ಅಮೆರಿಕಾದ ಹೋಸ್ಟನ್ನಲ್ಲಿ ನಡೆದ ಪ್ರಧಾನಿ ಮೋದಿಯವರ ‘ಹೌಡಿ ಮೋದಿ’ ಕಾರ್ಯಕ್ರಮವು ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿತು. ಸುಮಾರು 50,000 ಕ್ಕೂ ಹೆಚ್ಚು ಜನರು ಇದರಲ್ಲಿ ಭಾಗಿಯಾಗಿದ್ದರು. ಮೋದಿ ಅವರ ಈ ಅಮೆರಿಕಾ ಪ್ರವಾಸವು ಅತ್ಯಂತ ಯಶಸ್ವಿ ಪ್ರವಾಸವಾಗಿ ಹೊರಹೊಮ್ಮಿತ್ತು. ಪ್ರಧಾನಮಂತ್ರಿ ಅವರಿಗೆ ವಿದೇಶದಲ್ಲಿ ದೊರೆತ ಅಭೂತಪೂರ್ವ ಉತ್ಸಾಹಭರಿತ ಸ್ವಾಗತವನ್ನು ನೋಡಿ ಬುದ್ಧಿಜೀವಿಗಳು ವೇದನೆ ಪಟ್ಟರು ಮತ್ತು ಎಂದಿನಂತೆ ದೂಷಣೆಗಳನ್ನು ವ್ಯಕ್ತಪಡಿಸಲು ಆರಂಭಿಸಿದರು. ಮೋದಿಯನ್ನು ಜಾಗತಿಕ ಮಟ್ಟದಲ್ಲಿ ಕೆಟ್ಟದಾಗಿ ಬಿಂಬಿಸುವ ತಮ್ಮ ಪ್ರಯತ್ನವನ್ನು ಅನಿವಾಸಿ ಭಾರತೀಯರು ನುಚ್ಚು ನೂರುಗೊಳಿಸುತ್ತಿದ್ದಾರೆ ಎಂದು ಮಮ್ಮಲ ಮರಗಿದರು. ಇದೀಗ ಥಾಯ್ಲೆಂಡಿನಲ್ಲೂ ಮೋದಿಯವರಿಗೆ ಅಭೂತಪೂರ್ವ ಸ್ವಾಗತ ದೊರೆತಿದೆ. ‘ಸವಸ್ದೀ ಪಿಎಂ ಮೋದಿ’ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರು ಮೋದಿಗೆ ಬ್ಯಾಂಕಾಕ್ನಲ್ಲಿ ಅಭೂತಪೂರ್ವವಾಗಿ ಸ್ವಾಗತ ನೀಡಿದರು. ಮೋದಿಯವರ ಜನಪ್ರಿಯತೆ ಇಲ್ಲೂ ರಾರಾಜಿಸಿತು. ಎಂದಿನಂತೆ ಬುದ್ಧಿಜೀವಿಗಳು ಒಳಗೊಳಗೆ ಕುದಿಯಲಾರಂಭಿಸಿದರು.
ಪ್ರಸ್ತುತ 16 ನೇ ಆಸಿಯಾನ್-ಭಾರತ ಶೃಂಗಸಭೆ, 14 ನೇ ಪೂರ್ವ ಏಷ್ಯಾ ಶೃಂಗಸಭೆ ಮತ್ತು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವದ (ಆರ್ಸಿಇಪಿ) ಮೂರನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಥಾಯ್ಲೆಂಡ್ ಪ್ರವಾಸವನ್ನು ಹಮ್ಮಿಕೊಂಡಿದ್ದಾರೆ. ಅಲ್ಲಿ ಅವರು ಭಾರತೀಯ ವಲಸಿಗರು ಹಮ್ಮಿಕೊಂಡಿದ್ದ ‘ಸವಸ್ದೀ ಪಿಎಂ ಮೋದಿ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ‘ಸವಸ್ದೀ ಪಿಎಂ ಮೋದಿ’ ಬ್ಯಾಂಕಾಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ನಿಕಟ ಸಮನ್ವಯದೊಂದಿಗೆ ಥಾಯ್ಲೆಂಡ್ ಭಾರತೀಯ ಸಮುದಾಯವು ಆಯೋಜಿಸಿದ ಸ್ವಾಗತ ಕಾರ್ಯಕ್ರಮವಾಗಿದೆ. ಥಾಯ್ ಭಾಷೆಯಲ್ಲಿ, ‘ಸವಸ್ದೀ’ ಪದವನ್ನು ಶುಭಾಶಯ ಮತ್ತು ವಿದಾಯಕ್ಕಾಗಿ ಬಳಸಲಾಗುತ್ತದೆ. ‘ಸವಸ್ದೀ’ ಉಗಮದ ಸಂಸ್ಕೃತ ಪದವಾದ ‘ಸ್ವಸ್ತಿ’ಯಾಗಿದೆ. ಇದರ ಅರ್ಥ ಕಲ್ಯಾಣ ಎಂಬುದಾಗಿದೆ.
