ಹಿಂದೂ ಕ್ಯಾಲೆಂಡರ್ ಪ್ರಕಾರ, ಆಶ್ವಯುಜ ಮಾಸದ 13 ನೇ ದಿನದಂದು ಆಚರಿಸಲಾಗುವ ಹಬ್ಬ ಧನ ತ್ರಯೋದಶಿ (ಧನ್ತೇರಸ್) ಭಾರತದ ಆರ್ಥಿಕ ಇತಿಹಾಸದಲ್ಲಿ ಅಪಾರವಾದ ಪ್ರಾಮುಖ್ಯತೆಯನ್ನು ಹೊಂದಿದೆ.
ಆಯುರ್ವೇದದ ಮತ್ತು ದೇವತೆಗಳ ವೈದ್ಯರಾದ ಧನ್ವಂತರಿ ದೇವತೆಯ ಹೆಸರಿನಲ್ಲಿ ಧನ್ತೇರಸ್ ಅಥವಾ ಧನ ತ್ರಯೋದಶಿ ಅನ್ನು ಆಚರಣೆ ಮಾಡಲಾಗುತ್ತದೆ. ಆಯುರ್ವೇದ, ಯೋಗ ಮತ್ತು ಪ್ರಕೃತಿಚಿಕಿತ್ಸೆ, ಯುನಾನಿ, ಸಿದ್ಧ, ಸೋವಾ ರಿಗ್ಪಾ ಮತ್ತು ಹೋಮಿಯೋಪತಿ (ಆಯುಷ್) ಸಚಿವಾಲಯವು ಧನ್ತೇರಸ್ ದಿನವನ್ನು ರಾಷ್ಟ್ರೀಯ ಆಯುರ್ವೇದ ದಿನವನ್ನಾಗಿ ಘೋಷಿಸಿದೆ.
ಒಂದು ಕೈಯಲ್ಲಿ ಅಮೃತದ ಕಲಶ ಮತ್ತು ಇನ್ನೊಂದು ಕೈಯಲ್ಲಿ ಆಯುರ್ವೇದದ ಪುಸ್ತಕವನ್ನು ಒಳಗೊಂಡ ಧನ್ವಂತರಿಯು ಸಮುದ್ರ ಮಂಥನದ ಬಳಿಕ ಸಮುದ್ರದಿಂದ ಹೊರಹೊಮ್ಮಿದನೆಂದು ನಂಬಲಾಗಿದೆ. ಸಂಪತ್ತಿನ ಸೃಷ್ಟಿಗೆ ಆರೋಗ್ಯಕರ ಜೀವನ ಅತ್ಯಗತ್ಯ ಎಂಬ ನಂಬಿಕೆ ಅನಾದಿ ಕಾಲದಿಂದಲೂ ಇದೆ. ಆದ್ದರಿಂದಲೇ ಆರೋಗ್ಯದ ದೇವರನ್ನು ಸಂಪತ್ತಿನ ದೇವರಿಗಿಂತ ಮುಂಚಿತವಾಗಿಯೇ ಪೂಜಿಸಲಾಗುತ್ತದೆ. ‘ಆರೋಗ್ಯವೇ ಸಂಪತ್ತು’ ಎಂಬ ಪರಿಕಲ್ಪನೆಯು ಅನಾದಿ ಕಾಲದಿಂದಲೂ ಭಾರತದಲ್ಲಿ ಚಾಲ್ತಿಯಲ್ಲಿದೆ.
ಲಕ್ಷ್ಮೀ ಪೂಜೆ ಮತ್ತು ಉತ್ತರ ಭಾರತದಲ್ಲಿ ಆಚರಿಸಲಾಗುವ ಭಾಯ್ದೂಜ್ಗಳು ದೀಪಾವಳಿ ಹಬ್ಬದ ಆಗಮನವನ್ನು ಸಾಂಕೇತಿಸುತ್ತದೆ. ಧನ್ವಂತರಿಯು ಲಕ್ಷ್ಮೀಯ ಸಹೋದರ ಎಂದು ಹೇಳಲಾಗುತ್ತದೆ. ಲಕ್ಷ್ಮೀಯನ್ನು ಆರಾಧನೆ ಮಾಡುವ ದೀಪಾವಳಿಗೂ ಮುಂಚಿತವಾಗಿ ಧ್ವನಂತರಿಯನ್ನು ಪೂಜಿಸಲಾಗುತ್ತದೆ.
