ಭಾರೀ ಕುತೂಹಲ ಕೆರಳಿಸಿದ್ದ ಕರ್ನಾಟಕದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಕೊನೆಗೂ ಹೊರಬಿದ್ದಿದೆ. ಈ ಉಪಚುನಾವಣೆಯು ಅಧಿಕಾರದಲ್ಲಿರುವ ಬಿಜೆಪಿಗೆ ಅತ್ಯಂತ ನಿರ್ಣಾಯಕವಾಗಿತ್ತು. ಏಳು ಸ್ಥಾನಗಳಿಗಿಂತ ಕಡಿಮೆ ಗೆದ್ದಿದ್ದರೆ ಸರ್ಕಾರವನ್ನು ಮುಂದುವರಿಸುವುದು ತ್ರಾಸದಾಯಕವಾಗುತ್ತಿತ್ತು. ಆದರೆ ರಾಜ್ಯದ ಮತದಾರ ಬಿಜೆಪಿಯ ಕೈ ಹಿಡಿದಿದ್ದಾನೆ. ಅಭೂತಪೂರ್ವವಾಗಿ ಗೆಲುವನ್ನು ಸಾಧಿಸುವ ಮೂಲಕ ಬಿಜೆಪಿಯು ಮುಂದಿನ ಮೂರು ವರ್ಷಗಳ ಕಾಲ ತಾನು ಸರ್ಕಾರದಲ್ಲಿ ಮುಂದುವರೆಯುವುದನ್ನು ಖಚಿತಪಡಿಸಿದೆ. ಕೊನೆಗೂ ಸ್ಥಿರ ಸರ್ಕಾರ ರಚನೆಯಾಯಿತಲ್ಲ ಎಂದು ರಾಜ್ಯದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 222 ಸ್ಥಾನಗಳ ಪೈಕಿ ಬಿಜೆಪಿಯು 104 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕುತಂತ್ರದ ಫಲವಾಗಿ ಸರ್ಕಾರ ರಚನೆ ಮಾಡುವುದು ಬಿಜೆಪಿಗೆ ಸಾಧ್ಯವಾಗಿರಲಿಲ್ಲ. ಬಿ. ಎಸ್. ಯಡಿಯೂರಪ್ಪ ಅವರು ಓರ್ವ ಸ್ವತಂತ್ರ ಶಾಸಕನ ಬೆಂಬಲವನ್ನು ಪಡೆದುಕೊಂಡು 105 ಮಂದಿ ಶಾಸಕರೊಂದಿಗೆ 2018ರ ಮೇ 17ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಆದರೆ ಸರಳ ಬಹುಮತಕ್ಕೆ ಬೇಕಾದ 8 ಶಾಸಕರ ಬೆಂಬಲವನ್ನು ಪಡೆಯಲು ವಿಫಲವಾಗಿ ಮೇ 19ರಂದು ರಾಜೀನಾಮೆಯನ್ನು ನೀಡಿದ್ದರು. ಇದಾದ ಬಳಿಕ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಪವಿತ್ರ ಮೈತ್ರಿಯನ್ನು ಮಾಡಿಕೊಂಡು ಸರಕಾರ ರಚನೆಯನ್ನು ಮಾಡಿದವು. ಕುಂಟುತ್ತಾ ತೆವಳುತ್ತಾ 14 ತಿಂಗಳುಗಳ ಕಾಲ ಅಧಿಕಾರ ನಡೆಸಿದ ಮೈತ್ರಿ ಸರಕಾರ ಆಡಳಿತ ವಿರೋಧಿ ಅಲೆಗೆ ತತ್ತರಿಸಿ ಹೋಗಿತ್ತು. ಅದರ ಆಂತರಿಕ ಜಗಳಗಳು ರಾಜ್ಯದ ಜನತೆಯನ್ನು ಕಂಗೆಡಿಸಿದ್ದವು. ಕೊನೆಗೆ ಅದರ 15 ಮಂದಿ ಶಾಸಕರು ರಾಜೀನಾಮೆಯನ್ನು ನೀಡಿದ ಪರಿಣಾಮವಾಗಿ ಸರ್ಕಾರ ಪತನಗೊಂಡಿತು. ಮೈತ್ರಿ ಸರ್ಕಾರ ಪತನಗೊಳ್ಳಲು ಜೆಡಿಎಸ್ ಕಾಂಗ್ರೆಸ್ ಪಕ್ಷಗಳೇ ಕಾರಣ ಆಗಿತ್ತೇ ಹೊರತು ಅದರಲ್ಲಿ ಮೂರನೇ ಪಕ್ಷದ ಅಥವಾ ವ್ಯಕ್ತಿಗಳ ಯಾವುದೇ ಕೈವಾಡ ಇರಲಿಲ್ಲ. ಎಲ್ಲಾ ಬೆಳವಣಿಗೆಯ ಬಳಿಕ ಬಿ. ಎಸ್. ಯಡಿಯೂರಪ್ಪ ಅವರು ಜುಲೈ 26ರಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆದರೂ ಸ್ಥಿರವಲ್ಲದ ಸರ್ಕಾರವನ್ನು 4 ತಿಂಗಳುಗಳ ಕಾಲ ಯಶಸ್ವಿಯಾಗಿ ಅವರು ಮುನ್ನಡೆಸುತ್ತಾ ಬಂದಿದ್ದಾರೆ.
