ಒಬ್ಬೊಬ್ಬರದ್ದು ಒಂದೊಂದು ಕಥೆ. ಎಲ್ಲವೂ ಸರಿ ಇದ್ದುಕೊಂಡು ಏನೂ ಸಾಧಿಸದೆ ಕೊರಗುವವರ ಮಧ್ಯೆ ಎಲ್ಲವನ್ನೂ ಕಳೆದುಕೊಂಡು ಶಾಶ್ವತ ಅಂಗ ವೈಕಲ್ಯ ಅನುಭವಿಸುತ್ತಾ ಜಗತ್ತಿಗೆ ಪಾಠವಾಗಿ ಬಿಟ್ಟವರು ನಮ್ಮ ಸುತ್ತಮುತ್ತ ಇರುತ್ತಾರೆ. ಅವರಿಂದ ಹೊರಡುವ ಕಥೆಗಳು ನಮಗೆ ಪ್ರೇರಣೆ ಎನಿಸುತ್ತದೆ. ಅಂತಹುದೇ ಒಂದು ಪ್ರೇರಣಾದಾಯಕ ಕಥೆ ಇಲ್ಲಿದೆ.
ಧನ್ಯಾ ರವಿ. ಈಕೆಯನ್ನು ಭಾರತದ “ಗ್ಲಾಸ್ ವುಮನ್” ಎಂದು ಕರೆಯುತ್ತಾರೆ. ಈ ಬಿರುದಿನ ಹಿಂದೆ ಆಕೆಯ ನೋವಿನ ಕಥೆ ಅಡಗಿದೆ. ನಮಗೆ ಅದು ಬಿರುದಾಗಿ ಕಂಡರೆ ಧನ್ಯಾಳಿಗೆ ಅದು ಸಂಕಟವನ್ನು ಮೆಟ್ಟಿ ನಿಂತು ಬದುಕಿನ ದಾರಿಯನ್ನು ನೋವಿನಲ್ಲಿ ಸವೆಸಿದ ಹಾದಿಯದು. ಧನ್ಯಾಳನ್ನು” ಡಿವೈನ್ ಡಿಸೈನ್ ” ಎಂದೂ ಕರೆಯುತ್ತಾರೆ. ಹಾಗಿದೆ ಆಕೆಯ ಸೃಷ್ಠಿ. ಧನ್ಯಾ ರವಿ ಎಲ್ಲರಂತೆ ಚೆಂದುಳ್ಳಿ ಚೆಲುವೆಯಾಗಿ ಜನಿಸಿದ್ದಳು. ತಂದೆ ತಾಯಿಯ ಖುಷಿ ಹೆಚ್ಚು ದಿನ ಬಾಳಲಿಲ್ಲ. ಮಗು ಬೆಳೆಯುತ್ತಲೆ ಮಾಂಸದ ಮುದ್ದೆಯಾಯಿತೇ ಹೊರತು ಅಗತ್ಯವಾದ ಬೆಳವಣಿಗೆ ದೇಹದಲ್ಲಿ ಕಾಣಲೇ ಇಲ್ಲ. ಎಸ್, ಧನ್ಯ ರವಿ ಅಸ್ಥಿ ರಂಧ್ರತೆ ಕಾಯಿಲೆಗೆ ಅದಾಗಲೇ ತುತ್ತಾಗಿದ್ದಳು.
