ಪ್ರಾಣಿ ಪ್ರಿಯರು ಸಂತೋಷಪಡುವಂತಹ ಸುದ್ದಿಯನ್ನು ನೀಡಿದೆ ಭಾರತೀಯ ಅರೆಸೇನಾ ಪಡೆ. ಇನ್ನು ಮುಂದೆ ಪಡೆಯಿಂದ ನಿವೃತ್ತಿಗೊಳ್ಳಲಿರುವ ಪ್ರಾಣಿಗಳಿಗೂ ಯೋಧರಂತೆಯೇ ವಿವಿಧ ಸವಲತ್ತುಗಳು ಸಿಗಲಿದೆ. ಶ್ವಾನಗಳು, ಒಂಟೆಗಳು ಮತ್ತು ಕುದುರೆಗಳನ್ನು ಹೆಚ್ಚಾಗಿ ಸೇನಾ ಪಡೆಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ನಿವೃತ್ತಿಯ ಬಳಿಕ ಅವುಗಳಿಗೆ ಇನ್ನು ಮುಂದೆ ಪ್ರಯೋಜನಗಳು ಸಿಗಲಿವೆ.
ಗಡಿ ಮತ್ತು ಬಯಲು ಪ್ರದೇಶಗಳಲ್ಲಿ ಸೇವೆಯಲ್ಲಿರುವ ಎಲ್ಲಾ ಪ್ರಾಣಿಗಳಿಗೆ ನಿವೃತ್ತಿಯ ನಂತರದ ಪ್ರಯೋಜನಗಳನ್ನು ನೀಡುವಂತೆ ಅರೆಸೈನಿಕ ಪಡೆಗಳ ಆರು ಸದಸ್ಯರ ಸಮಿತಿಯ ಶಿಫಾರಸ್ಸು ಮಾಡಿದೆ. ನಿವೃತ್ತ ಪ್ರಾಣಿಗಳನ್ನು ವೃದ್ಧಾಶ್ರಮಗಳಲ್ಲಿ ಮತ್ತು ಪುನರ್ವಸತಿ ಕೇಂದ್ರಗಳಲ್ಲಿ ಇಡಬೇಕು ಮತ್ತು ಅವುಗಳ ಆಹಾರದ 70% ಕ್ಕಿಂತ ಹೆಚ್ಚಿನ ಭಾಗವನ್ನು ನೀಡಬೇಕು ಎಂಬಿತ್ಯಾದಿ ಅಂಶಗಳು ಶಿಫಾರಸ್ಸಿನಲ್ಲಿ ಒಳಗೊಂಡಿದೆ.
ವಿಶೇಷವೆಂದರೆ, 2018ರಲ್ಲಿ ಸೇನೆಯು ನಿವೃತ್ತಿಯ ನಂತರ ತನ್ನ ಶ್ವಾನಗಳನ್ನು ನಿವೃತ್ತಿ ಮನೆಗಳಲ್ಲಿ ಇರಿಸಲು ನಿರ್ಧರಿಸಿತ್ತು, ರಕ್ಷಣಾ ಸಚಿವಾಲಯವು ಪ್ರಾಣಿಗಳನ್ನು ನಿವೃತ್ತಿಯ ನಂತರ ಸೇನಾ ಕೇಂದ್ರಗಳಿಗೆ ಕಳುಹಿಸುವಂತೆಯೂ ಆದೇಶಿಸಿತ್ತು.
ಸೇನೆಯು ತನ್ನ ಪಡೆಯಲ್ಲಿ ಸೇವೆ ಸಲ್ಲಿಸಿದ ಶ್ವಾನಗಳನ್ನು ನಿವೃತ್ತಿ ಬಳಿಕ ಮೀರತ್ನ ಸೇನಾ ಆರ್ವಿಸಿ ಕೇಂದ್ರಕ್ಕೆ ಕಳುಹಿಸುತ್ತದೆ. ಕುದುರೆಗಳು, ಕತ್ತೆ ಜಾತಿಗೆ ಸೇರಿದ ಪ್ರಾಣಿಗಳನ್ನು ಉತ್ತರಾಖಂಡದ ಹೆಂಪೂರಿನ ರಿಮೌಂಟ್ ತರಬೇತಿ ಶಾಲೆ ಮತ್ತು ಡಿಪೋಗೆ ವರ್ಗಾಯಿಸಲಾಗುತ್ತದೆ.
ಇಂಡೋ ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ), ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ (ಸಿಆರ್ಪಿಎಫ್), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಅಸ್ಸಾಂ ರೈಫಲ್ಸ್ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿಯನ್ನು (ಎನ್ಎಸ್ಜಿ) ಸದಸ್ಯರನ್ನು ಒಳಗೊಂಡ ಸಮಿತಿಯು ತನ್ನ ಶಿಫಾರಸ್ಸನ್ನು ಗೃಹ ಸಚಿವಾಲಯದ ಅನುಮೋದನೆಗಾಗಿ ಕಳುಹಿಸಿದೆ. ಈ ಹಣಕಾಸು ವರ್ಷದಲ್ಲಿ ಈ ಬಗ್ಗೆ ನಿಯಮ ರೂಪಿಸುವ ಸಾಧ್ಯತೆ ಇದೆ.
