ಮಂಗಳೂರು ಎಂದಾಗ ಸುಂದರ ಪರಿಸರ, ಚಂದದ ಪ್ರಕೃತಿ ಕಡಲು, ಮೀನುಗಾರಿಕೆ, ಶಿಕ್ಷಣಕ್ಷೇತ್ರ ಹಾಗೂ ರಾಜಕಾರಣದ ಸೊಬಗು ಸೊಗಡನ್ನು ಕಟ್ಟುತ್ತದೆ. ಇಲ್ಲಿನ ಉದ್ಯಮ, ಕೈಗಾರಿಕೆಗಳು ತನ್ನ ವಿಶಿಷ್ಟತೆಯನ್ನು ಕಾಪಾಡಿಕೊಂಡು ಬಂದಿದೆ. ಇದೆಲ್ಲವನ್ನು ಮಂಗಳೂರಿನಿಂದ ಪ್ರತ್ಯೇಕಿಸಿ ನೋಡಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಮಂಗಳೂರಿನ ರಾಜಕಾರಣದಿಂದ ಉಳ್ಳಾಲ ಶ್ರೀನಿವಾಸ ಮಲ್ಯರನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ಇವರನ್ನು ನವ ಮಂಗಳೂರಿನ ಆಧುನಿಕ ಪಿತಾಮಹ ಎಂದು ಕರೆಯುತ್ತಾರೆ. ಇದರಲ್ಲಿ ಯಾವುದೇ ಅತಿಶಯೋಕ್ತಿಯೂ ಇಲ್ಲ.
1902ರಲ್ಲಿ ಗೌಡ ಸಾರಸ್ವತ ಸಮಾಜದ ಮಂಜುನಾಥ ಮಲ್ಯ ಮತ್ತು ರುಕುಮಾ ಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ ಉಳ್ಳಾಲ ಶ್ರೀನಿವಾಸ ಮಲ್ಯ ತನ್ನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಸಂತ ಅಲೋಶಿಯಸ್ ಪ್ರಾರ್ಥಮಿಕ ಶಾಲೆ ಮತ್ತು ಕೆನರಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ ಸರಕಾರಿ ಕಾಲೇಜಿನಲ್ಲಿ ಮುಂದಿನ ವಿದ್ಯಾಭ್ಯಾಸಕ್ಕೆ ತೊಡಗಿಸಿಕೊಂಡಿದ್ದರು. ಇದೇ ಸಂದರ್ಭ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದು ತನ್ನ 18ನೇ ವರ್ಷದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಅವರ ಕುಟುಂಬದ ಪರಂಪರಾನುಗತ ವ್ಯವಹಾರವು ಮಂಗಳೂರಿನ ಬಂದರು ಪ್ರದೇಶದಲ್ಲಿತ್ತು. ಅದನ್ನು ಮುಂದುವರೆಸಿ ಸುಖಮಯ ಜೀವನವನ್ನು ನಡೆಸುವ ಅವಕಾಶವಿದ್ದರೂ ಅವರು ಸ್ವಾತಂತ್ರ್ಯ ಹೋರಾಟಕ್ಕಿಳಿದದ್ದು ಅವರ ದೇಶಪ್ರೇಮವನ್ನು ತಿಳಿಸುತ್ತದೆ.
ಸ್ವಾತಂತ್ರ್ಯ ಹೋರಾಟದ ಸಂದರ್ಭ ತಮ್ಮ ಚತುರತೆ ಮತ್ತು ಜಾಣ್ಮೆಯಿಂದ ಬ್ರಿಟಿಷರ ಕೈಗಳಿಂದ ತಪ್ಪಿಸಿಕೊಳ್ಳುತ್ತಿದ್ದರು. ಆದುದರಿಂದ ಆಂಗ್ಲ ಮಾಧ್ಯಮಗಳು 20ನೇ ಶತಮಾನದ ಫೋಕ್ಸ್ ಎಂದು ಕರೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟದ ಮೂಲಕ ಸ್ಥಳೀಯ ಕಾಂಗ್ರೆಸ್ನ ಕಾರ್ಯದರ್ಶಿಯಾಗಿ ತನ್ನ ಅಪೂರ್ವ ಬುದ್ಧಿವಂತಿಕೆ, ಸಾಮರ್ಥ್ಯ ಮತ್ತು ಮೌಲ್ಯಗಳ ಮೂಲಕ ಜವಹಾಲಾಲ್ ನೆಹರು ಅವರ ಆಪ್ತರಾದರು. ಇದರಿಂದ ಇವರಿಗೆ ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಸ್ಥಾನವೂ ದಕ್ಕಿತು.
1950-52ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಉಡುಪಿ- ಮೈಸೂರು ಕ್ಷೇತ್ರದ ಸಂಸದರಾಗಿ ಆಯ್ಕೆಯಾದರು. ಅಂದಿನ ಕಾಲದಲ್ಲಿ ಉಡುಪಿ, ಮಂಗಳೂರು ಅವಿಭಜಿತ ಜಿಲ್ಲೆಗಳಾಗಿತ್ತು. ಮೈಸೂರು ಈ ಲೋಕಸಭಾ ಕ್ಷೇತ್ರದ ಭಾಗವಾಗಿತ್ತು. ಅಲ್ಲದೇ 1952-57ಮತ್ತು 1957-62ರ ಚುನಾವಣೆಯಲ್ಲಿ ಸಂಸದನಾಗಿ ಆಯ್ಕೆಯಾದರು.