ತೀವ್ರಸ್ವರೂಪದ ನೆರೆ ಸಂಭವಿಸಿದಾಗಲೂ ಯಡಿಯೂರಪ್ಪ ಸರಕಾರ ಅತ್ಯಂತ ಸಮರ್ಪಕವಾದ ರೀತಿಯಲ್ಲಿ ಎಲ್ಲವನ್ನೂ ನಿರ್ವಹಿಸಿತು. ಜನರ ಕಲ್ಯಾಣಕ್ಕೆ ಬೇಕಾದ ತುರ್ತು ಕ್ರಮಗಳನ್ನು ಕ್ಷಿಪ್ರಗತಿಯಲ್ಲಿ ಕೈಗೊಂಡಿತು. ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ರಾಜ್ಯಾದ್ಯಂತ ಪ್ರವಾಸಗಳನ್ನು ಕೈಗೊಂಡು ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಎಲ್ಲಾ ಕಾರಣದಿಂದಾಗಿ ಉಪ ಚುನಾವಣೆಯಲ್ಲಿ ಮತದಾರ ಬಿಜೆಪಿಯನ್ನು ಬೆಂಬಲಿಸಿದ್ದಾನೆ.
ಕರ್ನಾಟಕ ವಿಧಾನಸಭೆಯಲ್ಲಿ ಇರುವ ಒಟ್ಟು ಸ್ಥಾನ 224. ಸರಳ ಬಹುಮತಕ್ಕೆ ಬೇಕಾಗಿರುವುದು 113 ಸ್ಥಾನಗಳು. ಆದರೆ ಎರಡು ಸ್ಥಾನಗಳಿಗೆ ಇನ್ನೂ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಪ್ರಸ್ತುತ ವಿಧಾನಸಭೆಯಲ್ಲಿ ಇರುವ ಒಟ್ಟು ಸಂಖ್ಯಾ ಬಲ 222. ಹೀಗಾಗಿ ಸರಳ ಬಹುಮತಕ್ಕೆ ಬೇಕಾಗಿರೋದು 112 ಸ್ಥಾನ. ಇದೀಗ ಉಪಚುನಾವಣೆಯ ಬಳಿಕ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ ಸ್ಪೀಕರ್ ಅವರನ್ನು ಹೊರತುಪಡಿಸಿ 116 ಕ್ಕೆ ಏರಿಕೆಯಾಗಿದೆ. ಅಂದರೆ ಸರಳ ಬಹುಮತಕ್ಕಿಂತಲೂ ಹೆಚ್ಚಿನ ಸ್ಥಾನಗಳು ಬಿಜೆಪಿಯ ಬಳಿ ಇದೆ. ಹೀಗಾಗಿ ಮುಂದಿನ ಮೂರು ವರ್ಷಗಳ ಕಾಲ ಸುಭದ್ರವಾಗಿ ಆಡಳಿತವನ್ನು ನಡೆಸುವ ಅವಕಾಶ ಬಿಜೆಪಿ ಸರ್ಕಾರಕ್ಕೆ ಉಳಿದಿದೆ.