ಜನರು ಸಾಮಾನ್ಯವಾಗಿ ಧನ್ತೇರಸ್ ಸಂದರ್ಭದಲ್ಲಿ ಅಮೂಲ್ಯವಾದ ಬಂಗಾರ, ಬೆಳ್ಳಿ ಮುಂತಾದ ಲೋಹಗಳನ್ನು ಖರೀದಿಸುತ್ತಾರೆ ಮತ್ತು ಈ ದಿನ ಖರೀದಿಸಿದ ಯಾವುದೇ ವಸ್ತುವು 13 ಪಟ್ಟು ಲಾಭವನ್ನು ನೀಡುತ್ತದೆ ಎಂದು ನಂಬಲಾಗಿದೆ. ಸಾವಿನ ದೇವತೆಯಾದ ಯಮನಿಗೆ ಅರ್ಪಣೆ ಮಾಡಿ ಈ ದಿನ ಮನೆಗಳ ಮುಂದೆ ದೀಪಗಳನ್ನು ಹಚ್ಚಲಾಗುತ್ತದೆ. ಯಮನಿಗೆ ದೀಪಗಳನ್ನು ಹಚ್ಚುವುದರಿಂದ ಆತ ನಮ್ಮನ್ನು ಅಕಾಲಿಕ ಮೃತ್ಯವಿನಿಂದ ಪಾರು ಮಾಡುತ್ತಾನೆ ಎಂಬ ನಂಬಿಕೆ. ಇದು ಸಂಪತ್ತಿನ ಸೃಷ್ಟಿಗೂ ಅತ್ಯಂತ ಅವಶ್ಯಕವಾಗಿದೆ. ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಮನೆಗಳನ್ನು ಸ್ವಚ್ಛಗೊಳಿಸಲಾಗುತ್ತದೆ.
ಧನ್ತೇರಸ್ ಒಂದು ವಿಶಿಷ್ಟ ಹಬ್ಬ, ಇದನ್ನು ಹಿಂದೂ ನಾಗರಿಕ ಮೌಲ್ಯದ ರತ್ನ ಎಂದರೂ ತಪ್ಪಾಗಲಾರದು. ಖಾರಿಫ್ ಋತುಮಾನ (ಜೂನ್ ನಿಂದ ಅಕ್ಟೋಬರ್) ಮುಗಿದ ಕೆಲವು ತಿಂಗಳ ನಂತರ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹೀಗಾಗಿ, ಭಾರತದ ಖರೀದಿ ಚಕ್ರದ ಬೆನ್ನೆಲುಬಾಗಿರುವ ರೈತರಿಗೆ ಈ ಹಬ್ಬದ ಸಂದರ್ಭದಲ್ಲಿ ಖರ್ಚು ಮಾಡಲು ಹಣವಿರುತ್ತದೆ. ಭಾರತೀಯ ಗ್ರಾಹಕರು ಧನ್ತೇರಸ್ ಹಬ್ಬಕ್ಕೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಜನರು ಧನ್ತೇರಸ್ ಸಂದರ್ಭದಲ್ಲಿ ಕಾರು, ಮನೆ, ಅಮೂಲ್ಯ ಚಿನ್ನ, ಬೆಳ್ಳಿ ಮತ್ತು ವಜ್ರ, ಪಾತ್ರೆಗಳಂತಹ ವಿವಿಧ ವಸ್ತುಗಳನ್ನು ಖರೀದಿಸುತ್ತಾರೆ.
ಈ ಸಂದರ್ಭದಲ್ಲಿ ನೌಕರರು ಭಡ್ತಿ ಪಡೆಯುತ್ತಾರೆ ಮತ್ತು ದೀಪಾವಳಿ ಬೋನಸ್ ಪಡೆಯುತ್ತಾರೆ. ಈ ಹಬ್ಬ ರೈತರ ಆದಾಯವನ್ನು ಮಾತ್ರವಲ್ಲದೆ ಕೈಗಾರಿಕಾ ಮತ್ತು ಸೇವೆಗಳ ನೌಕರರು ಆದಾಯವನ್ನೂ ಹೆಚ್ಚಳ ಮಾಡುತ್ತದೆ. ಹೆಚ್ಚಿದ ಖರೀದಿಯಿಂದ ವ್ಯಾಪಾರಿಗಳಿಗೆ ಲಾಭವಾಗುತ್ತದೆ, ಲಾಭಾಂಶವನ್ನು ಅವರು ಹೊಸ ಯೋಜನೆಗಳಿಗೆ ಹೂಡಿಕೆ ಮಾಡುತ್ತಾರೆ.