ಕುತೂಹಲಕಾರಿ ಅಂಶವೆಂದರೆ, ಒಂದು ವರ್ಷದ ವಯಸ್ಸಿನಲ್ಲಿ ಪ್ರಾಣಿಗಳನ್ನು ಸಾಮಾನ್ಯವಾಗಿ ಅರೆಸೈನಿಕ ಪಡೆಗಳಲ್ಲಿ ಸೇರಿಸಲಾಗುತ್ತದೆ ಮತ್ತು ಅವು ಸರಾಸರಿ 8 ರಿಂದ 16 ವರ್ಷಗಳನ್ನು ಸೇವೆಯಲ್ಲಿ ಕಳೆಯುತ್ತವೆ. ಶ್ವಾನಗಳು ಸ್ಫೋಟಕ ಪತ್ತೆ ಅಥವಾ ಕಾವಲು ನೆಲೆಗಳಂತಹ ಕಾರ್ಯಗಳನ್ನು ನಿರ್ವಹಿಸಿದರೆ, ಕುದುರೆಗಳು, ಕತ್ತೆ ಜಾತಿಯ ಪ್ರಾಣಿಗಳು, ಯಾಕ್ ಮತ್ತು ಒಂಟೆಗಳಂತಹ ಪ್ರಾಣಿಗಳನ್ನು ಗಸ್ತು ಮತ್ತು ಸಾಗಣೆಗೆ ಬಳಸಲಾಗುತ್ತದೆ. ನಿವೃತ್ತಿಯ ನಂತರ, ಪ್ರಾಣಿಗಳನ್ನು ನಾಗರಿಕರಿಗೆ ನೀಡಲು ಹರಾಜು ಮಾಡಲಾಗುತ್ತದೆ.
ಪ್ರಾಣಿಗಳ ಹಕ್ಕುಗಳನ್ನು ಅಂಗೀಕರಿಸಿರುವ ಸಮಿತಿಯು, “ಅನಾರೋಗ್ಯ ಪೀಡಿತ ಪ್ರಾಣಿಗಳಿಗೆ ಯಾವುದೇ ದಯಾಮರಣ ಅಥವಾ ಹರಾಜು ನಡೆಸಲಾಗುವುದಿಲ್ಲ. ಇವುಗಳನ್ನು ಪ್ರಾಣಿಗಳ ವೃದ್ಧಾಶ್ರಮಗಳಿಗೆ ಸ್ಥಳಾಂತರಿಸುವ ಮೂಲಕ ಸಾಗಾಣೆ ಮಾಡಲಾಗುತ್ತದೆ. ದೊಡ್ಡ ಪ್ರಾಣಿಗಳ ವೃದ್ಧಾಶ್ರಮಗಳು ಆಯಾ ಕಂಪನಿ, ಯುನಿಟ್ ಬೇಸ್, ಸೆಕ್ಟರ್ ಅಥವಾ ಗಡಿನಾಡಿನ ಪ್ರಧಾನ ಕಚೇರಿಯಲ್ಲಿವೆ. ನಾಯಿಗಳನ್ನು ಸಂತಾನೋತ್ಪತ್ತಿ ಮತ್ತು ತರಬೇತಿ ಕೇಂದ್ರಗಳಿಗೆ ರವಾನಿಸಲಾಗುತ್ತದೆ” ಎಂದು ಹೇಳಿದೆ.
ವೃತ್ತಿ ಪ್ರಯೋಜನಗಳ ಹೊರತಾಗಿ, ಶ್ವಾನಗಳು ಮತ್ತು ಅವರ ಮಾರ್ಗದರ್ಶಿಗಳಿಗೆ ರೈಲುಗಳಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವಂತಹ ಸಾರಿಗೆ ನಿಯಮಗಳನ್ನು ಸಹ ಮಾರ್ಪಡಿಸಲಾಗಿದೆ. ಸಿಐಎಸ್ಎಫ್ ಪ್ರೊ.ಹೇಮೇಂದ್ರ ಸಿಂಗ್ ಅವರ ಪ್ರಕಾರ, “ಈ ಕ್ರಮವು ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರನ್ನು ಗೌರವಿಸುತ್ತದೆ” ಎಂದು ಹೇಳಿದ್ದಾರೆ.
ರಾಷ್ಟ್ರವನ್ನು ರಕ್ಷಿಸುವಲ್ಲಿ ನಮ್ಮ ಪ್ರಾಣಿಗಳ ದೊಡ್ಡ ಕೊಡುಗೆಯನ್ನು ಗುರುತಿಸುವಲ್ಲಿ ಈ ಕ್ರಮವು ಮಹತ್ವದ್ದಾಗಿದೆ. ಇತ್ತೀಚೆಗೆ, ಸಿಐಎಸ್ಎಫ್ ದೆಹಲಿ ಮೆಟ್ರೊದಲ್ಲಿ ಎಂಟು ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಏಳು ಶ್ವಾನಗಳಿಗೆ ಬೀಳ್ಕೊಡುಗೆ ಸಮಾರಂಭ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಸ್ಮರಣಿಕೆ, ಪದಕ ಮತ್ತು ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಗಿತ್ತು. ದೇಶದ ಹಲವಾರು ಪೊಲೀಸ್ ಪಡೆಗಳು ಗೌರವ ಸನ್ಮಾನಗಳನ್ನು ಮಾಡುವ ಮೂಲಕ ತಮ್ಮ ಪಡೆಯಲ್ಲಿ ಸೇವೆ ಸಲ್ಲಿಸಿದ ಶ್ವಾನಗಳಿಗೆ ಅತ್ಯುನ್ನತ ಗೌರವವನ್ನು ಸಲ್ಲಿಸಿದೆ.
ಪ್ರಾಣಿಗಳು ಸೇವೆಯಲ್ಲಿರುವಾಗ ಪ್ರದರ್ಶಿಸಿದ ಧೈರ್ಯಕ್ಕೆ, ಸಾಹಸಕ್ಕೆ ಮತ್ತು ಸೇವೆಗೆ ಗೌರವ ಪಡೆಯಲು ಅರ್ಹವಾಗಿವೆ. ಅವುಗಳನ್ನು ಯೋಧನಂತೆಯೇ ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.