ಇನ್ನೊಂದೆಡೆ ಉಪಚುನಾವಣೆಯು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ. 15 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ. ಒಂದು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಜಯಗಳಿಸಿದ್ದಾರೆ. 14 ತಿಂಗಳುಗಳ ಕಾಲ ಅಧಿಕಾರದಲ್ಲಿದ್ದ ಜೆಡಿಎಸ್ ಪಕ್ಷಕ್ಕೆ ಒಂದೇ ಒಂದು ಸ್ಥಾನವನ್ನು ಗೆದ್ದುಕೊಳ್ಳಲು ಸಾಧ್ಯವಾಗಲಿಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 78 ಸ್ಥಾನಗಳನ್ನು ಗೆದ್ದಿತ್ತು ಮತ್ತು ಜೆಡಿಎಸ್ 37 ಸ್ಥಾನಗಳನ್ನು ಗೆದ್ದಿತ್ತು. ಅಂದರೆ ಎರಡು ಪಕ್ಷಗಳಿಗೂ ರಾಜ್ಯದ ಜನರು ಜನಾದೇಶವನ್ನು ನೀಡಿರಲಿಲ್ಲ. ಆದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಏಕೈಕ ಕಾರಣಕ್ಕೆ ಮೈತ್ರಿಯನ್ನು ಮಾಡಿಕೊಂಡು ತೀರಾ ಕೆಳಮಟ್ಟದ ಆಡಳಿತವನ್ನು ನಡೆಸಿ 14 ತಿಂಗಳ ಕಾಲ ರಾಜ್ಯದ ಜನತೆಯನ್ನು ಇನ್ನಿಲ್ಲದಂತೆ ಕಾಡಿದ್ದವು ಈ ಪಕ್ಷಗಳು. ಉಪಚುನಾವಣೆಯ ಸಂದರ್ಭದಲ್ಲೂ ಅನರ್ಹರ ವಿರುದ್ಧ ದ್ವೇಷವನ್ನು ಸಾಧಿಸಲು ಮತ್ತು ಬಿಜೆಪಿಯನ್ನು ಹಳಿಯಲು ಎರಡು ಪಕ್ಷಗಳು ಪ್ರಚಾರಕಾರ್ಯವನ್ನು ನಡೆಸಿದ್ದವೇ ಹೊರತು ರಾಜ್ಯದ ಅಭಿವೃದ್ಧಿಗಾಗಿ ನಮಗೆ ಮತ ಕೊಡಿ ಎಂದು ಈ ಪಕ್ಷಗಳು ಮನವಿ ಮಾಡಿಕೊಂಡಿರಲೇ ಇಲ್ಲ. ಹೀಗಾಗಿ ರಾಜ್ಯದ ಜನತೆಯೇ ದ್ವೇಷದ ರಾಜಕಾರಣಕ್ಕೆ ತಕ್ಕ ಪಾಠವನ್ನು ಕಲಿಸಿದ್ದಾರೆ. ಬಿಜೆಪಿಯನ್ನು ಬೆಂಬಲಿಸುವ ಮೂಲಕ ಸ್ಥಿರ ಸರ್ಕಾರಕ್ಕೆ ತಮ್ಮ ಅನುಮೋದನೆಯನ್ನು ನೀಡಿದ್ದಾರೆ.
ಇಂದಿನಿಂದ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಪರ್ವ ಆರಂಭವಾಗಲಿದೆ. ಆಡಳಿತರೂಢ ಬಿಜೆಪಿಯು ಯಾವುದೇ ಅಂಜಿಕೆ ಬೆದರಿಕೆಗಳಿಲ್ಲದೆ ಆಡಳಿತ ಯಂತ್ರವನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಬಹುದಾಗಿದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಎರಡು ಕಡೆಯೂ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚನೆ ಮಾಡಿರುವುದರಿಂದ ರಾಜ್ಯವು ಅಭಿವೃದ್ಧಿಯ ಹೊಸ ಮೈಲಿಗಲ್ಲನ್ನು ತಲುಪುವುದು ಶತ ಸಿದ್ಧವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.