ಧನ್ತೇರಸ್ ಹಬ್ಬವು ಭಾರತೀಯ ಆರ್ಥಿಕತೆಯಲ್ಲಿ ಒಂದು ಪುಣ್ಯ ಚಕ್ರವನ್ನು ಪ್ರಾರಂಭಿಸುತ್ತದೆ. ದೀಪಾವಳಿ ಹಬ್ಬಗಳ ಪ್ರಭಾವದಿಂದಾಗಿ ಭಾರತೀಯ ಆರ್ಥಿಕತೆಯು ವಿಶಿಷ್ಟ ಬಳಕೆಯ ಚಕ್ರದಲ್ಲಿ ಕಾರ್ಯನಿರ್ವಹಿಸುತ್ತದೆ. ಭಾರತದ ಜಿಡಿಪಿಯ 50-60 ಪ್ರತಿಶತದಷ್ಟು (ವಿವಿಧ ಭಾಗಗಳಲ್ಲಿ ಬದಲಾಗುತ್ತದೆ) ಇರುವ ಖಾಸಗಿ ಅಂತಿಮ ಬಳಕೆ ವೆಚ್ಚ (ಪಿಎಫ್ಸಿಇ) ದೀಪಾವಳಿ ತಿಂಗಳಲ್ಲಿ ಗಮನಾರ್ಹ ಉತ್ತೇಜನವನ್ನು ಪಡೆಯುತ್ತದೆ.
ಕಂಪನಿಗಳು ದೀಪಾವಳಿಗೆ ಕೆಲವು ತಿಂಗಳ ಮೊದಲು ಹೊಸ ಉತ್ಪನ್ನಗಳನ್ನು ಪ್ರಾರಂಭಿಸುತ್ತವೆ ಮತ್ತು ಮಾರಾಟವನ್ನು ಹೆಚ್ಚಿಸಲು ಭಾರಿ ರಿಯಾಯಿತಿಯನ್ನು ನೀಡುತ್ತವೆ. ಇ-ಕಾಮರ್ಸ್ ಕಂಪೆನಿಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನ ತ್ರೈಮಾಸಿಕ ಫಲಿತಾಂಶಗಳು ದೀಪಾವಳಿಯ ದಿನಾಂಕದಿಂದಾಗಿ ಹೆಚ್ಚು ಪರಿಣಾಮ ಬೀರುತ್ತವೆ. ದೀಪಾವಳಿ ಆಗಮಿಸುವ ಸೆಪ್ಟೆಂಬರ್ ತಿಂಗಳಲ್ಲಿ (ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ಮತ್ತು ಕ್ಯಾಲೆಂಡರ್ ವರ್ಷದ ಮೂರನೇ ತ್ರೈಮಾಸಿಕ) ಅಥವಾ ಅಕ್ಟೋಬರ್ (ಎಫ್ವೈವೈ ಮೂರನೇ ತ್ರೈಮಾಸಿಕ ಮತ್ತು ಕ್ಯಾಲೆಂಡರ್ ವರ್ಷದ ನಾಲ್ಕನೇ ತ್ರೈಮಾಸಿಕ) ಅವಲಂಬಿಸಿ ಮಾರಾಟ ಬದಲಾಗುತ್ತದೆ.