ಅಸ್ಥಿ ರಂಧ್ರತೆ ಭಯಾನಕ ಖಾಯಿಲೆ. ಹೇಗೆ ಗಾಜಿನ ಮೇಲೆ ಒತ್ತಡ ಬಿದ್ದಾಗ ಗಾಜು ಪುಡಿ ಪುಡಿಯಾಗುತ್ತದೋ ಅದೇ ರೀತಿಯಲ್ಲಿ ಧನ್ಯಾ ರವಿಯ ಎಲುಬುಗಳು, ಮೂಳೆಗಳು ಮುರಿತಕ್ಕೊಳಗಾಗುತ್ತಿದ್ದವು. ಮನುಷ್ಯನೊಬ್ಬನ ದೇಹದಲ್ಲಿರುವ ಮೂಳೆಗಳ ಸಂಖ್ಯೆಗಿಂತ ಹೆಚ್ಚಿನ ಬಾರಿ ಆಕೆಯ ಮೂಳೆಗಳು ಮುರಿತಕ್ಕೆ ಒಳಗಾಗಿದ್ದವು. ಅಂದರೆ 300 ಕ್ಕೂ ಹೆಚ್ಚು ಬಾರಿ ಮೂಳೆಗಳು ಮುರಿದಿದ್ದವು. ಪರಿಣಾಮವಾಗಿ ವಯಸ್ಸು 30 ರ ಹತ್ತಿರಕ್ಕೆ ಬಂದಿದ್ದರೂ ಆಕೆಯಿನ್ನೂ ಮಗುವಿನಂತಿದ್ದಾಳೆ. ಇಷ್ಟೆಲ್ಲ ನೋವು ಅನುಭವಿಸುತ್ತಿದ್ದರೂ ಧನ್ಯಾ ಸುಮ್ಮನೆ ದೇವರನ್ನು ಶಪಿಸುತ್ತ ಕೂರಲಿಲ್ಲ ಎಲ್ಲರಂತೆ. ದೇವರೇ ಮೆಚ್ಚುವಂತ ಕಾರ್ಯಗಳಲ್ಲಿ ತೊಡಗಿಕೊಂಡು ಬಾಳನ್ನು ಧನ್ಯ ಮಾಡಿಕೊಂಡಳು ಧನ್ಯಾ. ಹಾಗಾದರೆ, ಅಂತಹದ್ದೇನು ಸಾಧಿಸಿದಳೀಕೆ?
ಧನ್ಯಾ ರವಿ ಯಾವಾಗ ಅಂತರ್ಜಾಲ ಸಂಪರ್ಕಕ್ಕೆ ಬಂದಳೋ ಅಂದೇ ಆಕೆಯ ಜೀವನ ಮಹತ್ತರವಾದ ತಿರುವು ಪಡೆದುಕೊಂಡಿತು. ಇಂಟರ್ನೆಟ್ ಮೂಲಕ ಸಂಗೀತ ಕ್ಷೇತ್ರಕ್ಕೆ ಸಂಬಂಧಿತ ಅನೇಕ ಚಾಟ್ ಫೋರಂಗಳೊಂದಿಗೆ ಸಂಪರ್ಕವನ್ನು ಆಕೆ ಸಾಧಿಸುತ್ತಾಳೆ. ಇದು ಮುಂದೆ ಆಕೆಗೆ ಅನೇಕ ಗೆಳೆಯರನ್ನು ಸಂಪಾದಿಸಲು ಸಹಾಯ ಮಾಡುತ್ತದೆ. ಹೀಗೆಯೇ ಒಂದು ದಿನ ಧನ್ಯಾ ಒಂದು ಸುದ್ದಿಯನ್ನು ಓದುತ್ತಾ ತನಗೆ ಬಾಧಿಸುತ್ತಿರುವ ಖಾಯಿಲೆ ಬಿನು ಎಂಬ ಹುಡುಗನಿಗೆ ಬಂದಿದ್ದು ಆತನಿಗೆ ಸರ್ಜರಿ ಮಾಡಿಸಿಕೊಳ್ಳಲು ಹಣದ ಅವಶ್ಯಕತೆಯಿರುವುದನ್ನು ಮನಗಂಡಳು. ತಡಮಾಡದೆ ತನ್ನ ಸಂಪರ್ಕ ಜಾಲವನ್ನು ಬಳಸಿ ಕ್ರೌಡ್ ಫಂಡಿಂಗ್ ವ್ಯವಸ್ಥೆಯ ಮೂಲಕ ಬಿನುವಿನ ಚಿಕಿತ್ಸೆಗೆ ಹಣ ಹೊಂದಿಸಿದಳು. ತೆವಳುತ್ತಿದ್ದ ಬಿನು ಈಗ ಮತ್ತೊಬ್ಬರ ಸಹಾಯದಿಂದ ನಡೆಯುವಂತಾದ. ಈ ಘಟನೆ ಧನ್ಯಾ ರವಿಯ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು.
