ಪ್ರಸ್ತುತ ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ ನಡೆದ ಕಲಹದ ವಿಚಾರವೊಂದು ಸಾಮಾಜಿಕ ಜಾಲತಾಣ ಹಾಗೂ ಕೆಲವು ಸುದ್ಧಿ ಪತ್ರಿಕೆಯಲ್ಲಿ ಬೇರೆಯೇ ಸ್ವರೂಪ ಪಡೆದುಕೊಂಡು ಪ್ರಕಟಗೊಂಡಿರುವುದು ಎಲ್ಲರ ಗಮನಕ್ಕೂ ಬಂದಿದೆ. ಗ್ರಾಮಸ್ಥರು ದಲಿತ ಶವ ಸಂಸ್ಕಾರಕ್ಕೆ ಅನುಮತಿ ನೀಡುತ್ತಿಲ್ಲ ಎಂಬ ವಿವಾದವನ್ನು ಹಬ್ಬಿಸಲಾಗುತ್ತಿದೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿ ಸಾರ್ವಜನಿಕರ ಗಮನಕ್ಕೆ ಸತ್ಯವನ್ನು ತರುವುದು ನಾಗರಿಕರಾಗಿರುವ ಎಲ್ಲರ ಜವಾಬ್ದಾರಿ. ಇದೇ ಉದ್ದೇಶದಿಂದ ಈ ಬರಹವನ್ನು ನಿಮ್ಮ ಮುಂದಿಡುತ್ತಿದ್ದೇನೆ.
ಬಡಾ ಗ್ರಾಮದ ಸ್ಮಶಾನದ ವಿಚಾರದಲ್ಲಿ ನಡೆಯುತ್ತಿರುವ ಈ ಗಲಾಟೆ ಇಂದು ನಿನ್ನೆಯದಲ್ಲ. ಇದು ಬಹಳ ಕಾಲದಿಂದ ನಡೆದುಕೊಂಡು ಬಂದಿದೆ. ಆದರೆ ಬೇರೆ ಪಕ್ಷದ ಶಾಸಕರು ಅಧಿಕಾರಕ್ಕೆ ಬಂದಾಗ ತಣ್ಣಗಾಗುವ ಈ ವಿಚಾರ, ಬಿಜೆಪಿ ಶಾಸಕರು ಅಧಿಕಾರಕ್ಕೆ ಬಂದಾಗ ಜೀವ ಪಡೆದು ತೀವ್ರ ಸ್ವರೂಪಕ್ಕೆ ತಿರುಗುವುದನ್ನು ಎಲ್ಲರೂ ಗಮನಿಸಿದ್ದಾರೆ. ಸುಮಾರು ಏಳು ವರುಷಗಳ ಹಿಂದೆ ಅಂದಿನ ಜಿಲ್ಲಾಧಿಕಾರಿ ಡಾ. ವಿಶಾಲ್ ಕುಮಾರ್ ಅವರು ಬಡಾ ಗ್ರಾಮವು ವಿಸ್ತೀರ್ಣದಲ್ಲಿ ದೊಡ್ಡ ಗ್ರಾಮವಾಗಿರುವುದರಿಂದ ಎರಡು ಸ್ಮಶಾನವನ್ನು ನಿರ್ಮಿಸಲು ನಿರ್ಧರಿಸಿ, ಒಂದು ಬಡಾ ಎರ್ಮಾಳ್ ಗ್ರಾಮದಲ್ಲಿ ಸರಕಾರಿ ಭೂಮಿ ಹಾಗೂ ಉಚ್ಚಿಲದ ಮುಳ್ಳಗುಡ್ಡೆಯಲ್ಲಿ ಸರಕಾರಿ ಭೂಮಿ ಸ್ಮಶಾನಕ್ಕಾಗಿ ಮಂಜೂರು ಮಾಡಿದ್ದರು. ಈ ಮುಳ್ಳಗುಡ್ಡೆ ಪ್ರದೇಶವು ಇಂದು ಪ್ರತಿಭಟನೆ ನಡೆಸಿದ ಸಾರ್ವಜನಿಕ (ದಲಿತರು) ರಿಗೆ ಸಮೀಪವಿರುವ ಪ್ರದೇಶ. ಎರಡು ಸ್ಮಶಾನಕ್ಕೂ ಸಮಾನವಾದ ಅನುದಾನವನ್ನು ಜಿಲ್ಲಾಧಿಕಾರಿಯವರು ಬಿಡುಗಡೆ ಕೂಡಾ ಮಾಡಿದ್ದರು ಮತ್ತು ಎರಡು ಕಡೆ ಏಕ ಕಾಲದಲ್ಲಿ ಕಾಮಗಾರಿ ನಡೆಸುವಂತೆ ಸೂಚಿಸಿದ್ದರು.ಈ ಕಾಮಾಗಾರಿಗೆ ಯಾರದ್ದು ವಿರೋಧವಿಲ್ಲದೆ ಎಲ್ಲರ ಒಪ್ಪಿಗೆಯಿಂದಲೇ ನಡೆದಿತ್ತು.