ಕಳೆದ ವರ್ಷ ದೀಪಾವಳಿ ಹಬ್ಬದ ದಿನಾಂಕದಲ್ಲಿ ಬದಲಾವಣೆಯಾದ ಕಾರಣ ನಮ್ಮ ಸಂಸ್ಥೆಯು ಮೂರನೇ ತ್ರೈಮಾಸಿಕದಲ್ಲಿ ಕೆಟ್ಟ ಪ್ರದರ್ಶನವನ್ನು ನೀಡಿತು ಎಂದು ಅಮೆಜಾನ್ ಸಿಎಫ್ಒ ಹೇಳಿಕೆ ನೀಡಿದ್ದರು. “ಭಾರತದಲ್ಲಿ ದೀಪಾವಳಿ ಕ್ಯಾಲೆಂಡರಿನಲ್ಲಿ ವಾಸ್ತವಿಕ ಬದಲಾವಣೆ ಇರುತ್ತದೆ” ಎಂದು ಅದು ಮುಖ್ಯ ಹಣಕಾಸು ಅಧಿಕಾರಿ ಬಿರೆನ್ ಒಲ್ಸವಸ್ಕಿ ಹೇಳಿದ್ದಾರೆ. “ಕಳೆದ ಬಾರಿ ನಮ್ಮ ಅರ್ಧದಷ್ಟು ದೀಪಾವಳಿ ಮಾರಾಟಗಳು ಮೂರನೇ ತ್ರೈಮಾಸಿಕದಲ್ಲಿ ನಡೆದಿದೆ. ಈ ವರ್ಷ ಸಂಪೂರ್ಣ ನಾಲ್ಕನೇ ತ್ರೈಮಾಸಿಕದಲ್ಲಿ ನಡೆಯಲಿದೆ. ಇವುಗಳು ಅಂತಾರಾಷ್ಟ್ರೀಯ ಪ್ರಗತಿಗೆ ಹಿನ್ನಡೆ ಉಂಟು ಮಾಡುವ ಕೆಲವು ಅಂಶಗಳು” ಎಂದಿದ್ದಾರೆ. ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ದೀಪಾವಳಿಯ ದಿನಾಂಕವನ್ನು ಅವಲಂಬಿಸಿರುತ್ತದೆ. ಇದು ಭಾರತೀಯ ಕಾರ್ಪೊರೇಟ್ ಮತ್ತು ಸ್ಥೂಲ ಆರ್ಥಿಕತೆಯ ಮೇಲೆ ಧನ್ತೇರಸ್ ಮತ್ತು ದೀಪಾವಳಿಯ ಪ್ರಭಾವದ ಪ್ರಮಾಣವಾಗಿದೆ.
ನೀತಿ ನಿರೂಪಣೆಯನ್ನು ಭಾರತೀಕರಣಗೊಳಿಸುವತ್ತ ಸರ್ಕಾರ ಹೆಜ್ಜೆ ಇಡುವುದು ಮುಖ್ಯ. ಸಂಪ್ರದಾಯಗಳು ಆರ್ಥಿಕತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ನೀತಿ ನಿರೂಪಣೆಯನ್ನು ಭಾರತೀಕರಗೊಳಿಸಲು ಬಿಜೆಪಿ ಸರ್ಕಾರ ಈಗಾಗಲೇ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.
ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣವನ್ನು ಚರ್ಮದ ಬ್ರೀಫ್ಕೇಸ್ನಲ್ಲಿ ಸಾಗಿಸುವ ಶತಮಾನಗಳಷ್ಟು ಹಳೆಯ ಬ್ರಿಟಿಷ್ ಸಂಪ್ರದಾಯವನ್ನು ಮುರಿದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಅವರು ಬಟ್ಟೆಯಲ್ಲಿ ಸುತ್ತಿ ಬಜೆಟ್ ಅನ್ನು ಹೊತ್ತೊಯ್ದರು. ಇದು ಒಂದು ಸಣ್ಣ ಹೆಜ್ಜೆಯಾದರೂ ಭಾರತೀಕರಣದ ಕಡೆಗೆ ಇಟ್ಟ ಬಹುದೊಡ್ಡ ಹೆಜ್ಜೆ ಎಂದೇ ಪರಿಗಣಿತವಾಗಿದೆ. ಇದು ಪಾಶ್ಚಿಮಾತ್ಯ ಚಿಂತನೆಯ ಗುಲಾಮಗಿರಿಯಿಂದ ನಮ್ಮ ನಿರ್ಗಮನವನ್ನು ಸಂಕೇತಿಸುತ್ತದೆ.
ಒಟ್ಟಿನಲ್ಲಿ ಭಾರತೀಯ ಅರ್ಥ ವ್ಯವಸ್ಥೆಗೆ ಭಾರತೀಯ ಹಬ್ಬಗಳು ಸಾಕಷ್ಟು ಕೊಡುಗೆಗಳನ್ನು ನೀಡುತ್ತವೆ. ಹಬ್ಬಗಳು ಮನಸ್ಸನ್ನು, ಮನೆಯನ್ನು ಬೆಳೆಗಿಸುತ್ತದೆ. ಮಾತ್ರವಲ್ಲ ದೇಶವನ್ನೂ ಪ್ರಗತಿಯ ಪಥದತ್ತ ಕೊಂಡೊಯ್ಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.