ತನ್ನ ನಾಗರಿಕರ ಜೀವಕ್ಕೆ ಅಪಾರ ಬೆಲೆಯನ್ನು ನೀಡುವ ಮತ್ತು ಅವರನ್ನು ಕಾಪಾಡಲು ಎಷ್ಟು ಬೇಕಾದರು ಖರ್ಚು ಮಾಡುವ ದೇಶ ಅಮೆರಿಕಾ. ತನ್ನ ನಾಗರಿಕರ ಹಿತ ಕಾಪಾಡವ ಸಲುವಾಗಿಯೇ ಅದು ಒಸಮಾಬಿನ್ ಲಾದೆನ್, ಅಲ್ ಬಗ್ದಾದಿ ಹತ್ಯೆ ಮಾಡಿದೆ. ಬಾಗ್ದಾದಿ ಹತ್ಯೆಯ ಕಾರ್ಯಾಚರಣೆಗೆ ಅದು ಇಟ್ಟದ್ದು ‘ಕೈಲಾ ಮುಲ್ಲರ್’ ಹೆಸರು. ಈಕೆ ಸಿರಿಯಾದಲ್ಲಿ ಮಾನವೀಯ ಕಾರ್ಯ ಮಾಡುತ್ತಿದ್ದವಳು. ಈಕೆಯನ್ನು ಇಸಿಸ್ ಭಯೋತ್ಪಾದಕರು ಅಪಹರಿಸಿ ಕೊಂದು ಹಾಕಿದ್ದರು. ಬಾಗ್ದಾರಿ ಈಕೆಯ ಮೇಲೆ ಅತ್ಯಾಚಾರ ಎಸಗಿದ್ದ ಎಂದೂ ಹೇಳಲಾಗಿದೆ. ಕಾರ್ಯಾಚರಣೆಗೆ ಈಕೆಯ ಹೆಸರನ್ನಿಡುವ ಮೂಲಕ ಅಮೆರಿಕಾ ಆಕೆಗೆ ಉನ್ನತ ಗೌರವವನ್ನೇ ನೀಡಿದೆ. ಇದು ಅದರ ನಾಗರಿಕರ ಮೇಲಿನ ಪ್ರೀತಿಗೆ ಸಾಕ್ಷಿಯಾಗಿದೆ.
2014ರಿಂದ ಈಚೆಗೆ ಭಾರತವೂ ತನ್ನ ನಾಗರಿಕರ ಬಗ್ಗೆ ಅಪಾರ ಕಾಳಜಿಯನ್ನು ವಹಿಸುತ್ತಿದೆ. ವಿದೇಶಿ ನೆಲೆದಲ್ಲಿ ಸಂಕಷ್ಟಕ್ಕೆ ಒಳಗಾದ ಭಾರತೀಯರ ರಕ್ಷಣೆ ಧಾವಿಸುವ ಅನನ್ಯ ಪರಂಪರೆಯನ್ನು ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರು ಆರಂಭಿಸಿದರು. ಇದೀಗ ಅವರ ಉತ್ತರಾಧಿಕಾರಿ ಎಸ್.ಜೈಂಕರ್ ಅವರು ಸುಷ್ಮಾ ಪರಂಪರೆಯನ್ನು ಮುಂದುವರೆಸಿದ್ದಾರೆ. ಈ ಮೂಲಕ ಸುಷ್ಮಾ ಅವರಿಗೆ ಸೂಕ್ತ ಗೌರವವನ್ನು ನೀಡುತ್ತಿದ್ದಾರೆ.
ರಾಖೈನ್ ಪ್ರಾಂತ್ಯದಲ್ಲಿ ಮಯನ್ಮಾರ್ ಸರ್ಕಾರ ರೋಹಿಂಗ್ಯಾಗಳ ಮೇಲೆ ಕ್ರಮವನ್ನು ಜರುಗಿಸಿದ ಸಂದರ್ಭದಲ್ಲಿ ರೋಹಿಂಗ್ಯಾಗಳು ಅಪಾರ ಪ್ರಮಾಣದಲ್ಲಿ ಆರತದೊಳಗೆ ಒಳನಸುಳಲು ಪ್ರಯತ್ನಿಸಿದರು. ಇದು ಶತಮಾನದ ಅತೀದೊಡ್ಡದ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿತು. ಇದೇ ರಾಖೈನ್ ಪ್ರಾಂತ್ಯದಲ್ಲಿ ಇತ್ತೀಚಿಗೆ ಬಂಡಾಯ ಗುಂಪುಗಳು ಒತ್ತೆಯಿರಿಸಿಕೊಂಡಿದ್ದ ಐದು ಮಂದಿ ಭಾರತೀಯರನ್ನು ಮತ್ತು ಐದು ಮಯನ್ಮಾರ್ ನಾಗರಿಕರನ್ನು ಭಾರತದ ಕ್ಷಿಪ್ರಗತಿಯಲ್ಲಿ ಮಧ್ಯಪ್ರವೇಶ ಮಾಡಿ ರಕ್ಷಣೆ ಮಾಡಿದೆ.