ಮಂಗಳೂರಿಗೆ ಮತ್ತು ಮಂಗಳೂರಿನ ಬೆಳವಣಿಗೆಗೆ ಉಳ್ಳಾಲ ಶ್ರೀನಿವಾಸ ಮಲ್ಯರ ಕೊಡುಗೆ ಅನನ್ಯ. ಈಗ ಧಕ್ಕೆ ಎಂದು ಕರೆಯಲ್ಪಡುವ ಬಂದರಿನಲ್ಲಿರುವ ಮೀನುಗಾರಿಕಾ ಬಂದರು ಅಂದಿನ ಮಂಗಳೂರಿನ ಬಂದರು ಆಗಿತ್ತು. ಆದರೆ ಮಂಗಳೂರಿನ ಹಳೇ ಬಂದರಿನಿಂದ ಅಭಿವೃಧಿ ಕಷ್ಟ ಮಾತ್ರವಲ್ಲ ಮಂಗಳುರಿನ ಬೆಳವಣಿಗೆ ಇದರ ಯೋಗದಾನ ಕಷ್ಟಎಂಬ ಯೋಚನೆಯಿಂದ ನವಮಂಗಳೂರು ಬಂದರನ್ನು ಸ್ಥಾಪಿಸಿದರು. ಅದು ಇಂದು ಪಣಂಬೂರಿನಲ್ಲಿ (N.M.P.T ) ಜನಜನಿತ.
ರೈಲ್ವೆ ಪ್ರಯಾಣಕ್ಕಾಗಿ ಮಂಗಳೂರು ಹಾಸನ ರೈಲು ಮಾರ್ಗ ಆರಂಭಿಸಿದರು. ಮಂಗಳೂರಿಗೆ ಮಂಬೈ ಮತ್ತು ಕೊಚ್ಚಿಗೆ ಸಂಪರ್ಕ ಕಲ್ಪಿಸುವ NH-17 ಮಂಗಳೂರು, ಬೆಂಗಳೂರು ಮಾರ್ಗ NH-48 ಅನ್ನು ಮಂಗಳೂರಿಗೆ ತಂದ ಕೀರ್ತಿ ಕೂಡಾ ಅವರಿಗೆ ಸಲ್ಲುತ್ತದೆ.
ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜು ಸುರತ್ಕಲ್ನಲ್ಲಿ ಸ್ಥಾಪಿಸಿ (K.R.E.C) ಎಂದು ಪ್ರಸಿದ್ಧಗೊಂಡಿದೆ. ರಾಷ್ಟ್ರೀಯ ಮಟ್ಟದಲ್ಲಿ ರ್ಯಾಂಕ್ಗಳಿಸಿದ ವಿದ್ಯಾರ್ಥಿಗಳು ಇಲ್ಲಿ ಕಲಿಯಲು ಬಯಸಿದರು. ಇಲ್ಲಿ ಸೀಟು ಪಡೆಯಲು ಕಷ್ಟ, ಅಷ್ಟು ಪ್ರತಿಷ್ಠೆಯನ್ನು ಹೊಂದಿದೆ. ಅಲ್ಲದೇ ಇಂದು NITK ಎಂದು ನಾಮಕರಣಗೊಂಡಿದೆ.
ಮಂಗಳೂರು ಎರ್ಪೋರ್ಟ್(ಬಜ್ಪೆ) ಮತ್ತು ಆಲ್ ಇಂಡಿಯಾ ರೇಡಿಯೋ ಸ್ಟೇಷನ್ ಅನ್ನು ಮಂಗಳೂರಿನಲ್ಲೂ ಸ್ಥಾಪಿಸಿದರು. ಮುಂದಾಲೋಚನೆ ಮತ್ತು ಪ್ರಗತಿಪರ ಚಿಂತನೆಯಿಂದ ಉಳ್ಳಾಲ ಶ್ರೀನಿವಾಸ ಮಲ್ಯರು ಹೊಸ ದಿಶೆ ನೀಡಿದ ಆಧುನಿಕ ಮಂಗಳೂರಿನ ಪಿತಾಮಹರಾದರು. ಅವರ ಹೆಸರು ಮಂಗಳೂರಿನ ಯುವ ರಾಜಕಾರಣಿಗಳು ಬಳಸುತ್ತಾರೆ ಆದರೆ ಕಾಂಗ್ರೆಸ್ ಬಳಿ ಮಲ್ಯರ ನೆನಪಿದ್ದಂತಿಲ್ಲ್ಲ. ಬಿಜೆಪಿ ಜಾಣ ಮರುವು ತೊರುತ್ತಿದೆ. ಇದೇ ಕಾರಣ ಸುರತ್ಕಲ್ನಲ್ಲಿ ಅವರ ಹೆಸರಲ್ಲಿ ಆಗಬೇಕಾಗಿದ್ದ ಹೋಸ್ಟೆಲ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂಬ ಮಾತಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.