ನವದೆಹಲಿ: ಈಶಾನ್ಯ ಸಿರಿಯಾದ ಮೇಲೆ ದಾಳಿ ನಡೆಸಿದ ಟರ್ಕಿಯ ವಿರುದ್ಧ ಸಿರಿಯಾ ಸೋಮವಾರ ವಾಗ್ದಾಳಿ ನಡೆಸಿದೆ. ಈ ಕೃತ್ಯಕ್ಕೆ ಟರ್ಕಿ ಅಮೆರಿಕಾದ ರಹಸ್ಯ ಬೆಂಬಲವನ್ನು ಪಡೆದುಕೊಂಡಿದೆ ಎಂದು ಅದು ಆರೋಪಿಸಿದೆ. ಅಲ್ಲದೇ, 2011ರಿಂದ ಸಿರಿಯಾಲ್ಲಿ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ತನಗೆ ಬೆಂಬಲ ನೀಡಿದಕ್ಕಾಗಿ ಭಾರತವನ್ನು ಅದು ಶ್ಲಾಘಿಸಿದೆ.
ಭಾರತದಲ್ಲಿರುವ ಸಿರಿಯನ್ ರಾಯಭಾರಿ ರಿಯಾದ್ ಅಬ್ಬಾಸ್ ತಮ್ಮ ಯುದ್ಧ ಪೀಡಿತ ದೇಶದಲ್ಲಿ ಪ್ರಸ್ತುತ ಉದ್ಭವಿಸಿರುವ ಬಿಕ್ಕಟ್ಟಿನ ಬಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದು, ಬಿಕ್ಕಟ್ಟು ಯಾವಾಗ ಕೊನೆಗೊಳ್ಳುತ್ತದೆ ಎಂಬ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ ಮೂಡುತ್ತಿದೆ ಎಂದಿದ್ದಾರೆ. ಇಸ್ಲಾಮಿಕ್ ಸ್ಟೇಟ್ಸ್ ಉಗ್ರರನ್ನು ರಕ್ಷಣೆ ಮಾಡುವ ಉದ್ದೇಶದಿಂದಲೇ ಟರ್ಕಿ ದಾಳಿಯನ್ನು ಆರಂಭಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಭಾರತ ನೀಡಿದ ಬೆಂಬಲಕ್ಕೆ ತಮ್ಮ ದೇಶ ಕೃತಜ್ಞವಾಗಿದೆ ಎಂದು ಸಿರಿಯನ್ ರಾಯಭಾರಿ ಹೇಳಿದ್ದಾರೆ.
“ಸಿರಿಯಾಕ್ಕೆ ಭಾರತದ ಬೆಂಬಲ ಯಾವಾಗಲೂ ಇದೆ. ಭಾರತವು ನಮಗೆ ಔಷಧಿ, ರಕ್ಷಣೆ, ವಿದ್ಯಾರ್ಥಿವೇತನಗಳಲ್ಲಿ ಸಹಾಯ ಮಾಡಿದೆ. ಭಾರತವನ್ನು ನಾವು ಪ್ರಬಲ ಸರ್ಕಾರವಾಗಿ ಹೊಂದಿರುವ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬಲವಾದ ಧ್ವನಿಯನ್ನು ಹೊಂದಿರುವ ದೇಶವಾಗಿ ನೋಡುತ್ತೇವೆ” ಎಂದು ಅಬ್ಬಾಸ್ ಹೇಳಿದ್ದಾರೆ.
ಟರ್ಕಿಯ ದಾಳಿಗೆ ಪಾಕಿಸ್ಥಾನದ ಬೆಂಬಲವೂ ಇದೆ ಎಂಬುದಾಗಿ ಅಬ್ಬಾಸ್ ಹೇಳಿದ್ದಾರೆ. “ಟರ್ಕಿ ಭಯೋತ್ಪಾದನೆಯನ್ನು ಬೆಂಬಲಿಸುತ್ತದೆ ಮತ್ತು ಸಿರಿಯಾದಲ್ಲಿನ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುತ್ತದೆ, ಟರ್ಕಿಯನ್ನು ಬೆಂಬಲಿಸುವವರೆಲ್ಲರೂ ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ” ಎಂದಿದ್ದಾರೆ.
ಯುಎಸ್ ಸೇರಿದಂತೆ ಎಲ್ಲಾ ವಿದೇಶಿ ಸೈನಿಕರಿಗೆ ಸಿರಿಯಾ ದೇಶವನ್ನು ತೊರೆಯುವಂತೆ ಕರೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
“ಯುಎಸ್ ಸೈನಿಕರು ಇನ್ನೂ ಸಿರಿಯಾದಲ್ಲಿ ಅಕ್ರಮವಾಗಿ ಇದ್ದಾರೆ ಮತ್ತು ಈಗ ಅವರನ್ನು ಸಿರಿಯಾದ ಇತರ ಭಾಗಗಳಿಗೆ ಮರುನಿಯೋಜಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಟರ್ಕಿಯು ಈಶಾನ್ಯ ಸಿರಿಯಾದಲ್ಲಿ ಏಕಪಕ್ಷೀಯ ಮಿಲಿಟರಿ ಆಕ್ರಮಣವನ್ನು ನಡೆಸಿರುವುದರ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ ಮತ್ತು ಇದು ಈ ಪ್ರದೇಶದ ಸ್ಥಿರತೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ಹಾಳುಮಾಡುತ್ತದೆ ಎಂದು ಪ್ರತಿಪಾದಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.