ಆದರೆ, ಕಾಂಗ್ರೆಸ್ಸಿನ ಕೆಲ ನಾಯಕರು ತಮ್ಮ ರಾಜಕೀಯ ಲಾಭಕ್ಕಾಗಿ ಮುಗ್ಧ ದಲಿತರನ್ನು ತಮ್ಮ ಪ್ರದೇಶದಲ್ಲಿ ನಡೆಯುವ ಸ್ಮಶಾನದ ಕಾಮಗಾರಿಯನ್ನು ವಿರೋಧಿಸುವಂತೆ ಅವರನ್ನು ಎತ್ತಿಕಟ್ಟಿ ಮತ್ತು ಸ್ಮಶಾನವು ಬಡಾ ಎರ್ಮಾಳಿನಲ್ಲಿಯೇ ಆಗಬೇಕು ಎಂದು ವಿರೋಧವೆಬ್ಬಿಸಲು ಪ್ರಚೋದನೆ ನೀಡಿದರು. ಇದು ಕಾಂಗ್ರೆಸ್ಸಿನ ನಾಯಕರು ರಾಜಕೀಯ ಲಾಭ ಪಡೆಯುವ ಹುನ್ನಾರವಾಗಿತ್ತು. ಅವರ ಆ ಹುನ್ನಾರದ ಫಲವೇ ಇಂದು ನಡೆದ ಘಟನೆ. ಕಾಂಗ್ರೆಸ್ಸಿನ ವಿನಯ ಕುಮಾರ್ ಸೊರಕೆಯವರು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾನೂನಿಗೆ ವಿರುದ್ಧವಾಗಿ ಬಡಾ ಎರ್ಮಾಳ್ ಗ್ರಾಮದಲ್ಲಿ ಸ್ಮಶಾನದ ಕಾಮಾಗಾರಿಯ ಕೆಲಸ ನಡೆದಿತ್ತು, ಆ ಸಂದರ್ಭದಲ್ಲಿ ಸ್ಥಳೀಯರು ಕೋರ್ಟ್ನ ಮೊರೆ ಹೋಗಿ ಇದರ ವಿರುದ್ಧ ತಡೆಯಾಜ್ಞೆ ಕೂಡಾ ತಂದಿದ್ದರು. ಆ ತಡೆಯಾಜ್ಞೆ ಪ್ರಸ್ತುತ ಚಾಲ್ತಿಯಲ್ಲಿದ್ದು, ಆ ಜಾಗದಲ್ಲಿ ಶವಸಂಸ್ಕಾರ ಮಾಡುವುದು ರಾಜ್ಯ ಉಚ್ಚನ್ಯಾಯಲಯದ ಉಲ್ಲಂಘನೆಯಾಗುತ್ತದೆ. ಮುಖ್ಯವಾಗಿ ಸದರಿ ರಾಜ್ಯ ಉಚ್ಚನ್ಯಾಯಲಯದ ತಡೆಯಾಜ್ಞೆಯಲ್ಲಿರುವ ಈ ಸ್ಮಶಾನದ ಬಳಿ ಯಾವುದೇ ದಲಿತ ಬಾಂಧವರ ಮನೆಯಿರುವುದಿಲ್ಲ ಮತ್ತು ಕಟ್ಟಿಂಗೇರಿಯಲ್ಲಿ ಮಂಜೂರಾಗಿರುವ ಸ್ಮಶಾನದ ಬಳಿ ದಲಿತ ಬಾಂಧವರ ಮನೆಗಳೇ ಇದ್ದು ಆ ಸ್ಮಶಾನದಲ್ಲಿ ಶವಸಂಸ್ಕಾರ ಮಾಡಲು ಒಪ್ಪದೆ ಸುಮಾರು ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಅದು ಕೂಡಾ ರಾಜ್ಯ ಉಚ್ಚನ್ಯಾಯಲಯದ ತಡೆಯಾಜ್ಞೆಯಲ್ಲಿರುವ ಈ ಸ್ಮಶಾನದಲ್ಲಿಯೇ ಶವಸಂಸ್ಕಾರ ಮಾಡಬೇಕೆಂದು ಕಟಿಬದ್ಧರಾಗಿ ನಿಂತಿರುವುದು ಕಾಂಗ್ರೆಸ್ಸಿನ ಕೆಲ ನಾಯಕರ ಕುಮ್ಮಕ್ಕಿನಿಂದ ಹಾಗೂ ಈ ಘಟನೆಯನ್ನು ರಾಜಕೀಯ ಪ್ರಯೋಜನಕ್ಕಾಗಿ ಬಳಸಿಕೊಳ್ಳಲು ಎಂಬುದು ಸ್ಪಷ್ಟ.
ಇದಕ್ಕೆ ಇಂಬು ಕೊಡುವಂತೆ ಎಸ್. ಡಿ.ಪಿ.ಐ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಈ ಘಟನೆ ಪೂರ್ವಾಯೋಜಿತ ಅನ್ನುವುದಕ್ಕೆ ಸಾಕ್ಷ್ಯ ಒದಗಿಸುತ್ತದೆ. ಸ್ಮಶಾನವು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವುದಲ್ಲದೆ ಕಾಂಗ್ರೆಸ್ ಇಲ್ಲಿ ಆಡಳಿತದಲ್ಲಿದೆ. ಆದರೆ ಪ್ರತಿಭಟನಾಕಾರರು ಬಿಜೆಪಿ ಹಾಗೂ ಅದರ ಶಾಸಕರ ವಿರುದ್ಧ ಘೋಷಣೆ ಕೂಗಿದ್ದು ಕೂಡಾ ಮೇಲೆ ಹೇಳಿದ ಪೂರ್ವನಿಯೋಜಿತ ಹುನ್ನಾರವನ್ನು ಸ್ಪಷ್ಟಪಡಿಸುತ್ತದೆ. ಪ್ರಸ್ತುತ ಬಡಾ ಎರ್ಮಾಳ್ ಪಂಚಾಯಿತಿ ವ್ಯಾಪ್ತಿಯಲ್ಲಿ ಪರ್ಯಾಯ ಪ್ರದೇಶವನ್ನು ಸ್ಮಶಾನಕ್ಕಾಗಿ ಗುರುತಿಸಿದ್ದು ಅದರ ಕಾಮಗಾರಿ ಪ್ರಗತಿಯಲ್ಲಿದೆ.
ಬಡ ದಲಿತರನ್ನು ಬಳಸಿಕೊಂಡು ರಾಜಕೀಯ ಮಾಡುತ್ತಿರುವ ಕಾರ್ಯವನ್ನು ನಾಗರಿಕ ಸಮಾಜ ಖಂಡಿಸಲೇಬೇಕು.
✍ ದೀಪಕ್ ಎರ್ಮಾಳ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.