ಐದು ವರ್ಷಗಳ ಹಿಂದೆ, 2014 ರ ಸೆಪ್ಟೆಂಬರ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘ಸ್ವಚ್ಛ ಭಾರತ’ಕ್ಕಾಗಿ ಕೈಜೋಡಿಸುವಂತೆ ದೇಶದ ಜನರಿಗೆ ಕರೆ ನೀಡಿದ್ದರು. ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮತ್ತು ಮುಂದಿನ ಐದು ವರ್ಷಗಳವರೆಗೆ ಪ್ರತಿ ಭಾನುವಾರ ದೇಶದ ಬೀದಿಗಳನ್ನು ಸ್ವಚ್ಛಗೊಳಿಸುವಂತೆ ಎಂದು ಅನೇಕ ಸಂಘ ಸಂಸ್ಥೆಗಳಿಗೆ, ಗಣ್ಯ ವ್ಯಕ್ತಿಗಳಿಗೆ ಪ್ರಧಾನ ಮಂತ್ರಿಯವರ ಕಚೇರಿ ವತಿಯಿಂದ ವಿನಂತಿಗಳನ್ನು ಮಾಡಲಾಯಿತು. ಮೋದಿಯವರು ಸ್ವತಃ ಪೊರಕೆಯನ್ನು ಎತ್ತಿಕೊಂಡು ಬೀದಿಗಿಳಿದು ಕಸ ಗುಡಿಸಿದರು. ಆ ಬಳಿಕ ದೇಶದಲ್ಲಿ ಸ್ವಚ್ಛತೆಯ ಹೊಸ ಆಂದೋಲನವೇ ಸೃಷ್ಟಿಯಾಯಿತು. ಅನೇಕರು ತಮ್ಮನ್ನು ತಾವು ಸ್ವಚ್ಛತೆಗಾಗಿ ಸಮರ್ಪಿಸಿಕೊಂಡರು.
ಪ್ರಧಾನಿಯವರು ಕರೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದವರಲ್ಲಿ ಮಂಗಳೂರಿನ ರಾಮಕೃಷ್ಣ ಮಿಷನ್ ಶಾಖೆಯು ಒಂದು. ಇದು ಇಂದು ಮಂಗಳೂರಿನಲ್ಲಿ ಸ್ವಚ್ಛತೆಯ ವಿಷಯದಲ್ಲಿ ದೊಡ್ಡ ಕ್ರಾಂತಿಯನ್ನೇ ಹುಟ್ಟು ಹಾಕಿದೆ. ಮಾತ್ರವಲ್ಲದೇ ನಗರದ ಅನೇಕ ಭಾಗಗಳಲ್ಲಿನ ಚಿತ್ರಣವನ್ನೇ ಬದಲಾಯಿಸಿದೆ.
‘ಸ್ವಯಂಸೇವಕತೆಯ’ ಸಂಪೂರ್ಣ ಶಕ್ತಿಯೊಂದಿಗೆ ಮಂಗಳೂರು ನಗರದ ನೋಟ, ಅನುಭವ, ವಾಸನೆ ಎಲ್ಲವೂ ಪರಿವರ್ತನೆಯ ಹಾದಿಯಲ್ಲಿ ಸಾಗುತ್ತಿದೆ. ಕೊಳಕು ಪ್ರದೇಶಗಳಲ್ಲಿ ಇಂದು ಸ್ವಚ್ಛತೆಯ ಗಾಳಿ ಬೀಸುತ್ತಿದೆ. ಇದಕ್ಕೆ ಕಾರಣವಾದವರು ರಾಮಕೃಷ್ಣ ಮಿಷನ್ ಸ್ವಯಂಸೇವಕರು.
250 ವಿವಿಧ ಸಂಘಟನೆಗಳ 20 ಲಕ್ಷ ಸದಸ್ಯರುಗಳು ಕೈಜೋಡಿಸಿ ಮಂಗಳೂರಿನಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸುತ್ತಿದ್ದಾರೆ. 200 ವಾರಗಳ ಕಾಲ ‘ಭಾನುವಾರದ ಶ್ರಮದಾನ’ವನ್ನು ನಡೆಸಿದ್ದಾರೆ. 10 ಸಾವಿರ ಸ್ವಯಂಸೇವಕರನ್ನು ಒಳಗೊಂಡ 2 ಸಾವಿರಕ್ಕೂ ಅಧಿಕ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಿದ್ದಾರೆ. 200 ಗ್ರಾಮಗಳನ್ನು ಸ್ವಚ್ಛ ಗ್ರಾಮಗಳನ್ನಾಗಿ ಪರಿವರ್ತಿಸಿದ್ದಾರೆ.