ಬಿನುವಿನ ಪೋಷಕಿ ಲತಾ ನಾಯರ್ ಎಂಬ ಸಾಮಾಜಿಕ ಕಾರ್ಯಕರ್ತೆ ಅಮೃತವರ್ಷಿಣಿ ಚಾರಿಟೇಬಲ್ ಸಂಸ್ಥೆಯನ್ನು ಸ್ಥಾಪಿಸಿದಾಗ ಅದರ ಹಿನ್ನಲೆಯಲ್ಲಿ ನಿಂತು ಸಂಸ್ಥೆಯನ್ನು ಬೆಳೆಸುವಲ್ಲಿ ಧನ್ಯಾ ರವಿಯ ಪಾತ್ರ ಮಹತ್ತರವಾದುದು. ಈ ಸಂಸ್ಥೆ ಅಸ್ಥಿ ರಂದ್ರತೆಯ ವಿರುದ್ಧ ಹೋರಾಡುತ್ತಿರುವ ಭಾರತದ ಪ್ರಪ್ರಥಮ ಎನ್ಜಿಒ ಸಂಸ್ಥೆಯಾಗಿದೆ. ಈ ಸಂಸ್ಥೆಯ ಪರವಾಗಿ ಅಸ್ಥಿ ರಂಧ್ರತೆಯ ವಿರುದ್ಧ ಹೋರಾಡುವ ಸಲುವಾಗಿ ಅನೇಕ ಭಾಷಣ, ಚರ್ಚಾಕೂಟ, ಟಿವಿ ಸಂದರ್ಶನಗಳಲ್ಲಿ ಧನ್ಯಾ ಭಾಗಿಯಾಗಿದ್ದಾಳೆ. ಇವಳಂತೆ ಖಾಯಿಲೆಯಿಂದ ಬಳಲುತ್ತಿರುವವರ ಧ್ವನಿಯಾಗಿದ್ದಾಳೆ. ಧನ್ಯಾ ರವಿಯ ಅವಿರತ ಶ್ರಮಕ್ಕೆ ಆಕೆಯನ್ನು ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದವು. 2018 ರಲ್ಲಿ ರಾಷ್ಟ್ರೀಯ ಪ್ರಶಸ್ತಿ, ಬ್ರೇವ್ ಬ್ಯಾಂಗಲ್ ಅವಾರ್ಡ್ 2012, ಆ್ಯನ್ವಲ್ ಇನ್ಸ್ಪೈರ್ಡ್ ಇಂಡಿಯನ್ ಫೌಂಡೇಶನ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಆಕೆ ಭಾಜನಳಾದಳು.
ವೀಲ್ ಚೇರ್ನ್ನು ತನ್ನ ಬೆಂಜ್ ಕಾರ್ ಎಂದು ಹೇಳಿಕೊಳ್ಳುವ ಧನ್ಯಾಳಿಂದ ನಾವು ಪ್ರೇರಣೆಗೊಳ್ಳದಿರಲು ಹೇಗೆ ಸಾಧ್ಯ. ಹುಟ್ಟಿದಾಗಿನಿಂದ ಗಾಲಿಕುರ್ಚಿಯಿಂದ ಮೇಲೇಳದ ಧನ್ಯಾ ರವಿಯ ಸಾಧನೆಗೆ ನಮ್ಮದೊಂದು ಸಲ್ಯೂಟ್.
✍ ಸುಜಿತ್ ಮೀನಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.