ನಿಮಿಬುಟ್ರ್ ಕ್ರೀಡಾಂಗಣದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು, ಈ ಕಾರ್ಯಕ್ರಮದಲ್ಲಿ 5,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. 370 ನೇ ವಿಧಿಯನ್ನು ರದ್ದುಗೊಳಿಸುವ ತನ್ನ ಕ್ರಮದ ಬಗ್ಗೆ ಪ್ರಧಾನಿ ಬಲವಾದ ನಿಲುವನ್ನು ಇಲ್ಲಿ ಮಂಡಿಸಿದರು. “ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಬೀಜಗಳನ್ನು ಬಿತ್ತನೆ ಮಾಡುವುದರ ಹಿಂದಿರುವ ಒಂದು ದೊಡ್ಡ ಕಾರಣವನ್ನು ತೊಡೆದುಹಾಕಲು ಭಾರತ ನಿರ್ಧರಿಸಿದೆ ಎಂದು ನಿಮಗೆ ತಿಳಿದಿದೆ. ನಿರ್ಧಾರ ಸರಿಯಾದಾಗ, ಅದರ ಪ್ರತಿಧ್ವನಿ ಜಗತ್ತಿನಾದ್ಯಂತ ಕೇಳುತ್ತದೆ. ಆ ಪ್ರತಿಧ್ವನಿಯನ್ನು ನಾನೀಗ ಥಾಯ್ಲೆಂಡಿನಲ್ಲೂ ಕೇಳಬಲ್ಲೆ” ಎಂದು ಮೋದಿ ಹೇಳುತ್ತಿದ್ದಾಗ ಜನಸಮೂಹ ನಿಂತು ಅವರಿಗೆ ಗೌರವವನ್ನು ನೀಡಿತು. 370ನೇ ವಿಧಿ ರದ್ಧತಿ ವಿರುದ್ಧ ನಿಲುವು ತಾಳಿರುವವರಿಗೆ ಇದು ದೊಡ್ಡ ಹೊಡೆತವೇ ಆಗಿದೆ.
ಮಹತ್ವದ ಬೆಳವಣಿಗೆಯೊಂದರಲ್ಲಿ, ಮುಂದಿನ ದಿನಗಳಲ್ಲಿ ಥಾಯ್ಲೆಂಡ್, ಮಯನ್ಮಾರ್ ಮತ್ತು ಈಶಾನ್ಯ ಭಾರತದ ನಡುವೆ ತಡೆರಹಿತ ಸಂಪರ್ಕವನ್ನು ಸ್ಥಾಪಿಸುವ ಯೋಜನೆಗೆ ಅನುವಾಗಿದೆ ಕೇಂದ್ರ ಸರ್ಕಾರದ ಆ್ಯಕ್ಟ್ ಈಸ್ಟ್ ಪಾಲಿಸಿ (ಎಇಪಿ) ಯ ಅಡಿಯಲ್ಲಿ ಭಾರತದ ಈಶಾನ್ಯವನ್ನು ಆಗ್ನೇಯ ಏಷ್ಯಾದ ಹೆಬ್ಬಾಗಿಲಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಪ್ರಧಾನಿ ಮೋದಿ ಘೋಷಿಸಿದರು. ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ, “ನಮ್ಮ ಗಮನವು ಭಾರತದ ಈಶಾನ್ಯವನ್ನು ಥಾಯ್ಲೆಂಡಿನೊಂದಿಗೆ ಸಂಪರ್ಕಿಸುವತ್ತ ಇದೆ. ಆಗ್ನೇಯ ಏಷ್ಯಾದ ಹೆಬ್ಬಾಗಿಲಾಗಿ ಈಶಾನ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಉಪಕ್ರಮವು ಭಾರತದ ಆ್ಯಕ್ಟ್ ಈಸ್ಟ್ ಪಾಲಿಸಿ ಮತ್ತು ಥಾಯ್ಲೆಂಡಿನ ಆ್ಯಕ್ಟ್ ವೆಸ್ಟ್ ಪಾಲಿಸಿಯನ್ನು ಅಪಾರವಾಗಿ ಬಲಪಡಿಸುತ್ತದೆ” ಎಂದಿದ್ದಾರೆ. ಭಾರತದ ಈಶಾನ್ಯ ಪ್ರದೇಶವನ್ನು ಯುಪಿಎ ಸರ್ಕಾರದ ಅವಧಿಯಲ್ಲಿ ತೀವ್ರವಾಗಿ ನಿರ್ಲಕ್ಷಿಸಲಾಗಿತ್ತು. ಆದರೀಗ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಈಶಾನ್ಯದ ಮೇಲೆ ನಿರಂತರ ಗಮನ ಹರಿಸುತ್ತಿರುವುದನ್ನು ನೋಡುವುದು ನಿಜಕ್ಕೂ ಹೆಮ್ಮೆ ಎನಿಸುತ್ತಿದೆ.