ದುರ್ವಾಸನೆಯಿಂದ ಕೂಡಿದ ಸ್ಥಳಗಳಲ್ಲಿ ಇಂದು ಹೂವಿನ ಸುವಾಸನೆ ಬೀರುತ್ತಿದೆ, ಭಗ್ನಾವಶೇಷಗಳಿಂದ ತುಂಬಿದ್ದ ಮೂಲೆಗಳು ಸೆಲ್ಫಿ ತಾಣಗಳಾಗಿ ಬದಲಾಗಿವೆ. ಕೊಳಕು ಹಾಕುವ ಸ್ಥಳಗಳಾಗಿದ್ದ ಬೀದಿಬದಿಗಳು ಹೂಕುಂಟ ಹೊಂದಿರುವ ಸ್ಥಳಗಳಾಗಿವೆ. ಕಾನೂನು ಬಾಹಿರ ಚಟುವಟಿಕೆಯ ತಾಣಗಳಾಗಿದ್ದ ಫ್ಲೈಓವರ್ ಕೆಳಭಾಗಗಳು ಈಗ ಸುಂದರ ಬೆಂಚುಗಳನ್ನು ಹೊಂದಿರುವ ಆಸನ ವ್ಯವಸ್ಥೆಗಳಿಂದ ಕೂಡಿವೆ.
ಕೇವಲ ಬೀದಿಗಳನ್ನು ಗುಡಿಸಿದರಷ್ಟೇ ಸಾಲದು ಎಂಬ ಚಿಂತನೆಯನ್ನು ಇಟ್ಟುಕೊಂಡೇ ನಾವು ಕಾರ್ಯವನ್ನು ಆರಂಭಿಸಿದೆವು ಎಂದು ನೀಲಿ ವಸ್ತ್ರಧಾರಿ ಸ್ವಯಂಸೇವಕರ ನೇತೃತ್ವವನ್ನು ವಹಿಸಿರುವ ಸ್ವಾಮಿ ಏಕಗಮ್ಯಾನಂದರು ಹೇಳುತ್ತಾರೆ.
“ಸ್ವಚ್ಛ ಭಾರತ ಕೇವಲ ಬೀದಿಗಳನ್ನು ಸ್ವಚ್ಛಗೊಳಿಸುವುದಕ್ಕೆ ಸೀಮಿತವಾಗಿಲ್ಲ. ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನೂ ಇದು ಒಳಗೊಂಡಿದೆ. ಅರಿವು ಜನರನ್ನು ಸ್ವಯಂಚಾಲಿತವಾಗಿ ನಗರದ, ದೇಶದ ಸ್ವಚ್ಛತೆಯ ಕಾರ್ಯಕ್ಕೆ ದೂಡುವಂತೆ ಮಾಡುತ್ತದೆ. ದಶಕಗಳಿಂದ ನಾವು ಬದುಕಿದ ವಿಧಾನವನ್ನು ಬದಲಾಯಿಸುವ ಚಿಂತನೆಯನ್ನೂ ಸ್ವಚ್ಛತಾ ಅಭಿಯಾನವನ್ನು ಹೊಂದಿದೆ. ಇದು ಬದಲಾವಣೆಯನ್ನು ತರುತ್ತದೆ” ಎಂದು ಸ್ವಾಮಿಗಳು ಹೇಳುತ್ತಾರೆ. ಇವರು ಮಂಗಳೂರಿನ ಸ್ವಚ್ಛತಾ ಅಭಿಯಾನದ ನೇತೃತ್ವವನ್ನು ವಹಿಸಿರುವುದು ಮಾತ್ರವಲ್ಲ, ಸಾವಿರಾರು ಸಂಖ್ಯೆಯ ಪುರುಷರು, ಮಹಿಳೆಯರು ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ.
ಮಂಗಳೂರಿನಂತಹ ನಗರಗಳಲ್ಲಿ ಭಾನುವಾರ ಬೆಳಿಗ್ಗೆ ಜನರನ್ನು ಕಸ ಹೆಕ್ಕುವಂತೆ, ಬೀದಿ ಗುಡಿಸುವಂತೆ ಮಾಡುವುದು ಸುಲಭದ ಮಾತಲ್ಲ. ಆದರೆ ರಾಮಕೃಷ್ಣ ಮಿಶನ್ ತನ್ನ ಯೋಜನೆಯಲ್ಲಿ ಸಫಲತೆಯನ್ನು ಕಂಡಿದೆ. ಸ್ವಯಂಪ್ರೇರಿತರಾಗಿ ಸಾವಿರಾರು ಜನರು ಭಾನುವಾರ ಸ್ವಚ್ಛತಾ ಶ್ರಮದಾನದಲ್ಲಿ ತೊಡಗಿಸಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ.
2015ರ ಜನವರಿಯಿಂದಲೇ ಸ್ವಚ್ಛತಾ ಶ್ರಮದಾನದ ಕಾರ್ಯ ಆರಂಭಗೊಂಡಿತು.