ಅರಾಕನ್ ಸೇನೆಯು ರಾಖೈನ್ ಮೂಲದ ಬಂಡುಕೋರರ ಗುಂಪಾಗಿದ್ದು, ಯುನೈಟೆಡ್ ಲೀಗ್ ಆಫ್ ಅರಾಕನ್ (ಯುಎಲ್ಎ)ನ ಸಶಸ್ತ್ರ ವಿಭಾಗವಾಗಿ ಇದನ್ನು ಸ್ಥಾಪಿಸಲಾಗಿತ್ತು. ಈ ಗುಂಪು ಭಾರತೀಯ ಪ್ರಜೆಗಳನ್ನು ಪ್ಯಾಲೆಟ್ವಾದಿಂದ ರಾಖೈನ್ನ ಕ್ಯುಕ್ಟಾವ್ಗೆ ತೆರಳುತ್ತಿದ್ದಾಗ ಅಪಹರಿಸಿದೆ. ಬಂಡುಕೋರರ ವಶದಲ್ಲಿದ್ದಾಗ ಓರ್ವ ಭಾರತೀಯ ಪ್ರಜೆ ಹೃದಯಾಘಾತದಿಂದ ಸಾವನ್ನಪ್ಪಿದರು. ಭಾರತದ ಮಧ್ಯಪ್ರವೇಶದಿಂದ ಬಿಡುಗಡೆಯಾದ ಭಾರತೀಯ ಪ್ರಜೆಗಳು, ಮೃತರಾದ ವ್ಯಕ್ತಿಯ ಶವದೊಂದಿಗೆ ಸಿಟ್ವೆ ತಲುಪಿದ್ದಾರೆ ಮತ್ತು ಭಾರತಕ್ಕೆ ಪ್ರಯಾಣಿಸಲು ಯಾಂಗೊನ್ಗೆ ಆಗಮಿಸಿದ್ದಾರೆ. ಇದಕ್ಕೂ ಮುನ್ನ ಏಪ್ರಿಲ್ನಲ್ಲಿ ಜಿಬ್ರಾಲ್ಟರ್ನಿಂದ ವಶಪಡಿಸಿಕೊಂಡ ಇರಾನಿನ ಹಡಗಿನಲ್ಲಿದ್ದ ಎಲ್ಲಾ 24 ಭಾರತೀಯ ಸಿಬ್ಬಂದಿಯನ್ನು ಭಾರತ ಸುರಕ್ಷಿತವಾಗಿ ಬಿಡುಗಡೆ ಮಾಡುವಲ್ಲಿ ಯಶಸ್ವಿಯಾಗಿದೆ.
ಮೋದಿ ಸರ್ಕಾರದ ಅವಧಿಯಲ್ಲಿ ಭಾರತವು ವಿದೇಶಿ ತೀರದಲ್ಲಿ ಧೈರ್ಯಶಾಲಿ ಕಾರ್ಯಾಚರಣೆಗಳನ್ನು ನಡೆಸಿದೆ ಮತ್ತು ಯುದ್ಧ ಪೀಡಿತ ಯೆಮನ್ನಿಂದ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರುವ ಮೂಲಕ ಅತ್ಯುತ್ತಮ ಸಾಧನೆಯನ್ನು ಮಾಡಿದೆ. 2015 ರಲ್ಲಿ, ಭಾರತವು ಯೆಮನ್ನಿಂದ 41 ದೇಶಗಳ 1,000 ಪ್ರಜೆಗಳನ್ನು ಸ್ಥಳಾಂತರಿಸಿತು, ಜನರಲ್ ವಿ.ಕೆ.ಸಿಂಗ್ ಸ್ವತಃ ಯೆಮನ್ಗೆ ಪ್ರಯಾಣಿಸಿ, ಸಾಹಸಿ ರಕ್ಷಣಾ ಕಾರ್ಯಾಚರಣೆ ಯಶಸ್ಸುಗೊಳ್ಳುವುದನ್ನು ಖಚಿತಪಡಿಸಿದರು. ತಡೆರಹಿತ ಬಾಂಬ್ ಸ್ಫೋಟಗಳ ನಡುವೆಯೂ ಹಲವಾರು ಏರ್ ಇಂಡಿಯಾ ವಿಮಾನಗಳನ್ನು ಯೆಮನ್ನ ರಾಜಧಾನಿ ಸನಾಕ್ಕೆ ಹಾರಿಸಲಾಯಿತು. ವಿಕೆ ಸಿಂಗ್ ನೇತೃತ್ವದ ಮಿಷನ್ ಯೆಮನ್ನಿಂದ 4,600 ಭಾರತೀಯರನ್ನು ರಕ್ಷಿಸಿತು. ಭಾರತವು ಬ್ರಿಟನ್, ಫ್ರಾನ್ಸ್ ಮತ್ತು ಅಮೆರಿಕಾದ ನಾಗರಿಕರನ್ನು ಕೂಡ ರಕ್ಷಣೆ ಮಾಡಿತು. ಭಾರತ ಮತ್ತು ಪಾಕಿಸ್ಥಾನಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ತಮ್ಮ ನಾಗರಿಕರನ್ನು ಯೆಮನ್ನಿಂದ ರಕ್ಷಿಸಲು ಪರಸ್ಪರ ಸಹಾಯ ಹಸ್ತ ಚಾಚಿದವು. ಭಾರತದ ಕಾರ್ಯವನ್ನು ಯೆಮೆನ್ ಅತೀವ ಶ್ಲಾಘಿಸಿತು ಮತ್ತು ಭಾರತವನ್ನು ರಕ್ಷಣಾ ಕಾರ್ಯಾಚರಣೆಯ ಜಾಗತಿಕ ದಿಗ್ಗಜ ಎಂದು ಕರೆಯಿತು.
ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ಥಾನದೊಂದಿಗಿನ ಬಿಕ್ಕಟ್ಟು, ಚೀನಾದೊಂದಿಗಿನ ದೋಕ್ಲಾಂ ಬಿಕ್ಕಟ್ಟು ಈ ಎಲ್ಲಾ ಸಂದರ್ಭದಲ್ಲೂ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಅವರು ತಮ್ಮ ಎಲ್ಲ ಅನುಭವಗಳನ್ನು ಬಳಸಿಕೊಂಡು ವಿದೇಶಾಂಗ ವ್ಯವಹಾರಗಳನ್ನು ಅತ್ಯುತ್ತಮವಾಗಿ ನಿಭಾಯಿಸಿದರು. ಸಚಿವರಾಗಿ ತಮ್ಮ ಪಾತ್ರವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದರು. ಅವರು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮದ ಶಕ್ತಿಯನ್ನು ಬಳಸಿ ವಿದೇಶದಲ್ಲಿ ಸಂಕಷ್ಟದಲ್ಲಿರುವ ಪ್ರತಿಯೊಬ್ಬ ಭಾರತೀಯರನ್ನು ರಕ್ಷಿಸಲು ಮುಂದಾದರು. ಟ್ವಿಟರ್ ಮೂಲಕ ಎಲ್ಲರಿಗೂ ಮುಕ್ತಗೊಂಡಿದ್ದರು, ಎಲ್ಲರ ಭಾವನೆಗಳಿಗೂ ತ್ವರಿತವಾಗಿ ಸ್ಪಂದಿಸುತ್ತಿದ್ದರು. ಇರಾಕ್ನಲ್ಲಿ ಸಿಕ್ಕಿಕೊಂಡ 168 ಭಾರತೀಯರ ರಕ್ಷಣೆ ಮಾಡಿದ ಆಪರೇಷನ್ ರಾಹತ್ ಆಗಿರಲಿ, ಬರ್ಲಿನ್ನಲ್ಲಿ ಹಣ ಮತ್ತು ಪಾಸ್ಪೋರ್ಟ್ ಕಳೆದುಕೊಂಡ ಭಾರತೀಯ ನಾಗರಿಕನಿಗೆ ಸಹಾಯ ಮಾಡಿದ್ದಿರಲಿ ಅಥವಾ ಯುಎಇಯಲ್ಲಿ ಕಳ್ಳಸಾಗಣೆಯಾಗಿದ್ದ ಬಾಲಕಿಯ ರಕ್ಷಣೆಯಿರಲಿ ಎಲ್ಲವನ್ನೂ ಸುಷ್ಮಾ ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇದಕ್ಕಾಗಿ ಟ್ವಿಟ್ಟರ್ನಲ್ಲಿ ಹಲವರು ಅವರನ್ನು ಮದರ್ ಇಂಡಿಯಾ ಎಂದು ಕರೆದರು. ನಾಗರಿಕರು ಅವರು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು.
ಸುಷ್ಮಾ ಸ್ವರಾಜ್ ಅವರಂತೆ ಎಸ್.ಜೈಶಂಕರ್ ಅವರೂ ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ಹೊದ ದೇಶಗಳಲ್ಲಿ ಇರುವ ಭಾರತೀಯರ ಹಿತಾಸಕ್ತಿ ಕಾಪಾಡುವಲ್ಲಿ ಭಾರತದ ಪ್ರಯತ್ನಗಳನ್ನು ಸುಧಾರಣೆಗೊಳಿಸುತ್ತಿದ್ದಾರೆ. ಸುಷ್ಮಾ ಪರಂಪರೆಯನ್ನು ಮುಂದುವರೆಸುತ್ತದ್ದಾರೆ. ಸುಷ್ಮಾ ಅಗಲುವಿಕೆಯಿಂದ ಸೃಷ್ಟಿಯಾದ ದೊಡ್ಡ ಕಂದಕವನ್ನು ತುಂಬಿಸಲು ಜೈಶಂಕರ್ ಅವರಿಗಿಂತ ಉತ್ತಮ ವ್ಯಕ್ತಿ ಮತ್ತೊಬ್ಬರಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.