ಕಳೆದ ಐದು ವರ್ಷಗಳಲ್ಲಿ ಪ್ರಧಾನ ಮಂತ್ರಿ ತಮ್ಮ ಸರ್ಕಾರ ಮಾಡಿದ ಸಾಧನೆಗಳನ್ನು ಬ್ಯಾಂಕಾಕಿನಲ್ಲಿ ವಿವರಿಸಿದರು. ತಮ್ಮ ಸಾಧನೆಗಳು ಇನ್ನೂ ದೊಡ್ಡ ಜನಾದೇಶದೊಂದಿಗೆ ಮರಳಲು ನಮಗೆ ಅನುವು ಮಾಡಿಕೊಟ್ಟಿತು ಎಂಬುದಾಗಿ ಹೇಳಿದರು. ಭಾರತದಲ್ಲಿ ಕೇವಲ ಮೂರು ವರ್ಷಗಳಲ್ಲಿ ಎಂಟು ಕೋಟಿ ಮನೆಗಳಿಗೆ ಉಚಿತ ಎಲ್ಪಿಜಿ ಸಂಪರ್ಕಗಳನ್ನು ಒದಗಿಸಲಾಗಿದೆ ಎಂದು ಪ್ರಧಾನಿ ಹೇಳಿದರು, ಇದು ಥಾಯ್ಲೆಂಡಿನ ಸಂಪೂರ್ಣ ಜನಸಂಖ್ಯೆಗಿಂತ ದೊಡ್ಡದಾಗಿದೆ. ಪ್ರಧಾನ ಮಂತ್ರಿ ತಮ್ಮ ಭಾಷಣದಲ್ಲಿ ತಮ್ಮ ಸರ್ಕಾರದ ದೃಷ್ಟಿಕೋನವನ್ನು ವಿಸ್ತೃತವಾಗಿ ವಿವರಿಸಿದರು, “ಕಳೆದ 5 ವರ್ಷಗಳಲ್ಲಿ, ನಾವು ಪ್ರತಿಯೊಬ್ಬ ಭಾರತೀಯರನ್ನು ಬ್ಯಾಂಕ್ ಖಾತೆಗೆ ಸಂಪರ್ಕಿಸಿದ್ದೇವೆ ಮತ್ತು ವಿದ್ಯುತ್ ಒದಗಿಸಿದ್ದೇವೆ. ಪ್ರತಿ ಕುಟುಂಬಕ್ಕೂ ನೀರು ಒದಗಿಸಲು ನಾವು ಕೆಲಸ ಮಾಡುತ್ತಿದ್ದೇವೆ. 2022 ರ ಹೊತ್ತಿಗೆ, ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವಾಗ ಭಾರತದ ಪ್ರತಿಯೊಬ್ಬ ಬಡವರಿಗೂ ಮನೆ ಖಾತ್ರಿಪಡಿಸಿಕೊಳ್ಳಲು ನಾವು ಕೆಲಸ ಮಾಡುತ್ತಿದ್ದೇವೆ” ಎಂದಿದ್ದಾರೆ.
ಗುರುನಾನಕ್ ದೇವ್ ಅವರ 550 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ ಪ್ರಧಾನ ಮಂತ್ರಿ ಅವರು, ಥಾಯ್ಲೆಂಡಿನಲ್ಲಿ ವಾಸಿಸುತ್ತಿರುವ ಭಾರತೀಯರನ್ನು ಕರ್ತಾರ್ಪುರ್ ಕಾರಿಡಾರ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನಿಸಿದರು. ಭಾರತ ಮತ್ತು ಥಾಯ್ಲೆಂಡ್ ನಡುವಿನ ಸಂಬಂಧಗಳು ಹೃದಯಕ್ಕೆ, ಆತ್ಕಕ್ಕೆ, ಆಧ್ಯಾತ್ಮಿಕೆಗೆ ಸಂಬಂಧಿಸಿದ್ದಾಗಿದೆ ಎಂದು ಅವರು ಹೇಳಿದರು. ಉಭಯ ದೇಶಗಳ ನಡುವಿನ ಬಲವಾದ ಸಂಬಂಧವೂ ಸರ್ಕಾರಗಳನ್ನೂ ಮೀರಿದ್ದಾಗಿದೆ ಎಂದು ಅವರು ಒತ್ತಿ ಹೇಳಿದರು. ತಮಿಳಿನ ಪ್ರಸಿದ್ಧ ಗ್ರಂಥ ‘ತಿರುಕ್ಕುರಲ್’ನ ಥಾಯ್ ಭಾಷಾಂತರವನ್ನೂ ಅವರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಥಾಯ್ಲೆಂಡ್ ಮತ್ತು ಭಾರತದ ನಡುವಣ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.