ಮೊದಲ ಕೆಲವು ವಾರಗಳಲ್ಲಿ ಭಾನುವಾರದ ಶ್ರಮದಾನಕ್ಕೆ ಕೇವಲ 40 ಜನರು ಬರುತ್ತಿದ್ದರು, ಬೆಳಿಗ್ಗೆ 7 ರಿಂದ ಬೆಳಿಗ್ಗೆ 10 ರವರೆಗೆ ಬೀದಿಗಳನ್ನು ಗುಡಿಸುವುದು ಮತ್ತು ಸ್ವಚ್ಛಗೊಳಿಸುವುದು ಮುಂತಾದ ಕಾರ್ಯಗಳನ್ನು ಮಾಡುತ್ತಿದ್ದರು. ಆದರೆ ಈ ಕಾರ್ಯಕ್ರಮ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತು ಎಂಬುದು ಸೆಪ್ಟೆಂಬರ್ 29 ರಂದು ಸೆಂಟ್ರಲ್ ಮಾರುಕಟ್ಟೆಯಲ್ಲಿ ಸುಮಾರು 4,000 ಸ್ವಯಂಸೇವಕರು ಸಾಮೂಹಿಕ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದಾಗ ಅನಾವರಣಗೊಂಡಿತು.
40 ವಾರಗಳ ಪ್ರಾಯೋಗಿಕ ಯೋಜನೆಯ ಅಂತ್ಯದ ವೇಳೆಗೆ, 60 ಕ್ಕೂ ಹೆಚ್ಚು ಸಂಸ್ಥೆಗಳು ಒಟ್ಟಾಗಿ ಸ್ವಚ್ಛತೆಗಾಗಿ ಕೆಲಸ ಮಾಡಲು ಮುಂದೆ ಬಂದವು. ನಂತರ ಈ ಸಂಖ್ಯೆ ಹೆಚ್ಚುತ್ತಲೇ ಹೋಯಿತು, ಇಂದು 250 ವಿವಿಧ ಗುಂಪುಗಳು ಮಿಷನ್ನ ಕರೆಗೆ ಓಗೊಟ್ಟು ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗುತ್ತಿವೆ.
ಮಂಗಳೂರಿನ ವಿವಿಧ ಭಾಗಗಳಲ್ಲಿ ಇದ್ದ 800 ಡಂಪಿಂಗ್ ಗ್ರೌಂಡ್ ಗಳನ್ನು ಸ್ವಯಂಸೇವಕರು ಸ್ವಚ್ಛಗೊಳಿಸಿದ್ದಾರೆ. ಇಂದು ಡಂಪಿಗ್ ಗ್ರೌಂಡ್ ಗಳ ಸಂಖ್ಯೆ 10ಕ್ಕೆ ಇಳಿದಿದೆ. ಬ್ಲ್ಯಾಕ್ ಸ್ಪಾಟ್ ಎಂದು ಕರೆಯುತ್ತಿದ್ದ ತಾಣಗಳಲ್ಲಿ, ‘ಅರೈಸ್, ಅವೇಕ್’, ಸ್ವಚ್ಛತೆಯೇ ಉಸಿರು ಎಂಬಿತ್ಯಾದ ಘೋಷಣೆಗಳನ್ನು ಸ್ವಯಂಸೇವಕರು ಅತ್ಯಂತ ಸುಂದರವಾಗಿ ಮೂಡಿಸಿದ್ದಾರೆ. ಸಂದೇಶ ಸಾರುವ ಚಿತ್ರಗಳನ್ನು ಬಿಡಿಸಿದ್ದಾರೆ. ಇದು ಮಂಗಳೂರನ್ನು ಇಂದು ಕಂಗೊಳಿಸುವಂತೆ ಮಾಡಿದೆ.
“ಸ್ವಚ್ಛ ಮಂಗಳೂರು ಕನಸಲ್ಲ, ನೀವು ಮನಸ್ಸು ಮಾಡಬೇಕಷ್ಟೇ’ ಎಂಬ ಘೋಷಣೆಯನ್ನು ರಾಮಕೃಷ್ಣ ಮಿಷನ್ ಮಂಗಳೂರಿನಾದ್ಯಂತ ಮೊಳಗಿಸಿದೆ. ಇದರಿಂದ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡುತ್ತಿದೆ. ನಮ್ಮ ನಗರವನ್ನು ನಾವೇ ಸ್ವಚ್ಛವಾಗಿ ಇಡಬೇಕು ಎಂಬ ಭಾವನೆ ಜನರಲ್ಲಿ ಮೂಡಿಸುತ್ತಿದೆ.
ರಾಮಕೃಷ್ಣ ಮಿಷನ್ ಮಂಗಳೂರನ್ನು ಸ್ವಚ್ಛವಾಗಿಡಲು ಪಡುತ್ತಿರುವ ಶ್ರಮ ನಿಜಕ್ಕೂ ಶ್ಲಾಘನೀಯವಾದುದು. ಅವರ ಪರಿಶ್ರಮಕ್ಕೆ ಪ್ರತಿ ಮಂಗಳೂರಿಗನ ಸಹಕಾರವೂ ಬೇಕಿದೆ.
ವಿಷಯ ಸಹಕಾರ : https://bit.ly/2J5yWNe
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.