್ಟರ್ ವೃತ್ತಿಯನ್ನು ಮಾಡಿಕೊಂಡೇ ಅವರು ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬೆಂಗಳೂರು ನಗರದ ಡಿಪೋ ನಂಬರ್ 34ರ ಕೊತ್ತನೂರು ದಿಣ್ಣೆಯಲ್ಲಿ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು 29ನೇ ವಯಸ್ಸಿನಲ್ಲೇ ಈ ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ.
ಕಂಡೆಕ್ಟರ್ ಮಧು ಅವರ ಸಾಧನೆ ಹಲವರಿಗೆ ಪ್ರೇರಣಾದಾಯಕವಾಗಿದೆ. ಕಷ್ಟಪಟ್ಟು ದುಡಿದು ಕೂಡ ಅತ್ಯುನ್ನತ ಪರೀಕ್ಷೆಯನ್ನು ಬರೆಯಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ನಿತ್ಯ 8 ಗಂಟೆಗಳ ಕಾಲ ಕಂಡಕ್ಟರ್ ಆಗಿ ದುಡಿಯುವ ಮಧು ಅವರು, ದಿನದ 5 ಗಂಟೆಗಳನ್ನು ಯುಪಿಎಸ್ಸಿ ಪರೀಕ್ಷೆಗಾಗಿ ಸಿದ್ಧತೆ ನಡೆಸಲು ಮೀಸಲಿಡುತ್ತಿದ್ದರು. ತಮ್ಮ ಪರಿಶ್ರಮ, ಅಚಲ ಗುರಿಯಿಂದಾಗಿ ಇಂದು ಅವರು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಇದೀಗ ಅವರು ಮಾರ್ಚ್ನಲ್ಲಿ ನಡೆಯಲಿರುವ ಸಂದರ್ಶನಕ್ಕೆ ಸಿ.ಶಿಖಾ ಮಾರ್ಗದರ್ಶನದಲ್ಲಿ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ. ಇದರಲ್ಲೂ ತಾನು ಯಶಸ್ವಿಯಾಗುತ್ತೇನೆ ಎಂಬ ದೃಢವಾದ ಭರವಸೆ ಅವರಿಗಿದೆ.
ಮಧು ಅವರು, 2019ರ ಜೂನ್ ತಿಂಗಳಿನಲ್ಲಿ ಯುಪಿಎಸ್ಸಿಗೆ ಪೂರ್ವಭಾವಿ ಪರೀಕ್ಷೆ ಬರೆದಿದ್ದರು. ಇದರ ಫಲಿತಾಂಶ ಅಕ್ಟೋಬರ್ನಲ್ಲಿ ಹೊರ ಬಂದಿತ್ತು. ಪರೀಕ್ಷೆಗೆ ರಾಜ್ಯಶಾಸ್ತ್ರ ಮತ್ತು ಅಂತಾರಾಷ್ಟ್ರೀಯ ಸಂಬಂಧ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಕನ್ನಡದಲ್ಲೇ ಪೂರ್ವಭಾವಿ ಪರೀಕ್ಷೆಯನ್ನೂ ಬರೆದಿದ್ದರು. ಮುಖ್ಯ ಪರೀಕ್ಷೆಯನ್ನು ಮಾತ್ರ ಇಂಗ್ಲೀಷಿನಲ್ಲಿ ಬರೆದಿದ್ದರು.
ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ಮಧು, 19 ವರ್ಷ ಇರುವಾಗಲೇ ಬಿಎಂಟಿಸಿಯಲ್ಲಿ ಕಂಡೆಕ್ಟರ್ ಆಗಿ ಸೇರಿಕೊಂಡರು. ಕಳೆದ 10 ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಓದಿನ ಮೇಲೆ ಅಪರಿಮಿತ ಆಸಕ್ತಿಯನ್ನು ಬೆಳೆಸಿಕೊಂಡಿರುವ ಅವರು ಉನ್ನತ ಮಟ್ಟಕ್ಕೆ ಏರಬೇಕು ಎಂಬ ಅದಮ್ಯ ಕನಸನ್ನು ಕಾಣುತ್ತಿದ್ದರು.
19ನೇ ವಯಸ್ಸಿಗೆ ವೃತ್ತಿ ಜೀವನ ಆರಂಭಿಸಿದರೂ ಓದುವ ತುಡಿತವಿದ್ದ ಕಾರಣ ಕೆಲಸ ಮಾಡುತ್ತಲೇ ದೂರ ಶಿಕ್ಷಣದ ಮೂಲಕ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2014ರಲ್ಲಿ ಕೆಎಎಸ್ನಲ್ಲಿ ಉತ್ತೀರ್ಣರಾದರೂ ಐಎಎಸ್ ಮಾಡಲೇಬೇಕು ಎಂಬ ಛಲ ಮಧು ಅವರಲ್ಲಿತ್ತು. 2018ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದು ಅನುತ್ತೀರ್ಣರಾಗಿದ್ದರು. 2019ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರತಿದಿನ 5 ಗಂಟೆಕಾಲ ಓದುತ್ತಿದ್ದ ಮಧು ಯಾವುದೇ ಕೋಚಿಂಗ್ ಸೆಂಟರ್ಗಳಲ್ಲಿ ತರಬೇತಿಯನ್ನು ಪಡೆದುಕೊಳ್ಳದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತಾ ಇವರು ಹೆಚ್ಚಿನ ಅಧ್ಯಯನವನ್ನು ನಡೆಸುತ್ತಾರಂತೆ.
ತಮ್ಮ ಪರಿಶ್ರಮ, ಉತ್ಸಾಹ, ಶ್ರದ್ಧೆಯಿಂದಾಗಿ ಮಧು ಯುವಜನತೆಗೆ ಪ್ರೇರಣಾಶೀಲವಾಗಬಲ್ಲಂತಹ ಕಾರ್ಯವನ್ನು ಮಾಡಿದ್ದಾರೆ. ಎಂತಹ ಒತ್ತಡ, ಜಂಜಾಟಗಳ ಮಧ್ಯೆಯೂ ಮನಸ್ಸಿದ್ದರೆ ಅಂದುಕೊಂಡಿದ್ದನ್ನು ಸಾಧಿಸಬಹುದು ಎಂಬುದನ್ನು ಸಾಧಿಸಿ ತೋರಿಸಿರುವ ಮಧು ಅವರಿಗೆ ನಮ್ಮ ಸೆಲ್ಯೂಟ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.